More

    ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗಲಿ

    ತಿ.ನರಸೀಪುರ: ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವುದರ ಜತೆಗೆ ಅಕ್ರಮ-ಸಕ್ರಮ ಯೋಜನೆ ಜಾರಿಗೆ ತರಬೇಕು ಎಂದು ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಪಟ್ಟಣದ ಸೆಸ್ಕ್ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

    ಪಟ್ಟಣದ ಸೆಸ್ಕ್ ಕಚೇರಿ ಮುಂದೆ ಜಮಾವಣೆಗೊಂಡ ರೈತ ಮುಖಂಡರು, ವಿದ್ಯುತ್ ಪೂರೈಕೆ ಮಾಡದ ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯ ಸಂಘದ ಅಧ್ಯಕ್ಷ ಹಳ್ಳೀಕೆರೆ ಹುಂಡಿ ಭಾಗ್ಯರಾಜ್ ಮಾತನಾಡಿ, ಪಂಪ್ ಸೆಟ್‌ಗಳಿಗೆ 10 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು. ಸೋಲಾರ್ ಪಂಪ್‌ಸೆಟ್ ಅನ್ನು ವೈಯಕ್ತಿಕವಾಗಿ ಅಳವಡಿಸಿಕೊಳ್ಳುವಂತೆ ಇಲಾಖೆ ಪ್ರೇರೇಪಿಸುತ್ತಿರುವುದು ಸರಿಯಲ್ಲ. ಕಳೆದ ಸಾಲಿನಲ್ಲಿ ಇದ್ದಂತೆ ಅಕ್ರಮ-ಸಕ್ರಮವನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

    ಹೊಸ ವಿದ್ಯುತ್ ಸಂಪರ್ಕ ಪಡೆಯಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಟಿಸಿ ಸಂಪರ್ಕ ಪಡೆಯಲು ಮೂರು ಲಕ್ಷ ರೂ. ಕಟ್ಟಿ ಎನ್ನುವುದು ತರವಲ್ಲ. ಕಾಡಂಚಿನ ಪ್ರದೇಶಗಳಿಗೆ ಸಮರ್ಪಕವಾಗಿ ಹಗಲು ವೇಳೆ ವಿದ್ಯುತ್ ಪೂರೈಕೆ ಮಾಡಬೇಕು. ಸುಟ್ಟು ಹೋದ ಟಿಸಿಯನ್ನು 72 ಗಂಟೆಯೊಳಗೆ ಸರಿಪಡಿಸಬೇಕೆಂಬ ನಿಯಮವಿದ್ದರೂ ಕೆಳ ಹಂತದ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ವಿದ್ಯುತ್ ಅವಘಡಗಳಿಂದ ಮರಣ ಹೊಂದಿದ ಕುಟುಂಬಕ್ಕೆ 25 ಲಕ್ಷ ರೂ.ಪರಿಹಾರ ನೀಡಬೇಕು. ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬಿಗೆ ಉಂಟಾಗುವ ನಷ್ಟಕ್ಕೆ 30 ದಿನದೊಳಗೆ ನಷ್ಟ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

    26ಕ್ಕೆ ಮುತ್ತಿಗೆ: ಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ಅಕ್ರಮ -ಸಕ್ರಮ ಯೋಜನೆ ಮರು ಜಾರಿಗೆ ಒತ್ತಾಯಿಸಿ ಮಾ. 26ರಂದು ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘ ಮೈಸೂರಿನಲ್ಲಿರುವ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಲಿದೆ. ಆದ್ದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

    ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಸುಜ್ಜಲೂರು ಜಯಸ್ವಾಮಿ, ಜಿಲ್ಲಾಧ್ಯಕ್ಷ ಹಾಡ್ಯ ರವಿ, ಜಿಲ್ಲಾ ಕಾರ್ಯಾಧ್ಯಕ್ಷ ಬನ್ನಳ್ಳಿ ಹುಂಡಿ ಶಿವಕುಮಾರ್, ಮುಖಂಡರಾದ ಕೆರೆಹುಂಡಿ ರಾಜಣ್ಣ, ಅಂಬಳೆ ಮಹದೇವಸ್ವಾಮಿ, ಮಲಿಯೂರು ಮಹೇಂದ್ರ, ಕೊಂತಯ್ಯನ ಹುಂಡಿ ಮಹೇಶ್, ವಡ್ಡರಹುಂಡಿ ಮಹದೇವಸ್ವಾಮಿ, ಜಯಶಂಕರ, ಕೀಳನಪುರ ಶ್ರೀಕಂಠ, ರೂಪೇಶ್, ಉಮೇಶ್ ಅರುಣ್, ಪವನ್, ರಾಜು ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts