More

    ೨೨ ಬ್ಯಾಂಕ್‌ಗಳಿಗೆ ೧೦ ಕೋಟಿ ರೂ. ನಾಮ: ಒಂದೇ ಸ್ವತ್ತಿಗೆ ನಕಲಿ ದಾಖಲೆ ಸಲ್ಲಿಸಿ ಸಾಲ ಪಡೆದ ಆರೋಪಿಗಳು

    ಬೆಂಗಳೂರು: ಒಂದೇ ಸ್ವತ್ತಿಗೆ ಸಂಬಂಧಿಸಿದಂತೆ ವಿವಿಧ ರೀತಿಯ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು ೨೨ ಬ್ಯಾಂಕ್‌ಗಳಿಗೆ ಅದನ್ನು ಸಲ್ಲಿಸಿ ೧೦ ಕೋಟಿಗೂ ಹೆಚ್ಚು ವಂಚನೆ ಮಾಡಿರುವ ಒಂದೇ ಕುಟುಂಬದ ಐವರು ಸೇರಿದಂತೆ ಒಟ್ಟು ಆರು ಮಂದಿ ಆರೋಪಿಗಳನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
    ಅಪಾರ್ಟ್‌ಮೆಂಟ್‌ವೊಂದರಲ್ಲಿ ಅಡುಗೆ ಭಟ್ಟನಾಗಿದ್ದ ನಾಗೇಶ್ ಭಾರದ್ವಾಜ್, ಈತನ ಪತ್ನಿ ಸುಮಾ, ಇವರ ಸಂಬಂಧಿಕರಾದ ಶೋಭಾ, ಈಕೆಯ ಪತಿ ಶೇಷಗಿರಿ, ಬಾವಮೈದುನ ಸತೀಶ್ ಹಾಗೂ ಸುಮಾಳ ಸ್ನೇಹಿತೆ ವೇದಾ ಬಂಧಿತ ಆರೋಪಿಗಳು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ನಾಗೇಶ್-ಸುಮಾ ದಂಪತಿ ಹೆಸರಿನಲ್ಲಿ ಬೇಗೂರು ಗ್ರಾಮದಲ್ಲಿರುವ ೨,೧೦೦ ಅಡಿ ಉದ್ದಳತೆಯ ಜಾಗದಲ್ಲಿರುವ ಕಟ್ಟಡದ ದಾಖಲೆಯಲ್ಲಿ ವಿವಿಧ ಸರ್ವೆ ನಂಬರ್, ವಿವಿಧ ನಿವೇಶನಗಳ ನಂಬರ್‌ಗಳನ್ನು ಬದಲಿಸುತ್ತಿದ್ದರು. ಸೈಟ್ ಉದ್ದಳತೆಯಲ್ಲಿ ಸಹ ಬದಲಾವಣೆ ಮಾಡುತ್ತಿದ್ದರು. ನಂತರ ಆ ನಕಲಿ ದಾಖಲಾತಿಗಳಿಂದ ಡೀಡ್ ಮಾಡಿಸಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸುತ್ತಿದ್ದರು. ಅವುಗಳ ಆಧಾರದ ಮೇಲೆ ವಿವಿಧ ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಬ್ಯಾಂಕ್, ಕೋ-ಆಪರೇಟಿವ್ ಬ್ಯಾಂಕ್‌ಗಳು ಸೇರಿ ೨೨ ಬ್ಯಾಂಕ್‌ಗಳಲ್ಲಿ ೧೦ ಕೋಟಿ ರೂ. ಸಾಲ ಪಡೆದಿದ್ದರು.

    ಆರೋಪಿಗಳ ಬಂಧನ ಹೇಗಾಯ್ತು?
    ಜಯನಗರ ೩ನೇ ಬ್ಲಾಕ್‌ನಲ್ಲಿರುವ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಖಾತೆದಾರರಾಗಿದ್ದ ನಾಗೇಶ್-ಸುಮಾ ದಂಪತಿಯು, ತಮ್ಮ ಬೇಗೂರು ಗ್ರಾಮದ ೨,೧೦೦ ಅಡಿ ಉದ್ದಳತೆಯ ಜಾಗದಲ್ಲಿರುವ ಕಟ್ಟಡದ ನಕಲಿ ದಾಖಲೆ ಆಧಾರದಲ್ಲಿ ಬ್ಯಾಂಕ್‌ನಿಂದ ಸಾಲ ಹಾಗೂ ಯಂತ್ರೋಪಕರಣ ಸಾಲವೆಂದು ೧.೩೦ ಕೋಟಿ ರೂ. ಸಾಲ ಪಡೆದುಕೊಂಡಿದ್ದರು. ಸಾಲವನ್ನು ಬ್ಯಾಂಕಿಗೆ ಮರುಪಾವತಿಸದೆ ವಂಚನೆ ಮಾಡಿದ್ದರು. ಕೋ-ಆಪರೇಟಿವ್ ಬ್ಯಾಂಕ್‌ನ ಮ್ಯಾನೇಜರ್ ಜಯನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿದ್ದರು. ಕಾರ್ಯಪ್ರವೃತ್ತರಾದ ಪೊಲೀಸರು ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಕೈಗೊಂಡು ಅಡುಗೆ ಭಟ್ಟನಾಗಿದ್ದ ನಾಗೇಶ್ ಭಾರದ್ವಾಜ್, ಆತನ ಪತ್ನಿ ಸುಮಾ ದಂಪತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ನಕಲಿ ದಾಖಲೆ ಸೃಷ್ಟಿಸಿ ವಿವಿಧ ಬ್ಯಾಂಕ್‌ಗಳಲ್ಲಿ ೧೦ ಕೋಟಿ ರೂ. ಸಾಲ ಪಡೆದಿರುವುದು ಗೊತ್ತಾಗಿದೆ. ಆರೋಪಿಗಳಾದ ನಾಗೇಶ್ ಪತ್ನಿ ಸುಮಾಳ ಅಕ್ಕ-ಭಾವಾ, ಸಹೋದರ, ಸ್ನೇಹಿತೆಯೂ ಪ್ರಕರಣದಲ್ಲಿ ಕೈ ಜೋಡಿಸಿರುವುದನ್ನು ವಿಚಾರಣೆ ವೇಳೆ ದಂಪತಿ ಬಾಯ್ಬಿಟ್ಟಿದ್ದರು. ಇವರು ಕೊಟ್ಟ ಮಾಹಿತಿ ಆಧರಿಸಿ ಪ್ರಕರಣದಲ್ಲಿ ಪೊಲೀಸರು ಮತ್ತೆ ನಾಲ್ವರನ್ನು ಬಂಧಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts