More

    ಧಾರವಾಡದ ಗುಪ್ತಗಾಮಿನಿಗೆ ಆರತಿಯ ಸಂಭ್ರಮ

    ಧಾರವಾಡ: ಜಗತ್ತಿನ ಎಲ್ಲ ನಾಗರಿಕತೆಗಳು ಉಗಮವಾಗಿದ್ದು ನದಿಯ ತಟದಲ್ಲಿ. ಭಾರತೀಯರಿಗೆ ನದಿಗಳು ಮಾತೃಸಮಾನವಾಗಿದೆ ಎಂದು ವಿಶ್ವ ಹಿಂದು ಪರಿಷತ್‌ನ ಧಾರವಾಡ ವಿಭಾಗ ಕಾರ್ಯದರ್ಶಿ ವಿನಾಯಕ ತಲಗೇರಿ ಹೇಳಿದರು.
    ನಗರದ ಸೋಮೇಶ್ವರ ದೇವಸ್ಥಾನ ಹಿಂಭಾಗದ ಶಾಲ್ಮಲಾ ನದಿ ಉಗಮ ಸ್ಥಾನದಲ್ಲಿ ಸಂಸ್ಕೃತಿ ಟ್ರಸ್ಟ್ನಿಂದ ಭಾನುವಾರ ಆಯೋಜಿಸಿದ್ದ ಶಾಲ್ಮಲೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಜಗತ್ತಿನ ಬಹುತೇಕ ಪ್ರಾಚೀನ ನಾಗರಿಕತೆಗಳು ನಶಿಸಿದಾಗ, ಸಿಂಧೂ ಸಂಸ್ಕೃತಿ ಹಾಗೂ ನಾಗರಿಕತೆ ಇನ್ನೂ ಜೀವಂತವಾಗಿರುವುದು ವಿಶೇಷ. ದೇವ ನಿರ್ಮಿತ ಈ ಭೂಮಿಯಲ್ಲಿ ಸಾಕಷ್ಟು ಪ್ರಕೃತಿ ವಿಸ್ಮಯಗಳಿವೆ. ಅವುಗಳಲ್ಲಿ ನದಿಗಳು ಅತ್ಯಂತ ಪ್ರಮುಖ. ಭಾರತ ನದಿಗಳ ದೇಶ. ಎಲ್ಲ ನದಿಗಳ ನೀರು ನಮಗೆ ತೀರ್ಥ ಹಾಗೂ ಮಾತೃಸಮಾನ. ನದಿಗಳ ರಕ್ಷಣೆ ಹಾಗೂ ಪೋಷಣೆ ನಮ್ಮ ಕರ್ತವ್ಯವಾಗಬೇಕು ಎಂದರು.
    ಉದ್ಯಮಿ ಸೌಭಾಗ್ಯಾ ಯಲಿಗಾರ ಮಾತನಾಡಿ, ವಿದ್ಯಾಕಾಶಿ, ಸಾಂಸ್ಕೃತಿಕ ನಗರಿ ಎಂಬ ಹೆಗ್ಗಳಿಕೆಯ ಧಾರವಾಡದಲ್ಲಿ ಶಾಲ್ಮಲಾ ನದಿ ಉಗಮವಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ನದಿಗಳ ರಕ್ಷಣೆ ಎಂದರೆ ಕೇವಲ ಸ್ವಚ್ಛಗೊಳಿಸುವುದಲ್ಲ. ಬಗ್ಗೆ ಪೂಜ್ಯ ಭಾವನೆಯನ್ನು ಹೊಂದಬೇಕು ಎಂದರು.
    ಸಭಾ ಕಾರ್ಯಕ್ರಮದ ನಂತರ ಶಾಲ್ಮಲಾ ನದಿಗೆ ಮಹಿಳೆಯರು ಬಾಗಿನ ಅರ್ಪಿಸಿದರು. ಕಾಶಿಯ ಗಂಗಾರತಿ ಮಾದರಿಯಂತೆ ಶಾಲ್ಮಲಾ ನದಿಗೆ ಆರತಿ ಬೆಳಗಲಾಯಿತು. ಕಾರ್ತಿಕ ಮಾಸದ ನಿಮಿತ್ತ ದೀಪೋತ್ಸವ ನಡೆಯಿತು.
    ಸಂಸ್ಕೃತಿ ಟ್ರಸ್ಟ್ ಕಾರ್ಯದರ್ಶಿ ವೇದಾ ಕುಲಕರ್ಣಿ, ರಜನಿ ಕುಲಕರ್ಣಿ, ಶ್ರುತಿ ಕೌಲಗುಡ್ಡ ಹಾಗೂ ೭೦೦ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts