More

    ಮುಂಗಡವಾಗಿ ಆದಾಯ ತೆರಿಗೆ ಪಾವತಿಸುವ ಪ್ರವೃತ್ತಿ ಹೆಚ್ಚಲಿ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಆಯಾ ಹಣಕಾಸು ವರ್ಷದ ಆದಾಯ ತೆರಿಗೆಯನ್ನು ಮುಂಗಡವಾಗಿ ಪಾವತಿಸುವ ಪ್ರವೃತ್ತಿಯನ್ನು ವಾಣಿಜ್ಯೋದ್ಯಮಿಗಳು ರೂಢಿಸಿಕೊಳ್ಳಬೇಕು ಎಂದು ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತ ಅರುಣ ಕುಮಾರ ಕರೆ ನೀಡಿದರು.

    ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ಮಂಗಳವಾರ ಆಯೋಜಿಸಿದ್ದ ಆದಾಯ ತೆರಿಗೆ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಕಚೇರಿ ವ್ಯಾಪ್ತಿಯ ಉತ್ತರ ಕರ್ನಾಟಕ ಭಾಗದ 13 ಜಿಲ್ಲೆಗಳಲ್ಲಿ ಹಣಕಾಸು ವರ್ಷ ಮುಗಿದ ಮೇಲೆ ಆದಾಯ ತೆರಿಗೆ (ಸೆಲ್ಪ್ ಅಸೆಸ್​ವೆುಂಟ್) ಪಾವತಿಸುವ ವಾಣಿಜ್ಯೋದ್ಯಮಿಗಳ ಪ್ರಮಾಣ ಅಧಿಕವಾಗಿದೆ. ವಾಣಿಜ್ಯೋದ್ಯಮಿಗಳು ಮುಂಗಡವಾಗಿ ತೆರಿಗೆ ಪಾವತಿಸುವಂತೆ ತೆರಿಗೆ ಸಲಹೆಗಾರರು, ಲೆಕ್ಕ ಪರಿಶೋಧಕರು ಹಾಗೂ ವಾಣಿಜ್ಯೋದ್ಯಮ ಸಂಸ್ಥೆಗಳು ಉತ್ತೇಜಿಸಬೇಕು ಎಂದರು.

    2022-23ನೇ ಸಾಲಿಗೆ ನಮ್ಮ ಕಚೇರಿಗೆ 1,049 ಕೋಟಿ ರೂ. ಆದಾಯ ತೆರಿಗೆ ಸಂಗ್ರಹ ಗುರಿ ನೀಡಲಾಗಿತ್ತು. 2023-24ನೇ ಸಾಲಿಗೆ 2,000 ಕೋಟಿ ರೂ. ಗುರಿ ನಿಗದಿಪಡಿಸಲಾಗಿದೆ. ಇದರಲ್ಲಿ ಹುಬ್ಬಳ್ಳಿ ಕಚೇರಿಗೆ 420 ಕೋಟಿ ರೂ. ಗುರಿ ಇರುತ್ತದೆ. ಇದರಲ್ಲಿ ಶೇ. 60 ರಷ್ಟು ಸಾಧನೆ ಮಾಡಿದ್ದೇವೆ. ಪ್ರಸಕ್ತ ಹಣಕಾಸು ವರ್ಷದ ಕೆಲವೇ ದಿನಗಳು ಬಾಕಿ ಉಳಿದಿದ್ದು, ವಾಣಿಜ್ಯೋದ್ಯಮಿಗಳು ಮುಂಗಡವಾಗಿ ಆದಾಯ ತೆರಿಗೆ ಪಾವತಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

    ಆದಾಯ ತೆರಿಗೆ ಉಪ ಆಯುಕ್ತ (ಟಿಡಿಎಸ್) ಕೀರ್ತಿ ನಾಯಕ ಮಾತನಾಡಿ, ಯಾವುದೇ ಉದ್ಯಮ, ವ್ಯಾಪಾರ ನಡೆಸುವವರು ತಾವು ಟಿಡಿಎಸ್ ಕಡಿತಕ್ಕೆ ಒಳಪಡುತ್ತೇವೆಯೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಇಲ್ಲದಿದಲ್ಲಿ ಮುಂದೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕ್ರಿಪ್ಟೋ ಕರೆನ್ಸಿಯಲ್ಲಿ 50 ಸಾವಿರ ರೂ. ಮೇಲ್ಪಟ್ಟು ವ್ಯವಹಾರ ನಡೆಸುವವರು ಹಾಗೂ ಇ-ಕಾಮರ್ಸ್​ನಲ್ಲಿ 5ಲಕ್ಷ ರೂ. ಮೇಲ್ಪಟ್ಟು ವ್ಯವಹಾರ ನಡೆಸುವವರು ಶೇ. 1ರಷ್ಟು ಟಿಡಿಎಸ್ ಕಡಿತಕ್ಕೆ ಒಳಪಡುತ್ತಾರೆ ಎಂದು ತಿಳಿಸಿದರು.

    ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರಾದ ರವೀಂದ್ರ ಹಟ್ಟಳ್ಳಿ, ಕೇಶವ ದೀಕ್ಷಿತ್, ಮಹೇಂದ್ರ ಸಿಂಘಿ, ರವೀಂದ್ರ ಬಳಿಗಾರ, ಸಂದೀಪ ಬಿಡಸರಿಯಾ, ಇತರರು ಇದ್ದರು. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ ಸ್ವಾಗತಿಸಿದರು. ಲೆಕ್ಕ ಪರಿಶೋಧಕ ಶೇಷಗಿರಿ ಕುಲಕರ್ಣಿ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಲೆಕ್ಕ ಪರಿಶೋಧಕ ಕಾರ್ತಿಕ ಶೆಟ್ಟಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts