More

    ಭಗವಂತನ ಆರಾಧಿಸಿದರೆ ಬದುಕು ಸಾರ್ಥಕ

    ಅಫಜಲಪುರ: ವೀರಶೈವ ಧರ್ಮದಲ್ಲಿ ಬಹಿರಂಗ ಮತ್ತು ಅಂತರಂಗ ದೇವಸ್ಥಾನವಿದ್ದು, ದೇಹ ದೇವಾಲಯವಾಗಬೇಕಾದರೆ ಗುರುವಿನ ಲಿಂಗದೀಕ್ಷೆ ಪಡೆದು ನಿತ್ಯ ಪೂಜೆ ಮಾಡಿ ಭಗವಂತನನ್ನು ಆರಾಧಿಸಿದರೆ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ಶ್ರೀಶೈಲ ಜಗದ್ಗುರು ಶ್ರೀ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ನುಡಿದರು.

    ರೇವೂರ(ಬಿ)ದಲ್ಲಿ ಗುರುವಾರ ಆಯೋಜಿಸಿದ್ದ ಮಲ್ಲಿಕಾರ್ಜುನ ದೇವರ ದೇವಸ್ಥಾನದ ನೂತನ ಶಿಖರದ ಸುವರ್ಣ ಕಳಸಾರೋಹಣ ಮತ್ತು ಮಾಲಗಂಬ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಮುಂದಿನ ಜಾತ್ರೆಯಲ್ಲಿ ರೇವೂರ ಸುತ್ತಲಿನ ಹಳ್ಳಿಗಳಲ್ಲಿ ಪಾದಯಾತ್ರೆ ಮಾಡಿ ಲಿಂಗದೀಕ್ಷೆ ನೀಡಿ ಧರ್ಮ ಜಾಗೃತಿ ಮೂಡಿಸಬೇಕು. ಲಿಂಗಧಾರಣೆ ಮಾಡಿದರೆ ನಮ್ಮಲ್ಲಿನ ಅನಿಷ್ಠಗಳು ದೂರವಾಗಿ ಇಷ್ಟಾರ್ಥ ಈಡೇರಲಿದೆ ಎಂದರು.

    ದ್ವಾದಶ ಪೀಠಾರೋಹಣ ನಿಮಿತ್ತ ನಡೆದ ಪಾದಯಾತ್ರೆಯಲ್ಲಿ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿದ್ದು, ಆನಂದಮಯವಾಗಿಸಿದೆ. ಹೆಣ್ಣು ಮಕ್ಕಳಿಗೆ ಉತ್ತಮ ಆದರ್ಶ ನೀಡಿ ತವರು ಮತ್ತು ಗಂಡನ ಮನೆಗೆ ಕೀರ್ತಿ ತರುವಂತೆ ಮಾಡಬೇಕು. ಹಸಿದು ಬಂದವರಿಗೆ ಅನ್ನದಾನ ಮಾಡಿ ಎಲ್ಲರೂ ಧರ್ಮವಂತರಾಗಬೇಕು. ರೇವೂರದ ಮಲ್ಲಿಕಾರ್ಜುನ ದೇವಸ್ಥಾನದ ಮೇಲೆ ಸುವರ್ಣ ಕಳಸಾರೋಹಣ ಆಗಿದ್ದರಿಂದ ಎರಡನೇ ಶ್ರೀಶೈಲವಾಗಿದೆ. ಭಕ್ತ ಮತ್ತು ಭಗವಂತನ ನಡುವೆ ಮಧ್ಯವರ್ತಿಯಾಗಿ ಕಳಶಗಳು ಕೆಲಸ ಮಾಡುತ್ತವೆ. ಮಠ-ಮಾನ್ಯಗಳು ಸಮಾಜದಲ್ಲಿನ ಅಂಧಕಾರ ತೊಡೆದು ಹಾಕಿ ಸುಸಂಸ್ಕೃತ ಸಮಾಜ ನಿರ್ಮಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.

    ಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯರು ಮಾತನಾಡಿ, ಧರ್ಮ ಪಾಲನೆ, ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಧರ್ಮ ನಮಗೆ ಏನು ನೀಡಿದೆ ಎನ್ನುವುದಕ್ಕಿಂತ ನಾವು ಧರ್ಮದ ಹಾದಿಯಲ್ಲಿ ನಡೆಯುತ್ತಿದ್ದೇವೆಯೇ ಎಂಬುದು ಬಹಳ ಮುಖ್ಯ. ಬದುಕು ಪ್ರಾಣಿಗಳು ಸಹ ಮಾಡುತ್ತವೆ. ಆದರೆ ತಿಳಿವಳಿಕೆಯಿಂದ ಧರ್ಮದ ಹಾದಿಯಲ್ಲಿ ನಡೆದರೆ ಈ ಬದುಕಿಗೆ ಬೆಲೆ ಬರಲು ಸಾಧ್ಯ ಎಂದರು.

    ಶ್ರೀ ಶ್ರೀಕಂಠ ಶಿವಾಚಾರ್ಯರು, ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಶ್ರೀ ಡಾ.ಚನ್ನಮಲ್ಲ ಶಿವಾಚಾರ್ಯರು, ಶ್ರೀ ವೀರಮಹಾಂತ ಶಿವಾಚಾರ್ಯರು, ಶ್ರೀ ರೇವಣಸಿದ್ದ ಶಿವಾಚಾರ್ಯರು, ಮಾಜಿ ಶಾಸಕಿ ಅರುಣಾ ಪಾಟೀಲ್​, ಜಿಪಂ ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ್, ಪ್ರಮುಖರಾದ ಲಕ್ಷ್ಮೀ ದತ್ತಾತ್ರೇಯ ಪಾಟೀಲ್​, ಬಸಯ್ಯ ಹಿರೇಮಠ, ಮಲ್ಲಿಕಾರ್ಜುನ ಹಿರೇಮಠ, ಮಲ್ಲಿಕಾರ್ಜುನ ನಿಂಗದಳ್ಳಿ, ಮೃತ್ಯುಂಜಯ ಹಿರೇಮಠ, ಧರ್ಮರಾಯ ಉಡಗಿ, ಉಮೇಶ ಕಲಶೆಟ್ಟಿ, ಹಣಮಂತರಾವ ಪೊಲೀಸ್ ಪಾಟೀಲ್, ಶಿವಾನಂದ, ಶರಣು ಬಶೆಟ್ಟಿ, ಅಪ್ಪಾಶಾ ಕಲಶೆಟ್ಟಿ, ಬಸವರಾಜ ಪಾಟೀಲ್​, ಸತೀಶ ಪಾಟೀಲ್​ ಇತರರಿದ್ದರು.

    ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಶೈಲ ಜಗದ್ಗುರು ಶ್ರೀ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ನಡೆಯಿತು.

    ಶ್ರೀಶೈಲ ಪೀಠಕ್ಕೆ ಪ್ರತಿವರ್ಷ ಯುಗಾದಿ ಜಾತ್ರೆಗೆ ದೇಶದ ಮೂಲೆ ಮೂಲೆಗಳಿಂದ ಬರುವ ಲಕ್ಷಾಂತರ ಭಕ್ತರಿಗೆ ಮೂಲಸೌಲಭ್ಯ ಕಲ್ಪಿಸಲು ಆಂಧ್ರ ಸರ್ಕಾರ ೧೦ ಎಕರೆ ಭೂಮಿ ನೀಡಿದೆ. ಮೊದಲನೇ ಹಂತದಲ್ಲಿ ೫ ಎಕರೆಯಲ್ಲಿ ೫೦೦ ವಸತಿ ಕೋಣೆ, ವಿಶಾಲವಾದ ಕಂಬಿ ಮಂಟಪ, ೧೦೦ ಹಾಸಿಗೆಯ ಬಹು ಚಿಕಿತ್ಸಾ ಆಸ್ಪತ್ರೆ ಜತೆಗೆ ವಸತಿ ಶಾಲೆ ನಿರ್ಮಾಣ ಕಾರ್ಯಗಳಿಗೆ ಮುಂದಿನ ತಿಂಗಳು ಅಡಿಗಲ್ಲು ನೆರವೇರಲಿದೆ.
    | ಡಾ.ಚನ್ನಸಿದ್ಧರಾಮ ಪಂಡಿತರಾಧ್ಯ ಶಿವಾಚಾರ್ಯ ಶ್ರೀಶೈಲ ಜಗದ್ಗುರುಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts