More

    224 ಕ್ಷೇತ್ರಗಳಲ್ಲೂ ಆಪ್‌ ಅಭ್ಯರ್ಥಿಗಳು ಕಣಕ್ಕೆ: ಪೃಥ್ವಿ ರೆಡ್ಡಿ

    ಶಿವಮೊಗ್ಗ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ 224 ಕ್ಷೇತ್ರಗಳಲ್ಲೂ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಜತೆಗೆ ಎಲ್ಲ ವಿಧಾನಸಭಾ ಕ್ಷೇತ್ರಕ್ಕೂ ಪ್ರತ್ಯೇಕ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು ಎಂದು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಘೋಷಿಸಿದರು.
    ರಾಜ್ಯದಲ್ಲಿ ಗ್ರಾಮ ಸಂಪರ್ಕ ಅಭಿಯಾನದ ಮೂಲಕ ಪಕ್ಷವನ್ನು ಬೂತ್‌ಮಟ್ಟದಿಂದ ಸಂಘಟಿಸಲಾಗುತ್ತಿದೆ. ಎರಡು ರಾಷ್ಟ್ರೀಯ ಮತ್ತು ಒಂದು ಪ್ರಾದೇಶಿಕ ಪಕ್ಷವನ್ನು ಹಿಂದಿಕ್ಕಿ ಈ ಬಾರಿ ಆಪ್‌ನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಕಲ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಮುಂಬರುವ ಬಿಬಿಎಂಪಿ(ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ)ಯ ಎಲ್ಲ ವಾರ್ಡ್‌ಗಳು ಸೇರಿದಂತೆ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಸ್ಪರ್ಧೆ ಮಾಡುವರು. ಇದುವರೆಗೆ ರಾಜ್ಯದ ಆರೂವರೆ ಕೋಟಿ ಜನರಿಗೆ ಪರ್ಯಾಯ ಆಯ್ಕೆ ಇರಲಿಲ್ಲ. ಮೂರು ಪಕ್ಷಗಳಿದ್ದರೂ ರಾಜಕಾರಣ ಒಂದೇ ಆಗಿತ್ತು. ನಮಗೆ 10, 20, 40 ಪರ್ಸೆಂಟೇಜ್ ಕಮೀಷನ್ ಬೇಕಿಲ್ಲ. ಜೀರೋ ಪರ್ಸೆಂಟೇಜ್‌ನಲ್ಲಿ ಸರ್ಕಾರ ನಡೆಸಿ ತೋರಿಸುತ್ತೇವೆ ಎಂದರು.
    ಪಂಜಾಬ್‌ನಲ್ಲಿ ಕೇವಲ ಒಂದು ಪರ್ಸೆಂಟೇಜ್ ಕಮೀಷನ್ ಪಡೆದಿದ್ದಕ್ಕೆ ಆರೋಗ್ಯ ಸಚಿವರನ್ನೇ ಸಿಎಂ ಭಗವಂತ್ ಸಿಂಗ್ ಅವರು ಸಂಪುಟದಿಂದ ಕಿತ್ತೊಗೆದರು. ಅವರೇ ಪೊಲೀಸರಿಗೆ ದೂರು ನೀಡಿದ್ದರು. ದೆಹಲಿಯಲ್ಲೂ ಅರವಿಂದ್ ಕೇಜ್ರಿವಾಲ್ ಅವರು ಒಳ್ಳೆಯ ಕೆಲಸಗಳನ್ನು ಮಾಡಿ ತೋರಿಸಿದ್ದಾರೆ. ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಬೇರು ಬಿಟ್ಟಿರುವ ಭ್ರಷ್ಟಚಾರವನ್ನು ಬುಡಮಟ್ಟದಿಂದ ನಿರ್ನಾಮ ಮಾಡುತ್ತೇವೆ ಎಂದು ಭರವಸೆ ನೀಡಿದರು.
    ಬರೀ ಪ್ರಣಾಳಿಕೆಯಲ್ಲ, ಗ್ಯಾರಂಟಿ ಕಾರ್ಡ್: ಕರ್ನಾಟಕ ಭೌಗೋಳಿಕವಾಗಿ ವಿಭಿನ್ನ ನೆಲೆಗಟ್ಟನ್ನು ಹೊಂದಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ವಿಭಿನ್ನ ಸಮಸ್ಯೆಗಳು, ಸವಾಲುಗಳಿವೆ. ಹಾಗಾಗಿ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಣಾಳಿಕೆ ಸಿದ್ಧಪಡಿಸಲಾಗುವುದು. ಅದು ಬರೀ ಪ್ರಣಾಳಿಕೆಯಲ್ಲ. ಗ್ಯಾರಂಟಿ ಕಾರ್ಡ್ ಇದ್ದಂತೆ. ಅದರಲ್ಲಿ ರಾಷ್ಟ್ರೀಯ ಅಧ್ಯಕ್ಷ ಅರವಿಂದ ಕೇಜ್ರಿವಾಲ್ ಅವರ ಸಹಿ ಇರಲಿದ್ದು ಭರವಸೆ ಈಡೇರಿಸದೇ ಇದ್ದರೆ ಜನಸಾಮಾನ್ಯರು ಕಾನೂನು ಹೋರಾಟ ಮಾಡಬಹುದು. ನಾವು ಎಸಿ ಕಚೇರಿಯಲ್ಲಿ ಕುಳಿತು ಬಿಡುಗಡೆ ಮಾಡುವುದಿಲ್ಲ. ಕೊಟ್ಟ ಭರವಸೆ ಈಡೇರಿಸುವುದು ನಮ್ಮ ಜವಾಬ್ದಾರಿ ಆಗಿರಲಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts