More

    ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲು ಕ್ರಮ

    ಗುಂಡ್ಲುಪೇಟೆ: ಸರ್ಕಾರ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ಕ್ರಮಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪನಾಗ್ ಹೇಳಿದರು.

    ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಭೆಯಲ್ಲಿ 150ಕ್ಕೂ ಹೆಚ್ಚಿನ ಅರ್ಜಿಗಳನ್ನು ಸ್ವೀಕರಿಸಲಾಯಿತು ಎಂದರು.

    ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಪತ್ನಿಯರಾದ(ಇಬ್ಬರೂ ಬೇರೆ ಬೇರೆ ಸಂತ್ರಸ್ತರು) ಲಕ್ಕೂರು ಸವಿತಾ, ಪುತ್ತನಪುರ ಸುನೀತಾ ಮಾತನಾಡಿ, ಸರ್ಕಾರದಿಂದ ನಮಗೆ ಉದ್ಯೋಗ ಕೊಡಿಸಿದರೆ ಜೀವನ ನಿರ್ವಹಣೆ ಸಾಧ್ಯವಾಗುತ್ತದೆ ಎಂದು ಮನವಿ ಮಾಡಿದರು.

    ರೈತ ಮುಖಂಡರಾದ ಕುಂದಕೆರೆ ಸಂಪತ್ತು, ಮಾಡ್ರಹಳ್ಳಿ ಮಹದೇವಪ್ಪ ಮಾತನಾಡಿ, ಬಂಡೀಪುರಕ್ಕೆ 10-15 ಕೋಟಿ ರೂ. ಅನುದಾನ ಬಂದಿದ್ದರೂ ಗೋಪಾಲಸ್ವಾಮಿ ಬೆಟ್ಟ ಹಾಗೂ ಬಂಡೀಪುರ ವಲಯಗಳಿಗೆ ಮಾತ್ರ ಬಳಸಿಕೊಳ್ಳಲಾಗುತ್ತಿದ್ದು, ಓಂಕಾರ್ ಹಾಗೂ ಕುಂದಕೆರೆ ವಲಯಗಳನ್ನು ಕೈಬಿಟ್ಟಿರುವುದರಿಂದ ವನ್ಯಜೀವಿಗಳ ಹಾವಳಿ ಹೆಚ್ಚಾಗಿದೆ. ಇಲ್ಲಿಗೂ ಸೋಲಾರ್ ಬೇಲಿ ಹಾಗೂ ಕಂದಕ ನಿರ್ಮಿಸಬೇಕು. ಹಂದಿಗಳನ್ನು ಕೊಲ್ಲಲು ಅನುಮತಿಯಿದ್ದರೂ ಅರಣ್ಯ ಇಲಾಖೆ ಅವಕಾಶ ನೀಡುತ್ತಿಲ್ಲ. ವನ್ಯಜೀವಿಗಳಿಂದಾದ ಬೆಳೆ ನಷ್ಟಕ್ಕೆ ಪರಿಹಾರ ನೀಡುವ ಬದಲು ಬೆಳೆಗಳ ಬೆಲೆ ಕಟ್ಟಿಕೊಡಬೇಕು. ಕೆರೆಗಳಿಗೆ ನೀರು ತುಂಬಿಸಬೇಕು, ಹದಗೆಟ್ಟ ರಸ್ತೆಗಳ ದುರಸ್ತಿ, ಬೊಮ್ಮಲಾಪುರ ಬೆಳವಾಡಿ ರಸ್ತೆ ನಿರ್ಮಾಣ ಕೂಡಲೇ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು. ವಾಕರ್ ಹಿಡಿದು ಬಂದಿದ್ದ ಬಾಚಹಳ್ಳಿ ಗ್ರಾಮದ ಹಿರಿಯರಾದ ಸೂರ್ಯನಾರಾಯಣ ಎಂಬುವರು ವೇದಿಕೆ ಹತ್ತಲು ಸಾಧ್ಯವಾಗದಿರುವುದನ್ನು ಕಂಡ ಜಿಲ್ಲಾಧಿಕಾರಿ ಶಾಸಕರ ಜತೆ ಸ್ವತಃ ಕೆಳಗಿಳಿದು ಬಂದು ಮನವಿ ಆಲಿಸಿದರು. ನಮ್ಮ ಜಮೀನನ್ನು ಗ್ರಾಮದ ಪ್ರಭಾವಿಯೊಬ್ಬರು ಒತ್ತುವರಿ ಮಾಡಿಕೊಂಡಿದ್ದು ಅದನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿದರು. ಒಂದು ವಾರದೊಳಗೆ ಒತ್ತುವರಿ ತೆರವುಗೊಳಿಸಲು ಕ್ರಮಕೈಗೊಳ್ಳುವುದಾಗಿ ಡಿಸಿ ಭರವಸೆ ನೀಡಿದರು.

    ಪಂಜನಹಳ್ಳಿ ನಾಗೇಂದ್ರ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರೂ ಇನ್ನೂ 5 ಸಾವಿರದಷ್ಟು ಜನರಿಗೆ ಹಣಬರುತ್ತಿಲ್ಲ. ಖಾತೆಗಳ ಬದಲಾವಣೆ ಮಾಡುತ್ತಿಲ್ಲ ಎಂದು ದೂರಿದರು. ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಿ ಎಂದು ಡಿಸಿಯವರು ಸಿಡಿಪಿಒ ಹೇಮಾವತಿ ಅವರಿಗೆ ಸೂಚಿಸಿದರು.
    ಜಿಪಂ ಮುಖ್ಯ ಕಾರ್ಯದರ್ಶಿ ಆನಂದ ಪ್ರವೀಣ್ ಮೀನ, ಕೊಳ್ಳೇಗಾಲ ಉಪವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ರಮೇಶ್ ಬಾಬು, ಚಾ.ನಗರ ತಹಸೀಲ್ದಾರ್ ಬಸವರಾಜು, ತಾಪಂ ಇಒ ರಾಮಲಿಂಗಯ್ಯ, ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರಿ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts