More

    ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ ಭಾರತೀಯರ ಏರ್‌ಲಿಫ್ಟ್: ದಕ್ಷಿಣ ಕನ್ನಡದ ಐವರು ದೆಹಲಿಗೆ

    ಮಂಗಳೂರು: ಅಫ್ಘಾನಿಸ್ತಾನದಲ್ಲಿ ಸಿಲುಕಿ ಹಾಕಿಕೊಂಡಿರುವ ಭಾರತೀಯರನ್ನು ಕರೆತರುವ ಕಾರ್ಯ ಮುಂದುವರಿದಿದ್ದು, ಭಾನುವಾರ ತಾಯ್ನಡಿಗೆ ಮರಳಿರುವ 7 ಕನ್ನಡಿಗರಲ್ಲಿ ಐವರು ಮಂಗಳೂರಿನವರೂ ಇದ್ದಾರೆ.

    ಭಾನುವಾರ ಬಜ್ಪೆಯ ದಿನೇಶ್ ರೈ, ಮೂಡುಬಿದಿರೆಯ ಸಮೀಪದ ಹೊಸಂಗಡಿಯ ಜಗದೀಶ್ ಪೂಜಾರಿ, ಕಿನ್ನಿಗೋಳಿ ಪಕ್ಷಿಕೆರೆಯ ಡೆಸ್ಮಂಡ್ ಡೇವಿಸ್ ಡಿಸೋಜ, ತೊಕ್ಕೊಟ್ಟಿನ ಪ್ರಸಾದ್ ಆನಂದ್ ಹಾಗೂ ಉರ್ವದ ಶ್ರವಣ್ ಅಂಚನ್ ಎಂಬವರನ್ನು ಏರ್‌ಲಿಫ್ಟ್ ಮಾಡಲಾಗಿದೆ. ಬೆಂಗಳೂರು ಮಾರತಹಳ್ಳಿಯ ಹೀರಾಕ್ ದೇಬನಾಥ್ ಮತ್ತು ಬಳ್ಳಾರಿ ಸಂಡೂರಿನ ತನ್ವೀನ್ ಬಳ್ಳಾರಿ ಅಬ್ದುಲ್ ಎಂಬವರೂ ದೆಹಲಿ ತಲುಪಿದ್ದಾರೆ. ಇವರು ಭಾರತೀಯ ವಾಯುಪಡೆಯ ವಿಮಾನ ಹಾಗೂ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳಲ್ಲಿ ದೆಹಲಿಗೆ ಆಗಮಿಸಿದ್ದಾರೆ. ಇವರನ್ನು ಅಫ್ಘಾನಿಸ್ತಾನದಿಂದ ಕತಾರ್‌ಗೆ ಕರೆದೊಯ್ದು, ಅಲ್ಲಿಂದ ದೆಹಲಿಗೆ ಕರೆ ತರಲಾಗಿದೆ. ಸೋಮವಾರ ತಮ್ಮ ಮನೆಗಳಿಗೆ ಆಗಮಿಸುವ ನಿರೀಕ್ಷೆ ಇದೆ.

    ಬೇಸ್‌ನಲ್ಲಿ ಇನ್ನೂ ನಾಲ್ವರು ಕನ್ನಡಿಗರು?: ಅಫ್ಘಾನಿಸ್ತಾನದಲ್ಲಿ ನ್ಯಾಟೋ ಮಿಲಿಟರಿ ಕ್ಯಾಂಪ್ ಪೂರ್ತಿಯಾಗಿ ತೆರವಾಗಿಲ್ಲ. ಪ್ರಸಕ್ತ ಕಾಬೂಲ್ ಹಾಗೂ ಬಾಗ್ರಾಂ ಸೇನಾ ನೆಲೆಯಲ್ಲಿ ಸ್ವಲ್ಪ ಮಂದಿ ಭಾರತೀಯರು ಕಾರ್ಯನಿರ್ವಹಿಸುತ್ತಿದ್ದಾರೆ. ನ್ಯಾಟೋ ಪಡೆ ತೆರಳುವ ವೇಳೆಗೆ ಇವರು ಕೂಡ ತಾಯ್ನಡಿಗೆ ವಾಪಸಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಪ್ರಸಕ್ತ ಉತ್ತರ ಕನ್ನಡದ ಮೂವರು ಹಾಗೂ ಮಂಗಳೂರಿನ ಒಬ್ಬರು ನ್ಯಾಟೋ ಪಡೆ ಶಿಬಿರದಲ್ಲಿ ಈಗಲೂ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಾಗಿದೆ.

    ಬೆಳ್ತಂಗಡಿಯ ಜಗದೀಶ್: ಮೂಡುಬಿದಿರೆ: ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ 10 ವರ್ಷಗಳಿಂದ ಕೆಲಸ ಮಾಡುತ್ತಿರುವ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ಹೊಸಂಗಡಿ ಪಡ್ಯಾರಬೆಟ್ಟು ನಿವಾಸಿ ಜಗದೀಶ್ ಪೂಜಾರಿ ದೆಹಲಿ ತಲುಪಿದ್ದಾರೆ.

    ಭಾರತೀಯ ರಾಯಭಾರ ಕಚೇರಿ, ಅಮೆರಿಕ ಸೇನೆ ಹಾಗೂ ನಾನು ಕೆಲಸ ಮಾಡುತ್ತಿದ್ದ ಒಎಸ್‌ಎಸ್ ಕಂಪನಿಯು ಸುರಕ್ಷಿತವಾಗಿ ನಮ್ಮನ್ನು ಮರಳಿ ದೇಶಕ್ಕೆ ಕರೆತರಲು ಶ್ರಮವಹಿಸಿದೆ. ಆ.17ರಂದು ಅಫ್ಘನ್‌ನಿಂದ ಕತಾರ್‌ನ ರಾಜಧಾನಿ ದೋಹಾಕ್ಕೆ ತೆರಳಿದ್ದೆವು. ಅಲ್ಲಿಂದ ಭಾನುವಾರ ದೆಹಲಿಗೆ ಬಂದಿದ್ದೇವೆ ಎಂದು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
    ಜಗದೀಶ್ ಅವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದು, ಸೋಮವಾರ ಅವರು ಕುಟುಂಬವನ್ನು ಸೇರುವ ನಿರೀಕ್ಷೆ ಇದೆ. ಕೆಲಸ ಮಾಡುತ್ತಿದ್ದ ಸಂಸ್ಥೆ ಮತ್ತು ಪ್ರಯಾಣಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಒಂದೆರಡು ದಿನಗಳಲ್ಲಿ ಊರಿಗೆ ಬರಲಿದ್ದೇನೆ ಎಂದು ಜಗದೀಶ್ ಮಾಹಿತಿ ನೀಡಿದ್ದಾರೆ.

    ಕಿನ್ನಿಗೋಳಿಯ ಡೆಸ್ಮಂಡ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ದಾಳಿ ನಡೆಸಿ ದೇಶವನ್ನು ವಶಪಡಿಸಿಕೊಂಡ ನಂತರ ಅಲ್ಲಿಂದ ಕತಾರ್ ತಲುಪಿದ್ದ ಕಿನ್ನಿಗೋಳಿ ಸಮೀಪದ ಪಕ್ಷಿಕೆರೆ ನಿವಾಸಿ ಡೆಸ್ಮಂಡ್ ಡೇವಿಸ್ ಡಿಸೋಜ ಭಾನುವಾರ ದೆಹಲಿ ತಲುಪಿದ್ದಾರೆ. 36 ವರ್ಷ ವಯಸ್ಸಿನ ಅವರು 10 ವರ್ಷಗಳ ಹಿಂದೆ ಉದ್ಯೋಗಕ್ಕೆಂದು ಅಫ್ಘನ್‌ಗೆ ತೆರಳಿದ್ದು, ಅಮೆರಿಕ ಮೂಲಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 2019ರ ಅಕ್ಟೋಬರ್‌ನಲ್ಲಿ ಊರಿಗೆ ಬಂದು ಹೋಗಿದ್ದರು. ಕೆಲ ದಿನಗಳ ಹಿಂದಷ್ಟೇ ಪತ್ನಿಗೆ ಕರೆ ಮಾಡಿದ್ದರು. ನನಗೆ ಯಾವುದೇ ಸಮಸ್ಯೆಗಳಿಲ್ಲ ಎಂದು ಧೈರ್ಯ ತುಂಬಿದ್ದರು ಎಂದು ಆಪ್ತರು ತಿಳಿಸಿದ್ದಾರೆ.

    ಇಬ್ಬರು ಕಾಬೂಲ್‌ನಲ್ಲೇ ಬಾಕಿ: ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಇನ್ನೂ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಇದ್ದಾರೆ. ಬಂಟ್ವಾಳದ ಸಿದ್ದಕಟ್ಟೆ ಸಮೀಪದ ಕಲ್ಕುರಿ ನಿವಾಸಿ ಫಾ.ಜೆರೋಮ್ ಸಿಕ್ವೇರ ಎಸ್.ಜೆ. ಹಾಗೂ ಕಾಸರಗೋಡಿನ ಸಿಸ್ಟರ್ ತೆರೆಸಾ ಕ್ರಾಸ್ತ ಇನ್ನಷ್ಟೇ ಏರ್‌ಲಿಫ್ಟ್ ಆಗಬೇಕಿದೆ. ಈ ಪೈಕಿ ತೆರೆಸಾ ಅವರು ಇಟಲಿಗೆ ತೆರಳುವುದಾಗಿ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಚೇರಿಗೆ ತಿಳಿಸಿದ್ದಾರೆ. ಈ ಇಬ್ಬರಲ್ಲದೆ, ಚಿಕ್ಕಮಗಳೂರಿನ ಎನ್.ಆರ್.ಪುರದ ಫಾದರ್ ರಾಬರ್ಟ್ ಕ್ಲೈವ್ ಎಂಬವರೂ ಏರ್‌ಪೋರ್ಟಿನಲ್ಲಿದ್ದಾರೆ.

    ಜೆರೋಮ್ ಸಿಕ್ವೇರ ಊರಿಗೆ ಬರಲೆಂದು ಸ್ನೇಹಿತನ ಜತೆ ಕೆಲದಿನಗಳ ಹಿಂದೆಯೇ ಕಾಬೂಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರೂ, ಪ್ರಯಾಣ ಇದುವರೆಗೆ ಸಾಧ್ಯವಾಗಿಲ್ಲ. ತನ್ನ ಸಹೋದರ ಬೆರ್ನಾಡ್ ಸಿಕ್ವೇರ ಅವರೊಂದಿಗೆ ಸಂಪರ್ಕದಲ್ಲಿರುವ ಜೆರೋಮ್, ಸುರಕ್ಷಿತವಾಗಿ ಇರುವುದಾಗಿ ಮಾಹಿತಿ ನೀಡಿದ್ದಾರೆ. ಐದು ವರ್ಷ ಅಫ್ಘನ್‌ನಲ್ಲಿದ್ದ ಜೆರೋಮ್ ನಂತರ ಜಾರ್ಖಂಡ್‌ನಲ್ಲಿದ್ದು, ಜನವರಿಯಲ್ಲಿ ಮತ್ತೆ ಅಫ್ಘನ್‌ಗೆ ತೆರಳಿದ್ದರು. ಕಾಬೂಲ್‌ನ ಅಂತಾರಾಷ್ಟ್ರೀಯ ಎನ್‌ಜಿಒ ಜೆಸ್ಯೂಟ್ ರೆಪ್ಯೂಜಿ ಸರ್ವೀಸಸ್(ಜೆಆರ್‌ಎಸ್)ನ ಮುಖ್ಯಸ್ಥರಾಗಿ ಅವರು ಕಾರ‌್ಯನಿರ್ವಹಿಸುತ್ತಿದ್ದರು.

    ಮಂಗಳೂರಿನ ಜೆಪ್ಪು ಪ್ರಶಾಂತ ನಿವಾಸದಲ್ಲಿದ್ದ, ಮೂಲತಃ ಕಾಸರಗೋಡು ಜಿಲ್ಲೆಯ ಬೇಳ ಪೆರಿಯಡ್ಕ ನಿವಾಸಿ ಸಿಸ್ಟರ್ ತೆರೆಸಾ ಕ್ರಾಸ್ತಾ ಕೂಡ ಕಾಬೂಲ್‌ನಲ್ಲೇ ಇದ್ದಾರೆ. ಅವರು ಆಗಸ್ಟ್ 17ರಂದು ಭಾರತಕ್ಕೆ ಬರಲೆಂದು ಸಿದ್ಧರಾಗಿದ್ದರೂ, ತಾಲಿಬಾನ್‌ಗಳು ಏರ್‌ಪೋರ್ಟ್ ಬಂದ್ ಮಾಡಿದ್ದರಿಂದ ಸಾಧ್ಯವಾಗಿರಲಿಲ್ಲ. 2017ರಲ್ಲಿ ಸಿಸ್ಟರ್ ತೆರೆಸಾ ಇಟಲಿಗೆ ತೆರಳಿದ್ದರು. ಅಲ್ಲಿಂದ ಕಾಬೂಲಿನ ಬುದ್ಧಿಮಾಂದ್ಯ ಮಕ್ಕಳ ಪಾಲನೆ ನಡೆಸುವ ಸಂಸ್ಥೆಗೆ ಪರಿಚಾರಿಕೆಯಾಗಿ ತೆರಳಿದ್ದರು. ಇಟಲಿ ಸಂಪರ್ಕದ ಹಿನ್ನೆಲೆಯಲ್ಲಿ ಅವರು ಅಲ್ಲಿಗೇ ತೆರಳಲು ಉದ್ದೇಶಿಸಿದ್ದು, ಉಭಯ ದೇಶಗಳ ರಾಯಭಾರ ಕಚೇರಿಗಳ ಜತೆ ಸಂಪರ್ಕದಲ್ಲಿದ್ದಾರೆ. ಆಹಾರ, ನೀರು ಸಿಗುತ್ತಿದ್ದು, ಸುರಕ್ಷಿತವಾಗಿದ್ದೇನೆ ಎಂದು ಮನೆಯವರಿಗೆ ತೆರೆಸಾ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts