More

    ನದಿ ಅತಿಕ್ರಮಣ ತಡೆಗೆ ಕ್ರಮ

    ಮಂಗಳೂರು: ಕಟ್ಟಡ ತ್ಯಾಜ್ಯ, ಮಣ್ಣು ಹಾಕಿ ನದಿ ಒತ್ತುವರಿ ಮಾಡಿಕೊಂಡಿದ್ದ ಕೂಳೂರು ಬಳಿಯ ಫಲ್ಗುಣಿ ನದಿ ತಟದಲ್ಲಿ ಜಿಲ್ಲಾಡಳಿತದ ನೆರವಿನೊಂದಿಗೆ ಮಂಗಳೂರು ಮಹಾನಗರ ಪಾಲಿಕೆ ತಡೆಬೇಲಿ ಹಾಕಲು ಕಂಬ ಅಳವಡಿಸಿ, ಎಚ್ಚರಿಕೆ ಫಲಕ ಹಾಕಿದೆ. ನದಿ ಕಿನಾರೆಯ ಮೂರು ಕಿ.ಮೀ. ದೂರ ತನಕ ಗಿಡಗಳನ್ನು ನೆಡಲು ಯೋಜನೆ ರೂಪಿಸಿದೆ.

    ಕೂಳೂರು ಬಳಿ ಫಲ್ಗುಣಿ ನದಿ ಅತಿಕ್ರಮಣದ ಬಗ್ಗೆ ವಿಜಯವಾಣಿ 2021ರ ಏಪ್ರಿಲ್ 25ರ ಸಂಚಿಕೆಯಲ್ಲಿ ವಿಸ್ತೃತ ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಈ ನಿರ್ಧಾರ ಕೈಗೊಂಡಿದೆ. ಹಗಲು ವೇಳೆ ಇಲ್ಲಿ ಕಟ್ಟಡ ತ್ಯಾಜ್ಯಗಳನ್ನು ತಂದು ಹಾಕಿ ಎಕರೆಗಟ್ಟಲೆ ನದಿಯನ್ನು ಆಕ್ರಮಿಸಿಕೊಳ್ಳಲಾಗಿತ್ತು. ಈ ವಿಷಯದಲ್ಲಿ ಕೊನೆಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಪ್ಲಾಸ್ಟಿಕ್, ಕಟ್ಟಡ ತ್ಯಾಜ್ಯ ಹಾಕಿ ನದಿ ಒತ್ತುವರಿ ಮಾಡಿದ ಪರಿಣಾಮ ಪ್ರಕೃತಿ ವಿಕೋಪಗಳು ಉಂಟಾಗುವ ಸಾಧ್ಯತೆ ಬಗ್ಗೆ ಪರಿಸರ ತಜ್ಞರ ಅಭಿಪ್ರಾಯವನ್ನು ವಿಜಯವಾಣಿ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಆ ಬಳಿಕ ಜಿಲ್ಲಾಧಿಕಾರಿ ಹಾಗೂ ಮನಪಾ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅತಿಕ್ರಮಣ ತಡೆಗೆ ಕ್ರಮ ಕೈಗೊಂಡಿದ್ದಾರೆ.

    ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿದ ಕೋವಿಡ್ ನಿರ್ವಹಣೆ ಒತ್ತಡದಿಂದ ನದಿ ಒತ್ತುವರಿ ಬಗ್ಗೆ ತಕ್ಷಣ ಗಮನ ಹರಿಸಲು ಸಾಧ್ಯವಾಗಿಲ್ಲ. ಕೆಲವು ದಿನಗಳ ಹಿಂದೆ ಭೇಟಿ ನೀಡಿದ್ದು, ಕ್ರಮ ಕೈಗೊಳ್ಳಲು ಪಾಲಿಕೆಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

    3200 ಗಿಡ ನೆಡುವ ಯೋಜನೆ: ಕೂಳೂರು ಸೇತುವೆ ಬಳಿಯಿಂದ ದಂಬೆಲ್ ತನಕ ಸುಮಾರು ಮೂರು ಕಿ.ಮೀ. ದೂರಕ್ಕೆ ಅರಣ್ಯ ಇಲಾಖೆ ಸಹಕಾರದಲ್ಲಿ 3200 ಗಿಡಗಳನ್ನು ನೆಡುವ ಯೋಜನೆ ಹಮ್ಮಿಕೊಂಡಿದೆ. ಇದಕ್ಕಾಗಿ ನದಿ ಕಿನಾರೆಯಲ್ಲಿ ರಾಶಿ ಹಾಕಲಾಗಿದ್ದ ತ್ಯಾಜ್ಯ ತೆಗೆದು ಸಮತಟ್ಟು ಮಾಡಲಾಗಿದೆ. ಲಾರಿಗಳಲ್ಲಿ ಯಾವುದೇ ತ್ಯಾಜ್ಯ ತಂದು ಹಾಕುವುದನ್ನು ತಡೆಗಟ್ಟಲು ಕಾಂಕ್ರೀಟ್ ಕಂಬಗಳನ್ನು ಹಾಕಿ ತಡೆ ಬೇಲಿ ನಿರ್ಮಿಸಲಾಗಿದೆ. ಈ ಕೆಲಸ ಮುಗಿದ ತಕ್ಷಣ ಗಿಡ ನೆಡುವ ಯೋಜನೆ ಕಾರ್ಯಗತಗೊಳ್ಳಲಿದೆ ಎಂದು ಮನಪಾ ಆಯುಕ್ತ ಅಕ್ಷಿ ಶ್ರೀಧರ್ ತಿಳಿಸಿದ್ದಾರೆ.

    ಫಲ್ಗುಣಿ ನದಿ ಕಿನಾರೆ ಸುಂದರ ತಾಣವಾಗಿದ್ದು, ಖಾಸಗಿ, ಸಾರ್ವಜನಿಕ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶವಿದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಇಲ್ಲಿಗೆ ಭೇಟಿ ನೀಡುವವರಿಗೆ ಕುಳಿತುಕೊಂಡು ವಿಶ್ರಾಂತಿ ಪಡೆಯಲು ಕಲ್ಲು ಬೆಂಚುಗಳನ್ನು ಅಳವಡಿಸುವ ಯೋಜನೆ ಇದೆ. ಸಿಸಿ ಕ್ಯಾಮರಾ ಅಳವಡಿಸಿ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ನಿಗಾ ಇಡಲಾಗುವುದು.

    ಡಾ.ರಾಜೇಂದ್ರ ಕೆ.ವಿ.
    ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts