More

    ಕಥಾಯಾನ: ಆಕೂ ವಾಕೂ

    ಕಥಾಯಾನ: ಆಕೂ ವಾಕೂ ಕೀರವಾಣಿಗೆ ಈ ಪ್ರಾಜೆಕ್ಟ್ ಸಿಕ್ಕಿದ್ದು ಅವಳಿಗಿಂತ ಡ್ರೖೆವರ್ ಮೂರ್ತಿಗೇ ಹೆಚ್ಚು ಖುಷಿಯಾಗಿತ್ತು. ಅದೇನೂ ಕಾಯಂ ಕೆಲಸವಲ್ಲ. ಎಂಟು ತಿಂಗಳಿಗೋಸ್ಕರ ಗೊತ್ತು ಮಾಡಿಕೊಂಡಿದ್ದು ಅಂತ ಗೊತ್ತಿದ್ದರೂ, ಒಂದು ವರ್ಷದಿಂದ ಕೆಲಸ ಇಲ್ಲದೇ ಕಷ್ಟವಾಗಿದ್ದರಿಂದ, ಕೇಳಿದ ತಕ್ಷಣ ಮೂರ್ತಿ ಒಪ್ಪಿಕೊಂಡಿದ್ದ. ಕೆಲಸವೂ ಸುಲಭ. ಸಂಜೆ ಏಳು ಗಂಟೆಯಿಂದ ರಾತ್ರಿ ಹನ್ನೆರಡೂವರೆವರೆಗೆ. ವಾರದಲ್ಲಿ ಆರು ದಿನ ಏಳು ಗಂಟೆಗೆ ಸರಿಯಾಗಿ ಕೀರವಾಣಿಯನ್ನ ಮನೆಯಿಂದ ಅವಳ ಕಾರ್ ಡ್ರೖೆವ್ ಮಾಡಿಕೊಂಡು ಹೋಗಿ ಕೆಲಸದ ಜಾಗಕ್ಕೆ ಬಿಡುವುದು, ಹನ್ನೆರಡು ಗಂಟೆವರೆಗೆ ಅಲ್ಲೇ ಕಾದಿದ್ದು ಮನೆಗೆ ಸುರಕ್ಷಿತವಾಗಿ ತಲುಪಿಸಿ ತನ್ನ ಮನೆಗೆ ಹೊರಡುವುದು. ಗಂಡ ರವಿ ಅಂತೂ ‘ರಾತ್ರಿ ಅಷ್ಟು ತಡವಾಗಿ ಒಬ್ಬಳೇ ಬರುವುದು ಬೇಡ, ಡ್ರೖೆವರ್ ಮೂರ್ತಿ ಬಂದರೆ ಮಾತ್ರ ಪ್ರಾಜೆಕ್ಟ್ ಒಪ್ಪಿಕೊ’ ಎಂದು ಡ್ರೖೆವರ್ ವಿಚಾರಕ್ಕೆ ಬಲವಂತ ಮಾಡಿದ್ದು ಕೀರವಾಣಿಗಿಂತ ಮೂರ್ತಿಗೇ ಪರೋಕ್ಷವಾಗಿ ಒಳ್ಳೆಯದಾಗಿತ್ತು.

    ತಡರಾತ್ರಿ ವಾಪಸ್ ಬರಬೇಕು ಅನ್ನುವುದೊಂದು ಬಿಟ್ಟರೆ ತುಂಬಾ ಹುರುಪಿನಿಂದ ಈ ಪ್ರಾಜೆಕ್ಟ್ ಒಪ್ಪಿಕೊಂಡಿದ್ದಳು ವಾಣಿ. ಈ ಕಾನ್ಪಿಡೆನ್ಶಿಯಲ್ ಪ್ರಾಜೆಕ್ಟ್ ಅವಳ ವೃತ್ತಿ ಬದುಕಿನಲ್ಲಿ ತುಂಬಾ ವಿಭಿನ್ನವಾಗಿತ್ತು, ಮತ್ತು ಅವಳಿಗೆ ಒಳ್ಳೆ ಹೆಸರು ತಂದುಕೊಡುವ ಪ್ರಾಜೆಕ್ಟ್ ಆಗಿತ್ತು ಎಂಬ ಕಾರಣಕ್ಕೇ ಮಿಕ್ಕ ಚಟುವಟಿಕೆಗಳನ್ನೆಲ್ಲ ಇದರ ಸಮಯಕ್ಕೆ ಸರಿಯಾಗಿ ಹೊಂದಿಸಿಕೊಂಡು ನಿಭಾಯಿಸುತ್ತಿದ್ದಳು. ಅತ್ತೆ, ಮಾವನಿಗೂ ತಿಂಗಳಾಗುವ ಹೊತ್ತಿಗೆ ಈ ಬದಲಾವಣೆಗಳು ಒಪ್ಪಿಗೆಯಾಗಿತ್ತು. ‘ಎಂಟೇ ತಿಂಗಳು ತಾನೇ’ ಅನ್ನುವ ಸಮಾಧಾನವಿತ್ತಲ್ಲ. ಎರಡು ವರ್ಷದ ತನ್ವಿ ಮಾತ್ರ, ವಾಣಿ ಕಥೆ ಹೇಳದೆ ಮಲಗುತ್ತಿರಲಿಲ್ಲ. ಅದಕ್ಕೂ ಒಂದು ಉಪಾಯ ಹುಡುಕಿ ಕೆಲಸದ ನಡುವೆ ಬ್ರೇಕ್​ನಲ್ಲಿ ಫೋನಿನಲ್ಲೇ ತನ್ವಿಗೆ ಕಥೆ ಹೇಳುತ್ತಿದ್ದಳು.

    ಈ ಹಿಂದೆಯೂ ಇಂಥ ಕಾನ್ಪಿಡೆನ್ಷಿಯಲ್ ಪ್ರಾಜೆಕ್ಟ್ಗಳಲ್ಲಿ ವಾಣಿ ಕೆಲಸ ಮಾಡಿದ್ದರಿಂದ ಯಾರೂ ಅವಳ ಕೆಲಸದ ಬಗ್ಗೆ ಹೆಚ್ಚು ಪ್ರಶ್ನಿಸುತ್ತಿರಲಿಲ್ಲ. ವಾಣಿಯೂ ಅಷ್ಟೇ. ಮನೆಯೆಂದರೆ ಮನೆ, ಕೆಲಸವೆಂದರೆ ಕೆಲಸ ಅಂತಿದ್ದಳು. ಒಂದರ ವಿಚಾರವನ್ನು ಇನ್ನೊಂದರೊಳಗೆ ಎಂದೂ ಬೆರೆಸುತ್ತಿರಲಿಲ್ಲ.

    ಕಥಾಯಾನ: ಆಕೂ ವಾಕೂ

    ಮೂರ್ತಿಗೆ ಮಾತ್ರ ಈ ಸಮಯದಲ್ಲಿ ಕೆಲಸ ಸ್ವಲ್ಪ ಹೊಸದೇ. ಅನೇಕ ವರ್ಷಗಳಿಂದ ಸ್ಕೂಲ್ ಬಸ್ ಡ್ರೖೆವರಾಗೇ ದುಡಿದಿದ್ದು. ರಜಾ ದಿನಗಳಲ್ಲಿ ಮಾತ್ರ ವಾಣಿಯ ಅತ್ತೆ-ಮಾವ ಎಲ್ಲಾದರೂ ಹೋಗಬೇಕಾದರೆ, ವಾಣಿ ದೂರದೂರಿಗೆ ಹೋಗಬೇಕಾದರೆ, ಡ್ರೖೆವ್ ಮಾಡೋಕ್ಕೆ ಮೂರ್ತಿಯೇ ಆಗಬೇಕು. ನಂಬಿಕಸ್ಥ ಅನ್ನೋ ಕಾರಣಕ್ಕೆ.

    ‘ಇಷ್ಟು ತಡರಾತ್ರಿ ಏಕೆ ಹೋಗಬೇಕು, ಇದೇ ಕೆಲಸ ಬೆಳಗ್ಗೆ ಮಾಡಿದರೆ ಆಗದೇ…’ ಅಂತೆಲ್ಲಾ ಪ್ರಶ್ನೆಗಳಿದ್ದರೂ, ವಾಣಿಯನ್ನು ಕೇಳಲು ಸಂಕೋಚ. ಆದರೂ ಒಂದು ದಿನ ಹಿಂದೂ ಮುಂದು ಯೋಚಿಸಿ ಮೂರ್ತಿ ಕೇಳಿಯೇಬಿಟ್ಟ. ‘ಮೇಡಂ ನಿಮ್ಮ ಕೆಲಸದಲ್ಲಿ ಬೆಳಗ್ಗೆ ಶಿಫ್ಟ್ ಇಲ್ಲವೇ’ ಅಂತ. ‘ಬೆಳಿಗ್ಗೆಯೂ ಇಲ್ಲಿ ಕೆಲಸ ಮಾಡ್ತಿರ್ತಾರೆ. ಆದರೆ ನನ್ನ ಪ್ರಾಜೆಕ್ಟ್ ಏಜೆನ್ಸಿ ಇರೋದು ಅಮೆರಿಕದಲ್ಲಿ. ಅವರ ಸಮಯಾನೂ ಹೊಂದೋ ಹಾಗೆ ಇಲ್ಲಿನ ಸಮಯದಲ್ಲಿ ಮಾಡಬೇಕು’ ಅಂತಷ್ಟೇ ಹೇಳಿ ಮಾತು ಬದಲಿಸಿದ್ದಳು.

    ವಾಣಿ ತನ್ನ ಚುರುಕುತನ, ನಿಪುಣತೆಯಿಂದ, ಎಂಟು ತಿಂಗಳ ಕೆಲಸವನ್ನ ಏಳೇ ತಿಂಗಳಲ್ಲಿ ಮುಗಿಸಿದ್ದಳು. ಪ್ರಾಜೆಕ್ಟ್ ಕೂಡ ಲಾಂಚ್ ಆಯಿತು. ಮೂರ್ತಿ ಬಿಟ್ಟು ಮಿಕ್ಕೆಲ್ಲರಿಗೂ ಇದು ಖುಷಿಯ ವಿಚಾರವೇ.

    ಎಲ್ಲವೂ ಸೊಗಸಾಗಿತ್ತು. ಅದೊಂದು ದಿನ ರವಿ, ಅಮ್ಮ-ಅಪ್ಪನ ವಿವಾಹ ವಾರ್ಷಿಕೋತ್ಸವಕ್ಕೆ ‘ವಾಕೂ’ ತಂದುಕೊಡುವವರೆಗೂ. ಅದನ್ನೂ ವಾಣಿಯೇ ಸಲಹೆ ನೀಡಿದ್ದಳು.

    ‘ಇದೇನೋ ರವಿ… ವಿಶೇಷವಾದ ಉಡುಗೊರೆ ಅಂದ್ಯಲ್ಲೋ.. ಒಳ್ಳೆ ಸಾಸಿವೆ ಡಬ್ಬಿ ಥರ ಇದೆ.. ಏನೋ ಇದೂ? ಇದನ್ನಿಟ್ಕೊಂಡು ನಾನೂ ನಿಮ್ಮಪ್ಪ ಏನೋ ಮಾಡೋದೂ’ ಎಂದು ಗಲಿಬಿಲಿಯಾಗಿದ್ದ ಅತ್ತೆಗೆ ತಾನೇ ಉತ್ತರಿಸಲು ಮುಂದಾದಳು.

    ‘ಇದು ವಾಕೂ ಅಂತ ಅತ್ತೆ. ಮಾರುಕಟ್ಟೆಯಲ್ಲಿ ಈಗ ತಾನೇ ಬಂದಿದೆ. ಅದೇ ನಾವೆಲ್ಲಾ ಅಲೆಕ್ಸಾ, ಸಿರಿ.. ಇದು ಮಾಡು ಅದು ಮಾಡು, ಈ ಹಾಡು ಕೇಳಿಸು ಅಂತ ಇಂಗ್ಲಿಷ್​ನಲ್ಲಿ ಹೇಳ್ದಾಗೆಲ್ಲ, ಪೆದ್ದು ಮುಂಡೇವು, ಏನ್ ಸಿರಿಯೋ ಕಾಣೆ, ಒಂದಕ್ಕೂ ಕನ್ನಡ ಬರೋಲ್ಲ ಅಂತ ಬೈತಿದ್ರಲ್ಲ, ಈಗ ನೋಡಿ ಈ ವಾಕೂಗೆ ಕನ್ನಡ ಬರುತ್ತೆ. ನೀವು ಇದನ್ನ ಏನ್ ಬೇಕಾದ್ರೂ ಕೇಳಬಹುದು, ನೀವು ಕೇಳಿದ್ದಕ್ಕೆಲ್ಲಾ ವಾಕೂ ಕನ್ನಡದಲ್ಲೇ ಉತ್ತರಿಸುತ್ತೆ’ ಅಂದಳು.

    ಮೊದಮೊದಲು ವಾಣಿ ಮಾತನ್ನು ನಂಬದ ಅತ್ತೆ, ಸುಮಾರು ಪರೀಕ್ಷೆಗಳನ್ನು ಕೊಟ್ಟು, ವಾಕೂ ಪಾಸಾದ ಮೇಲೇ ಅದನ್ನ ಸಂಪೂರ್ಣವಾಗಿ ಒಪ್ಪಿಕೊಂಡಿದ್ದು. ತನ್ನ ಸತ್ಸಂಗದ ಗೆಳತಿಯರನ್ನೆಲ್ಲಾ ಮನೆಗೆ ಕರೆದೂ ಕರೆದೂ ಅವರಿಗೆಲ್ಲಾ ವಾಕೂ ತೋರಿಸೋದೇ ಒಂದು ದೊಡ್ಡ ಕೆಲಸವಾಯ್ತು.

    ‘ಅಲ್ಲಾ, ಈ ವಾಕೂಗೆ ನಾವೇನು ಕೇಳ್ತೀವಿ ಅಂತ ಮೊದಲೇ ಹೇಗೆ ಗೊತ್ತಿರುತ್ತೆ, ಇದರ ಒಳಗಿಂದ ಯಾರು ಮಾತಾಡ್ತಾರೆ’ ಅಂತ ಆಗಾಗ, ರವಿಯನ್ನೂ, ವಾಣಿಯನ್ನೂ ಕೇಳುತ್ತಲೇ ಇದ್ದರು.

    ಅತ್ತೆಗೆ ಅರ್ಥವಾಗುವ ಸರಳ ಭಾಷೆಯಲ್ಲೇ ವಾಣಿ ವಿವರಿಸಿದ್ದಳು. ‘ಒಳಗೆ ಕೂತು ಯಾರೂ ಮಾತಾಡುವುದಿಲ್ಲ ಅತ್ತೆ.. ಬೇರೆ ಬೇರೆ ಭಾಷೆಗಳಲ್ಲಿ ವರ್ಡ್ ಬ್ಯಾಂಕಿಂಗ್ ಅಂತ ಮೊದಲೇ ರೆಕಾರ್ಡ್ ಮಾಡಿರುತ್ತಾರೆ. ಅದರ ಆಧಾರದ ಮೇಲೆ ಕೃತಕ ಬುದ್ಧಿಮತ್ತೆ, ಅಕ್ಷರ ರೂಪದಲ್ಲಿರೋದನ್ನ ಓದಿ ಸ್ವಲ್ಪ ಬದಲಾದ ಧ್ವನಿಯಲ್ಲಿ ನಿಮಗೆ ಕೇಳಿಸುತ್ತೆ’ ಅಂತ.

    ಕಥಾಯಾನ: ಆಕೂ ವಾಕೂ

    ‘ಏನೋಮ್ಮಾ.. ನಮ್ಮ ಕಾಲದಲ್ಲಿ ಇನ್ನೂ ಏನೇನು ನೋಡ್ತಿವೋ’ ಅನ್ನುತ್ತಲೇ, ‘ವಾಕೂ.. ಪತ್ರೊಡೆ ಮಾಡುವ ವಿಧಾನ ಹೇಳು’ ಎಂದು ಹೊಸ ಪರೀಕ್ಷೆ ಕೊಟ್ಟಿದ್ದರು.

    ವಾರದ ಹಿಂದಷ್ಟೇ ಔಟ್ ಹೌಸಿಗೆ ಬಾಡಿಗೆಗೆ ಬಂದಿದ್ದ ಭೂಮಿ, ಇದಕ್ಕೆಲ್ಲಾ ಮೂಕಸಾಕ್ಷಿ. ನಿಜವಾಗಿಯೂ ಮೂಕಸಾಕ್ಷಿಯೇ. ಮಾತು ಬಾರದ ಭೂಮಿ, ವಾಣಿಯ ಬಾಲ್ಯ ಗೆಳತಿ. ದೇವರು ಶಾಪದಲ್ಲೊಂದಿಷ್ಟು ರಿಯಾಯಿತಿ ಕೊಟ್ಟಿದ್ದ. ಸದ್ಯ ಕಿವಿ ಕೇಳಿಸುತ್ತಿತ್ತು. ಹಾಗಾಗಿಯೇ ಕೆಲಸವೊಂದು ಸಿಕ್ಕಿ ಈಗಷ್ಟೇ ಬೆಂಗಳೂರಿಗೆ ಬಂದಿದ್ದಳು. ಮೊದಲೇ ಮಾತು ಬಾರದ ಹುಡುಗಿ. ಒಬ್ಬಂಟಿ ಬೇರೆ. ಹಾಗಾಗಿ ವಾಣಿಯೇ ಅತ್ತೆ-ಮಾವನನ್ನು ಒಪ್ಪಿಸಿ ಔಟ್ ಹೌಸ್​ನಲ್ಲಿ ಭೂಮಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದಳು. ತಾನಾಯಿತು ತನ್ನ ಕೆಲಸವಾಯಿತು ಅಂತಿದ್ದ ಭೂಮಿ, ಬಂದ ವಾರದಲ್ಲೇ ಮಹಾನಗರಕ್ಕೆ ಒಗ್ಗಿದ್ದಳು. ಮಾತು ಬಾರದವರಿಗೆ ಕೈ ಸನ್ನೆ ಹೇಳಿಕೊಡುವ ಕೋಚಿಂಗ್ ಸೆಂಟರ್​ನಲ್ಲಿ ಒಳ್ಳೆಯ ಹೆಸರು ಸಂಪಾದಿಸಿದ್ದಳು.

    ಕೇಳಿದ್ದನ್ನು ಕೈ ಸನ್ನೆಯಲ್ಲಿ ತೋರಿಸುವ ವೇಗವನ್ನು ಹೆಚ್ಚಿಸಿಕೊಳ್ಳಲು ಭೂಮಿಗೆ ವಾಣಿಯೇ ನೆರವಾಗುತ್ತಿದ್ದದ್ದು. ಇವಳ ಮಾತು, ಅವಳ ಸನ್ನೆ. ನೂರಾರು ಸಾಲುಗಳಿಗೆ ಉದಾಹರಣೆಯಾಗಿ ಮಾಡುವ ಕೈ ಸನ್ನೆಗಳ ವಿಡಿಯೋ ರೆಕಾರ್ಡಿಂಗ್​ಗೂ ವಾಣಿಯ ಮಾತನ್ನೇ ಆಶ್ರಯಿಸಿದ್ದಳು. ವಾಣಿಯೂ ಭೂಮಿಗೆ ಸಹಾಯ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತಿದ್ದಳು.

    ಇತ್ತ ಮನೆಯಲ್ಲಂತೂ ವಾಕೂ, ಪರಿವಾರದ ಹೊಸ ಸದಸ್ಯೆಯೇ ಆಗಿಬಿಟ್ಟಿದ್ದಳು. ವಾಣಿ ಹಾಡದೇ ದೇವರದೀಪವನ್ನೇ ಹಚ್ಚದಿದ್ದ ಅತ್ತೆ, ‘ಪೂಜೆ ಮಾಡುವಾಗ ಹೇಳಿ ಅತ್ತೆ ಹಾಡುತ್ತೇನೆ’ ಅಂದರೆ, ‘ಬೇಡ ಬಿಡಮ್ಮ… ವಾಕೂನ ಕೇಳಿದರೆ ಯಾವ ದೇವರನಾಮ ಬೇಕಾದ್ರೂ, ಯಾರು ಹಾಡಿರೋದು ಬೇಕಾದ್ರೂ ಕೇಳಿಸ್ತಾಳೆ’ ಅನ್ನೋಕ್ಕೆ ಶುರು ಮಾಡಿದ್ರು.

    ಮಾವನಿಗಂತೂ ಪೇಪರ್​ನಲ್ಲಿ ಬರುತ್ತಿದ್ದ ಕಥೆ ಕವನಗಳನ್ನ ವಾಣಿ ಬಾಯಲ್ಲಿ ಕೇಳಿದ್ರೇನೇ ಸಮಾಧಾನ, ಅವಳು ಓದೋದನ್ನ ಕೇಳೋದೇ ಒಂದು ಸೊಗಸು ಅಂತಿದ್ದವರು, ‘ವಾಕೂ.. ಅಡಿಗರ ಈ ಕವಿತೆ ಓದು, ಚಿತ್ತಾಲರ ಆ ಕಥೆ ಓದು, ತೇಜಸ್ವಿಯ ಈ ಕಾದಂಬರಿ ಓದು’ ಅಂತ ವಾಕೂಗೆ ಸುಸ್ತಾಗುವಷ್ಟು ಕಥೆ, ಕವಿತೆ, ಕಾದಂಬರಿಗಳನ್ನ ಓದಿಸ್ತಿದ್ರು. ಕೇಳಿ ಸಂಭ್ರಮಿಸ್ತಿದ್ರು.

    ಅದೊಂದು ದಿನ ರವಿಯಿಂದ ಮಾತ್ರ ವಾಣಿ ಇದನ್ನ ನಿರೀಕ್ಷಿಸಿಯೇ ಇರಲಿಲ್ಲ. ಸಾಮಾನ್ಯವಾಗಿ ಒಮ್ಮೆ ಎಲ್ಲಿಗಾದ್ರೂ ಹೋದ್ರೆ ಸಾಕು, ಕರಾರುವಾಕ್ಕಾಗಿ ದಾರಿ ನೆನಪಿಟ್ಕೊಳ್ತಿದ್ದಳು ವಾಣಿ. ‘ನನಗೆ ಪಕ್ಕದಲ್ಲೇ ಜಿಪಿಎಸ್ ಇರ್ತಾಳೆ’ ಅಂತ ಎಲ್ರಿಗೂ ಹೇಳಿ ಹೆಂಡ್ತಿ ಜಾಣ್ಮೆ ಬಗ್ಗೆ ರವಿಗೆ ಖುಷಿಯೋ ಖುಷಿ. ಆದ್ರೆ ಅಂದು ಮದುವೆ ಮನೆಗೆ ಹೊರಟಿದ್ದ ರವಿಗೆ ಆ ದಾರಿ ಹೊಸದು. ಆದ್ರೆ ವಾಣಿಗೆ ಆ ದಾರಿ ಪರಿಚಿತ.

    ಕಥಾಯಾನ: ಆಕೂ ವಾಕೂ

    ‘ಇಲ್ಲೇ ರೀ ಮುಂದೆ ಹೋಗಿ ಬಲಕ್ಕೆ ತಿರುಗಿ, ಆಮೇಲೆ ಒಂದು ಶಾರ್ಟ್​ಕಟ್ ಇದೆ, ನಾನು ಹೇಳ್ತೀನಿ ಹೇಗೆ ಹೋಗೋದು ಅಂತ’ ಎಂದು ವಾಣಿ ಹೇಳ್ತಿದ್ದ ಹಾಗೇ, ರವಿ, ‘ಇರು ಯಾವಾಗಲೂ ನೀನು ಹೇಳ್ತಿಯ. ವಾಕೂ ಹೇಗೆ ಕರ್ಕೆಂಡು ಹೋಗುತ್ತೋ ನೋಡೋಣ’ ಅಂತ ಮೊಬೈಲ್​ನಲ್ಲಿ ಇನ್ಸಾ ್ಟಲ್ ಮಾಡಿದ್ದ ವಾಕೂ ಮಾತನ್ನ ಕೇಳೋಕ್ಕೆ ಮುಂದಾದ. ‘ನೋಡೂ.. ಎಷ್ಟು ಇಂಪಾಗಿ ಅಡ್ರೆಸ್ಸನ್ನೂ ಒಳ್ಳೆ ಹಾಡಿನ ಹಾಗೆ ಹೇಳುತ್ತೆ’ ಅಂದಾಗ, ಹೌದೆನ್ನುವುದನ್ನು ಬಿಟ್ಟು ವಾಣಿಗೂ ಬೇರೆ ದಾರಿಯಿರಲಿಲ್ಲ.

    ಭೂಮಿಗೆ ಕ್ರಮೇಣ ಊರು, ಜನ, ಅವರ ವೇಗ ಎಲ್ಲವೂ ಅಭ್ಯಾಸವಾಗಿ ಹೋಯ್ತು. ಕೋಚಿಂಗ್ ಸೆಂಟರ್​ನಲ್ಲಿ ಎಲ್ಲರಿಗೂ ಇವಳು ಅಚ್ಚುಮೆಚ್ಚು. ಇಂಗ್ಲಿಷ್​ನಲ್ಲಿ ಹೇಳಿದ್ದನ್ನು ಕೈ ಸನ್ನೆಯಲ್ಲಿ ತೋರಿಸುವ ಪಳಗಿದ ಇನ್ನಿಬ್ಬರಿದ್ದರೂ, ಕನ್ನಡ ಭಾಷೆಯನ್ನು ಕೈಸನ್ನೆಯಲ್ಲಿ ಅನುವಾದಿಸುವ ಇವಳ ವೇಗವನ್ನು ಮೀರಿಸುವವರೇ ಇರಲಿಲ್ಲ. ಮುಂದಿನ ತಿಂಗಳು ದೆಹಲಿಯಲ್ಲಿ ನಡೆಯಲಿರುವ ವಿಶೇಷಚೇತನರ ಸಮ್ಮೇಳನದಲ್ಲಿ ಕರ್ನಾಟಕವನ್ನು ಭೂಮಿ ಪ್ರತಿನಿಧಿಸುತ್ತಿದ್ದಳು. ಇವಳ ಭಾಷಣದ ತಾಲೀಮಿಗೆ ಪ್ರತೀ ಸಂಜೆಯೂ ವಾಣಿಯ ಸಹಕಾರ.

    ವಾಣಿ ಮಾತಾಡುವುದು, ಅದನ್ನು ಭೂಮಿ ಕೈಸನ್ನೆಯಲ್ಲಿ ಅನುವಾದಿಸುವುದು. ವಾಣಿಗೂ ತನ್ನ ಮಾತನ್ನು ಕೇಳಿಸಿಕೊಳ್ಳಲು ಭೂಮಿಯಾದರೂ ಇದ್ದಾಳೆ ಎನ್ನುವ ಸಮಾಧಾನ.

    ಆ ಸಂಜೆ ಮಗಳು ತನ್ವಿಯದು ಎಲ್ಲದಕ್ಕೂ ಒಂದೇ ಸಮ ಹಠ. ಊಟಕ್ಕೆ, ಆಟಕ್ಕೆ ಎಲ್ಲದಕ್ಕೂ ಏನೋ ರಚ್ಚು ರಗಳೆ. ಹಾಗೂ ಹೀಗೂ ಅವಳ ಊಟ ಮುಗಿಸಿ ಮಲಗಿಸಲು ಕರೆದುಕೊಂಡು ಹೋಗುವ ಹೊತ್ತಿಗೆ ಸಾಕುಸಾಕಾಗಿತ್ತು ವಾಣಿಗೆ. ಅಲ್ಲಿ ಮತ್ತೊಂದು ಹಠ. ಈ ಕಥೆ ಶುರು ಮಾಡಿದರೆ ಆ ಕಥೆ ಹೇಳು ಅಂತ, ಆ ಕಥೆ ಶುರು ಮಾಡಿದರೆ ಮತ್ತೊಂದು ಹೇಳು ಅಂತ. ವಾಣಿಯ ತಾಳ್ಮೆ ಮಿತಿಮೀರಿ ಹೋಗಿತ್ತು. ತನ್ವಿ ಒಂದೇ ಸಮ ‘ಆಕು ಆಕು’ ಅನ್ನೋಕ್ಕೆ ಶುರು ಮಾಡಿದಳು. ತನ್ವಿಗೆ ಹಕಾರ ಬೇರೆ ಬರ್ತಿರಲಿಲ್ಲ.

    ‘ಏನಪ್ಪಾ.. ಸೆಖೆನಾ, ಫ್ಯಾನ್ ಹಾಕಬೇಕಾ..?’ ಅಂದ್ರೆ ‘ಅಲ್ಲ ಅಲ್ಲ’ ಅಂತ ಅಳು. ‘ಬೇರೆ ಬಟ್ಟೆ ಹಾಕಬೇಕಾ’ ಅಂದ್ರೆ ಅದಕ್ಕೂ ಅಳು. ಏನನ್ನ ಹಾಕೋಕ್ಕೆ ಹೇಳ್ತಿದಾಳೆ ಅನ್ನೋದೇ ಗೊತ್ತಾಗದೇ ಕಂಗಾಲಾಗಿ ಅಜ್ಜಿ ತಾತ ಎಲ್ಲರೂ ಸಮಾಧಾನ ಮಾಡೋಕ್ಕೆ ಸೋತಿದ್ದರು. ಕೊನೆಗೆ ತಾತ, ‘ಮಗು ಆಗಿಂದಲೂ ಆ ಕಡೆಯೇ ಕೈ ತೋರಿಸ್ತಿದೆ’ ಎಂದು ಅವರ ರೂಮ್ೆ ಕರೆದುಕೊಂಡು ಹೋದರೆ ಮತ್ತದೇ ‘ಆಕು ಆಕು’. ಆಗ ತಾತನಿಗೆ ಬ್ರಹ್ಮಾಂಡವೇ ಹೊಳೆದಂತಾಗಿ, ‘ಓಓಓ…… ವಾಕೂ ನಾ’ ಎಂದರೆ ಒಮ್ಮೆಲೇ ಅಳು ನಿಲ್ಲಿಸಿ ತಲೆ ಅಲ್ಲಾಡಿಸಿ ನಗಲು ಪ್ರಾರಂಭಿಸಿದಳು ತನ್ವಿ.

    ವಾಕೂ ಹೇಳಿದ ಕಥೆ ಕೇಳಿ ತನ್ವಿಯೇನೋ ತಾತನ ಪಕ್ಕದಲ್ಲೇ ಮಲಗಿದಳು. ಆದರೆ ವಾಣಿ..?

    ತನ್ನ ಮಾತನ್ನು ಇನ್ನು ಮಗುವೂ ಕೇಳುವುದಿಲ್ಲವಾ, ತನ್ವಿಗೂ ಅಮ್ಮನಿಗಿಂತ ವಾಕೂ ಮಾತೇ ಹಿತವಾಯಿತೇ? ಇನ್ನು ಮನೆಯಲ್ಲಿ ಯಾರೊಂದಿಗೆ ಮಾತಾಡುವುದು ಅಂತೇನೇನೋ ಯೋಚಿಸಿ ನಿದ್ರೆಯಿಲ್ಲದ ರಾತ್ರಿ ಕಳೆದಳು.

    ಇತ್ತ ಭೂಮಿಯ ಆತ್ಮವಿಶ್ವಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಸಮ್ಮೇಳನಕ್ಕೆ ಸಜ್ಜಾಗುತ್ತಿದ್ದಳು. ಅದೊಂದು ಸಂಜೆ ಯಾವುದೋ ಕೆಲಸದ ಮೇಲೆ ವಾಣಿ ಹೊರಗೆ ಹೋಗಬೇಕಾಗಿ ಬಂದು ತಾಲೀಮಿಗೆ ಬರಲಾಗುವುದಿಲ್ಲ ಎಂದು ಬೆಳಗ್ಗೆಯೇ ತಿಳಿಸಿದ್ದಳು. ಭೂಮಿಯೂ ತಾನೇ ನಿಭಾಯಿಸುವುದಾಗಿ ಹೇಳಿ ತನ್ನ ಪಾಡಿಗೆ ತಾನು ಅಭ್ಯಾಸ ಮಾಡುತ್ತಿದ್ದಳು.

    ಮಾರನೆಯ ದಿನ ಎಂದಿನಂತೆ ಸಂಜೆ, ಭೂಮಿಯ ಮನೆಗೆ ಹೋಗಿ ವಾಣಿ, ‘ಇಂದೇನು ಅಭ್ಯಾಸ, ಏನು ಓದಬೇಕು’ ಎಂದು ಕೇಳಿದರೆ ತನ್ನದೇ ಶೈಲಿಯಲ್ಲಿ ಭೂಮಿ ಹೇಳಿದ್ದೇನೂ ವಾಣಿಗೆ ಅರ್ಥವಾಗಲೇ ಇಲ್ಲ. ದೊಡ್ಡದೊಂದೇನೋ ಸಾಧಿಸಿದಂಥಾ ಖುಷಿಯಲ್ಲಿ ಮೂಲೆಯತ್ತ ಕೈತೋರಿದಾಗ ಅಲ್ಲೂ ಕಂಡದ್ದು ವಾಕೂ. ಕ್ಷಣಾರ್ಧದಲ್ಲಿ ವಾಣಿಗೆ, ‘ಓ ನನ್ನ ಅವಶ್ಯಕತೆ ಇಲ್ಲೂ ಇಲ್ಲ’ವೆಂದು ಅರ್ಥವಾಯಿತು. ವಾಣಿ ಮಾಡುತ್ತಿದ್ದ ಕೆಲಸವನ್ನ ಒಂದೇ ಸಂಜೆಯಲ್ಲಿ ವಾಕೂ ಆಕ್ರಮಿಸಿಕೊಂಡಿತ್ತು. ವಾಣಿಯ ಮಾತಿಗೆ ಭೂಮಿ ಕಿವುಡಾಗಿದ್ದಳು.

    ಮನೆಯ ಎಲ್ಲ ಮೂಲೆಯನ್ನ ವಾಕೂ ಬಲು ಬೇಗ ಆಕ್ರಮಿಸಿಕೊಂಡಿತ್ತು. ಎಲ್ಲಿ ಹೋದರೂ ಅವಳದೇ ಧ್ವನಿ. ಅತ್ತೆ, ಮಾವ, ಗಂಡ, ಮಗು… ಎಲ್ಲರಿಗೂ ವಾಕೂ ಧ್ವನಿಯೇ ಬೇಕು. ಯಾಕಾದರೂ ಈ ಉಡುಗೊರೆ ಕೊಡುವ ಸಲಹೆಯನ್ನು ರವಿಗೆ ಕೊಟ್ಟೆನೋ ಎಂದು ಹಲುಬುತ್ತಿದ್ದಳು.

    ಹೀಗೆ ತಿಂಗಳಾದ ಮೇಲೊಂದು ದಿನ ಮತ್ತೆ ಏಜೆನ್ಸಿಯಿಂದ ಕರೆ ಬಂತು. ‘ಮೇಡಂ, ಪ್ರಾಜೆಕ್ಟ್ನಲ್ಲಿ ಕೆಲವು ಕರೆಕ್ಷನ್​ಗಳು ಬಂದಿವೆ. ಒಂದು ವಾರದೊಳಗೆ ಮತ್ತೆ ಮಾಡಿ ಕಳಿಸಬೇಕು’ ಎಂದು. ಕ್ಲಯೆಂಟ್ ಕಡೆಯಿಂದ ಕರೆಕ್ಷನ್​ಗಳು ಬಂದರೆ ಇಲ್ಲ ಅನ್ನದೇ ಮಾಡಿಕೊಡಬೇಕು ಎಂದು ಮೊದಲೇ ಕರಾರಿನಲ್ಲಿ ಒಪ್ಪಿಗೆಯಾಗಿತ್ತು. ವಾಣಿಗೂ ಅದು ನೆನಪಿತ್ತು.

    ಮತ್ತೆ ಮೂರ್ತಿಗೂ ಕರೆ ಮಾಡಿ, ಸಿದ್ಧತೆಗಳನ್ನ ಮಾಡಿಕೊಂಡು ಅಂದು ಸಂಜೆ ಹೊರಟಳು. ದಾರಿಯುದ್ದಕ್ಕೂ ಸದಾ ವಟ ವಟ ಎನ್ನುತ್ತಿದ್ದ ಮೂರ್ತಿಯೂ ಅಂದು ಮಾತಿಲ್ಲ. ಅವನ ಕಿವಿಯಲ್ಲೂ ವಾಕೂ ಉಲಿಯುತ್ತಿದ್ದಳು ಎಂದು ಗೊತ್ತಾಗಲು ವಾಣಿಗೆ ಹೆಚ್ಚು ಸಮಯ ಬೇಕಾಗಲಿಲ್ಲ.

    ಸ್ಟುಡಿಯೋ ಪ್ರವೇಶಿಸುತ್ತಿದಂತೇ ‘ವೆಲ್ಕಮ್ ಬ್ಯಾಕ್ ಮೇಡಂ’ ಎಂದು ಬರಮಾಡಿಕೊಂಡಾಗ ಮತ್ತೆ ತನ್ನ ಪ್ರಪಂಚಕ್ಕೆ, ತನ್ನ ಮಾತನ್ನು ಕೇಳುವ ಕಿವಿಗಳಿರುವ ಪ್ರಪಂಚಕ್ಕೆ ಬಂದಂತಾಯಿತು ವಾಣಿಗೆ.

    ‘ಏನಿದೆ ಕರೆಕ್ಷನ್ಸ್’ ಎಂದು ಕೇಳುವ ಹೊತ್ತಿಗೇ ಆ ಕಡೆಯಿಂದ ಸೌಂಡ್ ಎಂಜಿನಿಯರ್, ‘ಹೆಚ್ಚೇನಿಲ್ಲ ಮೇಡಂ, ಒಂದಿನ್ನೂರು ವಾಕ್ಯಗಳು ಬಂದಿವೆ. ಕನ್ನಡದಲ್ಲೇ ಅತಿ ಕಡಿಮೆ ವಾಕ್ಯಗಳು ಕರೆಕ್ಷನ್​ಗೆ ಬಂದಿರೋದು’ ಎಂದ. ಮುಂದಿದ್ದ ಟಿವಿ ಪರದೆಯಲ್ಲಿ ಒಂದೊಂದೇ ಸಾಲುಗಳು ಬರಲಾರಂಭಿಸಿದವು. ಹೆಡ್ ಫೋನನ್ನು ಮುಡಿಗೇರಿಸಿಕೊಂಡು ವಾಣಿ ಮತ್ತೆ ವಾಕೂಗೆ ದನಿಯಾದಳು.

    ಒಂದು ಕಿಲೋಮೀಟರ್ ಮುಂದೆ ಹೋಗಿ ಬಲಕ್ಕೆ ತಿರುಗಿ. ಇಂದು ನಡೆದ ಕ್ರಿಕೆಟ್ ಮ್ಯಾಚ್​ನಲ್ಲಿ ಭಾರತ ನಾಲ್ಕು ವಿಕೆಟ್​ಗಳಿಂದ ಗೆದ್ದಿದೆ. ನಾಕುತಂತಿ.. ಇದು ದ.ರಾ. ಬೇಂದ್ರೆಯವರ ಕವನಸಂಕಲನ.

    | ರಂಜನೀ ಕೀರ್ತಿ, ಕಥೆಗಾರ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts