More

    ಚಾಲನಾ ಪರವಾನಗಿ ಆನ್​ಲೈನ್ ನವೀಕರಣಕ್ಕೆ ಆಧಾರ್

    ನವದೆಹಲಿ: ವಾಹನ ಚಾಲನಾ ಪರವಾನಗಿ (ಡಿಎಲ್)ಯನ್ನು ಆನ್​ಲೈನ್ ಮೂಲಕ ನವೀಕರಿಸಿಕೊಳ್ಳಲು ಆಧಾರ್ ಸಂಖ್ಯೆಯ ದೃಢೀಕರಣ ಅಗತ್ಯ. ವಾಹನ ಕಲಿಕಾ ಪರವಾನಗಿ (ಎಲ್​ಎಲ್​ಆರ್), ವಿಳಾಸ ಬದಲಾವಣೆ, ವಾಹನ ನೋಂದಣಿ ಪ್ರಮಾಣಪತ್ರ (ಆರ್​ಸಿ) ಅಂತಾರಾಷ್ಟ್ರೀಯ ಡಿಎಲ್, ವಾಹನದ ಮಾಲೀಕತ್ವದ ವರ್ಗಾವಣೆ ಸೇರಿ 16 ಸೇವೆಗಳನ್ನು ಆನ್​ಲೈನ್ ಮೂಲಕ ಸಾರಿಗೆ ಇಲಾಖೆಯಿಂದ ಪಡೆಯುವುದಕ್ಕೂ ಆಧಾರ್ ದೃಢೀಕರಣ ಬೇಕು ಎಂದು ಕೇಂದ್ರ ಸಾರಿಗೆ ಸಚಿವಾಲಯ ತಿಳಿಸಿದೆ.

    ಯಾವುದೇ ವ್ಯಕ್ತಿ ಸಾರಿಗೆ ಇಲಾಖೆಯ ಆನ್​ಲೈನ್ ಪೋರ್ಟಲ್ ಮೂಲಕ ಸೇವೆ ಪಡೆಯಲು ಆಧಾರ್ ದೃಢೀಕರಣ ಅಗತ್ಯವೆಂದು ಕರಡು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಆಧಾರ್ ಕಾರ್ಡ್ ಹೊಂದಿಲ್ಲದವರು ಆಧಾರ್ ನೋಂದಣಿಯ ಸಂಖ್ಯೆಯನ್ನು ನೀಡಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಆಧಾರ್ ಸಂಖ್ಯೆ ನೀಡಲು ಇಚ್ಛಿಸದವರು ಖುದ್ದಾಗಿ ಸಾರಿಗೆ ಇಲಾಖೆಯ ಕಚೇರಿಗೆ (ಆರ್​ಟಿಒ) ಭೇಟಿ ಸೇವೆ ಪಡೆಯಬಹುದು ಎಂದು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

    ಆಧಾರ್ ದೃಢೀಕರಣದಿಂದ ನಕಲಿ ದಾಖಲೆಗಳನ್ನು ತಡೆಯಲು ಸಾಧ್ಯ ಮತ್ತು ಒಬ್ಬ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಡಿಎಲ್ ಹೊಂದಿರುವುದು ರಸ್ತೆ ಸುರಕ್ಷತೆಗೆ ಅಪಾಯ ತರಬಹುದು. ಇತ್ತೀಚಿನ ದಿನಗಳಲ್ಲಿ ಆನ್​ಲೈನ್ ಮೂಲಕವೇ ಸೇವೆ ಪಡೆಯಲು ಬಯಸುವವರ ಸಂಖ್ಯೆ ಹೆಚ್ಚುತ್ತಿದೆ. ಇಂಥದಕ್ಕೆ ರಾಜ್ಯ ಸರ್ಕಾರಗಳೂ ಉತ್ತೇಜನ ನೀಡಬೇಕಿದೆ. ಆನ್​ಲೈನ್ ಮೂಲಕ ಸೇವೆ ಒದಗಿಸುವುದರಿಂದ ಆರ್​ಟಿಒ ಕಚೇರಿಗಳಲ್ಲಿ ಜನಜಂಗುಳಿ ಗಣನೀಯವಾಗಿ ತಗ್ಗುತ್ತದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. ಒಳ್ಳೆಯ ಆಡಳಿತದ ನಿಯಮದ ಅನ್ವಯ ರೂಪಿಸಿರುವ ಈ ಕರಡು ಆದೇಶದ ಬಗ್ಗೆ ಸಾರ್ವಜನಿಕರು ಮತ್ತು ಸಂಬಂಧಿಸಿದವರಿಂದ ಸಲಹೆ ಕೋರಲಾಗಿದೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts