More

    ನೀರು ಹರಿಸಿದರೆ ನಿಮ್ಮೆದುರು ನಾನು ಚುನಾವಣೆಗೆ ಸ್ಪರ್ಧಿಸಲ್ಲ: ಸುರೇಶ್​ಗೌಡಗೆ ಶಾಸಕ ಗೌರಿಶಂಕರ್ ಸವಾಲು

    ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ಬಿಜೆಪಿ ಮುಖಂಡ ಬಿ.ಸುರೇಶ್​ಗೌಡ ಮುನಿಸಿಕೊಂಡಿರುವ ನಡುವೆಯೇ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ಪ್ರಕರಣ ಸಂಬಂಧ ಸಚಿವ ಮಾಧುಸ್ವಾಮಿ ಅವರನ್ನು ಸಮರ್ಥಿಸಿಕೊಂಡು ಸುದ್ದಿಗೋಷ್ಠಿ ನಡೆಸಿದ್ದು ರಾಜಕೀಯ ಆರೋಪ, ಪ್ರತ್ಯಾರೋಪಗಳಿಗೆ ವೇದಿಕೆ ಸೃಷ್ಟಿಯಾದಂತಾಗಿದೆ.

    ನಗರದ ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌರಿಶಂಕರ್, ತುಮಕೂರು ಗ್ರಾಮೀಣ ಕ್ಷೇತ್ರಕ್ಕೆ ಹರಿಯಬೇಕಿರುವ 972 ಎಂಸಿಎಫ್​ಟಿ ನೀರು ಹರಿಸಿದರೆ ನಾನು ನಿಮ್ಮ ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ನೀರು ಹರಿಸದಿದ್ದರೆ ಕ್ಷೇತ್ರ ಬಿಟ್ಟು ಹೋಗುತ್ತೀರಾ ಎಂದು ಸುರೇಶ್​ಗೌಡಗೆ ಸವಾಲೆಸೆದರು.

    ಸಿಎಂ ಬಸವರಾಜ ಬೊಮ್ಮಾಯಿ ಆಗಲಿ ಅಥವಾ ಸಚಿವ ಗೋವಿಂದ ಕಾರಜೋಳ ಅವರಿಂದಾದರೂ ಸರಿಯೇ ಗ್ರಾಮಾಂತರಕ್ಕೆ ನೀರು ಹರಿಸಿದರೆ ನಾನು ನಿಮ್ಮ ಮುಂದೆ ಸ್ಪರ್ಧಿಸುವುದಿಲ್ಲ ಎಂದು ಗೌರಿಶಂಕರ್​ ಸವಾಲು ಹಾಕಿದರು.

    ನಮ್ಮ ಕ್ಷೇತ್ರಕ್ಕೆ ಬೆಂಗಳೂರು ಭಾಗದ ವೃಷಭಾವತಿ ನದಿಯಿಂದ ನೀರು ಪೂರೈಸಲು 500 ಕೋಟಿ ರೂ. ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

    ಹೆಬ್ಬೂರು-ಗೂಳೂರು ಏತ ನೀರಾವರಿ ಯೋಜನೆ ಅವೈಜ್ಞಾನಿಕ ಎಂಬ ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆ ಶೇ.100 ಸತ್ಯವಾಗಿದೆ. ಇದೇ ಮಾತನ್ನು 2 ವರ್ಷಗಳ ಹಿಂದೆ ನಾನೂ ಹೇಳಿದ್ದೆ ಎಂದರು.

    ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಹೆಬ್ಬೂರು ವ್ಯಾಪ್ತಿಯ 13 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು 4.32 ಕೋಟಿ ಖರ್ಚು ಮಾಡಿ, 2014-15ರಲ್ಲಿ 5 ಎಂಸಿಎಫ್​ಟಿಯಷ್ಟು ನೀರು ಹರಿದಿದ್ದು, ಉಳಿದ ನಾಲ್ಕು ವರ್ಷಗಳಲ್ಲಿ ಈ ಕೆರೆಗೆ ಒಂದು ಹನಿ ನೀರನ್ನು ಹರಿಸಿಲ್ಲ. ಹೀಗಾಗಿ ಈ ಯೋಜನೆ ಹಣ ಖರ್ಚಾಗಿದ್ದು, ಯೋಜನೆ ಠುಸ್ ಎಂದಿದೆ ಎಂದರು.

    ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಹಾಲನೂರು ಅನಂತಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ರಾಮಚಂದ್ರಪ್ಪ, ಮುಖಂಡ ವಿಜಯಕುಮಾರ್, ಹಿರೇಹಳ್ಳಿ ಮಹೇಶ್, ಮಂಜುನಾಥ್ ಇದ್ದರು.

    ಮುತ್ಸದ್ಧಿ ರಾಜಕಾರಣಿ ಜೆ.ಸಿ.ಮಾಧುಸ್ವಾಮಿ ಅವರ ದೂರದೃಷ್ಟಿಯ ಫಲವಾಗಿ ವೃಷಭಾವತಿ ನದಿಯಿಂದ 82 ಕೆರೆಗಳಿಗೆ ನೀರು ಹರಿಸಲು ಡಿಪಿಆರ್ ಆಗಿದ್ದು, ತುಮಕೂರು ಗ್ರಾಮಾಂತರ ಕ್ಷೇತ್ರದ 25 ಕೆರೆಗಳು ಇದರಲ್ಲಿ ಸೇರಿದೆ. ಯೋಜನೆ ಪೂರ್ಣಗೊಂಡರೆ ಈ ಭಾಗದ ಜನರ ನೀರಿನ ಸಮಸ್ಯೆಯೇ ಇಲ್ಲವಾಗಲಿದೆ, ಮಾಜಿ ಶಾಸಕ ಬಿ.ಸುರೇಶಗೌಡ ರಾಜಕೀಯ ಕಾರಣಕ್ಕೆ ಈ ಉದ್ದೇಶಿತ ಯೋಜನೆಗೆ ಅಡ್ಡಗಾಲು ಹಾಕಿ ಕೆಲಸ ಕೆಡಿಸಬಾರದು.
    | ಡಿ.ಸಿ.ಗೌರಿಶಂಕರ್ ಶಾಸಕ

    ಏತನೀರಾವರಿ ಯೋಜನೆ ಅವೈಜ್ಞಾನಿಕ ?: 2008-09ರಲ್ಲಿ ಈ ಯೋಜನೆಗಾಗಿ 60 ಕೋಟಿ ರೂ. ವೆಚ್ಚದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಏತನೀರಾವರಿ ಮೂಲಕ ಈ ಭಾಗದ 49 ಕೆರೆಗಳಿಗೆ ನೀರು ತುಂಬಿಸಲು ಯೋಜನೆ ರೂಪಿಸಲಾಗಿದೆ. 243.32 ಎಂಸಿಎಫ್​ಟಿ ನೀರು ನಿಗದಿಯಾಗಿತ್ತು. ಈ ಭಾಗಕ್ಕೆ ಪೂರ್ಣ ಪ್ರಮಾಣದಲ್ಲಿ ನೀರು ಪೂರೈಸಲು 972.59 ಎಂಸಿಎಫ್​ಟಿ ನೀರಿನ ಅಗತ್ಯವಿದೆ, ಇದು ಪೂರೈಕೆಯಾಗಲು ಈಗಿರುವ ವ್ಯವಸ್ಥೆಯಿಂದ ಸಾಧ್ಯವಿಲ್ಲ. ಹಾಗಾಗಿ, ಇದೊಂದು ಅವೈಜ್ಞಾನಿಕ ಯೋಜನೆ ಎಂದು ಡಿ.ಸಿ.ಗೌರಿಶಂಕರ್ ಹೇಳಿದರು.

    2014-15ನೇ ಸಾಲಿನಲ್ಲಿ 22 ಕೆರೆಗಳಿಗೆ ಮೊದಲು ನೀರು ಹರಿಸಲಾಗಿದ್ದು, ಇದೇ ಬಿ.ಸುರೇಶ್​ಗೌಡ ಶಾಸಕರಾಗಿದ್ದರು. 2015-16ನೇ ಸಾಲಿನಲ್ಲಿ 182.95, 2016-17ರಲ್ಲಿ 55.03, 2017-18ರಲ್ಲಿ 43.02 ಸೇರಿ ಒಟ್ಟು 581 ಎಂಸಿಎಫ್​ಟಿ ನೀರು ಹರಿಸಲಾಗಿದೆ. ನಾನು ಶಾಸಕನಾಗಿದ್ದ ಅವಧಿಯಲ್ಲಿ 2018-19ರಲ್ಲಿ 142.99, 2019-20ರಲ್ಲಿ 142.86, 2020-21ರಲ್ಲಿ 205.32, 2021-22ನೇ ಸಾಲಿನಲ್ಲಿ ಅಕ್ಟೋಬರ್ 17ರವರೆಗೆ 149.67 ಎಂಸಿಎಫ್​ಟಿ ನೀರು ಹರಿದಿದೆ. 210 ಎಂಸಿಎಫ್​ಟಿ ನೀರು ಹರಿಸುವ ಸಾಧ್ಯತೆಯಿದೆ. ಕಳೆದ ಮೂರು ವರ್ಷದ ಅವಧಿಯಲ್ಲಿ 639 ಎಂಸಿಎಫ್​ಟಿ ನೀರು ಹರಿಸಿದ್ದೇನೆ ಎಂದು ಅಂಕಿ, ಅಂಶ ಸಮೇತ ಶಾಸಕ ಡಿ.ಸಿ.ಗೌರಿಶಂಕರ್ ಹರಿಹಾಯ್ದರು.

    ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕೆ ನೈಜ ಕಾರಣ ಬಿಚ್ಚಿಟ್ಟ ಸುರೇಶ್​ಗೌಡ

    ಥೂ, ಇವನೆಂಥಾ ಕಾಮುಕ? ಸ್ಕ್ಯಾನಿಂಗ್ ಸೆಂಟರ್​ನ ಶೌಚಗೃಹದಲ್ಲಿ ಹೀಗಾ ಮಾಡೋದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts