More

    ಚುರುಕುಗೊಳ್ಳಲಿ ಕೃಷಿ ಚಟುವಟಿಕೆ

    ಗದಗ: ಜಿಲ್ಲೆಯಲ್ಲಿ ಮುಂಬರುವ ಮುಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆ ಚುರುಕುಗೊಳಿಸಲು ಅಗತ್ಯ ಕ್ರಮ ವಹಿಸಬೇಕು. ಕೃಷಿ ಕಾರ್ಯಕ್ಕೆ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸುಂದರೇಶ ಬಾಬು ಹೇಳಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಮುಂಗಾರು ಹಂಗಾಮಿನ ಪೂರ್ವಸಿದ್ಧತೆ ಸಭೆಯಲ್ಲಿ ಅವರು ಮಾತನಾಡಿದರು.

    ‘ಸಮರ್ಪಕ ಪ್ರಮಾಣದಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ಸಂಗ್ರಹಣೆ ಮಾಡಿಟ್ಟುಕೊಳ್ಳಬೇಕು. ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ರಸಗೊಬ್ಬರ ಮಾರಾಟ ಮಾಡುವುದು ಕಂಡುಬಂದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

    ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೆ 26 ಮಿಲಿ ಮೀಟರ್ ವಾಡಿಕೆ ಮಳೆಯಾಗಬೇಕಿತ್ತು. ಆದರೆ, 51 ಮಿ.ಮೀ. ಮಳೆಯಾಗಿದೆ. ಶೇ. 94ರಷ್ಟು ಮಳೆ ಜಾಸ್ತಿಯಾಗಿದ್ದು, ರೈತರಿಗೆ ಬೀಜ ಬಿತ್ತಲು ಅನುಕೂಲಕರ ವಾತಾವರಣ ಉಂಟಾಗಿದೆ ಎಂದರು.

    ಜಿಲ್ಲೆಯು 35514 ಅತಿ ಸಣ್ಣ, 60153 ಸಣ್ಣ ಹಾಗೂ 67799 ಇತರ ಸೇರಿ 163466 ರೈತರನ್ನು ಹೊಂದಿದೆ. 3,00600 ಹೆಕ್ಟೇರ್ ಪ್ರದೇಶವು ಮುಂಗಾರು ಬಿತ್ತನೆ ಕ್ಷೇತ್ರವಾಗಿದೆ. ಅದರಲ್ಲಿ ಮೆಕ್ಕೆಜೋಳ, ಹೆಸರು, ಶೇಂಗಾ, ಸೂರ್ಯಕಾಂತಿ, ಹತ್ತಿ ಪ್ರಮುಖ ಬಿತ್ತನೆ ಬೆಳೆಗಳಾಗಿವೆ ಎಂದು ತಿಳಿಸಿದರು.

    ಅಂತರ ಬೆಳೆ ಪದ್ಧತಿ ಬಿತ್ತನೆ, ಜಿಲ್ಲೆಯ ಪ್ರತಿ ರೈತ ಸಂಪರ್ಕ ಕೇಂದ್ರಗಳಿಗೆ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ನಿಯೋಜನೆ, ಪ್ರಮುಖ ಬೆಳೆಗಳ ಕುರಿತು ಪ್ರತಿ ರೈತ ಸಂಪರ್ಕ ಕೇಂದ್ರಗಳಿಗೆ ಒಂದರಂತೆ ರೈತ ಕ್ಷೇತ್ರ ಪಾಠಶಾಲೆಗಳ ಅನುಷ್ಠಾನ, ಸಮಗ್ರ ಬೆಳೆ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ, ಕೃಷಿ ವಿಶ್ವವಿದ್ಯಾಲಯದಿಂದ ಬಿಡುಗಡೆಯಾದ ನೂತನ ತಳಿಗಳನ್ನು ಜನಪ್ರಿಯಗೊಳಿಸುವ ಕಾರ್ಯಕ್ರಮ ಏರ್ಪಡಿಸುವುದು ಮುಂಗಾರು ಹಂಗಾಮಿನ ಕಾರ್ಯಕ್ರಮದ ವಿಶೇಷ ಗುರಿಗಳಾಗಿವೆ ಎಂದು ಅವರು ವಿವರಿಸಿದರು.

    ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಭರತ್ ಎಸ್., ತೋಟಗಾರಿಕೆ, ರೇಷ್ಮೆ ಇಲಾಖೆ, ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು, ಕೃಷಿ ಪರಿಕರ ಮಾರಾಟಗಾರರ ಸಂಘದ ಸದಸ್ಯರು, ರಸಗೊಬ್ಬರ ಉತ್ಪಾದಕರ ಕಂಪನಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

    ರೈತರಿಗೆ ಕಿರುಕುಳ ನೀಡಿದರೆ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ರೈತರಿಗಾಗಿ ಸಕಾಲಕ್ಕೆ ಬಿತ್ತನೆ ಬೀಜ ಪೂರೈಕೆ ಮಾಡುವ ಮೂಲಕ ಅವರಿಗೆ ಸಹಕರಿಸಬೇಕು. ಜಿಲ್ಲೆಯಲ್ಲಿ ವೀಕ್ಷಣಾ ದಳಗಳನ್ನು ರಚಿಸಬೇಕು. ಅನಧಿಕೃತ ಬೀಜ ಮಾರಾಟ ಮತ್ತು ಕಳಪೆ ಬೀಜ ಮಾರಾಟ ಕಂಡುಬಂದರೆ ಅಂಗಡಿಗಳ ಪರವಾನಗಿ ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು. ರಸಗೊಬ್ಬರ ಮತ್ತು ಯೂರಿಯಾ ಡೀಲರ್​ಗಳ ಜತೆ ಸಭೆ ನಡೆಸಿ ರಸಗೊಬ್ಬರ ಸಂಗ್ರಹಣೆಗೆ ಕೃಷಿ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

    | ಸುಂದರೇಶ ಬಾಬು, ಜಿಲ್ಲಾಧಿಕಾರಿ

    ಬಿತ್ತನೆ ಬೀಜ ವಿತರಿಸಲು 11 ರೈತ ಸಂಪರ್ಕ ಕೇಂದ್ರಗಳು, 7 ಹೆಚ್ಚುವರಿ ವಿತರಣೆ ಕೇಂದ್ರಗಳ ಮೂಲಕ ಬೀಜ ವಿತರಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 2021ನೇ ಸಾಲಿನಲಿ ್ಲುೂರಿಯಾ, ಡಿಎಪಿ, ಎಂಒಪಿ, ಕಾಂಪ್ಲೆಕ್ಸ್ ಸೇರಿ 5981 ಟನ್​ಗಳ ರಸಗೊಬ್ಬರ ದಾಸ್ತಾನಿದೆ. ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರದ ಕೊರತೆಯಿಲ್ಲ.

    | ಟಿ.ಎಸ್. ರುದ್ರೇಶಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts