More

    ರಾಜ್ಯ ಬಜೆಟ್‌ನಲ್ಲಿ ರಾಜಧಾನಿಗೆ ಭರಪೂರ ಅನುದಾನ ನಿರೀಕ್ಷೆ

    ಬೆಂಗಳೂರು: ಗ್ಯಾರಂಟಿ ಯೋಜನೆಗಳ ಜನಪ್ರಿಯ ಬಜೆಟ್ ಬಳಿಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಎರಡನೇ ಅವಧಿಯ 2ನೇ ಆಯವ್ಯಯದಲ್ಲಿ ರಾಜಧಾನಿ ಬೆಂಗಳೂರು ಅಭಿವೃದ್ಧಿಗೆ ಭರಪೂರ ಅನುದಾನದ ಜತೆಗೆ ಅಧಿಕ ಮೊತ್ತದ ಅನುದಾನ ಸಿಗುವ ನಿರೀಕ್ಷೆ ಹುಟ್ಟಿಸಿದೆ.

    ಕೋವಿಡ್ ಸಾಂಕ್ರಾಮಿಕದ ಬಳಿಕ ಅಭಿವೃದ್ಧಿ ಯೋಜನೆಗಳು ಜನರ ನಿರೀಕ್ಷೆಗೆ ತಕ್ಕಂತೆ ನಡೆದಿಲ್ಲ. ಅನುದಾನ ಅಲಭ್ಯತೆಯಿಂದಾಗಿ 2-3 ವರ್ಷಗಳಲ್ಲಿ ಘೋಷಿಸಿರುವ ಕಾರ್ಯಕ್ರಮಗಳಲ್ಲಿ ಹೆಚ್ಚಿನವು ಕಡತ ಬಿಟ್ಟು ಮುಂದಡಿ ಇಟ್ಟಿಲ್ಲ. ಇದಕ್ಕೆ ಸರ್ಕಾರದಿಂದ ಸಿಗಬೇಕಿದ್ದ ಆರ್ಥಿಕ ಬೆಂಬಲ ಇಲ್ಲದಿರುವುದೇ ನೇರ ಕಾರಣವಾಗಿದೆ. ಈ ಆರೋಪದಿಂದ ಮುಕ್ತವಾಗಲು 2024-25ನೇ ಸಾಲಿನಲ್ಲಿ ಮಹಾನಗರದ ಅಭಿವೃದ್ಧಿ ಯೋಜನೆಗಳಿಗೆ ವೇಗ ಹೆಚ್ಚಿಸಲು ಅನುದಾನದ ಬಲ ಒದಗಿಸಲಾಗುತ್ತದೆ ಎಂಬ ವಿಶ್ವಾಸ ನಗರವಾಸಿಗಳಲ್ಲಿ ಮೂಡಿದೆ.

    ಮುಖ್ಯವಾಗಿ ನಗರ ಅಭಿವೃದ್ಧಿಯಲ್ಲಿ ಸರ್ಕಾರದ ಏಳೆಂಟು ಸಂಸ್ಥೆಗಳು ಪಾಲುದಾರರಾಗಿದ್ದರೂ, ಬಿಬಿಎಂಪಿ ಪ್ರಧಾನ ಪಾತ್ರ ವಹಿಸುತ್ತಿದೆ. ನಾಗರಿಕ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸುವ ಪಾಲಿಕೆಗೆ ತನ್ನದೇಯಾದ ಆರ್ಥಿಕ ಇತಿ-ಮಿತಿಗಳಿವೆ. ಆಸ್ತಿತೆರಿಗೆ ಹೊರತುಪಡಿಸಿ ಇನ್ನುಳಿದ ಬಾಬ್ತಿನಿಂದ ದೊಡ್ಡ ಮೊತ್ತ ಸಂದಾಯವಾಗುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರವೇ ಬಿಬಿಎಂಪಿಯನ್ನು ಮುನ್ನಡೆಸಬೇಕಾದ ಅನಿವಾರ್ಯತೆ ಇದೆ. ಸರ್ಕಾರಕ್ಕೆ ಇಡೀ ರಾಜ್ಯದಲ್ಲಿ ಸಂಗ್ರಹವಾಗುವ ಆದಾಯದಲ್ಲಿ ಶೇ.60 ಪಾಲು ಬೆಂಗಳೂರಿನಿಂದಲೇ ಬರುತ್ತಿರುವ ಕಾರಣ ಪಾಲಿಕೆ ಮೂಲಕ ಜನೋಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನಿಸಬೇಕಾದ ಅಗತ್ಯ ಇದೆ. ಅಲ್ಲದೆ ಲೋಕಸಭಾ ಚುನಾವಣೆ ಬಳಿಕ ನಡೆಯಲಿರುವ ಬಿಬಿಎಂಪಿ ಚುನಾವಣೆಯಲ್ಲಿ ತನ್ನ ಅಧಿಪತ್ಯವವನ್ನು ಸಾಧಿಸಲು ಕಾಂಗ್ರೆಸ್ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಅಧಿಕವನ್ನು ರಾಜಧಾನಿಗೆ ಮೀಸಲಿರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

    ವೈಟ್ ಟಾಪಿಂಗ್, ಸುರಂಗ ಯೋಜನೆಗೆ ಮಣೆ?:

    ರಾಜ್ಯ ಸರ್ಕಾರ ಮಹಾನಗರದಲ್ಲಿರುವ ಪ್ರಮುಖ ರಸ್ತೆಗಳನ್ನು ಸುದೀಘ್ರ ಬಾಳಿಕೆ ಬರುವ ಉದ್ದೇಶದಿಂದ ವೈಟ್ ಟಾಪಿಂಗ್ ಮಾದರಿ ರಸ್ತೆ ಯೋಜನೆಗೆ ಹೆಚ್ಚಿನ ಗಮನ ಹರಿಸಿದೆ. ಹಿಂದಿನ ಅವಧಿಯಲ್ಲೂ ಸಿಎಂ ಇಂಥದ್ದೇ ಯೋಜನೆಗೆ ಆದ್ಯತೆ ನೀಡಿ ಹೊಂದಿಷ್ಟು ಉತ್ತಮ ಕೆಲಸಗಳು ಆಗಿದ್ದವು. ಈಗ ಮತ್ತೆ ವೈಟ್ ಟಾಪಿಂಗ್ ರಸ್ತೆ ಯೋಜನೆಯನ್ನು ಇನ್ನಷ್ಟು ಪ್ರದೇಶಗಳಿಗೆ ವಿಸ್ತರಿಸಲು ಈಗಾಗಲೇ ಸಂಪುಟ ಅನುಮೋದನೆ ದೊರೆತಿದೆ. ಇದಕ್ಕೆ ಇನ್ನಷ್ಟು ಅನುದಾನ ನೀಡಿ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಇರಾದೆ ಸರ್ಕಾರಕ್ಕಿದೆ.

    ಇದರ ಜತೆಗೆ ನಗರ ದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ಡಿಸಿಎಂ ಸುರಂಗ ಯೋಜನೆಯನ್ನು ಮುನ್ನಲೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚಿನ ಗಣರಾಜ್ಯೋತ್ಸವ ಭಾಷಣದಲ್ಲಿ ರಾಜ್ಯಪಾಲರು ಸುರಂಗ ಯೋಜನೆ ಜಾರಿ ಕುರಿತು ಪ್ರಸ್ತಾಪಿಸಿದ್ದರು. ಹಾಲಿ ಜಂಟಿ ಅಧಿವೇಶನದಲ್ಲೂ ರಾಜ್ಯಪಾಲರ ಮೂಲಕ ‘ಟನಲ್ ರಸ್ತೆ’ ನಿರ್ಮಿಸುವುದಾಗಿ ಸರ್ಕಾರ ಸಲವಾಗಿದೆ. ಈ ಕಾರಣದಿಂದಾಗಿ ಮೊದಲಿಗೆ ಏರ್‌ಪೋರ್ಟ್ ರಸ್ತೆಯ ಹೆಬ್ಬಾಳದ ಕೆರೆಕೋಡಿಯಿಂದ ಮೇಖ್ರಿ ವೃತ್ತದವರೆಗೆ 3 ಕಿ.ಮೀ. ಉದ್ದದ ಸುರಂಗ ಯೋಜನೆಯ ಪ್ರಾಯೋಗಿಕ ಅನುಷ್ಠಾನಕ್ಕಾಗಿ ಹಣ ನಿಗದಿಯಾಗುವುದು ಖಚಿತವಾಗಿದೆ.

    ‘ಬ್ರ್ಯಾಂಡ್ ಬೆಂಗಳೂರು’ ಮುನ್ನೆಲೆಗೆ:

    ರಾಜಧಾನಿಗೆ ವಿಶ್ವದರ್ಜೆಯ ಮೂಲಸೌಕರ್ಯ ಕಲ್ಪಿಸುವ ಜತೆಗೆ ಇಲ್ಲಿನ ಇತಿಹಾಸ, ಸಂಸ್ಕೃತಿ, ಪರಂಪರೆ, ಪರಿಸರ ಉಳಿಸುವ ನಿಟ್ಟಿನಲ್ಲಿ ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಯನ್ನು ಸರ್ಕಾರ ಮುನ್ನೆಲೆಗೆ ತಂದಿದೆ. ಇದನ್ನಾಧರಿಸಿ ಈಗಾಗಲೇ ಹಲವು ಸಭೆ, ಸಂವಾದ ನಡೆಸಿ ನಗರದ ವರ್ಚಸ್ಸಿಗೆ ಧಕ್ಕೆಯಾಗದ ರೀತಿಯಲ್ಲಿ ಯೋಜನೆಗಳನ್ನು ರೂಪಿಸಲು ಸಿದ್ಧತೆ ನಡೆದಿದೆ. ಇದಕ್ಕೆ ಆರ್ಥಿಕ ಬಲ ನೀಡಲು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಿಎಂ ಅವರಲ್ಲಿ ಮನವಿ ಮಾಡಿದ್ದಾರೆ. ಇದಕ್ಕೆ ಸ್ವಲ್ಪಮಟ್ಟಿನ ಅನುದಾನ ಮೀಸಲಿಡುವ ಭರವಸೆ ದೊರೆತಿದೆ.

    ಕೆಲ ಪ್ರಮುಖ ಕಾರ್ಯಕ್ರಮಗಳಿಗೆ ಸಿಗಬೇಕಾದ ನೆರವು:

    * ಪ್ರವಾಹ ತಡೆ ಹಿನ್ನೆಲೆ ಮಳೆನೀರುಗಾಲುವೆಗಳ ಮೇಲ್ದರ್ಜೆ, ಪುನರ್‌ನಿರ್ಮಾಣ.
    * ಪ್ರಮುಖ ಕೆರೆಗಳ ಪುನರುಜ್ಜೀವನ, ಹಸಿರು ಹೆಚ್ಚಿಸಲು ಕಿರುಅರಣ್ಯಗಳ ಅಭಿವೃದ್ಧಿ.
    * ಸಂಚಾರ ದಟ್ಟಣೆ ನಿವಾರಿಸಲು ಹೈ ಡೆನ್ಸಿಟಿ ಕಾರಿಡಾರ್ ಯೋಜನೆಗೆ ನೆರವು.
    * ಘನತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕವಾಗಿ ವಿಂಗಡಿಸಿ, ಸಂಸ್ಕರಣೆ ಮಾಡುವುದು.
    * ಸಮೂಹ ಸಾರಿಗೆ ಉತ್ತೇಜಿಸಲು ಬಿಎಂಟಿಸಿ ಬಸ್, ಮೆಟ್ರೋ ಯೋಜನೆಗೆ ಹೆಚ್ಚಿನ ಹಣ ನಿಗದಿ.
    * 110 ಹಳ್ಳಿಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯೋಜನೆಗೆ ಅನುದಾನ ಹೆಚ್ಚಿಸುವುದು.
    * ಅಮೃತ್ ಯೋಜನೆ ಅಡಿಯಲ್ಲಿ ಕೈಗೆತ್ತಿಕೊಂಡಿರುವ ಕಾರ್ಯಕ್ರಮ ಪೂರ್ಣಕ್ಕೆ ಆದ್ಯತೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts