More

    ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವುದಷ್ಟೆ ಮುಖ್ಯವಲ್ಲ


    ಮಡಿಕೇರಿ: ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವುದಷ್ಟೇ ಮುಖ್ಯವಾಗುವುದಿಲ್ಲ, ಕೌಶಲ ಬೆಳವಣಿಯೂ ಅಷ್ಟೇ ಮುಖ್ಯವಾಗಿರುತ್ತದೆ ಎಂದು ಹಾಸನ ಆಕಾಶವಾಣಿಯ ನಿವೃತ್ತ ಆಡಳಿತಾಧಿಕಾರಿ ಎಂ.ಶಿವಕುಮಾರ್ ಅಭಿಪ್ರಾಯಪಟ್ಟರು.


    ಶನಿವಾರಸಂತೆ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ಗುರುಕುಲ ಸಂಕ್ರಮಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


    ಇಂದು ಗ್ರಾಮೀಣ ಭಾಗದಲ್ಲೂ ಆಂಗ್ಲ ಮಾಧ್ಯಮ ಶಾಲೆಗಳಿದ್ದು, ವಿದ್ಯಾರ್ಥಿಗಳು ಆಂಗ್ಲ ಭಾಷೆಯನ್ನು ಕಲಿಯುತ್ತಿದ್ದಾರೆ. ಇದರ ಜತೆಯಲ್ಲೂ ಮಾತೃಭಾಷೆಯಾದ ಕನ್ನಡ ಭಾಷೆಗೂ ಹೆಚ್ಚಿನ ಆದ್ಯತೆ ನೀಡಬೇಕು. ಕನ್ನಡ ದೇಶದ ಹೆಮ್ಮೆಯ ಭಾಷೆಯಾಗಿದ್ದು, ಈ ಕಾರಣದಿಂದಲೇ ಕರ್ನಾಟಕದ 8 ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟಿದೆ ಎಂದರು.


    ನಮ್ಮಲ್ಲಿ ಶಿಕ್ಷಣ ಪಡೆದ ಅನೇಕ ಜನರು ದೊಡ್ಡ ದೊಡ್ಡ ಸಾಧಕರಿದ್ದಾರೆ. ಈ ನಿಟ್ಟಿನಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಇಂದು ಎಲ್ಲರಲ್ಲೂ ಉತ್ತಮ ಅಂಕ ಗಳಿಸಿದರೆ ಮಾತ್ರ ಉದ್ಯೋಗ ಸಿಗುತ್ತದೆ ಎಂಬ ಮನೋಭಾವನೆ ಇದೆ. ಆದರೆ ಉತ್ತಮ ಅಂಕವೊಂದಿದ್ದರೆ ಸಾಲದು, ಕೌಶಲ ಕ್ರಿಯಾಶೀಲತೆಯೂ ಇರಬೇಕಾಗುತ್ತದೆ ಎಂದರು.


    ಹಾಸನ ಜಿಲ್ಲಾ ಕಸಾಪ ಕಾರ್ಯದರ್ಶಿ ಜಾವಗಲ್ ಪ್ರಸನ್ನ ಕುಮಾರ್ ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗೆ ಕೇವಲ ವಿದ್ಯಾಭ್ಯಾಸ ಕೊಡಿಸಿದರೆ ಸಾಕಾಗುವುದಿಲ್ಲ. ಇದರ ಜತೆಯಲ್ಲಿ ಸಂಸ್ಕಾರವನ್ನು ಕಲಿಸಿಕೊಡಬೇಕು. ವಿದ್ಯಾವಂತರಲ್ಲಿ ಸಂಸ್ಕಾರ ಇದ್ದರೆ ಮಾತ್ರ ಸಂಸ್ಕಾರ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ. ವಿದ್ಯಾಭ್ಯಾಸ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕನ್ನಡ ಭಾಷೆಗೆ ಹೆಚ್ಚಿನ ಒತ್ತು ಕೊಡಬೇಕು. ಇದರಿಂದ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಯಾಗುತ್ತದೆ ಎಂದು ಸಲಹೆ ನೀಡಿದರು.


    ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಡಿ.ಸುಜಲಾದೇವಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸುಮನಾ ರಾಣಿ ಹಾಜರಿದ್ದರು.
    ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಾಮಾಯಣದಲ್ಲಿ ಬರುವ ಸೀತಾಪಹರಣದಿಂದ ರಾವಣನನ್ನು ಶ್ರೀರಾಮ ಸಂಹಾರ ಮಾಡುವ ಕಥಾಹಂದರವನ್ನು ವಿದ್ಯಾರ್ಥಿಗಳು ನೃತ್ಯರೂಪಕದಲ್ಲಿ ಪ್ರದರ್ಶಿಸಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts