More

  ರೈತರಿಗೆ ಬೆಳೆ ಹಾನಿ ಪರಿಹಾರ ಪಾವತಿಸಿ

  ರಾಯಚೂರು: ಪ್ರಧಾನಮಂತ್ರಿ ಸಲ್ ಭೀಮಾ ಯೋಜನೆಯಡಿ ವಿಮಾ ಕಂತು ಪಾವತಿಸಿದ ರೈತರಿಗೆ ಪರಿಹಾರ ಮಂಜೂರು ಮಾಡಬೇಕು. ರಾಜ್ಯ ಸರ್ಕಾರದಿಂದ ನೀಡಲಾಗುವ ಬರ ಪರಿಹಾರದಲ್ಲಿನ ತಾರತಮ್ಯ ಸರಿಪಡಿಸುವಂತೆ ಒತ್ತಾಯಿಸಿ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
  ನಂತರ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಆರ್.ದೇವಿಕಾಗೆ ಮನವಿ ಸಲ್ಲಿಸಿ, ವಿಮಾ ಕಂತು ಪಾವತಿಸಿದ ರೈತರಿಗೆ ನಿಯಮಾನುಸಾರ ಪರಿಹಾರ ಪಾವತಿಯಾಗಿಲ್ಲ. ಇದರಿಂದ ಬೆಳೆಗಳಿಗೆ ಹಣ ಖರ್ಚು ಮಾಡಿದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ ಎಂದು ದೂರಿದರು.
  ಮಳೆಯಿಲ್ಲದೆ ಹಾಗೂ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಬರದ ಕಾರಣ ಬೆಳೆಗಳು ಹಾನಿಗೊಳಗಾಗಿವೆ. ಸರ್ಕಾರ ಬರ ಪೀಡಿತ ಎಂದು ಘೋಷಣೆ ಮಾಡಿದ್ದರೂ ರೈತರಿಗೆ ಸಮರ್ಪಕ ನೆರವು ಒದಗಿಸುವಲ್ಲಿ ಸರ್ಕಾರ ಮುಂದಾಗಿಲ್ಲ. ನಷ್ಟದಿಂದಾಗಿ ರೈತರು ಮುಂಗಾರು ಬಿತ್ತನೆಗೆ ಸಂಕಷ್ಟ ಎದುರಿಸುವಂತಾಗಿದೆ.
  ಮಾನ್ವಿ ಮತ್ತು ದೇವದುರ್ಗ ತಾಲೂಕಿನಲ್ಲಿ ಸಲ್ ಭೀಮಾ ಯೋಜನೆಯಡಿ ನೂರಾರು ಕೋಟಿ ರೂ. ಭ್ರಷ್ಟಾಚಾರ ನಡೆಸಿದ್ದು, ವಿಮಾ ಕಂತು ಪಾವತಿಸಿದ ರೈತರ ಬದಲು ಪ್ರಭಾವಿಗಳು ಪರಿಹಾರದ ಹಣವನ್ನು ಲೂಟಿ ಮಾಡಿದ್ದಾರೆ. ಆದರೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗಿಲ್ಲ.
  ರಾಜ್ಯ ಸರ್ಕಾರ ಬರ ಪರಿಹಾರವನ್ನು ಮಂಜೂರು ಮಾಡಿದೆ. ಆದರೆ ಪರಿಹಾರ ಬಿಡುಗಡೆಯಲಿ ಕಂದಾಯ ಇಲಾಖೆ ತಾರತಮ್ಯ ನೀತಿ ಅನುಸರಿಸುತ್ತಿದೆ. 3 ಎಕರೆಗೆ ಕೆಲವರಿಗೆ 5 ಸಾವಿರ ರೂ., ಕೆಲ ರೈತರಿಗೆ 9 ಸಾವಿರ ರೂ.ಗಳನ್ನು ನೀಡಲಾಗಿದೆ. ಕೂಡಲೇ ಎಲ್ಲರಿಗೂ ಸಮಾನವಾಗಿ ಪರಿಹಾರ ಮಂಜೂರು ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
  ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಪದಾಕಾರಿಗಳಾದ ನರಸಿಂಗರಾವ್ ಕುಲಕರ್ಣಿ, ನರಸಪ್ಪ ಯಾದವ, ಅಕ್ಕಮ್ಮ ತಲಮಾರಿ, ಅಬ್ದುಲ್ ಮಜೀದ್, ರಮೇಶ ಗಾಣಧಾಳ, ಹುಲಿಗೆಪ್ಪ ಜಾಲಿಬೆಂಚಿ, ಈರಣ್ಣ ಪರಂಗಿ, ನರಸಪ್ಪ, ದೇವಪ್ಪ ಜೇಗರಕಲ್ ಪಾಲ್ಗೊಂಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts