More

    ಆ ಕ್ಷಣ- ಭಾಗ 2| ಶಿಕ್ಷೆಯಾದರೂ ಸುಧಾರಿಸದ ನಟಿ

    ಮನೋರ್ ಬಳಿಯ ಅರಣ್ಯದಲ್ಲಿ ಖನ್ನಾನ ದೇಹದ ಭಾಗಗಳು ಭಸ್ಮವಾಗುವುದನ್ನು ಕೆಲಕಾಲ ಅವಲೋಕಿಸಿದ ಜೂಲಿ ಮತ್ತು ಜೋಸೆಫ್ ಮುಂಬೈಗೆ ಮರಳುವಾಗ ಹಾದಿಯ ಡಾಬಾವೊಂದರಲ್ಲಿ ಊಟ ಮಾಡಿ ರಾತ್ರಿ 1ರ ಸುಮಾರಿಗೆ ಜೂಲಿಯ ಫ್ಲಾಟ್​ಗೆ ವಾಪಸಾದರು. ಆನಂತರ ಇಬ್ಬರೂ ಬೆಡ್​ರೂಂ ಮತ್ತು ಬಾತ್ ರೂಂಗಳಲ್ಲಿದ್ದ ರಕ್ತದ ಕಲೆಗಳನ್ನು ತೆಗೆದು ಸ್ವಚ್ಛ ಮಾಡಿದರು. ನಡೆದ ಘಟನೆಯನ್ನು ಯಾರ ಮುಂದೆಯೂ ಬಾಯಿಬಿಡಬಾರದೆಂದು ಜೂಲಿಗೆ ತಾಕೀತು ಮಾಡಿದ ಜೋಸೆಫ್ ಯಾರಾದರೂ ಖನ್ನಾ ಎಲ್ಲಿ ಎಂದು ಕೇಳಿದರೆ ಗೊತ್ತಿಲ್ಲವೆಂದು ಹೇಳಬೇಕೆಂದು ಸೂಚಿಸಿ ಮಧ್ಯಾಹ್ನ ವಿಮಾನದಲ್ಲಿ ಚೆನ್ನೈಗೆ ವಾಪಸಾದ.

    ಮೇ 8ರ ಸಂಜೆ ಖನ್ನಾನ ತಂದೆ ಜೂಲಿಗೆ ಕರೆ ಮಾಡಿ ದಿನೇಶ್ ನಿನ್ನ ಮನೆಗೆ ಬಂದಿದ್ದಾನೆಯೇ ಎಂದು ವಿಚಾರಿಸಿದರು. ಅವನನ್ನು ಕಂಡು ಎರಡು ದಿನಗಳಾದವು ಎಂದು ಜೂಲಿ ಉತ್ತರಿಸಿದಾಗ, ದಿನೇಶ್ ಮನೆಗೆ ಮೂರು ದಿನಗಳಿಂದ ಬಂದಿಲ್ಲ, ಎಲ್ಲಿದ್ದಾನೆಯೋ ಗೊತ್ತಿಲ್ಲ, ಅವನ ಫೋನು ಸ್ವಿಚ್ ಆಫ್ ಆಗಿದೆ ಎಂದು ಹೇಳಿ ಪೊಲೀಸ್ ದೂರು ಕೊಡುವುದಾಗಿ ತಿಳಿಸಿದರು. ತಾನೂ ಬರುವೆನೆಂದು ಹೇಳಿದ ಜೂಲಿ ಖನ್ನಾನ ಸಂಬಂಧಿಕರ ಜೊತೆ ಮಲಾಡ್ ಠಾಣೆಗೆ ಹೋಗಿ ದೂರನ್ನು ಕೊಟ್ಟಳು. ಕಾಣೆಯಾದ ಪ್ರಕರಣ ದಾಖಲಿಸಿದ ಪೊಲೀಸರು ಖನ್ನಾನಿಗಾಗಿ ಎಲ್ಲೆಡೆ ಹುಡುಕಾಟ ನಡೆಸತೊಡಗಿದರು. ಖನ್ನಾನ ಸೆಲ್ ಫೋನ್​ನ ಕಾಲ್ ರೆಕಾರ್ಡ್ ತೆಗೆಸಿದಾಗ ಮೇ 7ರ ಬೆಳಿಗ್ಗೆ ಅದು ಮಲಾಡ್ ಪ್ರದೇಶದಲ್ಲಿಯೇ ಇದ್ದು ಸುಮಾರು 9 ಗಂಟೆಗೆ ಆಫ್ ಆಗಿದ್ದು ಅದೇ ರಾತ್ರಿ 10.20ಕ್ಕೆ ಕೇವಲ 15 ಸೆಕೆಂಡುಗಳವರೆಗೆ ಮತ್ತೆ ಸ್ವಿಚ್ ಆನ್ ಅಗಿದ್ದು ಆನಂತರ ಆಫ್ ಆಗಿರುವುದಾಗಿ ತಿಳಿದು ಬಂದಿತು. ಫೋನನ್ನು ಉತ್ತರಿಸಿದ್ದ ಜಾಗವಾವುದು ಮತ್ತು ಯಾವ ನಂಬರಿನಿಂದ ಕರೆ ಬಂದಿತ್ತು ಎಂದು ಪೊಲೀಸರು ಟೆಲಿಫೋನ್ ಕಂಪನಿಯನ್ನು ಕೇಳಿದಾಗ, ಮೇ 7ರ ರಾತ್ರಿ ಫೋನ್ ಚಾಲೂ ಆದಾಗ ಮನೋರ್ ಪಟ್ಟಣದ ಬಳಿ ಇದ್ದಿತೆಂದು ತಿಳಿಯಿತು. ರಾತ್ರಿ ಖನ್ನಾನ ಫೋನಿಗೆ ಕರೆ ಮಾಡಿದ ನಂಬರ್ ವಿನೋದ್ ಎನ್ನುವವನದೆಂದು ತಿಳಿಸಿತು. ವಿನೋದನನ್ನು ಪೊಲೀಸರು ಪ್ರಶ್ನಿಸಿದಾಗ ಆತ ತಾನು ಖನ್ನಾನ ಸ್ನೇಹಿತನೆಂದು ಹೇಳಿ, ಆ ರಾತ್ರಿ ತಾನು ಕರೆಮಾಡಿದಾಗ ಫೋನನ್ನು ಖನ್ನಾನ ಗೆಳತಿ ಜೂಲಿ ಉತ್ತರಿಸಿ ಆತ ಹೊರಗೆ ಹೋಗಿದ್ದಾನೆ ಎಂದಷ್ಟೇ ಹೇಳಿ ಕೂಡಲೇ ಫೋನ್ ಕಟ್ ಮಾಡಿದಳೆಂದು ತಿಳಿಸಿದ.

    ಈ ಮಾಹಿತಿಯ ಮೇರೆಗೆ ಅನುಮಾನದ ಸೂಜಿ ಜೂಲಿಯತ್ತ ಹೊರಳಿತು. ಆದರೆ ಅವಳೇ ದೂರು ನೀಡಿದ್ದ ಕಾರಣ ಕೂಡಲೇ ಠಾಣೆಗೆ ಕರೆಸದೆ ಪೊಲೀಸರು ಅವಳು ವಾಸಿಸುತ್ತಿದ್ದ ಫ್ಲಾಟ್ ಸಮುಚ್ಚಯದ ಸೆಕ್ಯೂರಿಟಿ ಗಾರ್ಡ್​ಗಳನ್ನು ಪ್ರಶ್ನಿಸಿದರು. ಮೇ 7 ರ ರಾತ್ರಿ ಜೂಲಿ ಯಾವುದೋ ಪುರುಷನ ಜತೆಗೆ ಸ್ಯಾಂಟ್ರೋ ಕಾರಿನಲ್ಲಿ ಹೋದದ್ದಾಗಿ ತಿಳಿಸಿದ ಗಾರ್ಡಗಳು ಅವರಿಬ್ಬರೂ ತಮ್ಮೊಡನೆ ತುಂಬಿದ ಪ್ಲಾಸ್ಟಿಕ್ ಬ್ಯಾಗುಗಳನ್ನು ಒಯ್ದದ್ದಾಗಿ ತಿಳಿಸಿದರು. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಜೂಲಿ ಮತ್ತು ಜೋಸೆಫ್ ನಾಲ್ಕು ಬ್ಯಾಗುಗಳನ್ನು ಹಿಡಿದು ಹೋದದ್ದು ದಾಖಲಾಗಿದ್ದಲ್ಲದೆ ಆ ಕಾರಿನ ನೋಂದಣಿ ಸಂಖ್ಯೆ ಸಹ ಕ್ಯಾಮರಾದಲ್ಲಿ ಮೂಡಿ ಬಂದಿತ್ತು. ಈ ಕುರುಹಿನ ಮೇರೆಗೆ ಕಾರಿನ ಮಾಲೀಕ ಕಿರಣ್​ನನ್ನು ಪ್ರಶ್ನಿಸಿದಾಗ ಆತ ತಾನು ಸಿನಿಮಾ ನೃತ್ಯ ನಿರ್ದೇಶಕನ ಸಹಾಯಕನಾಗಿದ್ದು, ಜೂಲಿ ತನ್ನ ಗೆಳತಿಯೆಂದು ತಿಳಿಸಿದ. ಮೇ 7 ರ ಸಂಜೆ ಜೂಲಿ ಸ್ನೇಹಿತನೊಬ್ಬನ ಜತೆಗೆ ಬಂದು ತನ್ನ ಕಾರನ್ನು ಒಂದು ದಿನದ ಮಟ್ಟಿಗೆ ಎರವಲು ಪಡೆದು, ಮಾರನೆಯ ದಿನವೇ ಕಾರನ್ನು ವಾಪಸ್ ಮಾಡಿದ್ದಾಗಿ ಹೇಳಿದ. ಪೊಲೀಸರು ಆ ಕಾರನ್ನು ಪರೀಕ್ಷೆಗಾಗಿ ಪ್ರಯೋಗಶಾಲೆಗೆ ಕಳುಹಿಸಿದರು.

    ಆನಂತರ ಜೂಲಿಯ ಟೆಲಿಫೋನ್​ನ ಕಾಲ್ ರೆಕಾರ್ಡ್​ಗಳನ್ನು ಪರಿಶೀಲಿಸಿದಾಗ ಆಕೆಗೆ ಮೇ ತಿಂಗಳ 8ರಿಂದ 20 ರವರೆಗೆ ಒಂದೇ ನಂಬರಿನಿಂದ ಸುಮಾರು 1000 ಕರೆಗಳು ಬಂದಿದ್ದಾಗಿ ತಿಳಿಯಿತು. ಆ ನಂಬರ್ ಚೆನ್ನೈನಲ್ಲಿರುವ ಸೇನಾಧಿಕಾರಿ ಜೋಸೆಫ್​ಗೆ ಸೇರಿದ್ದಾಗಿ ತಿಳಿಯಿತು. ಆತನನ್ನು ಸಂರ್ಪಸಿದಾಗ ಜೂಲಿಯನ್ನು ತಾನು ಲಗ್ನವಾಗುತ್ತಿರುವುದಾಗಿ ತಿಳಿಸಿ ಆ ಕಾರಣದಿಂದಲೇ ಅವಳಿಗೆ ಪದೇಪದೆ ಕರೆ ಮಾಡಿದೆ, ತಪ್ಪೇನು ಎಂದು ಉತ್ತರಿಸಿದ. ಆದರೆ ಅನುಮಾನಗೊಂಡ ಪೊಲೀಸರು ಅವನ ಮೇಲಾಧಿಕಾರಿಗಳನ್ನು ವಿಚಾರಿಸಿದಾಗ ಜೋಸೆಫ್ ಮೇ 6 ರಿಂದ 8 ರ ವರೆಗೆ ಕೆಲಸಕ್ಕೆ ಅನಧಿಕೃತವಾಗಿ ಗೈರುಹಾಜರಾದ ಕಾರಣ ಅವನನ್ನು ಸೇವೆಯಿಂದ ಅಮಾನತು ಮಾಡಿರುವುದಾಗಿ ತಿಳಿದು ಬಂದಿತು. ಮುಂಬೈ ಪೊಲೀಸರ ತಂಡವೊಂದು ಚೆನ್ನೈಗೆ ಹೋಗಿ ಅವನನ್ನು ಮುಂಬೈಗೆ ಕರೆತಂದಿತು.

    ಏತನ್ಮಧ್ಯೆ ಖನ್ನಾನ ಕೊಲೆಯನ್ನು ಜೋಸೆಫ್ ಮಾಡಿದ್ದಾಗಿ ತಿಳಿಸಿದ ಜೂಲಿ ಕೊಲೆಯ ವಿವರಗಳನ್ನು ನೀಡಿದಳು. ತಾನು ಕೇವಲ ಪ್ರತ್ಯಕ್ಷದರ್ಶಿಯೆಂದು ತಿಳಿಸಿದ ಆಕೆ ಖನ್ನಾನ ದೇಹವನ್ನು ಕತ್ತರಿಸಿದ ಚಾಕುವನ್ನು ಅಪಾರ್ಟ್​ವೆುಂಟಿನ ದೊಡ್ಡ ಕಸದ ತೊಟ್ಟಿಗೆ ಹಾಕಿದ್ದಾಗಿ ತಿಳಿಸಿದಳು. ಮೇ 22 ರಂದು ಜೂಲಿಯನ್ನು ಬಂಧಿಸಿ ಅವಳ ಫ್ಲಾಟನ್ನು ಪರಿಶೀಲಿಸಿದಾಗ ಗೋಡೆಗೆ ಹತ್ತಿದ್ದ ರಕ್ತದ ಕಲೆಗಳನ್ನು ಅಳಿಸಲು ಪ್ರಯತ್ನ ಮಾಡಿದ್ದು ಗೋಚರಿಸಿತು. ಆಕೆ ಎಸೆದಿದ್ದ ಚಾಕುವನ್ನು ಕಸದ ತೊಟ್ಟಿಯಿಂದ ವಶಪಡಿಸಿಕೊಂಡು ವಿಧಿವಿಜ್ಞಾನ ಪ್ರಯೋಗಶಾಲೆಗೆ ಕಳಿಸಲಾಯಿತು. ಚಾಕುವಿನ ಮೇಲಿದ್ದ ರಕ್ತದ ಕಲೆಗಳು ಮತ್ತು ಕಾರಿನ ಡಿಕ್ಕಿಯಲ್ಲಿ ಸಿಕ್ಕ ರಕ್ತದ ಕಲೆಗಳು ಖನ್ನಾನ ಡಿ.ಎನ್.ಎ ಜತೆಗೆ ಹೋಲಿಕೆಯಾಗುವುದು ಸಾಬೀತಾಯಿತು. ತಾನು ಜೂಲಿಯನ್ನು ಚಿಕ್ಕಂದಿನಿಂದಲೂ ಪ್ರೇಮಿಸುತ್ತಿದ್ದು ಅದೇ ವರ್ಷದ ಜುಲೈ ತಿಂಗಳಲ್ಲಿ ವಿವಾಹದ ನಿಶ್ಚಿತಾರ್ಥ ಮಾಡಿಕೊಳ್ಳಲು ಉದ್ದೇಶಿಸಿದ್ದಾಗಿಯೂ ಏತನ್ಮಧ್ಯೆ ಖನ್ನಾ ಜೂಲಿಯನ್ನು ಬುಟ್ಟಿಗೆ ಹಾಕಿಕೊಂಡು ದೈಹಿಕ ಸಂಪರ್ಕ ಬೆಳೆಸಿದ್ದು ತನಗೆ ಸಿಟ್ಟು ಬರಿಸಿತ್ತೆಂದೂ ಜೋಸೆಫ್ ಹೇಳಿದ. ಮೇ 6ರ ರಾತ್ರಿ ಜೂಲಿಗೆ ಫೋನ್ ಮಾಡಿದಾಗ ಖನ್ನಾನ ಮಾತುಗಳು ಕಿವಿಗೆ ಬಿದ್ದವೆಂದೂ ಅವರಿಬ್ಬರನ್ನೂ ಹಿಡಿಯುವ ಉದ್ದೇಶದಿಂದಲೇ ತಾನು ಅದೇ ರಾತ್ರಿಯೇ ಯಾರಿಗೂ ಹೇಳದೇ 7ರ ಮುಂಜಾನೆ 4 ಗಂಟೆಗೇ ಮುಂಬೈ ವಿಮಾನ ಹಿಡಿದು ಜೂಲಿಯ ಮನೆಗೆ ಆಗಮಿಸಿದ್ದಾಗಿ ತಿಳಿಸಿದ. ಅವನಿಂದ ವಿಮಾನ ಪ್ರಯಾಣದ ಬೋರ್ಡಿಂಗ್ ಪಾಸುಗಳನ್ನು ವಶಪಡಿಸಿಕೊಳ್ಳಲಾಯಿತು. ಆನಂತರ ಅವರಿಬ್ಬರೂ ಪೊಲೀಸರನ್ನು ಮನೋರ್ ಬಳಿಯ ಅರಣ್ಯಕ್ಕೆ ಕರೆದುಕೊಂಡು ಹೋಗಿ ಖನ್ನಾನ ದೇಹದ ಭಾಗಗಳನ್ನು ಎಸೆದು ಸುಟ್ಟಿದ್ದ ಜಾಗವನ್ನು ತೋರಿಸಿದರು. ಸುಡದೇ ಉಳಿದಿದ್ದ ಕೆಲವು ಎಲುಬುಗಳನ್ನು ಪೊಲೀಸರು ಡಿ.ಎನ್.ಎ ಪರೀಕ್ಷೆಗೆ ಗುರಿಪಡಿಸಿದಾಗ ಅವು ಖನ್ನಾನದೇ ಎಂದು ಸಾಬೀತಾಯಿತು.

    ಜೂಲಿ ತಪ್ಪೊಪ್ಪಿಗೆ ಹೇಳಿಕೆ ನೀಡುವುದಾಗಿ ಹೇಳಿದ ಮೇರೆಗೆ ಅಕೆಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟರ ಮುಂದೆ ಮಾಡಿಸಲಾಯಿತು. ಜೂಲಿಯ ತಪ್ಪೊಪ್ಪಿಗೆ ಹೇಳಿಕೆ ಮತ್ತು ಸಾಂರ್ದಭಿಕ ಸಾಕ್ಷ್ಯಗಳ ಆಧಾರದ ಮೇರೆಗೆ ಇಬ್ಬರ ವಿರುದ್ಧವೂ ಖನ್ನಾನ ಕೊಲೆ ಮಾಡಿ ತತ್ಸಂಬಂಧದ ಸಾಕ್ಷ್ಯನಾಶದ ಆರೋಪ ಹೊರೆಸಿ ಸೆಷನ್ಸ್ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಯಿತು. ಸುದೀರ್ಘ ವಿಚಾರಣೆಯಲ್ಲಿ ನ್ಯಾಯಾಧೀಶರು ದಿನೇಶ್ ಖನ್ನಾನ ಕೊಲೆ ಯಾವ ಸಮಯದಲ್ಲಾಗಿದೆ ಎಂದು ಪೊಲೀಸರು ನಿರ್ಧರಿಸಲು ವಿಫಲರಾಗಿದ್ದು ಜೂಲಿಗೆ ಖನ್ನಾನನ್ನು ಕೊಲ್ಲಲು ಯಾವುದೇ ಕಾರಣವಿರಲಿಲ್ಲ, ಆಕೆಯ ಮೇಲೆ ಕೊಲೆ ಆರೋಪ ಸಾಬೀತಾಗಿಲ್ಲ ಎಂದು ನಿರ್ಧರಿಸಿದರು. ಜೋಸೆಫ್​ನ ಮೇಲೆ ಕೊಲೆ ಆರೋಪ ಸಾಬೀತಾಗದೇ ಮಾನವಹತ್ಯೆ (ಪೂರ್ವಯೋಜಿತವಲ್ಲದ ಕೊಲೆ-ಅಂದರೆ ಕೊಲೆ ಮಾಡಬೇಕೆಂಬ ಉದ್ದೇಶದಿಂದಲೇ ತಯಾರಿ ಮಾಡಿಕೊಂಡು ಬಂದಿದ್ದು) ಆರೋಪವು ಸಾಬೀತಾಗಿದೆ ಎಂದು ತಿಳಿಸಿದ ನ್ಯಾಯಾಧೀಶರು ಇಬ್ಬರೂ ಆರೋಪಿಗಳು ಸಾಕ್ಷ್ಯನಾಶ ಮಾಡಿದ್ದಾರೆ ಎಂದು ತೀರ್ವನಿಸಿ ಜೂಲಿಗೆ ಮೂರು ವರ್ಷ ಕಾರಾಗೃಹದ ಶಿಕ್ಷೆಯನ್ನು 2011 ರ ಜುಲೈ ತಿಂಗಳಲ್ಲಿ ನೀಡಿದರು. ಜೋಸೆಫ್​ಗೆ ಮಾನವಹತ್ಯೆ ಮತ್ತು ಸಾಕ್ಷ್ಯನಾಶಕ್ಕಾಗಿ ಹತ್ತು ವರ್ಷಗಳ ಕಾರಾಗೃಹ ಶಿಕ್ಷೆ ನೀಡಿದರು. ವಿಚಾರಣಾ ಕೈದಿಯಾಗಿ ಜೂಲಿ ಮೂರು ವರ್ಷ ಕಾರಾಗೃಹದಲ್ಲಿ ಕಳೆದಿದ್ದ ಕಾರಣ ಆಕೆಯನ್ನು ಕೂಡಲೇ ಬಿಡುಗಡೆ ಮಾಡಲಾಯಿತು. ಜೋಸೆಫ್ ಹೈಕೋರ್ಟಿಗೆ ಸಲ್ಲಿಸಿದ ಮೇಲ್ಮನವಿ ತಿರಸ್ಕೃತವಾಯಿತು. ಆತ ಹತ್ತು ವರ್ಷ ಸೆರೆವಾಸ ಅನುಭವಿಸಿ 2018 ರಲ್ಲಿ ಬಿಡುಗಡೆ ಹೊಂದಿದ.

    ಏತನ್ಮಧ್ಯೆ ಜೂಲಿ ಕಾರಾಗೃಹದಲ್ಲಿದ್ದಾಗ ಅಮಿತಾ ಮತ್ತು ಪರೋಮಿತಾ ಎಂಬ ಇಬ್ಬರು ಮಹಿಳಾ ಕೈದಿಗಳನ್ನು ಪರಿಚಯ ಮಾಡಿಕೊಂಡಿದ್ದಳು. ಅವರಿಬ್ಬರೂ ಜೈಲಿನಿಂದ ಬಿಡುಗಡೆ ಹೊಂದಿದ ನಂತರ ಅವರ ಸಂಪರ್ಕ ಮಾಡಿ ಅವರ ಜೊತೆ ಟ್ರಾವಲ್ ಏಜೆನ್ಸಿ ತೆಗೆದಳು. 2015ರ ಅಕ್ಟೋಬರ್​ನಲ್ಲಿ ಬರೋಡಾದ ಪೊಲೀಸರು ಹಜ್ ಯಾತ್ರಿಗಳಿಗೆ ಎರಡು ಕೋಟಿ ರೂಗಳಿಗೂ ಮೇಲ್ಪಟ್ಟು ವಂಚಿಸಿದ ಆರೋಪದಲ್ಲಿ ಅವಳನ್ನು ಬಂಧಿಸಿದರು. ಇದಲ್ಲದೇ 2019ರಲ್ಲಿ ಮುಂಬೈ ಪೊಲೀಸರೂ ಕೋಟ್ಯಂತರ ರೂಪಾಯಿಗಳ ಮೋಸ ಮಾಡಿದ ಆರೋಪದ ಮೇರೆಗೆ ಜೂಲಿಯ ವಿರುದ್ಧ ಏಳು ಪ್ರಕರಣಗಳನ್ನು ದಾಖಲಿಸಿದರು. ಆ ಎಲ್ಲ ಪ್ರಕರಣಗಳು ಇನ್ನೂ ವಿಚಾರಣೆಯಲ್ಲಿವೆ. ಜೂಲಿಯ ಜೀವನದ ಮೇಲೆ ಚಿತ್ರವೊಂದೂ ತಯಾರಾಗಿದೆ. ರಾಜ್ಯದ ಸಣ್ಣ ಪಟ್ಟಣವೊಂದರ ನಿವಾಸಿ ಸಿನಿಮಾ ಹೀರೋಯಿನ್ ಆಗಿ ಖ್ಯಾತಿಗಳಿಸುವ ಬದಲು ಅಪರಾಧಿಯಾಗಿ ಕುಖ್ಯಾತಿ ಗಳಿಸಿದಳು.

    ‘ದ್ವೇಷರೋಷಗಳೊಡೆ ನೇಹಮುಂ ಮೋಹಮುಂ ಪಾಶವಾಗಲ್ಬಹುದು ನಿನಗೆ ಮೈಮರೆಸಿ, ವಾಸನೆಗಳು ಚಿತ್ತಜ್ವರಂಗಳ ಬಿತ್ತಿ ಮೋಸದಲಿ ಕೊಲ್ಲುವುವೋ ಮಂಕುತಿಮ್ಮ’ ಎಂಬ ಡಿವಿಜಿಯವರ ನುಡಿಗಳು ಜೂಲಿ ಹಾಗೂ ಜೋಸೆಫ್​ರ ಮಟ್ಟಿಗಂತೂ ನಿಜವಾದವು.
    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts