More

    ಸಾವಯವ ಕೃಷಿಯಲ್ಲಿ ಸಾಧನೆ

    ಎಂ.ಎಸ್.ರವಿಕುಮಾರ್ ಕೆ.ಆರ್.ನಗರ
    ತಮ್ಮ ಕುಟುಂಬದ ವೃತ್ತಿಯಾದ ಕೃಷಿಯನ್ನೇ ಕಾಯಕ ಮಾಡಿಕೊಂಡು ಅಭಿವೃದ್ಧಿ ಕಾಣುವ ಜತೆಗೆ ರಾಜಕೀಯದಲ್ಲೂ ಹೆಸರು ಗಳಿಸುವ ಮೂಲಕ ರೈತ ಮನಸ್ಸು ಮಾಡಿದರೆ ಯಾವ ಕ್ಷೇತ್ರದಲ್ಲಿಯಾದರೂ ಸಾಧಿಸುತ್ತಾನೆ ಎಂಬುದಕ್ಕೆ ಹೆಬ್ಬಾಳು ಗ್ರಾಮದ ಎಚ್.ಎಸ್. ಸಂತೋಷ್ ಮಾದರಿಯಾಗಿದ್ದಾರೆ.

    ತಮ್ಮ ಕುಟುಂಬದಿಂದ ಬಳುವಳಿಯಾಗಿ ಬಂದಿರುವ 3 ಎಕರೆ ಜಮೀನಿನಲ್ಲಿ 1.20 ಗುಂಟೆ ಜಾಗದಲ್ಲಿ ಅಡಕೆ, 1 ಎಕರೆ ತೆಂಗಿನ ತೋಟ ಮಾಡಿದ್ದು, ಉಳಿದ ಅರ್ಧ ಎಕರೆ ಭೂಮಿಯಲ್ಲಿ ಭತ್ತದ ಬೆಳೆ ಬೆಳೆಯುವ ಜತೆಗೆ ತೋಟಗಾರಿಕೆ ಬೆಳೆ ಮಧ್ಯದಲ್ಲೇ ಮಿಶ್ರ ಬೇಸಾಯ ಪದ್ಧ್ದತಿ ಅಳವಡಿಸಿಕೊಂಡು ಸಾವಯವ ಕೃಷಿಯ ಮೂಲಕ ಹಣ್ಣು, ತರಕಾರಿ ಬೆಳೆಗಳನ್ನು ಬೆಳೆದು ಪ್ರಗತಿ ಪರ ರೈತರಾಗಿ ಹೊರಹೊಮ್ಮಿದ್ದಾರೆ.

    ದಿ.ಎಚ್.ಕೆ.ಸೋಮೇಗೌಡರ ಪುತ್ರ ಎಚ್.ಕೆ. ಸಂತೋಷ್ ಪದವೀಧರನಾಗಿದ್ದು, ತಂದೆ ಮೃತರಾದ ನಂತರ ವಿದ್ಯಾಭ್ಯಾಸ ಮೊಟಕುಗೊಳಿಸಿ ಕುಟುಂಬದ ಜವಾಬ್ದಾರಿ ವಹಿಸಿಕೊಂಡು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

    ಅಡಕೆ, ತೆಂಗು, ಬಾಳೆ, ಭತ್ತ, ಕಲ್ಲಂಗಡಿ, ಬೀನ್ಸ್, ಶುಂಠಿ, ಕೋಸು, ಟೊಮ್ಯಾಟೋ, ಮೆಣಸಿನಕಾಯಿ ಬೆಳೆದು ಲಾಭ ಕಂಡುಕೊಂಡಿದ್ದಾರೆ. 1 ಎಕರೆ ಜಾಗದಲ್ಲಿ ತೆಂಗು ಬೆಳೆಯಲಾಗಿದ್ದು, ಫಸಲು ಕೊಡುವ ಹಂತದಲ್ಲಿದೆ.

    ಪಂಪ್‌ಸೆಟ್ ಮೂಲಕ ಹನಿ ನೀರಾವರಿ ಪದ್ಧ್ದತಿ ಅಳವಡಿಸಿಕೊಂಡಿದ್ದಾರೆ. ಜತೆಗೆ ಅಡಕೆ ಬೆಳೆಯನ್ನು ವ್ಯಾಪಾರ ಮಾಡುವ ಕಾಯಕವನ್ನು ಕೂಡ ಮಾಡಿಕೊಂಡಿದ್ದಾರೆ. ಅಡಕೆಯನ್ನು ನೇರವಾಗಿ ಮಾರುಕಟ್ಟೆಗೆ ಮಾರಾಟ ಮಾಡುವ ಮೂಲಕ ಲಾಭಾಂಶ ದಲ್ಲಾಳಿಗಳ ಪಾಲಾಗದೆ ತಮಗೆ ಉಳಿಯುವಂತೆ ನೋಡಿಕೊಂಡಿದ್ದಾರೆ.

    ಸಾವಯವ ಕೃಷಿ: ಹೆಚ್ಚಿನ ಇಳುವರಿ ಪಡೆಯುವ ಹಂಬಲದಿಂದ ರೈತರು ಇತ್ತೀಚಿನ ದಿನಗಳಲ್ಲಿ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಬಳಕೆ ಹೆಚ್ಚಾಗಿ ಮಾಡುವುದು ಸಾಮಾನ್ಯವಾಗಿದೆ. ಆದರೆ, ಸಂತೋಷ್ ರಾಸಾಯನಿಕ ಗೊಬ್ಬರಗಳನ್ನು ಹೆಚ್ಚಾಗಿ ಬಳಕೆ ಮಾಡದೆ ತೋಟದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಹಾಗೂ ಮರಗಳ ಕೊಂಬೆ, ಸೊಪ್ಪುಗಳನ್ನು ಕರಗಿಸಿ ಫಲವತ್ತತೆ ಹೆಚ್ಚಿಸುತ್ತಿದ್ದಾರೆ.

    ಅಡಕೆ ಸಿಪ್ಪೆಯನ್ನು ಕೆಂಪುಮಣ್ಣಿನ ಜತೆ ತೋಟಕ್ಕೆ ಹರಡಿ ಉಳುಮೆ ಮಾಡಲಾಗುತ್ತದೆ. ಇದರಿಂದ ಕಳೆನಾಶದ ಜತೆಗೆ ಫಲವತ್ತತೆಯೂ ಹೆಚ್ಚುತ್ತದೆ ಎಂಬ ನಂಬಿಕೆ ಸಂತೋಷ್ ಅವರದು. ಕೃಷಿ ಜತೆಗೆ ಹಸು, ಕೋಳಿ ಸಾಕಣೆ ಚಿಂತನೆ ಕೂಡ ಇದೆ. ಕೃಷಿಯ ಕುರಿತು ಇತರರಿಗೆ ಮಾರ್ಗದರ್ಶನ ಮಾಡುವ ಕೆಲಸವನ್ನು ಕೂಡ ಮಾಡುತ್ತಿದ್ದಾರೆ. ಮಾಹಿತಿಗೆ ಸಂತೋಷ್ ಮೊ. 9972963582 ಸಂಪರ್ಕಿಸಬಹುದಾಗಿದೆ.

    ಸಾಮಾಜಿಕ ಕಾರ್ಯದಲ್ಲೂ ಸೈ: ಸಂತೋಷ್ ವಿದ್ಯಾರ್ಥಿ ದಿಸೆಯಿಂದಲೇ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. 2005ರಲ್ಲಿ ಗ್ರಾ.ಪಂ.ಸದಸ್ಯ, 2009ರಲ್ಲಿ ಗ್ರಾ.ಪಂ. ಅಧ್ಯಕ್ಷರಾಗಿ, 10 ವರ್ಷಗಳ ಕಾಲ ಯುವಜನ ಮೇಳ, ಯುವ ಜನೋತ್ಸವ, ಬಸವೇಶ್ವರ ಯುವಕರ ಸಂಘ, ಶ್ರೀ ರಾಮಚಂದ್ರ ಯುವಕ ಸಂಘಗಳಲ್ಲಿ ಕೆಲಸ ಮಾಡಿದ್ದು, ಡೊಳ್ಳು ಕುಣಿತ, ವೀರಗಾಸೆ ತಂಡವನ್ನು ಮುನ್ನಡೆಸಿದ್ದಾರೆ. ಜಾನಪದ ಗೀತೆಯಲ್ಲಿ ತಂಡವನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯಲು ಕಾರಣೀಭೂತರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts