More

    VIDEO: ಹೆಜ್ಜೆ ಹಾಕಲು ಕಲಿಯುತ್ತಿರುವ ಮುದ್ದಾದ ಆನೆಮರಿ…ಬಿದ್ದರೂ, ಎಡವಿದರೂ ಬಿಡದ ಛಲಕ್ಕೆ ಮನಸೋತ ಟ್ವಿಟ್ಟಿಗರು

    ಆಗ ತಾನೆ ನಡೆಯಲು ಕಲಿಯುವ ಮಕ್ಕಳು ಹೆಜ್ಜೆ ಇಡುವುದನ್ನು ನೋಡಲು ಅದೆಷ್ಟು ಚೆಂದವೋ…ಹಾಗೇ ಪ್ರಾಣಿಗಳೂ ಕೂಡ…

    ಮುದ್ದಾದ ಆನೆ ಮರಿಯೊಂದು ತನ್ನ ಮೊದಲ ಹೆಜ್ಜೆಗಳನ್ನಿಟ್ಟು ನಡೆಯಲು ಪ್ರಯತ್ನಿಸುವ ವಿಡಿಯೋವೊಂದು ವೈರಲ್​ ಆಗಿದ್ದು ನೆಟ್ಟಿಗರು ಅದನ್ನು ತುಂಬ ಮೆಚ್ಚಿಕೊಂಡಿದ್ದಾರೆ.

    ಭಾರತೀಯ ಅರಣ್ಯ ಸೇವಾ ಅಧಿಕಾರಿಯೋರ್ವರು (ಐಎಫ್​ಎಸ್​)ಟ್ವಿಟರ್‌ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
    25 ಸೆಕೆಂಡ್​ಗಳ ವಿಡಿಯೋ ಇದಾಗಿದ್ದು, ಪುಟ್ಟ ಆನೆ ಮರಿ ಮೊದಲ ಹೆಜ್ಜೆಗಳನ್ನು ಆತ್ಮವಿಶ್ವಾಸದಿಂದ ಇಡುವುದನ್ನು ನೋಡಬಹುದು. ಆನೆ ಮರಿಗೆ ನಡೆದಾಡಲು ಕಷ್ಟವಾಗುತ್ತಿದೆ. ಅದು ಎದ್ದು ಎರಡೇ ಹೆಜ್ಜೆ ಇಡುತ್ತಲೇ ಮುಂದೆ ಮುಗ್ಗರಿಸಿ ಬೀಳುತ್ತದೆ. ಆದರೂ ಧೈರ್ಯಗೆಡದೆ ಮತ್ತೆ ಎದ್ದುನಿಲ್ಲುತ್ತದೆ. ಹಿಂಗಾಲುಗಳ ಮೇಲೆ ತೆವಳುತ್ತ ನಡೆಯಲು ಕಲಿಯವ ಪರಿ ತುಂಬ ಚೆಂದ ಎನ್ನಿಸುತ್ತದೆ.

    ಫೆಬ್ರವರಿ 6ರಂದು ವಿಡಿಯೋವನ್ನು ಸುಸಾಂತಾ ನಂದಾ ಎಂಬುವರು ಪೋಸ್ಟ್ ಮಾಡಿದ್ದು, ಇದೊಂದು ಪುಟ್ಟ ಹೆಜ್ಜೆಯೊಂದಿಗೆ ಸಾವಿರಗಳಷ್ಟು ಮೈಲಿಯ ಪ್ರಯಾಣ ಪ್ರಾರಂಭ ಆಗುತ್ತಿದೆ ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ.
    ಅಷ್ಟೇ ಅಲ್ಲದೆ, ಆನೆ ಮರಿ ಸುಮಾರು 1 ಗಂಟೆಯ ಪ್ರಯತ್ನದ ನಂತರ ಎದ್ದು ನಿಂತಿದೆ. ಮತ್ತೊಂದಿಷ್ಟು ಗಂಟೆಗಳ ಬಳಿಕ ಅಲ್ಲೇ ಸುತ್ತಾಡಿದೆ ಎಂದು ತಿಳಿಸಿದ್ದಾರೆ.

    ಆನೆಗಳಲ್ಲಿ ಶೇ.99ರಷ್ಟು ರಾತ್ರಿಯೇ ಮರಿ ಹಾಕುತ್ತವೆ. ಈ ಮರಿಗಳು ಹುಟ್ಟುವಾಗಲೇ ಸುಮಾರು 3 ಅಡಿ ಎತ್ತರ ಇರುತ್ತವೆ ಎಂದು ಬರೆದಿದ್ದಾರೆ.

    ಇನ್ನು ಟ್ವಿಟ್ಟಿಗರಂತೂ ಆನೆಮರಿಯನ್ನು ನೋಡಿ ತುಂಬ ಖುಷಿಪಡುತ್ತಿದ್ದಾರೆ. ಈ ವಿಡಿಯೋ ನೋಡಲು ತುಂಬ ಸಂತೋಷವಾಗುತ್ತದೆ ಎಂದು ಕಾಮೆಂಟ್​ಗಳನ್ನು ಬರೆದಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts