More

    ಬಿ.ಸಿ.ರೋಡ್-ಅಡ್ಡಹೊಳೆ ಚತುಷ್ಪಥ ಕಾಮಗಾರಿಗೆ ಮರುಜೀವ

    ಬಂಟ್ವಾಳ: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಬಹುನಿರೀಕ್ಷಿತ 63 ಕಿ.ಮೀ. ಉದ್ದದ ಬಿ.ಸಿ.ರೋಡ್- ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಪೂರ್ವಭಾವಿ ಪ್ರಕ್ರಿಯೆಗಳು ಪುನರಾರಂಭಗೊಂಡಿವೆ.

    ಬಿ.ಸಿ.ರೋಡ್- ಪೆರಿಯಶಾಂತಿ 48 ಕಿ.ಮೀ. ಕಾಮಗಾರಿಯನ್ನು ಹೈದರಾಬಾದ್‌ನ ಕೆಎನ್‌ಆರ್ ಕನ್‌ಸ್ಟ್ರಕ್ಷನ್ಸ್ ಲಿಮಿಟೆಡ್ 1,100.88 ಕೋಟಿ ರೂ.ಗಳಿಗೆ ಹಾಗೂ ಪೆರಿಯಶಾಂತಿ-ಅಡ್ಡಹೊಳೆ 15 ಕಿ.ಮೀ. ಕಾಮಗಾರಿಯನ್ನು 317 ಕೋಟಿ ರೂ.ಗಳಿಗೆ ಮಹಾರಾಷ್ಟ್ರದ ಶ್ರೀ ಎಸ್.ಎಂ.ಔತಾಡೆ ಪ್ರೈ.ಲಿ. ಕಂಪನಿ ನಿರ್ವಹಿಸಲಿದೆ. ಶಿರಾಡಿಯ ಉದನೆಯಲ್ಲಿ ಯಂತ್ರಗಳ ಅನುಷ್ಠಾನ ಕಾರ್ಯ ಆರಂಭಗೊಂಡಿದೆ.

    ಆರಂಭದಲ್ಲಿ ಎಲ್‌ಆಂಡ್‌ಟಿ ಕಂಪನಿ ಗುತ್ತಿಗೆ ವಹಿಸಿಕೊಂಡಿದ್ದ ಬಿ.ಸಿ.ರೋಡ್ -ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ವೇಗ ಪಡೆದುಕೊಂಡು ಎರಡು ಮೂರು ವರ್ಷಗಳಲ್ಲೇ ಕೆಲಸ ಪೂರ್ಣಗೊಳ್ಳಬಹುದು ಎನ್ನುವ ನಿರೀಕ್ಷೆ ಮೂಡಿಸಿತ್ತು. ಕ್ರಮೇಣ ಆಮೆ ನಡಿಗೆಯಲ್ಲಿ ಸಾಗಿ, ತಾಂತ್ರಿಕ ಮತ್ತಿತರ ಕಾರಣಗಳಿಂದ ಕಂಪನಿ ಗುತ್ತಿಗೆಯಿಂದ ಹಿಂದೆ ಸರಿಯುವುದರೊಂದಿಗೆ ಯೋಜನೆ ನನೆಗಿದಿಗೆ ಬಿದ್ದಿತ್ತು. ಇದರ ಬಳಿಕ ಆರಂಭಗೊಂಡ ಬಿ.ಸಿ.ರೋಡ್ -ಪುಂಜಾಲಕಟ್ಟೆ ರಸ್ತೆ ವಿಸ್ತರಣೆ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದೆ.

    ಕಲ್ಲಡ್ಕದಲ್ಲಿ ಫ್ಲೈಓವರ್ ನಿರ್ಮಾಣ: ಕಲ್ಲಡ್ಕದಲ್ಲಿ ಷಟ್ಪಥ ರಸ್ತೆಯ ಮೇಲ್ಸೇತುವೆ ನಿರ್ಮಾಣಕ್ಕೆ ತಯಾರಿ ಶುರುವಾಗಿದೆ. ಫ್ಲೈಓವರ್ ನಿರ್ಮಾಣ ಪೂರ್ವಭಾವಿಯಾಗಿ ಪೂರ್ಲಿಪಾಡಿಯಿಂದ ಕೆ.ಸಿ.ರೋಡ್‌ವರೆಗೆ ಭೂ ತಾಂತ್ರಿಕ ಪರಿಶೀಲನೆ ನಡೆಯುತ್ತಿದೆ. ಬೃಹತ್ ಪಿಲ್ಲರ್‌ಗಳ ನಿರ್ಮಾಣಕ್ಕೆ ಭೂಮಿಯ ಕಲ್ಲು, ಮಣ್ಣಿನ ಪರೀಕ್ಷಾ ಕಾರ್ಯ ಯಂತ್ರೋಪಕರಣಗಳ ಮೂಲಕ ಆರಂಭಗೊಂಡಿದೆ. ಕಲ್ಲಡ್ಕದ ಕೆ.ಸಿ.ರೋಡ್‌ನಿಂದ ಕುದ್ರೆಬೆಟ್ಟುವರೆಗೆ ಫ್ಲೈಓವರ್‌ಗೆ ಹಿಂದೊಮ್ಮೆ ಮಾಡಿದ್ದ ಮಾರ್ಕಿಂಗ್ ಡಾಂಬರು ಕಾಮಗಾರಿ ವೇಳೆ ಅದು ಮುಚ್ಚಿ ಹೋಗಿತ್ತು. ಕಲ್ಲಡ್ಕದಲ್ಲಿ ಪೇಟೆ ಮೂಲಕ ಚತುಷ್ಪಥ ರಸ್ತೆ ಅಥವಾ ಬೈಪಾಸ್ ರಸ್ತೆ ಅಥವಾ ಅಂಡರ್‌ಪಾಸ್ ನಿರ್ಮಾಣ ಎಂದೆಲ್ಲ ಗೊಂದಲಗಳಿದ್ದವು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಫ್ಲೈಓವರ್ ನಿರ್ಮಾಣವನ್ನೇ ಅಂತಿಮಗೊಳಿಸಿದೆ.

    ಪೂರ್ವಭಾವಿ ಪ್ರಕ್ರಿಯೆಗಳು ನಡೆಯುತ್ತಿದ್ದು, ಕಾಮಗಾರಿ ಆರಂಭಗೊಂಡಿಲ್ಲ. ಅಪಾಯಿಂಟೆಡ್ ದಿನಾಂಕ ಅಂತಿಮಗೊಂಡ ಬಳಿಕ 63 ಕಿ.ಮೀ. ಹೆದ್ದಾರಿಯ ಎಲ್ಲ ಕೆಲಸಗಳು ಒಂದೇ ಸಮಯದಲ್ಲಿ ಆರಂಭಗೊಳ್ಳಲಿದೆ.
    -ಶಿಶುಮೋಹನ್, ಯೋಜನಾ ನಿರ್ದೇಶಕ, ಎನ್‌ಎಚ್‌ಎಐ, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts