More

    ಬಾಕಿ 1.47 ಲಕ್ಷ ಕೋಟಿ ರೂ. ಶುಲ್ಕ ಪಾವತಿಸಲು ಸುಪ್ರೀಂಕೋರ್ಟ್​ ಆದೇಶಿಸಿದ ಬೆನ್ನಲ್ಲೇ ಏರ್​ಟೆಲ್​, ವೋಡಾಫೋನ್​ಗೆ ಸರ್ಕಾರ ಶಾಕ್​

    ನವದೆಹಲಿ: ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಪಾವತಿಸುವಂತೆ ಸುಪ್ರೀಂಕೋರ್ಟ್​ ಶುಕ್ರವಾರ ಆದೇಶ ಹೊರಡಿಸಿದ ಬೆನ್ನಲ್ಲೇ ಇಂದು ರಾತ್ರಿ 11:59ರೊಳಗೆ ಎಲ್ಲ ಹಣವನ್ನು ಸಂದಾಯ ಮಾಡುವಂತೆ ದೂರ ಸಂಪರ್ಕ ಇಲಾಖೆ ಭಾರ್ತಿ ಏರಟೆಲ್​ ಮತ್ತು ವೋಡಾಫೋನ್​ ಐಡಿಯಾ ಟೆಲಿಕಾಂ ಕಂಪನಿಗಳಿಗೆ ಗಡುವು ನೀಡಿದ್ದು, ನೋಟಿಸ್​ ಹೊರಡಿಸಿದೆ.

    ಭಾರ್ತಿ ಏರ್​ಟೆಲ್​ ಮತ್ತು ವೋಡಾಫೋನ್​ ಐಡಿಯಾ ಕಂಪನಿಗಳು ಬಾಕಿ ಉಳಿದಿರುವ ಒಟ್ಟು 92 ಸಾವಿರ ಕೋಟಿ ರೂ. ಮೌಲ್ಯದ ಸರಿಹೊಂದಿಸಲ್ಪಟ್ಟ ಒಟ್ಟು ಆದಾಯ(ಎಜಿಆರ್​) ಶುಲ್ಕವನ್ನು ಸರ್ಕಾರಕ್ಕೆ ಪಾವತಿಸಬೇಕಾಗಿದೆ.

    ಇದಕ್ಕೂ ಮುನ್ನ ಇಂದು ಬೆಳಗ್ಗೆಯಷ್ಟೇ ತೀರ್ಪು ನೀಡಿರುವ ಸುಪ್ರೀಂಕೋರ್ಟ್ ಬಾಕಿ ಉಳಿಸಿಕೊಂಡಿರುವ 1.47 ಲಕ್ಷ ಕೋಟಿ ರೂ. ಎಜಿಆರ್​ ಶುಲ್ಕವನ್ನು ಮರು ಪಾವತಿಸುವಂತೆ ಖಡಕ್​ ಸೂಚನೆ ನೀಡಿದೆ. ಅಲ್ಲದೆ, ಈ ಹಿಂದಿನ ನ್ಯಾಯಾಲಯದ ಆದೇಶವನ್ನು ಪಾಲಿಸದೇ ಹಣವನ್ನು ಪಾವತಿಸದ ಟೆಲಿಕಾಂ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವಿವರಣೆ ಕೋರಿ ಸಮನ್ಸ್​ ನೀಡಿದೆ.

    ಭಾರ್ತಿ ಏರ್​ಟೆಲ್​, ವೋಡಾಫೋನ್​, ಎಂಟಿಎನ್​ಎಲ್​, ಬಿಎಸ್​ಎನ್​ಎಲ್​, ರಿಲಯನ್ಸ್​ ಕಮ್ಯೂನಿಕೇಷನ್​, ಟಾಟಾ ಟೆಲಿಕಮ್ಯೂನಿಕೇಷನ್ ಮತ್ತು ಇತರೆ ಟೆಲಿಕಾಂ ಕಂಪನಿಗಳ ಅಧಿಕಾರಿಗಳು ಮಾರ್ಚ್​ 17ರೊಳಗೆ ನ್ಯಾಯಾಲಯಕ್ಕೆ ವಿವರಣೆ ನೀಡಬೇಕಿದೆ.

    ಕೋರ್ಟ್​ ನೀಡಿದ ಎಜಿಆರ್​ ಹಿಂಪಡೆತ ಆದೇಶವು ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಿ, ಹಣ ಪಾವತಿಸದ ಕಂಪನಿಗಳ ಮೇಲೆ ಸೂಕ್ತ ಕ್ರಮ ಜರುಗಿಸಲಾಗದು ಎಂದು ಹೇಳಿದ್ದ ದೂರ ಸಂಪರ್ಕ ಇಲಾಖೆಯನ್ನು ಕೋರ್ಟ್​ ಇದೇ ವೇಳೆ ತರಾಟೆಗೆ ತೆಗೆದುಕೊಂಡಿತು. ಇದಾದ ಬೆನ್ನಲ್ಲೇ ದೂರ ಸಂಪರ್ಕ ಇಲಾಖೆಯು ತನ್ನ ಆದೇಶವನ್ನು ಹಿಂಪಡೆದುಕೊಂಡಿದೆ.

    ಎಜಿಆರ್​ ಶುಲ್ಕ ಪಾವತಿಸಲು ಇನ್ನು ಹೆಚ್ಚಿನ ಸಮಯಾವಕಾಶ ಕೋರಿ ಟೆಲಿಕಾಂ ಕಂಪನಿಗಳು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅರುಣ್​ ಮಿಶ್ರಾ, ಎಸ್​. ಅಬ್ದುಲ್​ ನಾಜಿರ್​ ಮತ್ತು ಎಂ. ಆರ್​. ಷಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಇಂದು ಮಹತ್ವದ ಆದೇಶ ಹೊರಡಿಸಿತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts