More

    ಸೇನೆ ಸೇರಲು ಆಧಾರ್ ಕಿರಿಕಿರಿ

    ಅವಿನ್ ಶೆಟ್ಟಿ ಉಡುಪಿ
    ಉಡುಪಿಯಲ್ಲಿ ಏ.4ರಿಂದ 14ರವರೆಗೆ ಸೇನಾ ನೇಮಕಾತಿ ರ‌್ಯಾಲಿ ನಡೆಯಲಿದ್ದು, ನೋಂದಣಿಗೆ ಅಭ್ಯರ್ಥಿಗಳಿಗೆ ಆಧಾರ್ ಕಾರ್ಡ್ ಡಾಟಾ ಹೊಂದಾಣಿಕೆ ಆಗದಿರುವುದು ಸಮಸ್ಯೆಯೊಡ್ಡುತ್ತಿದೆ.

    ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಗದಗ, ಹಾವೇರಿ ಜಿಲ್ಲೆಯ ಅಭ್ಯರ್ಥಿಗಳು ರ‌್ಯಾಲಿಯಲ್ಲಿ ಸೇನೆ ಸೇರಲು ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಆನ್‌ಲೈನ್ ಮೂಲಕ ಮಾ.20ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, 15 ಸಾವಿರಕ್ಕೂ ಅಧಿಕ ಮಂದಿ ನೋಂದಾಯಿಸಿಕೊಂಡಿದ್ದಾರೆ. ಇನ್ನೂ ಬಹುತೇಕ ಮಂದಿ ಆಧಾರ್ ಕಾರ್ಡ್ ಡಾಟಾ ಹೊಂದಿಕೆಯಾಗದೆ ನೋಂದಣಿಯಿಂದ ವಂಚಿತರಾಗುವ ಆತಂಕದಲ್ಲಿದ್ದಾರೆ.
    ರ‌್ಯಾಲಿಯಲ್ಲಿ ಪಾಲ್ಗೋಳ್ಳುವ ಮುನ್ನ ‘ಜಾಯಿನ್ ಇಂಡಿಯನ್ ಆರ್ಮಿ’ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳುವಾಗ ಆಧಾರ್ ಕಾರ್ಡ್ ನಂಬರ್‌ಗಳನ್ನು ನಮೂದಿಸಿ, ಎಸ್ಸೆಸ್ಸೆಲ್ಸಿ ಅಂಕಪಟ್ಟಿಯಲ್ಲಿರುವ ಸ್ವವಿವರ ದಾಖಲಿಸಬೇಕು. ಎಲ್ಲ ವಿವರಗಳನ್ನು ಸೇರಿಸಿ ಸಲ್ಲಿಕೆ ಮಾಡುವಾಗ ‘ಆಧಾರ್ ಕಾರ್ಡ್ ಡಾಟಾ ಮ್ಯಾಚ್ ಆಗುತ್ತಿಲ್ಲ’ ಎಂಬ ಬರಹ ಕಂಪ್ಯೂಟರ್ ಪರದೆ ಮೇಲೆ ಕಾಣಿಸಿಕೊಳ್ಳುತ್ತದೆ. ಈ ಕಾರಣದಿಂದ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುತ್ತಿಲ್ಲ.

    ಕಾರಣ ಏನು ?; ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಮತ್ತು ಆಧಾರ್ ಕಾರ್ಡ್‌ನಲ್ಲಿ ಹೆಸರು, ಇನಿಶಿಯಲ್ ವ್ಯತ್ಯಾಸ ಇದ್ದಲ್ಲಿ ಆಧಾರ್ ಕಾರ್ಡ್ ಡಾಟಾ ಮ್ಯಾಚ್ ಆಗದಿರುವ ಸಾಧ್ಯತೆಯಿದೆ. ಕ್ಯಾಪಿಟಲ್, ಸ್ಮಾಲ್ ಲೆಟರ್ ವ್ಯತ್ಯಾಸ ಇದ್ದರೂ ಡಾಟಾ ಮ್ಯಾಚ್ ಆಗದಿರಬಹುದು. ಕೆಲವರು ಎಸ್ಸೆಸ್ಸೆಲ್ಸಿ ಅಂಕಪಟ್ಟಿ ವಿವರ ಗಮನಿಸದೆ ಇನಿಶಿಯಲ್, ಸರ್‌ನೇಮ್ ವ್ಯತ್ಯಾಸ ಮಾಡಿ ಆಧಾರ್ ಮಾಡಿಸಿದಲ್ಲಿ ಈ ರೀತಿ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

    ಏನು ಮಾಡಬೇಕೆಂಬ ಗೊಂದಲ: ಸೇನೆ ನೇಮಕಾತಿ ರ‌್ಯಾಲಿಗೆ ನೋಂದಣಿ ಮಾಡಿಕೊಳ್ಳಲು ಆಧಾರ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಇಲ್ಲದವರು ಎಂಬ ಅವಕಾಶ ಕಲ್ಪಿಸಲಾಗಿದೆ. ನಾನ್ ಬಟನ್ ಕ್ಲಿಕ್ ಮಾಡಿದರೆ ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಮೂಲಕ ವಿವರಗಳನ್ನು ದಾಖಲಿಸಿ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಆಧಾರ್ ಕಾರ್ಡ್ ಇದ್ದವರು ನಾನ್(ಆಧಾರ್ ಇಲ್ಲ ಎಂದು) ಬಟನ್ ಕ್ಲಿಕ್ಕಿಸಿ ನೋಂದಣಿ ಮಾಡಿಕೊಳ್ಳುವುದು ಸಮ್ಮತವೆ? ಪರಿಗಣನೆಗೆ ಒಳಪಡುತ್ತದೆಯೋ? ಎಂಬ ಗೊಂದಲ ಅಭ್ಯರ್ಥಿಗಳಲ್ಲಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೂ ಸರಿಯಾದ ಮಾಹಿತಿ ಇಲ್ಲ.

    ಅಡ್ಮಿಟ್ ಕಾರ್ಡ್ ಕಡ್ಡಾಯ: ರ‌್ಯಾಲಿ ಸಂದರ್ಭ ದೈಹಿಕ ಪರೀಕ್ಷೆ, ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ನಡೆಯುತ್ತದೆ. ರ‌್ಯಾಲಿಯ ದಿನ ಅಭ್ಯರ್ಥಿಗಳಿಗೆ ಬೆಳಗ್ಗಿನ ಉಪಾಹಾರ, ತಂಗುವ ವ್ಯವಸ್ಥೆ, ಶೌಚಗೃಹ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುತ್ತದೆ. 17ರಿಂದ 23 ವರ್ಷ ಒಳಗಿನ ಅವಿವಾಹಿತ ಯುವಕರಿಗೆ ಮಾತ್ರ ಅವಕಾಶ. 8, 10ನೇ ತರಗತಿ, ಪಿಯುಸಿ, ಪದವೀಧರರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದವರಿಗೆ ಮಾತ್ರ ರ‌್ಯಾಲಿಯಲ್ಲಿ ಭಾಗವಹಿಸಲು ಅವಕಾಶವಿದೆ. ಅಡ್ಮಿಟ್ ಕಾರ್ಡ್ ಕಡ್ಡಾಯವಾಗಿದ್ದು, ಮಾರ್ಚ್ 24ರಂದು ಡೌನ್‌ಲೋಡ್ ಮಾಡಿಕೊಳ್ಳಬೇಕು.

     ನೋಂದಣಿ ಸಮಸ್ಯೆ ಬಗ್ಗೆ ಸೈನ್ಯ ನೇಮಕಾತಿ ರ‌್ಯಾಲಿ ಅಧಿಕಾರಿಗಳೊಡನೆ ಮಾತುಕತೆ ನಡೆಸಲಾಗಿದೆ. ಅವರು ಹೇಳುವಂತೆ ಆಧಾರ್ ಕಾರ್ಡ್ ವಿವರಗಳನ್ನು ನಮೂದಿಸಿಯೇ ನೋಂದಣಿ ಮಾಡಿಕೊಳ್ಳಬೇಕು. ಡೇಟಾ ಹೊಂದಾಣಿಕೆಯಂತರಹ ತಾಂತ್ರಿಕ ಸಮಸ್ಯೆ ಎದುರಾದಲ್ಲಿ ಮಂಗಳೂರು ಸೇನಾ ನೇಮಕಾತಿ ವಿಭಾಗ ಕಚೇರಿಗೆ ಆಗಮಿಸಿ ಸರಿಪಡಿಸಿಕೊಳ್ಳಲು ಅವಕಾಶ ಇದೆ ಎಂದು ತಿಳಿಸಿದ್ದಾರೆ. ಈ ರೀತಿ ಸಮಸ್ಯೆಯಾಗಿರುವ ಅಭ್ಯರ್ಥಿಗಳು ಮಂಗಳೂರು ಸೇನಾ ನೇಮಕಾತಿ ವಿಭಾಗ ಕಚೇರಿ ಸಂಪರ್ಕಿಸಬಹುದು.
    ಸದಾಶಿವ ಪ್ರಭು ಅಪರ ಜಿಲ್ಲಾಧಿಕಾರಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts