More

    ಸುಳ್ಳು ಸುದ್ದಿ ಹಬ್ಬಿಸಿದ್ರೆ ಹುಷಾರ್!

    ವಿಜಯವಾಣಿ ಸುದ್ದಿಜಾಲ ಗದಗ

    ಸಂಕ್ರಾಂತಿ ಹಬ್ಬದ ದಿನ ಗದಗ ಜಿಲ್ಲೆಯಾದ್ಯಂತ ಜಿಹಾದಿ ಟೆರರಿಸ್ಟುಗಳು, ಏಡ್ಸ್ ಇಂಜೆಕ್ಷನ್​ನದ್ದೇ ಸುದ್ದಿ. ಇದಕ್ಕೆ ಕಾರಣವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಕಲಿ ಮೆಸೇಜ್. ಹೌದು, ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ಅವರ ಹೆಸರಿನಲ್ಲೊಂದು ನಕಲಿ ಮೆಸೇಜ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರಿ ಸದ್ದು ಮಾಡತೊಡಗಿದೆ. ‘ಯಾರಾದರೂ ಮನೆ ಹತ್ರ ಬಂದು ನಾವು ಸರ್ಕಾರಿ ಆಸ್ಪತ್ರೆಯಿಂದ ಬಂದಿದ್ದೇವೆ.ಇನ್ಸುಲಿನ್, ವಿಟಮಿನ್, ಇಂಜೆಕ್ಷನ್ ಮಾಡ್ತಿವಿ ಅಂತ ಹೇಳಿದ್ರೆ ನಂಬಬೇಡಿ, ನಂಬಿ ಆತುರಪಟ್ಟು ಮಾಡಿಸಿಕೊಳ್ಳದಿರಿ. ಜಿಹಾದಿ ಟೆರರಿಸ್ಟುಗಳು ಈ ರೀತಿ ಯಾಮಾರಿಸಿ ಹಿಂದುಗಳಿಗೆ ಏಡ್ಸ್ ಇಂಜೆಕ್ಷನ್ ಮಾಡುತ್ತಿದ್ದಾರಂತೆ. ಜಾಗ್ರತೆಯಿಂದರಿ. ನಿಮಗೆ ಸಂಬಂಧಿಸಿದ ಎಲ್ಲಾ ಗ್ರುಪ್​ಗಳಿಗೆ ಕಳಿಸಿ ಅಮಾಯಕರ ಪ್ರಾಣ ಉಳಿಸಿ. ಇಂತಿ ನಿಮ್ಮ, ಸೋಮೇಶ ಗೆಜ್ಜೆ (ಎಸ್​ಐ), ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗದಗ’ ಎಂದು ಬರೆದಿರುವ ಬೂಧವಾರ ಫೇಸ್​ಬುಕ್, ವಾಟ್ಸಪ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

    ಜಿಲ್ಲಾ ಪೊಲೀಸ್ ಇಲಾಖೆಯಿಂದಲೇ ಬಂದಿರುವ ಮೆಸೇಜ್ ಎಂದು ಅನೇಕರು ತಮ್ಮ ಕುಟುಂಬದ ಸದಸ್ಯರ ಮೊಬೈಲ್ ಸೇರಿ ಸ್ನೇಹಿತರ ವಾಟ್ಸಪ್ ಗುಂಪುಗಳಿಗೆ ಕಳಿಸಿದ್ದಾರೆ. ಈ ವಿಷಯ ಜಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ಅವರ ಗಮನಕ್ಕೆ ಬಂದ ಕೂಡಲೇ ಜಿಲ್ಲಾ ಪೊಲೀಸ್ ಇಲಾಖೆ ಫೇಸ್​ಬುಕ್ ಖಾತೆಯಲ್ಲಿ ಮೆಸೇಜ್ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ. ಜಿಲ್ಲಾ ಪೊಲೀಸ್ ಇಲಾಖೆಯಿಂದ ಅಂತಹ ಯಾವುದೇ ಮೆಸೇಜ್ ಕಳಿಸಿಲ್ಲ. ಜನರನ್ನು ದಾರಿ ತಪ್ಪಿಸುವ ಸಲುವಾಗಿ ಕಿಡಿಗೇಡಿಗಳು ನಕಲಿ ಮೆಸೇಜ್ ಹಾಕಿದ್ದಾರೆ ಎಂದು ಅವರು ತಿಳಿಸಿದ್ದಾರೆ.

    ಇದಲ್ಲದೇ, ಗುರುವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದಲೇ ಅಧಿಕೃತ ಪ್ರಕಟಣೆ ನೀಡಿದ್ದು, ಜಿಲ್ಲಾ ಪೊಲೀಸ್ ಈ ತರ ಯಾವುದೇ ಸಂದೇಶ ನೀಡಿಲ್ಲ. ಯಾರೋ ಕಿಡಿಗೇಡಿಗಳು ಈ ಸುಳ್ಳು ಸುದ್ದಿ ಹರಡಿಸುತ್ತಿದ್ದು, ಅದನ್ನು ಪರಿಶೀಲಿಸಿ ಸಂಬಂಧಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು. ಇಂತಹ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ (ಶೇರ್ ಮಾಡುವವರ ವಿರುದ್ಧ) ಕೂಡಾ ಕಾನೂನು ಕ್ರಮಕೈಗೊಳ್ಳಲಾಗುವುದು. ಆದ್ದರಿಂದ ಇಂತಹ ಸುಳ್ಳು ಸುದ್ದಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಅಲ್ಲದೇ ಸಾಮಾಜಿಕ ಜಾಲತಾಣಗಳ ಮೂಲಕ ಶೇರ್ ಮಾಡಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ತಿಳಿಸಿದ್ದಾರೆ.

    ಪೊಲೀಸ್ ಇಲಾಖೆಯ ಪ್ರಕಟಣೆ ಮಾದರಿಯಲ್ಲಿಯೇ ನಕಲಿ ಪ್ರಕಟಣೆ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಡುವುದು ಸರಿಯಲ್ಲ. ಇದು ಜನರನ್ನು ತಪ್ಪು ದಾರಿಗೆ ಕರೆದೊಯ್ಯುವ ಕೆಲಸವಾಗಿದ್ದು, ಪೊಲೀಸ್ ಇಲಾಖೆ ಇಂತಹ ಸುಳ್ಳುಸುದ್ದಿ ಹರಡಿರುವವರ ವಿರುದ್ಧ ಕ್ರಮ ಜರುಗಿಸಬೇಕು. ಮುಂದೆ ಇಂತಹ ಕಿಡಿಗೇಡಿತನ ನಡೆಯದಂತೆ ಜಾಗರೂಕತೆ ವಹಿಸಬೇಕು.

    | ಸಂಗಮೇಶ ಯಲಿವಾಳ ವ್ಯಾಪಾರಿ ಗದಗ

    ನಿಜಕ್ಕೂ ಇದೊಂದು ಅಚ್ಚರಿ ಬೆಳವಣಿಗೆ. ಪೊಲೀಸ್ ಇಲಾಖೆಯ ಬಗ್ಗೆ ಗೌರವ ಇಲ್ಲದವರು ಇಂತಹ ನೀಚ ಕೆಲಸ ಮಾಡಿದ್ದಾರೆ. ಇದರಿಂದ ಆಗುವಂತಹ ಪರಿಣಾಮ ಊಹಿಸಿಕೊಂಡರೆ ಮೈ ಜುಮ್ ಎನ್ನುತ್ತದೆ. ಆದ್ದರಿಂದ ಎಸ್ಪಿ ಅವರು ಇದನ್ನು ಗಂಭೀರವಾಗಿ ತೆಗೆದುಕೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.

    | ನಾಗರಾಜ ಮಾಲಿಪಾಟೀಲ

    ಖಾಸಗಿ ಕಂಪನಿ ನೌಕರ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts