More

    ಕಠಿಣ ಲಾಕ್​ಡೌನ್ ಜಾರಿಗೆ ಕ್ರಮ

    ಹುಬ್ಬಳ್ಳಿ: ಜಿಲ್ಲೆಯಲ್ಲಿ 14 ದಿನಗಳವರೆಗೆ ಕಠಿಣ ಲಾಕ್​ಡೌನ್ ಜಾರಿ ಮಾಡಲಾಗುವುದು. ಸರ್ಕಾರದ ಮಾರ್ಗಸೂಚಿಗಳನ್ನು ಜನರು ಪಾಲಿಸಿ ಸಹಕರಿಸಬೇಕು. 14 ದಿನಗಳ ಕಾಲ ನಮ್ಮನ್ನು ನಾವು ನಿಯಂತ್ರಿಸಿಕೊಂಡರೆ, ವೈರಾಣುವನ್ನು ನಿಯಂತ್ರಿಸಿದಂತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

    ನಗರದ ಸರ್ಕ್ಯೂಟ್ ಹೌಸ್​ನಲ್ಲಿ ಸೋಮವಾರ ಲಾಕ್​ಡೌನ್ ಹಾಗೂ ಜಿಲ್ಲೆಯ ಆರೋಗ್ಯ ಸ್ಥಿತಿಗತಿ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಸರಬರಾಜು ಮಾಡಿ ಕೊರತೆ ನೀಗಿಸಲು ಪ್ರಯತ್ನಿಸುತ್ತಿವೆ. ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರ ಜತೆ ಸಂಪರ್ಕದಲ್ಲಿದ್ದು, ಹೆಚ್ಚಿನ ಆಕ್ಸಿಜನ್ ಪಡೆಯಲು ಪ್ರಯತ್ನಿಸಲಾಗುತ್ತಿದೆ. ರಾಜ್ಯದ ಎಲ್ಲ ಅಧಿಕಾರಿಗಳನ್ನು ಸಮನ್ವಯಗೊಳಿಸಿ, ಆಕ್ಸಿಜನ್ ವಿತರಿಸಲು ಕ್ರಮಬದ್ಧಗೊಳಿಸಲಾಗುತ್ತಿದೆ ಎಂದರು.

    ಸಾರ್ವಜನಿಕರಲ್ಲಿ ಮನವಿ: ಅಗತ್ಯವಸ್ತ್ತುಗಳ ಖರೀದಿಗೆ ಜನರು ಸುಮ್ಮನೆ ಬೀದಿಗೆ ಬರುವುದು ತಪ್ಪಬೇಕಿದೆ. ತಳ್ಳುವ ಗಾಡಿಯಲ್ಲಿ ತರಕಾರಿ ಮಾರಲು ಅವಕಾಶ ಕಲ್ಪಿಸಲಾಗಿದೆ. ಕಿರಾಣಿ ಅಂಗಡಿಗಳಿಗೆ ನಿಶ್ಚಿತವಾದ ಗ್ರಾಹಕರು ಇರುತ್ತಾರೆ. ಅವರಿಂದ ಪೋನ್ ಮೂಲಕ ಆರ್ಡರ್ ಪಡೆದು ಮನೆಗೆ ದಿನಸಿ ಪದಾರ್ಥಗಳನ್ನು ಕಳುಹಿಸಿದರೆ ಅನುಕೂಲವಾಗುತ್ತದೆ. ಗ್ರಾಹಕರು ಅಗತ್ಯ ವಸ್ತು, ಔಷಧ ನೆಪ ಮಾಡಿಕೊಂಡು ನಗರದಲ್ಲಿ ಓಡಾಡಬಾರದು. ಪ್ರತಿ ಏರಿಯಾಗಳಲ್ಲಿ ಕಿರಾಣಿ ಹಾಗೂ ಔಷಧ ಅಂಗಡಿಗಳಿವೆ. ಅಲ್ಲಿಯೇ ಖರೀದಿಸಬೇಕು ಎಂದು ಸಚಿವ ಶೆಟ್ಟರ್, ಸಾರ್ವಜನಿಕರಿಗೆ ಮನವಿ ಮಾಡಿದರು.

    ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಜಿಲ್ಲಾಧಿಕಾತಿ ನಿತೇಶ ಪಾಟೀಲ, ಪೊಲೀಸ್ ಆಯುಕ್ತ ಲಾಭೂರಾಮ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಡಿಎಚ್​ಒ ಡಾ. ಯಶವಂತ ಮದೀನಕರ, ತಹಸೀಲ್ದಾರ್ ಶಶಿಧರ ಮಾಡ್ಯಾಳ ಇತರರು ಇದ್ದರು.

    ಧಾರವಾಡ ಜಿಲ್ಲೆಗೆ 2 ಟ್ಯಾಂಕರ್: ಕೇಂದ್ರ ಸರ್ಕಾರ ಆಕ್ಸಿಜನ್ ಪ್ರಮಾಣವನ್ನು ಹೆಚ್ಚು ಮಾಡಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. 30 ಟನ್ ಸಾಮರ್ಥ್ಯದ ಆರು ಟ್ಯಾಂಕರ್​ಗಳನ್ನು ಕೇಂದ್ರ ಸರ್ಕಾರ ನೀಡಿದೆ. ನಾಳೆ ಟ್ಯಾಂಕರ್​ಗಳು ರಾಜ್ಯಕ್ಕೆ ಆಗಮಿಸಲಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

    ಆಕ್ಸಿಜನ್ ಸರಬರಾಜು ಮಾಡಲು ಅನುಕೂಲವಾಗುವಂತೆ 6 ಟ್ಯಾಂಕರ್​ಗಳನ್ನು ರಾಜ್ಯಕ್ಕೆ ನೀಡಲಾಗಿದೆ. ಧಾರವಾಡ ಜಿಲ್ಲೆಯಿಂದ ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗಳಿಗೆ ಆಕ್ಸಿಜನ್ ಸರಬರಾಜು ಆಗುವುದರಿಂದ 2 ಟ್ಯಾಂಕರ್​ಗಳನ್ನು ಜಿಲ್ಲೆಗೆ ನೀಡಲಾಗಿದೆ. ಕೇಂದ್ರ ಸರ್ಕಾರ 150 ಆಕ್ಸಿಜನ್ ಘಟಕಗಳನ್ನು ಕರ್ನಾಟಕಕ್ಕೆ ಮಂಜೂರು ಮಾಡಿದೆ. 1500 ಆಕ್ಸಿಜನ್ ಸಾಂದ್ರಕಗಳನ್ನು ನೀಡಿದೆ. ಆಯುಷ್ಮಾನ್ ಭಾರತ ಯೋಜನೆಯಡಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಾರಿ ಕೋವಿಡ್ ಅಲೆ ಅನಿರೀಕ್ಷಿತವಾದದ್ದು, ಯಾರೂ ಊಹಿಸದ ರೀತಿಯಲ್ಲಿ ಪರಿಣಾಮ ಬೀರುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಆಕ್ಸಿಜನ್ ಹಾಗೂ ಬೆಡ್ ಕೊರತೆ ಆಗದಂತೆ ಪ್ರತಿದಿನ ಮೇಲುಸ್ತುವಾರಿ ನೋಡಿಕೊಳ್ಳಲಾಗುತ್ತಿದೆ. ಸಾರ್ವಜನಿಕರ ರಕ್ಷಣೆಗೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಸದಾ ಸಿದ್ಧವಿದೆ ಎಂದರು.

    ಔಷಧ ಕಿಟ್ ವಿತರಣೆ:ಜಿಲ್ಲೆಯಲ್ಲಿ 25ರಿಂದ 50 ಸಾವಿರ ಕೋವಿಡ್ ಔಷಧ ಕಿಟ್​ಗಳನ್ನು ತಯಾರಿಸಿ ಮನೆಗಳಿಗೆ ತೆರಳಿ ಹಂಚಲು ತಯಾರಿ ನಡೆಸಲಾಗುತ್ತಿದೆ. ಈ ಕುರಿತಂತೆ ಕರ್ನಾಟಕ ರಾಜ್ಯ ಔಷಧ ಉಗ್ರಾಣದಿಂದ ಅಗತ್ಯವಿರುವ ವಿಟಮಿನ್ ಹಾಗೂ ಜಿಂಕ್ ಸೇರಿ ಇತರ ಔಷಧ ಪಡೆಯಲು ಇಂಡೆಂಟ್ ಸಲ್ಲಿಸುವ ಕುರಿತು ಸಭೆಯಲ್ಲಿ ರ್ಚಚಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts