More

    ಓವರ್‌ಟೇಕ್ ಮಾಡಿದ್ದಕ್ಕೆ ಯುವಕನ ಕೊಲೆ

    ಯಲ್ಲಾಪುರ: ಜಾತ್ರೆಗೆ ಹೊರಟಿದ್ದ ಯುವಕನೊಬ್ಬನನ್ನು ಯುವಕರ ಗುಂಪೊಂದು ಹೊಡೆದು ಕೊಲೆ ಮಾಡಿದ ಘಟನೆ ತಾಲೂಕಿನ ಹುಣಶೆಟ್ಟಿಕೊಪ್ಪದಲ್ಲಿ ಶನಿವಾರ ರಾತ್ರಿ ನಡೆದಿದೆ.

    ಹಳಿಯಾಳ ತಾಲೂಕಿನ ಗುಂಡೊಳ್ಳಿ ಕಾಮತಿಕೊಪ್ಪದ ಪ್ರಜ್ವಲ್ ಪ್ರಕಾಶ ಕಕ್ಕೇರಿ (24) ಕೊಲೆಯಾದ ಯುವಕ. ಈತ ತನ್ನ ಸಹೋದರ ಉಜ್ವಲ ಪ್ರಕಾಶ ಕಕ್ಕೇರಿ ಹಾಗೂ ಗೆಳೆಯ ವೆಲಿಸ್ಟನ್ ವಿಲ್ಸನ್ ಗುತ್ತಿಕಾರ ಅವರೊಂದಿಗೆ ಬೈಕ್ ಮೇಲೆ ಹಳಿಯಾಳದಿಂದ ಹುಣಶೆಟ್ಟಿಕೊಪ್ಪದ ಜಾತ್ರೆಗೆ ಬರುತ್ತಿದ್ದರು. ಯಲ್ಲಾಪುರಕ್ಕೆ ಬಂದು ಅಲ್ಲಿಂದ ಮುಂಡಗೋಡ ರಸ್ತೆಯ ಮೂಲಕ ಹುಣಶೆಟ್ಟಿಕೊಪ್ಪಕ್ಕೆ ಹೋಗುವಾಗ ಕುಚಗಾಂವ ಕ್ರಾಸ್ ಬಳಿ ಬೈಕೊಂದನ್ನು ಓವರ್ ಟೇಕ್ ಮಾಡಿದ್ದಾರೆ. ಮುಂದೆ ಹೋಗಿ ರಸ್ತೆ ಪಕ್ಕ ಬೈಕ್ ನಿಲ್ಲಿಸಿದಾಗ ಓವರ್ ಟೇಕ್ ಮಾಡಿದ ಬೈಕ್, ಇನ್ನೊಂದು ಬೈಕ್ ಹಾಗೂ ಕಾರಿನಲ್ಲಿ ಬಂದ 6 ಜನರು ಪ್ರಜ್ವಲ್ ಮೇಲೆ ಹಲ್ಲೆ ಮಾಡಿದ್ದಾರೆ.

    ಇದನ್ನು ತಪ್ಪಿಸಲು ಹೋದ ಉಜ್ವಲ್ ಹಾಗೂ ವೆಲಿಸ್ಟಿನ್‌ಗೆ ಬೆದರಿಕೆ ಹಾಕಿ, ಅಲ್ಲಿಂದ ನಾಪತ್ತೆಯಾಗಿದ್ದಾರೆ. ಗಾಯಗೊಂಡ ಪ್ರಜ್ವಲ್ನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದ.

    ಹಲ್ಲೆ ಮಾಡಿ ಕೊಲೆ ಮಾಡಿದ ಹುಣಶೆಟ್ಟಿಕೊಪ್ಪದ ಸಾಣಾ ಮರಾಠಿ, ರಿತೇಶ ಪಾಟೀಲ, ಪಾಂಡುರಂಗ ಕಳಸೂರಕರ, ಪ್ರಶಾಂತ ಕಳಸೂರಕರ, ರೂಪೇಶ ಹಾಗೂ ಶಾಸಕ ಶಿವರಾಮ ಹೆಬ್ಬಾರ ಆಪ್ತ ವಿಜಯ ಮಿರಾಶಿ ಅವರ ಪುತ್ರ ಅನಿಕೇತ ಮಿರಾಶಿ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ನ್ಯಾಯಕ್ಕಾಗಿ ಆಗ್ರಹ

    ಕೊಲೆ ಆರೋಪಿಗಳನ್ನು ಬಂಧಿಸದ ಹೊರತು, ಕೊಲೆಯಾದ ವ್ಯಕ್ತಿಯ ಶವವನ್ನು ತೆಗೆದುಕೊಳ್ಳುವುದಿಲ್ಲ ಎಂದು ಸಿದ್ದಿ ಅಭಿವೃದ್ಧಿ ಸಮಿತಿಯ ರಾಜ್ಯ ಅಧ್ಯಕ್ಷ ಬೆನಿತ್ ಸಿದ್ದಿ ಎಚ್ಚರಿಸಿದ್ದಾರೆ.

    ಪಟ್ಟಣದ ಪೊಲೀಸ್ ಠಾಣೆಯ ಎದುರು ಮಾಧ್ಯಮದವರೊಂದಿಗೆ ಭಾನುವಾರ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸಿದ್ದಿ ಸಮುದಾಯದವರ ಮೇಲೆ ಅನ್ಯಾಯ, ದೌರ್ಜನ್ಯ ಹೆಚ್ಚುತ್ತಿದೆ. ರಸ್ತೆಯಲ್ಲಿ ಕೇವಲ ಓವರ್‌ಟೇಕ್ ಮಾಡಿದ ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯನ್ನು ಕೊಲೆ ಮಾಡುತ್ತಾರೆಂದರೆ, ಇವರನ್ನು ಹೇಳುವವರು, ಕೇಳುವವರು ಇಲ್ಲವೇ? ಇವರೇನು ಕಾನೂನು ಮೀರಿದವರೇ? ಎಂದು ಪ್ರಶ್ನಿಸಿದರು.

    ಕೊಲೆಯ ಘಟನೆಯನ್ನು ಇಡೀ ಸಮಾಜ ಖಂಡಿಸುತ್ತದೆ. ನ್ಯಾಯ ಸಿಗುವವರೆಗೂ ಹೋರಾಟ ಮಾಡಲು ನಿರ್ಧರಿಸಿದ್ದೇವೆ. ಆರೋಪಿಗಳು ಎಷ್ಟೇ ದೊಡ್ಡ ಹಿನ್ನೆಲೆ ಹೊಂದಿದರೂ ಅವರನ್ನು ಬಂಧಿಸಿ ನ್ಯಾಯ ಕೊಡಿಸುವ ಕೆಲಸವನ್ನು ಪೊಲೀಸರು ಮಾಡಬೇಕೆಂದು ಆಗ್ರಹಿಸಿದರು.

    ಮೃತ ಯುವಕನ ತಂದೆ ಪ್ರಕಾಶ ಕಕ್ಕೇರಿ ಮಾತನಾಡಿ, ಮಗ ಗೆಳೆಯರೊಂದಿಗೆ ಜಾತ್ರೆಗೆ ಬಂದಿದ್ದ. ಅವನು ಯಾರ ತಂಟೆಗೂ ಹೋಗುವವನಲ್ಲ. ಆದಾಗ್ಯೂ ಅನ್ಯಾಯವಾಗಿ ಕೊಲೆ ಮಾಡಿದ್ದಾರೆ. ಅವನ ಸಾವಿಗೆ ನ್ಯಾಯ ದೊರಕಬೇಕು ಎಂದು ಒತ್ತಾಯಿಸಿದರು.

    ಸಿದ್ದಿ ಅಭಿವೃದ್ಧಿ ಸಂಘದ ರಾಜ್ಯ ಗೌರವಾಧ್ಯಕ್ಷ ಜಾನ್ ಕೊಸ್ತಾ ಸಿದ್ದಿ, ಸಿದ್ದಿ ಬುಡಕಟ್ಟು ಜನಾಂಗದ ಕಾರ್ಯದರ್ಶಿ ಮೇರಿ ಗರಿಬಾಚೆ, ಸಿದ್ದಿ ಪ್ರಮುಖರಾದ ಬಾಬು ಸಿದ್ದಿ, ಜ್ಯೂಲಿಯಾನ ಫರ್ನಾಂಡಿಸ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts