More

    ಮಂಪರು ಪರೀಕ್ಷೆಗೆ ಒಳಪಡಲು ಒಪ್ಪದ ಅಮೃತ್ ಪೌಲ್​; ಪಿಎಸ್​ಐ ನೇಮಕಾತಿ ಹಗರಣದ 35ನೇ ಆರೋಪಿ..

    ಬೆಂಗಳೂರು: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಮಂಪರು ಪರೀಕ್ಷೆಗೆ ಒಳಪಡಲು ನಿರಾಕರಿಸಿದ್ದಾರೆ.

    ಪಿಎಸ್‌ಐ ನೇಮಕಾತಿ ಹಗರಣದಲ್ಲಿ 35ನೇ ಆರೋಪಿಯಾಗಿರುವ ಅಮೃತ್ ಪೌಲ್ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಬೆಂಗಳೂರಿನ ಒಂದನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಆನಂದ್ ಟಿ. ಚವ್ಹಾಣ್ ವಿಚಾರಣೆ ನಡೆಸಿದರು.

    ಅಮೃತ್ ಪೌಲ್ ಪರ ವಕೀಲರು ಹಾಜರಾಗಿ, ಮಂಪರು ಪರೀಕ್ಷೆಗೆ ಒಳಪಡಿಸುವ ಕುರಿತ ಪ್ರಾಸಿಕ್ಯೂಷನ್ ಮನವಿಗೆ ಅರ್ಜಿದಾರರು ನಿರಾಕರಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಬಳಿಕ ಜಾಮೀನು ಅರ್ಜಿ ಸಂಬಂಧ 2 ತಾಸಿಗೂ ಅಧಿಕ ಸಮಯ ಸುದೀರ್ಘ ವಾದ ಮಂಡಿಸಿದ ಅಮೃತ್ ಪೌಲ್ ಪರ ವಕೀಲರು, ಅರ್ಜಿದಾರರು ಉತ್ತಮ ಸೇವಾ ನಡತೆ ಹೊಂದಿದ್ದಾರೆ. ಮುಗ್ಧ ಮತ್ತು ಅಮಾಯಕರಾಗಿರುವ ಅವರನ್ನು ಪ್ರಕರಣದಲ್ಲಿ ಅನಗತ್ಯವಾಗಿ ಸಿಲುಕಿಸಲಾಗಿದೆ. ಕೋರ್ಟ್ ವಿಧಿಸುವ ಯಾವುದೇ ಷರತ್ತುಗಳಿಗೆ ಬದ್ಧರಾಗಿ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಾರೆ. ಆದ್ದರಿಂದ, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.

    ಪೌಲ್ ಜಾಮೀನು ಅರ್ಜಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಿರುವ ಸಿಐಡಿ ವಿಶೇಷ ಅಭಿಯೋಜಕ ಪಿ. ಪ್ರಸನ್ನ ಕುಮಾರ್, ಆರೋಪಿಗೆ ಜಾಮೀನು ಮಂಜೂರು ಮಾಡದಂತೆ ಮನವಿ ಮಾಡಿದರು. ವಾದ ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದ್ದು, ಸಿಐಡಿ ಪರ ವಕೀಲರು ವಾದ ಮುಂದುವರಿಸಲಿದ್ದಾರೆ.

    ಸಿಐಡಿ ಆಕ್ಷೇಪಣೆಯಲ್ಲೇನಿದೆ?

    ಪಿಎಸ್‌ಐ ನೇಮಕಾತಿ ಹಗರಣದಲ್ಲಿ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮೃತ್ ಪೌಲ್ ಪಾತ್ರವಿರುವುದು ತನಿಖೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿತ್ತು. ಆದ್ದರಿಂದ, ಅವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ 35ನೇ ಆರೋಪಿಯನ್ನಾಗಿಸಿ, ವಿಚಾರಣೆ ನಡೆಸಲಾಗಿದೆ. ಒಎಂಆರ್ ಶೀಟ್‌ಗಳನ್ನು ಒಳಗೊಂಡ ಕಿಟ್ ಬಾಕ್ಸ್‌ನ ಕೀಗಳು ನೇಮಕಾತಿ ವಿಭಾಗದ ಮುಖ್ಯಸ್ಥರಾದ ಎಡಿಜಿಪಿ ಬಳಿ ಇರುತ್ತದೆ. ಅವರು ಇತರ ಆರೋಪಿಗಳೊಂದಿಗೆ ಒಳಸಂಚು ರೂಪಿಸಿ ಉದ್ದೇಶಪೂರ್ವಕವಾಗಿ ಸ್ಟ್ರಾಂಗ್ ರೂಂ ಕೀ ನೀಡಿದ್ದಾರೆ. ಸಹ ಆರೋಪಿಗಳು ಒಎಂಆರ್ ಶೀಟ್‌ಗಳನ್ನು ತಿದ್ದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಗ್ರಹಿಸಿರುವ ದಾಖಲೆಗಳು ಅರ್ಜಿದಾರ ಅಮೃತ್ ಪೌಲ್ ಪಾತ್ರ ಇರುವುದು ಸ್ಪಷ್ಟವಾಗಿದೆ ಎಂದು ಸಿಐಡಿ ಆಕ್ಷೇಪಣೆಯಲ್ಲಿ ತಿಳಿಸಿದೆ.

    ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದ್ದು, ಪ್ರಾಥಮಿಕ ಹಂತದಲ್ಲೇ ಆರೋಪಿಗೆ ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ. ಹಿರಿಯ ಅಧಿಕಾರಿಯಾಗಿರುವ ಅರ್ಜಿದಾರರು ತಮ್ಮ ಸಿಬ್ಬಂದಿ ಮತ್ತು ಮಧ್ಯವರ್ತಿಗಳೊಂದಿಗೆ ಒಳಸಂಚು ರೂಪಿಸಿ ಒಎಂಆರ್ ಶೀಟ್‌ಗಳನ್ನು ತಿದ್ದುಪಡಿ ಮಾಡಿದ್ದಾರೆ. ಅವರ ಮೊಬೈಲ್ ಪೋನ್ ಜಪ್ತಿ ಮಾಡಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ವರದಿ ನಿರೀಕ್ಷಿಸಲಾಗಿದೆ. ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳುವ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದ್ದು, ಈ ಹಂತದಲ್ಲಿ ಅರ್ಜಿದಾರರಿಗೆ ಜಾಮೀನು ನೀಡಿದರೆ, ತನಿಖೆಗೆ ಅಡ್ಡಿಯುಂಟಾಗುತ್ತದೆ. ಪ್ರಕರಣದ ಅನೇಕ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನೂ ಬಂಧಿಸಿ ತನಿಖೆ ನಡೆಸಬೇಕಿದೆ. ಆದ್ದರಿಂದ, ಜಾಮೀನು ಅರ್ಜಿ ವಜಾಗೊಳಿಸಬೇಕು ಎಂದು ಸಿಐಡಿ ಮನವಿ ಮಾಡಿದೆ.

    ನೂಪುರ್ ಶರ್ಮಾ ಹತ್ಯೆಗಾಗಿ ಗಡಿ ದಾಟಿ ಬಂದ ಪಾಕಿಸ್ತಾನಿ; 11 ಇಂಚಿನ ಚಾಕು ಸಹಿತ ಸಿಕ್ಕಿಬಿದ್ದ…

    ಮಗಳನ್ನು ಅಮೆರಿಕಕ್ಕೆ ಕಳಿಸಿ ಮರಳುತ್ತಿದ್ದ ದಂಪತಿ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts