More

    ರಾಜತಾಂತ್ರಿಕ ನೆರವಿನ ನಿರೀಕ್ಷೆಯಲ್ಲಿ ಅಫ್ಘನ್ ವಿದ್ಯಾರ್ಥಿಗಳು

    ಧಾರವಾಡ: ಅಫ್ಘಾನಿಸ್ತಾನ್ ಮೇಲೆ ತಾಲಿಬಾನ್ ದಾಳಿ ಮಾಡಿ ಈಗ ಒಂದು ವರ್ಷ. ಇಂದಿಗೂ ಅಫ್ಘನ್ ತಾಲಿಬಾನ್ ವಶದಲ್ಲಿದೆ. ಸದ್ಯ ತಾಲಿಬಾನ್ ಅಟ್ಟಹಾಸಗಳು ಕಡಿಮೆಯಾಗಿದ್ದರೂ ಅಫ್ಘನ್ ನಿವಾಸಿಗಳಲ್ಲಿರುವ ಭಯದ ವಾತಾವರಣ ಹಾಗೇ ಇದೆ. ಈ ಕುರಿತು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಅಪ್ಘಾನಿಸ್ತಾನದ ಸಂಶೋಧನಾ ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.

    ಕೃಷಿ ವಿಶ್ವವಿದ್ಯಾಲಯದಲ್ಲಿ ಅಪ್ಘಾನಿಸ್ತಾನದ ನಾಲ್ವರು ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಅವರ ಕೋರ್ಸ್ ಮುಗಿಯಲು ಇನ್ನೂ ಒಂದು ವರ್ಷ ಬೇಕು. ಈಗ ಅಫ್ಘಾನಿಸ್ತಾನ ಮತ್ತು ಭಾರತದ ಮಧ್ಯೆ ರಾಜತಾಂತ್ರಿಕ ಸಂಬಂಧಗಳು ಇಲ್ಲ. ಅಲ್ಲಿಗೆ ಹೋದವರಿಗೆ ವಾಪಸ್ ಬರಲು ಅವಕಾಶ ಇಲ್ಲ. ಹೀಗಾಗಿ, ನಾಲ್ವರು ವಿದ್ಯಾರ್ಥಿಗಳು ಇಲ್ಲಿಯೇ ಇದ್ದಾರೆ. ಆ ಪೈಕಿ ಇಸ್ರರುಲ್ಲಾ ಮತ್ತು ಪಾಮೀರ ಎಂಬಿಬ್ಬರು ತಮ್ಮ ದೇಶದ ಸ್ಥಿತಿಯನ್ನು ವಿಜಯವಾಣಿ ಎದುರು ಹಂಚಿಕೊಂಡಿದ್ದಾರೆ.

    ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ನಂತರ ಯಾವೊಬ್ಬ ವಿದ್ಯಾರ್ಥಿಯೂ ಮರಳಿ ಅಫ್ಘನ್​ಗೆ ಹೋಗಿಲ್ಲ. ದಾಳಿಗೂ 15 ದಿನ ಮೊದಲೇ ರಜೆಗಾಗಿ ಕೆಲವರು ಮರಳಿದ್ದರು. ಅವರು ವಾಪಸ್ ಬರಲಾಗುತ್ತಿಲ್ಲ. ಈಗ ಅಫ್ಘನ್​ಗೆ ಹೋಗಲು ಅವಕಾಶ ಇದ್ದರೂ ದುಬೈ ಮೂಲಕ ಹೋಗಬೇಕು. ಆದರೆ, ಮರಳಲು ಅಗತ್ಯ ವೀಸಾ ಶಾಶ್ವತವಾಗಿ ಬಂದ್ ಆಗುತ್ತದೆ. ಹೀಗಾಗಿ ಸುಮಾರು 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾರತದಲ್ಲಿಯೇ ಇದ್ದೇವೆ ಎನ್ನುತ್ತಾರೆ ಇಸ್ರರುಲ್ಲಾ.

    ತಾಲಿಬಾನಿಗಳ ಅಟ್ಟಹಾಸ ಕಡಿಮೆಯಾಗಿದ್ದರೂ ಜನಸಾಮಾನ್ಯರು ಇಂದಿಗೂ ಭಯದಲ್ಲೇ ಜೀವನ ನಡೆಸುತಿದ್ದಾರಂತೆ. ತಾಲಿಬಾನಿಗಳು ರಾಜತಾಂತ್ರಿಕ ವ್ಯವಸ್ಥೆಯನ್ನು ಒಪ್ಪಿಕೊಂಡಿಲ್ಲ. ಹೀಗಾಗಿ ಭಾರತ ಪುನಃ ಅಫ್ಘನ್ ಕೈ ಹಿಡಿಯಬೇಕು ಎಂದು ಅಲ್ಲಿನ ಜನ ನಿರೀಕ್ಷಿಸುತ್ತಿದ್ದಾರೆ. ಭಾರತ ಸರ್ಕಾರ ಅಫ್ಘಾನಿಸ್ತಾನದಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಸಹಾಯಹಸ್ತ ನೀಡಿತ್ತು. ಆದರೆ, ತಾಲಿಬಾನ್ ದಾಳಿಯಿಂದಾಗಿ ಒಂದು ವರ್ಷದಿಂದ ಅವೆಲ್ಲವೂ ನಿಂತು ಹೋಗಿವೆ ಎನ್ನುತ್ತಾರೆ ಮತ್ತೋರ್ವ ವಿದ್ಯಾರ್ಥಿ ಪಾಮೀರ್.

    ಒಟ್ಟಾರೆ ಅಫ್ಘಾನಿಸ್ತಾನದ ಪರಿಸ್ಥಿತಿ ಸುಧಾರಣೆಯಾಗಿಲ್ಲ. ಸ್ವದೇಶಕ್ಕೆ ಹೋಗಲು ಆಗದೇ ತಮ್ಮ ಮನೆಯವರ ಬಗ್ಗೆ ಚಿಂತೆ ಮಾಡುತ್ತ ಈ ವಿದ್ಯಾರ್ಥಿಗಳು ಅನಿವಾರ್ಯವಾಗಿ ಇಲ್ಲಿ ಉಳಿದಿದ್ದಾರೆ. ಭಾರತ ಮತ್ತು ಅಫ್ಘನ್ ಮಧ್ಯೆ ರಾಜತಾಂತ್ರಿಕ ವ್ಯವಸ್ಥೆ ಸರಿಯಾದರೆ ಮಾತ್ರ ಇವರು ತಮ್ಮ ದೇಶಕ್ಕೆ ಹೋಗಿ ಬರಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts