More

    ಆಧಾರ್​ ಅಪ್​ಡೇಟ್​ಗೆ ಮುಗಿಬಿದ್ದ ಜನ

    ಗ್ಯಾರಂಟಿ ಯೋಜನೆಗೆ ಕಡ್ಡಾಯ : ತಿದ್ದುಪಡಿಗೆ ಮೊರೆ ಹೋದ ಸಾರ್ವಜನಿಕರು

    ಬೂದಿಕೋಟೆ: ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳನ್ನು ಪಡೆಯಲು ಆಧಾರ್​ ಕಾರ್ಡ್​ನದ್ದೇ ದೊಡ್ಡ ಸಮಸ್ಯೆಯಾಗಿದೆ. ಕಾರ್ಡ್​ ಅಪಡೇಟ್​ಗಳಿಗಾಗಿ ನಾಡ ಕಚೇರಿಗಳಿಗೆ ನಿತ್ಯ ಅಲೆದಾಡಬೇಕಾದ ಪರಿಸ್ಥಿತಿ ಎದುರಾಗಿದೆ.
    ರಾಜ್ಯ ಕಾಂಗ್ರೆಸ್​ ಸರ್ಕಾರ ಚುನಾವಣೆ ಪೂರ್ವದಲ್ಲಿ ೂಷಣೆ ಮಾಡಿದಂತೆ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ. ಆದರೆ ಅವುಗಳನ್ನು ದಕ್ಕಿಸಿಕೊಳ್ಳಲು ಜನಸಾಮಾನ್ಯರಿಗೆ ಒಂದಲ್ಲಾ ಒಂದು ಸಮಸ್ಯೆ ಎದುರಾಗುತ್ತಿದೆ. ಇದರಲ್ಲಿ ಬಹುಮುಖ್ಯವಾಗಿ ಆಧಾರ್​ ಅಪ್​ಡೇಟ್​ ಮಾಡುವುದೇ ತಲೆನೋವಾಗಿದೆ. ಈ ಹಿಂದೆ ಕಾರ್ಡ್​ಗಳನ್ನು ಮಾಡಿಸುವಾಗ ಸೇವಾ ಪ್ರತಿನಿಧಿಗಳು ಜನ್ಮದಿನಾಂಕ, ಮೊಬೈಲ್​ ಸಂಖ್ಯೆ, ಹೆಸರು ಇತ್ಯಾದಿಗಳನ್ನು ಇಷ್ಟಬಂದಂತೆ ನಮೂದಿಸಿದ್ದಾರೆ. ಇಷ್ಟು ದಿನ ಅದರ ಸಮಸ್ಯೆಗೊತ್ತಾಗಿರಲಿಲ್ಲ. ಆದರೆ ಈಗ ಪಂಚ ಗ್ಯಾರಂಟಿಗಳನ್ನು ಪಡೆಯಲು ಹೋದಾಗ ಅದರ ಅರಿವಾಗುತ್ತಿದೆ.
    ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಸೇವಾಸಿಂಧು, ಗ್ರಾಮ ಒನ್​ ಕೇಂದ್ರಗಳಿಗೆ ಹೋದಾಗ ಮೊಬೈಲ್​ಗೆ ಒಟಿಪಿ ಬರದೆ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಮೊದಲನೇ ಯೋಜನೆ ಗೃಹಜ್ಯೋತಿಗೆ ಅರ್ಜಿ ಸಲ್ಲಿಸಲು ಆಧಾರ್​ ಸಂಖ್ಯೆಗೆ ಲಿಂಕ್​ ಆಗಿರುವ ಮೊಬೈಲ್​ಗೆ ಬರುವಂತಹ ಒಟಿಪಿಯನ್ನು ಸೇವಾಸಿಂಧು ಪೋರ್ಟಲ್​ನಲ್ಲಿ ಅಪ್​ಲೋಡ್​ ಮಾಡಬೇಕಿದೆ. ಸರ್ಕಾರದ ಎರಡನೇ ಯೋಜನೆ 5 ಕೆಜಿ ಅಕ್ಕಿ ಬದಲಿಗೆ ನಗದು ನೇರವಾಗಿ ಫಲಾನುಭವಿ ಬ್ಯಾಂಕ್​ ಖಾತೆಗೆ ಜಮೆ ಆಗಲಿದೆ. ಇದಕ್ಕೂ ಬ್ಯಾಂಕ್​ನಲ್ಲಿ ಖಾತೆಗೆ ಆಧಾರ್​ ಸಂಖ್ಯೆ ಜೋಡಣೆ ಆಗಿರಲೇಬೇಕು. ಇಲ್ಲವಾದರೆ ಸರ್ಕಾರದಿಂದ ಡಿಬಿಟಿ ಮೂಲಕ ಬರುವ ಹಣ ಖಾತೆಗೆ ಜಮೆ ಆಗುವುದಿಲ್ಲ. ಸರಿಯಾಗಿ ಕೆವೈಸಿ ಆಗದ ಕಾರಣ ಬಹಳಷ್ಟು ಜನರು ಅಕ್ಕಿ ಬದಲಾಗಿ ಹಣ ಪಡೆಯಲು ಸಾಧ್ಯವಾಗಿಲ್ಲ.
    ಇನ್ನು ಗೃಹಲಕ್ಷ್ಮೀ ಯೋಜನೆಗೂ ಕಡ್ಡಾಯವಾಗಿ ಆಧಾರ್​ ಬೇಕಾಗಿದೆ. ಕಾರ್ಡ್​ನಲ್ಲಿ ಮೊಬೈಲ್​ ನಂಬರ್​ ತಪ್ಪಾಗಿದ್ದರೆ ಅಥವಾ ಆಧಾರ್​ನಲ್ಲಿ ನಮೂದಾಗಿರುವ ಮೊಬೈಲ್​ ಸಂಖ್ಯೆ ಕಳೆದುಹೋಗಿದ್ದರೆ ಯೋಜನೆ ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಲು ಜನ ಆಧಾರ್​ ಸೇವಾ ಕೇಂದ್ರಗಳು ಮತ್ತು ನಾಡಕಚೇರಿಗಳ ಮೊರೆ ಹೋಗಿದ್ದಾರೆ. ಕೇಂದ್ರಗಳಲ್ಲಿ ನಿತ್ಯ ಹೆಚ್ಚು ಜನ ಬರುತ್ತಿರುವ ಕಾರಣ ತಿದ್ದುಪಡಿಗಾಗಿ ಕೆಲಸ ಕಾರ್ಯ ಬಿಟ್ಟು ದಿನಪೂರ್ತಿ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಇತ್ತ ಆಧಾರ್​ ಕೇಂದ್ರಗಳಲ್ಲಿ ಆಗಾಗ ಸರ್ವರ್​ ಸೇರಿ ಇತರ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಆಧಾರ್​ ತಿದ್ದುಪಡಿ ಮಾಡಿಸಿದರೂ ಅಪ್​ಡೇಟ್​ ಆಗಲು ನಾಲ್ಕೈದು ದಿನಗಳಿಗೂ ಮೇಲ್ಪಟ್ಟು ಸಮಯ ಬೇಕಾಗಿದೆ. ಅದು ಅಪ್​ಡೇಟ್​ ಆಗುವ ತನಕ ಯೋಜನೆ
    ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಿಲ್ಲದೆ ಕಾಯಬೇಕಿದೆ.
    ಆಧಾರ್​ ಕಾರ್ಡ್​ಗಳ ತಿದ್ದುಪಡಿಗೆ ಹೆಚ್ಚು ಜನ ಬರುತ್ತಿರುವ ಕಾರಣದಿಂದ ಸಾಮಾಜಿಕ ಭದ್ರತೆಯ ವಿವಿಧ ಪಿಂಚಣಿ ಯೋಜನೆಗಳಿಗೆ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಸೇರಿ ಇತರ ದಾಖಲಾತಿಗಳನ್ನು
    ಪಡೆಯಲು ಸಾಧ್ಯವಾಗುತ್ತಿಲ್ಲ.
    ಈಗಾಗಲೇ ಸರ್ಕಾರ ಮೂರು ಯೋಜನೆಗಳಿಗೆ ದಾಖಲೆಗಳನ್ನು ಒದಗಿಸಲು ನಾಗರಿಕರು ಹರಸಾಹಸಪಟ್ಟಿದ್ದಾರೆ. ಮುಂದಿನ ಇನ್ನೆರಡು ಯೋಜನೆಗಳಿಗೆ ಸರ್ಕಾರ ಯಾವ ದಾಖಲೆಗಳನ್ನು ಕೇಳುತ್ತದೆಯೋ ಅವುಗಳನ್ನು ಒದಗಿಸಲು ಎಷ್ಟು ಪರದಾಡಬೇಕಾಗುತ್ತದೆಯೋ ಏನೋ !

    ಸರ್ಕಾರ ನಿಗದಿ ಮಾಡುವ ಮಾನದಂಡಕ್ಕೆ ತಕ್ಕಂತೆ ದಾಖಲೆ ಸಲ್ಲಿಸಬೇಕು. ಪ್ರತಿ ಹೋಬಳಿಯಲ್ಲೂ ಒಂದೊಂದು ಆಧಾರ್​ ಕಾರ್ಡ್​ ಆಪರೇಟರ್​ ಇದ್ದು, ಜನರಿಗೆ ಅನುಕೂಲವಾಗುವ ರೀತಿ ಟೋಕನ್​ ಕೊಟ್ಟು ಸದ್ಯಕ್ಕೆ ನಿಭಾಯಿಸುತ್ತಿದ್ದಾರೆ. ಆಧಾರ್​ ತಿದ್ದುಪಡಿಗೆ ಆನ್​ಲೈನ್​ ನಲ್ಲಿ ಅವಕಾಶವಿರುವ ಕಾರಣ ನಾಡಕಚೇರಿಗೆ ಬರುವ ಬದಲು ಮನೆಯಲ್ಲಿಯೇ ತಿದ್ದುಪಡಿ ಮಾಡಿಕೊಳ್ಳಬಹುದು. ಯಾವುದೇ ಡೇಟಾ ತಿದ್ದುಪಡಿ ಮಾಡಬೇಕಾದಲ್ಲಿ ಗೆಜೆಟೆಡ್​ ಆಫೀಸರ್​ ಸಿಗ್ನೇಚರ್​ ತೆಗೆದುಕೊಂಡು ಕೂಡ ಮಾಡಬಹುದು.

    | ರಶ್ಮಿ ತಹಸೀಲ್ದಾರ್​ ಬಂಗಾರಪೇಟೆ

    ಸರ್ಕಾರದ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಆಧಾರ್​ ಕಾರ್ಡ್​ನದ್ದೇ ಸಮಸ್ಯೆಯಾಗಿದೆ. ಗೃಹಲಕ್ಷಿ$್ಮ ಯೋಜನೆಗೆ ಅರ್ಜಿ ಸಲ್ಲಿಸಲು ಆಧಾರ್​ ಸಂಖ್ಯೆಗೆ ಲಿಂಕ್​ ಆಗಿರುವ ಮೊಬೈಲ್​ ಸಂಖ್ಯೆಗೆ ಒಟಿಪಿ ಬರುತ್ತದೆ. ಆದರೆ ಆಧಾರ್​ ಚೀಟಿಯಲ್ಲಿ ನಮೂದಾಗಿದ್ದ ಮೊಬೈಲ್​ ನಂಬರ್​ ಕಳೆದುಹೋಗಿದೆ. ಈಗ ಆಧಾರ್​ಗೆ ಹೊಸ ನಂಬರ್​ ಸೇರಿಸಿ ಅಪ್​ಡೇಟ್​ ಮಾಡಿದ ಬಳಿಕ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಇದೆಲ್ಲ ಆಗಲು ಕನಿಷ್ಠ ವಾರಕ್ಕೂ ಮೇಲ್ಪಟ್ಟು ಸಮಯ ತೆಗೆದುಕೊಳ್ಳಲಿದೆ. ಯೋಜನೆಗಳನ್ನು ಪಡೆಯಲಿಕ್ಕೆ ಸರ್ಕಾರ ನಿಬಂಧನೆಗಳನ್ನು ಸಡಿಲ ಮಾಡಬೇಕು.

    | ಕಾಂಚನಾ ಕಾಮಸಮುದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts