More

    ಇಂದಿನಿಂದ ಶ್ರೀಲಂಕಾ ವಿರುದ್ಧ ಕಾದಾಟ; ಕೊಹ್ಲಿಗೆ 100ನೇ, ಕ್ಯಾಪ್ಟನ್ ರೋಹಿತ್‌ಗೆ 1ನೇ ಟೆಸ್ಟ್ ಸವಾಲು

    ಮೊಹಾಲಿ: ಪ್ರವಾಸಿ ಶ್ರೀಲಂಕಾ ವಿರುದ್ಧ ಶುಕ್ರವಾರದಿಂದ ಪಿಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯ ಭಾರತೀಯ ಕ್ರಿಕೆಟ್‌ನಲ್ಲಿ ಹಲವು ಹೊಸ ಮೈಲಿಗಲ್ಲುಗಳಿಗೆ ವೇದಿಕೆಯಾಗಲಿದೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ಇದು ವೃತ್ತಿಜೀವನದ 100ನೇ ಟೆಸ್ಟ್ ಪಂದ್ಯವಾಗಿದ್ದರೆ, ರೋಹಿತ್ ಶರ್ಮಗೆ ಭಾರತ ಟೆಸ್ಟ್ ತಂಡದ ನಾಯಕರಾಗಿ ಮೊದಲ ಸವಾಲಾಗಿದೆ. ಭರ್ಜರಿ ಗೆಲುವಿನೊಂದಿಗೆ ಈ ಪಂದ್ಯವನ್ನು ಇನ್ನಷ್ಟು ವಿಶೇಷವಾಗಿಸಲು ಟೀಮ್ ಇಂಡಿಯಾ ಉತ್ಸುಕವಾಗಿದೆ.

    ಸುನೀಲ್ ಗಾವಸ್ಕರ್, ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್ ನಂತರದಲ್ಲಿ ಭಾರತ ಟೆಸ್ಟ್ ತಂಡದ ರನ್‌ಮೆಷಿನ್ ಎನಿಸಿರುವ ವಿರಾಟ್ ಕೊಹ್ಲಿ, ಜಾಗತಿಕ ಕ್ರಿಕೆಟ್ ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲೊಬ್ಬರು. ಟಿ20 ಅಬ್ಬರದ ನಡುವೆ ಟೆಸ್ಟ್ ಕ್ರಿಕೆಟ್ ಮಹತ್ವವನ್ನೂ ಸಾರುತ್ತಿರುವ ಆಟಗಾರ. ಹೀಗಾಗಿ ಅವರ ಈ ಮೈಲಿಗಲ್ಲಿನ ಟೆಸ್ಟ್ ಪಂದ್ಯ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ಸ್ಥಾನವನ್ನು ಅಲಂಕರಿಸುತ್ತಿದೆ. ಕಳೆದ 2 ವರ್ಷಗಳಿಂದ ಕಾಡುತ್ತಿರುವ ಶತಕದ ಕೊರತೆಯನ್ನೂ ಅವರು ಮೊಹಾಲಿ ಅಂಗಳದಲ್ಲಿ ನೀಗಿಸುವ ನಿರೀಕ್ಷೆಯೂ ಹರಡಿದೆ.

    ಇನ್ನು ಟೀಮ್ ಇಂಡಿಯಾದ ನಾಯಕತ್ವದ ಬ್ಯಾಟನ್ ಅನ್ನು ಕೊಹ್ಲಿ ಅವರಿಂದ ಪಡೆದುಕೊಂಡಿರುವ ರೋಹಿತ್ ಶರ್ಮಗೆ ಟೆಸ್ಟ್ ಕ್ರಿಕೆಟ್‌ನಲ್ಲೂ ನಾಯಕತ್ವದ ಕೌಶಲ ಪ್ರದರ್ಶಿಸಲು ಇದು ಉತ್ತಮ ಅವಕಾಶ. ಈಗಾಗಲೆ ಸೀಮಿತ ಓವರ್ ಕ್ರಿಕೆಟ್ ತಂಡದ ಪೂರ್ಣಪ್ರಮಾಣದ ನಾಯಕರಾದ ಬಳಿಕ ಸತತ 12 ಗೆಲುವುಗಳನ್ನು ಕಂಡಿರುವ ರೋಹಿತ್ ಟೆಸ್ಟ್ ಕ್ರಿಕೆಟ್‌ನಲ್ಲೂ ಅಂಥದ್ದೇ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದ್ದಾರೆ. ಮುಂಬರುವ ಟಿ20, ಏಕದಿನ ವಿಶ್ವಕಪ್ ಜತೆಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲೂ ಕಿರೀಟ ಗೆದ್ದುಕೊಡಲು ಈ ಸರಣಿಯಲ್ಲಿ ಭಾರತ ಪೂರ್ಣ ಅಂಕಗಳನ್ನು ಬಾಚಿಕೊಳ್ಳುವುದು ಮಹತ್ವದ್ದಾಗಿರಲಿದೆ.

    ಲಂಕಾ ಎಂದೂ ಭಾರತದಲ್ಲಿ ಟೆಸ್ಟ್ ಗೆದ್ದಿಲ್ಲ!
    ಈಗಾಗಲೆ ಟಿ20 ಸರಣಿಯಲ್ಲಿ 0-3 ವೈಟ್‌ವಾಷ್ ಮುಖಭಂಗ ಎದುರಿಸಿರುವ ಲಂಕಾ, ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕ ದಿಮುತ್ ಕರುಣರತ್ನೆ, ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಲ್ ಅವರಂಥ ಅನುಭವಿಗಳ ಬಲ ಹೊಂದಿದೆ. ಬೌಲಿಂಗ್‌ನಲ್ಲೂ ಲಸಿತ್ ಎಂಬುಲ್ಡೆನಿಯಾ, ಸುರಂಗ ಲಕ್ಮಲ್, ಆಲ್ರೌಂಡರ್ ಧನಂಜಯ ಡಿಸಿಲ್ವ ಭಾರತಕ್ಕೆ ಹೊಸ ಸವಾಲಾಗಲಿದ್ದಾರೆ. ಆದರೆ ಅಂಥ ಅಜುನ್ ರಣತುಂಗ, ಸನತ್ ಜಯಸೂರ್ಯ, ಅರವಿಂದ ಡಿಸಿಲ್ವ ಕಾಲದಲ್ಲೇ ಲಂಕಾ ತಂಡಕ್ಕೆ ಭಾರತದಲ್ಲಿ ಒಂದೂ ಟೆಸ್ಟ್ ಗೆಲ್ಲಲು ಸಾಧ್ಯವಾಗಿರಲಿಲ್ಲ ಎಂಬುದು ಗಮನಾರ್ಹ. ಭಾರತದಲ್ಲಿ ಆಡಿದ 20 ಟೆಸ್ಟ್‌ಗಳಲ್ಲಿ 9ರಲ್ಲಿ ಡ್ರಾ ಸಾಧಿಸಿರುವುದೇ ಲಂಕಾದ ಶ್ರೇಷ್ಠ ನಿರ್ವಹಣೆಯಾಗಿದೆ. ಭಾರತದಲ್ಲಿ ಈ ಹಿಂದೆ ಆಡಿದ 8 ಟೆಸ್ಟ್ ಸರಣಿಗಳಲ್ಲಿ 2ರಲ್ಲಿ ಡ್ರಾ ಸಾಧಿಸಿದ್ದರೆ, ಉಳಿದ 6ರಲ್ಲಿ ಭಾರತವೇ ಜಯಿಸಿದೆ.

    ಮುಖಾಮುಖಿ: 44
    ಭಾರತ: 20
    ಶ್ರೀಲಂಕಾ: 7
    ಡ್ರಾ: 17

    ಭಾರತದಲ್ಲಿ: 20
    ಭಾರತ: 11
    ಶ್ರೀಲಂಕಾ: 0
    ಡ್ರಾ: 9

    35: ರೋಹಿತ್ ಶರ್ಮ ಭಾರತ ಟೆಸ್ಟ್ ತಂಡದ 35ನೇ ನಾಯಕ ಎನಿಸಲಿದ್ದಾರೆ.

    5: ರೋಹಿತ್ ಎಲ್ಲ 3 ಪ್ರಕಾರದಲ್ಲಿ ಭಾರತವನ್ನು ಮುನ್ನಡೆಸಿದ 5ನೇ ನಾಯಕ ಎನಿಸಲಿದ್ದಾರೆ. ಸೆಹ್ವಾಗ್, ಧೋನಿ, ರಹಾನೆ, ಕೊಹ್ಲಿ ಹಿಂದಿನ ಸಾಧಕರು.

    ಟೀಮ್ ನ್ಯೂಸ್:

    ಭಾರತ: ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರ ಸ್ಥಾನಗಳನ್ನು ಅಲಂಕರಿಸಲು ಶುಭಮಾನ್ ಗಿಲ್ ಮತ್ತು ಹನುಮ ವಿಹಾರಿ ಸಜ್ಜಾಗಿದ್ದಾರೆ. ಭರ್ಜರಿ ಾರ್ಮ್‌ನಲ್ಲಿರುವ ಶ್ರೇಯಸ್ ಅಯ್ಯರ್ ಕೂಡ ಮಧ್ಯಮ ಕ್ರಮಾಂಕದ ಸ್ಥಾನಕ್ಕೆ ಪೈಪೋಟಿಯಲ್ಲಿದ್ದಾರೆ. ಕೆಎಲ್ ರಾಹುಲ್ ಗೈರಿನಲ್ಲಿ ಮತ್ತೋರ್ವ ಕನ್ನಡಿಗ ಮಯಾಂಕ್ ಅಗರ್ವಾಲ್, ನಾಯಕ ರೋಹಿತ್ ಶರ್ಮ ಜತೆಗೆ ಇನಿಂಗ್ಸ್ ಆರಂಭಿಸಲಿದ್ದಾರೆ. 3ನೇ ಸ್ಪಿನ್ನರ್ ಸ್ಥಾನಕ್ಕೆ ಜಯಂತ್ ಯಾದವ್ ಮತ್ತು ಎಡಗೈ ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್, ಸೌರಭ್ ಕುಮಾರ್ ನಡುವೆ ಪೈಪೋಟಿ ಇದೆ.

    ಸಂಭಾವ್ಯ ತಂಡ: ರೋಹಿತ್ ಶರ್ಮ (ನಾಯಕ), ಮಯಾಂಕ್ ಅಗರ್ವಾಲ್, ಶುಭಮಾನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿ.ಕೀ) ಹನುಮ ವಿಹಾರಿ/ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಆರ್. ಅಶ್ವಿನ್, ಜಯಂತ್ ಯಾದವ್/ಕುಲದೀಪ್/ಸೌರಭ್ ಕುಮಾರ್, ಮೊಹಮದ್ ಶಮಿ/ಸಿರಾಜ್, ಜಸ್‌ಪ್ರೀತ್ ಬುಮ್ರಾ.

    ಶ್ರೀಲಂಕಾ: ನಿರೋಶನ್ ಡಿಕ್‌ವೆಲ್ಲ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದಾರೆ. ಇದರಿಂದ ದಿನೇಶ್ ಚಾಂಡಿಮಲ್ ಆಲ್ರೌಂಡರ್ ಚರಿತ್ ಅಸಲಂಕಾ ಜತೆಗೆ ಮಧ್ಯಮ ಕ್ರಮಾಂಕದ ಸ್ಥಾನಕ್ಕೆ ಪೈಪೋಟಿ ನಡೆಸಲಿದ್ದಾರೆ. ಭಾರತ ತಂಡದಲ್ಲಿ ಬಲಗೈ ಬ್ಯಾಟರ್‌ಗಳು ಹೆಚ್ಚಿರುವುದರಿಂದ ಎಡಗೈ ಸ್ಪಿನ್ನರ್‌ಗಳಿಗೆ ಲಂಕಾ ಆದ್ಯತೆ ನೀಡಲಿದೆ. ಮೂವರು ವೇಗಿಗಳನ್ನು ಆಡಿಸುವ ಬಗ್ಗೆಯೂ ಲಂಕಾ ಚಿಂತಿಸುತ್ತಿದೆ.

    ಸಂಭಾವ್ಯ ತಂಡ: ದಿಮುತ್ ಕರುಣರತ್ನೆ (ನಾಯಕ), ಲಹಿರು ಥಿರಿಮನ್ನೆ, ಪಥುಮ್ ನಿಸ್ಸಂಕ, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿಸಿಲ್ವ, ದಿನೇಶ್ ಚಾಂಡಿಮಲ್/ಚರಿತ್ ಅಸಲಂಕಾ, ನಿರೋಶನ್ ಡಿಕ್‌ವೆಲ್ಲ (ವಿ.ಕೀ), ಸುರಂಗ ಲಕ್ಮಲ್, ಲಸಿತ್ ಎಂಬುಲ್ಡೆನಿಯಾ, ಪ್ರವೀಣ್ ಜಯವಿಕ್ರಮ/ವಿಶ್ವ ಫೆರ್ನಾಂಡೊ, ಲಹಿರು ಕುಮಾರ.

    ಪಂದ್ಯ ಆರಂಭ: ಬೆಳಗ್ಗೆ 9.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಕಪಿಲ್ ದಾಖಲೆ ಮುರಿಯುವತ್ತ ಅಶ್ವಿನ್
    ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಪಂದ್ಯ ಅಥವಾ ಸರಣಿಯಲ್ಲಿ 5 ವಿಕೆಟ್ ಕಬಳಿಸಿದರೆ ದಿಗ್ಗಜ ಕಪಿಲ್ ದೇವ್ ಅವರನ್ನು ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ 2ನೇ ಸರ್ವಾಧಿಕ ವಿಕೆಟ್ ಟೇಕರ್ ಎನಿಸಲಿದ್ದಾರೆ. ಕಪಿಲ್ ದೇವ್ 131 ಟೆಸ್ಟ್‌ಗಳಲ್ಲಿ 434 ವಿಕೆಟ್ ಕಬಳಿಸಿದ್ದರೆ, ಅಶ್ವಿನ್ ಸದ್ಯ 88 ಟೆಸ್ಟ್‌ಗಳಲ್ಲಿ 430 ವಿಕೆಟ್ ಉರುಳಿಸಿದ್ದಾರೆ. ಅನಿಲ್ ಕುಂಬ್ಳೆ (132 ಟೆಸ್ಟ್‌ಗಳಲ್ಲಿ 619 ವಿಕೆಟ್) ಅಗ್ರಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ನ ರಿಚರ್ಡ್ ಹ್ಯಾಡ್ಲಿ (431), ರಂಗನಾ ಹೆರಾತ್ (433) ಮತ್ತು ಡೇಲ್ ಸ್ಟೈನ್ (439) ಅವರನ್ನೂ ಹಿಂದಿಕ್ಕುವ ಅವಕಾಶ ಅಶ್ವಿನ್ ಮುಂದಿದೆ.

    12: ವಿರಾಟ್ ಕೊಹ್ಲಿ 100 ಟೆಸ್ಟ್ ಆಡಲಿರುವ 12ನೇ ಭಾರತೀಯರಾಗಿದ್ದಾರೆ. ಸುನೀಲ್ ಗಾವಸ್ಕರ್ (125), ಕಪಿಲ್ ದೇವ್ (131), ದಿಲೀಪ್ ವೆಂಗ್ಸರ್ಕಾರ್ (116), ಸಚಿನ್ ತೆಂಡುಲ್ಕರ್ (200), ಅನಿಲ್ ಕುಂಬ್ಳೆ (132), ರಾಹುಲ್ ದ್ರಾವಿಡ್ (163), ಸೌರವ್ ಗಂಗೂಲಿ (113), ವಿವಿಎಸ್ ಲಕ್ಷ್ಮಣ್ (134), ವೀರೇಂದ್ರ ಸೆಹ್ವಾಗ್ (103), ಹರ್ಭಜನ್ ಸಿಂಗ್ (103), ಇಶಾಂತ್ ಶರ್ಮ (105) ಹಿಂದಿನ ಸಾಧಕರು.

    71: ಕೊಹ್ಲಿ 100 ಟೆಸ್ಟ್ ಆಡಿದ ವಿಶ್ವದ 71ನೇ ಆಟಗಾರ ಎನಿಸಲಿದ್ದಾರೆ. ಆಸೀಸ್ ಪರ 13, ಇಂಗ್ಲೆಂಡ್ ಪರ 15, ವೆಸ್ಟ್ ಇಂಡೀಸ್ ಪರ 9, ಪಾಕಿಸ್ತಾನ ಪರ 5, ಶ್ರೀಲಂಕಾ ಪರ 5, ನ್ಯೂಜಿಲೆಂಡ್ ಪರ 4, ದಕ್ಷಿಣ ಆಫ್ರಿಕಾ ಪರ 8 ಆಟಗಾರರು ಈ ಸಾಧನೆ ಮಾಡಿದ್ದಾರೆ.

    ಪೂಜಾರ, ರಹಾನೆ, ಇಶಾಂತ್ ಮಿಸ್!
    ವಿರಾಟ್ ಕೊಹ್ಲಿ ವೃತ್ತಿಜೀವನದಲ್ಲಿ ಹೆಚ್ಚಿನ ಟೆಸ್ಟ್ ಪಂದ್ಯಗಳನ್ನು ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಮತ್ತು ಇಶಾಂತ್ ಶರ್ಮ ಅವರೊಂದಿಗೆ ಆಡಿದ್ದಾರೆ. ಆದರೆ 100ನೇ ಟೆಸ್ಟ್ ಪಂದ್ಯದಲ್ಲಿ ಈ ಮೂವರೂ ಕೊಹ್ಲಿ ಅವರೊಂದಿಗೆ ಆಡುತ್ತಿಲ್ಲ. ಫಾರ್ಮ್ ಕೊರತೆಯಿಂದಾಗಿ ಈ ಮೂವರೂ ಸದ್ಯ ತಂಡದಿಂದ ಹೊರಬಿದ್ದಿದ್ದಾರೆ. ಭಾರತ ತಂಡ 9 ವರ್ಷಗಳ ಬಳಿಕ ಪೂಜಾರ-ರಹಾನೆ ಇಬ್ಬರೂ ಇಲ್ಲದೆ ಟೆಸ್ಟ್ ಆಡಲಿದೆ.

    ಶೇ. 50 ಪ್ರೇಕ್ಷಕರು ಹಾಜರಿ
    ಕೊಹ್ಲಿ 100ನೇ ಟೆಸ್ಟ್‌ಗೆ ಮೊದಲು ಪ್ರೇಕ್ಷಕರ ಪ್ರವೇಶ ನಿರಾಕರಿಸಿದ್ದ ಬಿಸಿಸಿಐ, ಕೊನೆಗೂ ಅಭಿಮಾನಿಗಳ ಒತ್ತಡಕ್ಕೆ ಮಣಿದು ಶೇ. 50 ಪ್ರೇಕ್ಷಕರಿಗೆ ಅನುಮತಿ ನೀಡಿದೆ. 25 ಸಾವಿರ ಪ್ರೇಕ್ಷಕ ಸಾಮರ್ಥ್ಯದ ಪಿಸಿಎ ಸ್ಟೇಡಿಯಂನಲ್ಲಿ 12 ಸಾವಿರ ಪ್ರೇಕ್ಷಕರ ಹಾಜರಿ ನಿರೀಕ್ಷಿಸಲಾಗಿದೆ.

    100 ಟೆಸ್ಟ್ ಕನಸು ಕಂಡಿರಲಿಲ್ಲ
    ಭಾರತ ಪರ 100 ಟೆಸ್ಟ್ ಪಂದ್ಯಗಳನ್ನು ಆಡುವೆನೆಂದು ಎಂದೂ ಯೋಚಿಸಿರಲಿಲ್ಲ. ಇದೊಂದು ಸುದೀರ್ಘ ಜರ್ನಿ. ಸಾಕಷ್ಟು ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವ ನಡುವೆ 100 ಟೆಸ್ಟ್ ಆಡುವ ಅವಕಾಶ ಲಭಿಸಿರುವುದು ನನ್ನ ಭಾಗ್ಯ. ನನ್ನ ಪಾಲಿಗೆ ಇದೊಂದು ದೊಡ್ಡ ಹೆಮ್ಮೆಯ ಕ್ಷಣ ಎಂದು 33 ವರ್ಷದ ವಿರಾಟ್ ಕೊಹ್ಲಿ ಮೈಲಿಗಲ್ಲಿನ ಟೆಸ್ಟ್ ಆರಂಭಕ್ಕೆ ಮುನ್ನಾದಿನ ಹೇಳಿದ್ದಾರೆ.

    *ನಾವು ಹಿಂದೆಂದೂ ಭಾರತದಲ್ಲಿ ಟೆಸ್ಟ್ ಗೆದ್ದಿಲ್ಲ. ಹೀಗಾಗಿ ಪಂದ್ಯ ಕೈಜಾರದಂತೆ ನೋಡಿಕೊಳ್ಳುವ ಒತ್ತಡ ಭಾರತದ ಮೇಲಿದೆ. ಅದನ್ನೇ ನಮ್ಮ ಲಾಭವಾಗಿ ಬಳಸಿಕೊಳ್ಳುವತ್ತ ಗಮನಹರಿಸಿದ್ದೇವೆ.
    | ದಿಮುತ್ ಕರುಣರತ್ನೆ, ಶ್ರೀಲಂಕಾ ನಾಯಕ

    ಐಪಿಎಲ್‌ಗೆ ಮುನ್ನ ಟೆಸ್ಟ್ ಹಬ್ಬ
    ಐಪಿಎಲ್ 15ನೇ ಆವೃತ್ತಿಗೆ ಮುನ್ನ ಮಾರ್ಚ್ ತಿಂಗಳಲ್ಲಿ ಒಟ್ಟು 9 ಟೆಸ್ಟ್ ಪಂದ್ಯಗಳು ನಡೆಯಲಿವೆ. ಭಾರತ-ಲಂಕಾ ಸರಣಿಯ 2 ಟೆಸ್ಟ್ ಪಂದ್ಯಗಳಲ್ಲದೆ, ಆಸ್ಟ್ರೇಲಿಯಾ ತಂಡ ಪಾಕಿಸ್ತಾನದಲ್ಲಿ ಶುಕ್ರವಾರದಿಂದ 3 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಇಂಗ್ಲೆಂಡ್ ತಂಡ ಮಾರ್ಚ್ 8ರಿಂದ ವೆಸ್ಟ್ ಇಂಡೀಸ್‌ನಲ್ಲಿ 3 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ದಕ್ಷಿಣ ಆಫ್ರಿಕಾ-ಬಾಂಗ್ಲಾ ನಡುವಿನ ಟೆಸ್ಟ್ ಸರಣಿ ಮಾಸಾಂತ್ಯದಲ್ಲಿ ಶುರುವಾಗಲಿದೆ.

    ಕಳೆದ ವರ್ಷದ ಫೈನಲಿಸ್ಟ್ ತಂಡಗಳ ನಡುವೆ ಈ ಸಲದ ಐಪಿಎಲ್ ಉದ್ಘಾಟನಾ ಪಂದ್ಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts