More

    ಕಾಫಿನಾಡಲ್ಲಿ ಜನಪ್ರತಿನಿಧಿಗಳಿಗೇ ಸೋಂಕು

    ಕಾಫಿನಾಡಲ್ಲಿ ಜನಪ್ರತಿನಿಧಿಗಳಿಗೇ ಸೋಂಕು

    ಚಿಕ್ಕಮಗಳೂರು: ಮುನ್ನೆಚ್ಚರಿಕೆ ವಹಿಸಿ, ಸೋಂಕಿನಿಂದ ಪಾರಾಗಿ ಎಂದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದ ಜನಪ್ರತಿನಿಧಿಗಳು ಮತ್ತು ವಿವಿಧ ಪಕ್ಷಗಳ ಮುಖಂಡರಲ್ಲೇ ಕರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ.

    ಜಿಲ್ಲೆಯ ಇಬ್ಬರು ವಿಧಾನಪರಿಷತ್ ಸದಸ್ಯರು, ಓರ್ವ ಶಾಸಕರು, ಜಿಪಂ ಉಪಾಧ್ಯಕ್ಷರು, ನಗರಸಭೆ ಮಾಜಿ ಅಧ್ಯಕ್ಷರು, ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತ ಜನಪ್ರತಿನಿಧಿಗಳ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಹೋಮ್ ಕ್ವಾರಂಟೈನ್ ಮಾಡಲಾಗುತ್ತಿದೆ. ಹೀಗಾಗಿ ಆಡಳಿತ ಯಂತ್ರ ನಿಧಾನವಾಗಿ ಸ್ಥಗಿತವಾಗುವ ಲಕ್ಷಣ ಕಾಣಿಸುತ್ತಿದೆ.

    ಮೊದಲು ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ನಗರಸಭೆ ಮಾಜಿ ಅಧ್ಯಕ್ಷರಲ್ಲಿ ಸೋಂಕು ಕಾಣಿಸಿಕೊಂಡಿತು. ಹೀಗಾಗಿ ಸಿಡಿಎ ಕಚೇರಿಯನ್ನೇ ಸೀಲ್​ಡೌನ್ ಮಾಡಲಾಯಿತು. ನಂತರ ಎಂಎಲ್ಸಿ ಎಂ.ಕೆ.ಪ್ರಾಣೇಶ್ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಾಗ ಅವರ ಪ್ರಾಥಮಿಕ ಸಂಪರ್ಕದ 70 ಜನರನ್ನು ಹೋಮ್್ವಾರಂಟೈನ್​ಗೆ ಒಳಪಡಿಸಲಾಯಿತು. ಇವರಲ್ಲಿ ಅಧಿಕಾರಿಗಳು, ಸಿಬ್ಬಂದಿಯೂ ಇದ್ದರು. ಮೂಡಿಗೆರೆ ತಾಪಂ ಸಭೆಯಲ್ಲಿ ಪ್ರಾಣೇಶ್ ಭಾಗವಹಿಸಿದ್ದರಿಂದ ತಾಪಂ ಕಚೇರಿಯನ್ನೇ ಸೀಲ್​ಡೌನ್ ಮಾಡಲಾಯಿತು. ಹೀಗಾಗಿ ತಾಲೂಕು ಆಡಳಿತದ ಕಾರ್ಯ ಸ್ತಬ್ಧವಾಗಿದೆ. ಎಂಎಲ್ಸಿಗೆ ಸೋಂಕು ತಗುಲಿರುವುದರಿಂದ ಪಕ್ಷದ ಮುಖಂಡರು, ಕಾರ್ಯಕರ್ತರು, ಒಡನಾಡಿಗಳಲ್ಲಿ ಆತಂಕ ಸೃಷ್ಟಿ ಆಗಿದೆ.

    ಬುಧವಾರ ಜೆಡಿಎಸ್ ಮುಖಂಡರೊಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿತು. ನಂತರ ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ಸೋಂಕು ತಗುಲಿರುವುದು ಪತ್ತೆಯಾಯಿತು. ಜತೆಗೆ ಜಿಪಂ ಉಪಾಧ್ಯಕ್ಷರಿಗೂ ಕರೊನಾ ತಗುಲಿದೆ. ಹೀಗಾಗಿ ಕಾಂಗ್ರೆಸ್, ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಅವರ ಸಂಪರ್ಕದಲ್ಲಿದ್ದವರಲ್ಲಿ ತಳಮಳ ಉಂಟಾಗಿದೆ.

    ಸೋಂಕಿತ ವ್ಯಕ್ತಿಗಳ ಸಂಪರ್ಕದಲ್ಲಿದ್ದ ಜಿಲ್ಲೆಯ ವಿವಿಧ ಪಕ್ಷದ ನೂರಾರು ಕಾರ್ಯಕರ್ತರು ಮುಖಂಡರು ಮೂರು ದಿನಗಳಿಂದ ಆರೋಗ್ಯ ತಪಾಸಣೆಗೆ ಮುಗಿಬಿದ್ದಿದ್ದಾರೆ.

    ಆಡಳಿತ ಕಚೇರಿಗಳು ಸೀಲ್​ಡೌನ್: ನಗರಸಭೆಯಲ್ಲಿರುವ ಎಂಎಲ್ಸಿ ಎಂ.ಕೆ.ಪ್ರಾಣೇಶ್ ಕೊಠಡಿ, ಜಿಪಂ ಉಪಾಧ್ಯಕ್ಷರ ಕೊಠಡಿ, ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯನ್ನು ಸೀಲ್​ಡೌನ್ ಮಾಡಲಾಗಿದೆ. ನಿತ್ಯ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿದ್ದ ಪ್ರವಾಸಿ ಮಂದಿರಕ್ಕೂ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿದೆ.

    ಗಂಟಲು ದ್ರವ ಸಂಗ್ರಹಿಸುವ ಸಿಬ್ಬಂದಿಗೆ ಗುರುವಾರ ಸೋಂಕು ದೃಢಪಟ್ಟಿದ್ದರಿಂದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಸರ್ವೆಕ್ಷಣಾ ಘಟಕವನ್ನು ಸೀಲ್​ಡೌನ್ ಮಾಡಲಾಗಿದೆ. ಜತೆಗೆ ಸಾಂಕ್ರಾಮಿಕವಲ್ಲದ ರೋಗಗಳ ಘಟದಲ್ಲೂ ಅವರು ಕೆಲಸ ನಿರ್ವಹಿಸಿದ್ದರಿಂದ ಆ ಘಟಕವನ್ನೂ ಸೀಲ್​ಡೌನ್ ಮಾಡಲಾಗಿದೆ. ಎರಡೂ ಘಟಕಗಳಿಗೆ ಔಷಧ ಸಿಂಪಡಿಸಿ ಸ್ವಚ್ಛಗೊಳಿಸಲಾಯಿತು. ಶುಕ್ರವಾರ ಆ ಎರಡೂ ಘಟಕಗಳಲ್ಲೂ ಕೆಲಸ ಮರು ಆರಂಭವಾಗಲಿದೆ.

    ಬಿಜೆಪಿಯಲ್ಲಿ ಸ್ವಯಂ ಪ್ರೇರಿತ ನಿರ್ಬಂಧ: ಆಡಳಿತ ಪಕ್ಷದ ಜನಪ್ರತಿನಿಧಿಗಳು ಹಾಗೂ ಮುಖಂಡರಿಗೆ ಸೋಂಕು ತಗುಲಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಬಿಜೆಪಿ ಕಚೇರಿಗೆ ಕಾರ್ಯಕರ್ತರು, ಮುಖಂಡರು ತೆರಳದಂತೆ ಸ್ವಯಂ ಪ್ರೇರಿತ ನಿರ್ಬಂಧ ಹಾಕಿಕೊಳ್ಳಲಾಗಿದೆ ಎಂದು ಮುಖಂಡರು ತಿಳಿಸಿದ್ದಾರೆ.

    ತುರ್ತು ಸಂದರ್ಭ ಹೊರತುಪಡಿಸಿ ಕರೊನಾ ನಿಯಂತ್ರಣಕ್ಕೆ ಬರುವವರೆಗೂ ಜನಪ್ರತಿನಿಧಿಗಳು ಭಾಗವಹಿಸದಂತೆ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಪಡಿಸಬೇಕು ಎಂಬ ಒತ್ತಾಯ ರಾಜಕೀಯ ಪಕ್ಷದ ಮುಖಂಡರಿಂದಲೇ ಕೇಳಿಬರುತ್ತಿದೆ.

    ಸರ್ಕಾರಿ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಭಾಗವಹಿಸಿದಾಗ ಅಧಿಕಾರಿ, ಸಿಬ್ಬಂದಿ ಪಾಲ್ಗೊಳ್ಳುವುದು ಅನಿವಾರ್ಯವಾಗುತ್ತದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡವರಲ್ಲಿ ಒಬ್ಬರಿಗೆ ಸೋಂಕಿದ್ದರೂ ಸುಲಭವಾಗಿ ಎಲ್ಲರಿಗೂ ಹರಡುತ್ತದೆ. ಆದ್ದರಿಂದ ಅನಿವಾರ್ಯವಲ್ಲದ ಕಾರ್ಯಕ್ರಮ ಏರ್ಪಡಿಸಬೇಕಿಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

    ಟಿ.ಡಿ.ರಾಜೇಗೌಡ ಬೆಂಗಳೂರಿನಲ್ಲಿ ದಾಖಲು: ಶಾಸಕ ಟಿ.ಡಿ.ರಾಜೇಗೌಡ ಅವರಿಗೂ ಕರೊನಾ ಸೋಂಕು ದೃಢಪಟ್ಟಿದ್ದು ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಜಿಪಂ ಉಪಾಧ್ಯಕ್ಷರಿಗೂ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts