More

    ಇಂದಿನಿಂದ ಏಷ್ಯನ್ ಬಾಕ್ಸಿಂಗ್, ಭಾರತೀಯರ ಒಲಿಂಪಿಕ್ಸ್ ಸಿದ್ಧತೆಗೆ ವೇದಿಕೆ

    ದುಬೈ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ ಭಾರತದ ಬಾಕ್ಸರ್‌ಗಳ ಸಿದ್ಧತೆಗೆ ಪ್ರಮುಖ ವೇದಿಕೆ ಎನಿಸಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್ ಸೋಮವಾರದಿಂದ ನಡೆಯಲಿದೆ. ಹಿಂದಿನ ಆವೃತ್ತಿಗಿಂತ ಹೆಚ್ಚಿನ ಪದಕಗಳನ್ನು ಬಾಚಿಕೊಳ್ಳುವತ್ತ ಭಾರತೀಯ ಬಾಕ್ಸರ್‌ಗಳು ಗಮನಹರಿಸಿದ್ದಾರೆ. ಭಾರತದ 9 ಪುರುಷರು ಮತ್ತು 10 ಮಹಿಳೆಯರನ್ನು ಒಳಗೊಂಡಂತೆ ಒಟ್ಟು 19 ಬಾಕ್ಸರ್‌ಗಳು ಕೂಟದಲ್ಲಿ ಸ್ಪರ್ಧಿಸುತ್ತಿದ್ದು, ಉತ್ತಮ ನಿರ್ವಹಣೆ ತೋರುವವರಿಗೆ ಈ ಬಾರಿ ಪದಕಗಳೊಂದಿಗೆ ಬಹುಮಾನ ಮೊತ್ತವೂ ಬೋನಸ್ ಆಗಿ ಸಿಗಲಿದೆ.

    ವಿಮಾನ ಲ್ಯಾಂಡಿಂಗ್‌ನಲ್ಲಿನ ಗೊಂದಲದ ಬಳಿಕ ಶನಿವಾರ ತಡವಾಗಿ ದುಬೈನಲ್ಲಿ ಬಂದಿಳಿದಿರುವ ಭಾರತೀಯ ಬಾಕ್ಸರ್‌ಗಳು, ಕರೊನಾ ಕಾಲದಲ್ಲಿ ಎದುರಾದ ತರಬೇತಿ ಕೊರತೆಗಳ ನಡುವೆಯೂ ಕೂಟಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ‘ನಮ್ಮ ಸಿದ್ಧತೆ ಹೇಗಿದೆ ಎಂದು ಒಲಿಂಪಿಕ್ಸ್‌ಗೆ ಮುನ್ನ ತಿಳಿದುಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ. ನಾವು ಎಲ್ಲಿ ಸುಧಾರಣೆ ಕಾಣಬೇಕಾಗಿದೆ ಎಂದೂ ತಿಳಿದುಕೊಳ್ಳಬಹುದು’ ಎಂದು ಭಾರತೀಯ ಪುರುಷರ ಬಾಕ್ಸಿಂಗ್ ತಂಡದ ಹೈ-ರ್ಪಾಮೆನ್ಸ್ ಡೈರೆಕ್ಟರ್ ಸ್ಯಾಂಟಿಯಾಗೊ ನೈವಾ ತಿಳಿಸಿದ್ದಾರೆ.

    2019ರಲ್ಲಿ ಥಾಯ್ಲೆಂಡ್‌ನಲ್ಲಿ ನಡೆದ ಕಳೆದ ಆವೃತ್ತಿಯಲ್ಲಿ ಭಾರತ ತಂಡ ಒಟ್ಟು 13 ಪದಕಗಳನ್ನು (2 ಚಿನ್ನ, 4 ಬೆಳ್ಳಿ, 7 ಕಂಚು) ಜಯಿಸುವ ಮೂಲಕ ಶ್ರೇಷ್ಠ ನಿರ್ವಹಣೆ ತೋರಿತ್ತು. ಒಲಿಂಪಿಕ್ಸ್ ಅರ್ಹತೆ ಪಡೆದಿರುವ ಅಮಿತ್ ಪಾಂಗಲ್ (52ಕೆಜಿ), ಆಶಿಶ್ ಕುಮಾರ್ (75 ಕೆಜಿ) ಮತ್ತು ವಿಕಾಸ್ ಕೃಷ್ಣನ್ (69) ಪುರುಷರ ವಿಭಾಗದಲ್ಲಿ ಭಾರತದ ಸವಾಲು ಮುನ್ನಡೆಸಲಿದ್ದಾರೆ. 6 ಬಾರಿಯ ವಿಶ್ವ ಚಾಂಪಿಯನ್ ಹಾಗೂ ಲಂಡನ್ ಒಲಿಂಪಿಕ್ಸ್ ಕಂಚು ವಿಜೇತೆ ಎಂಸಿ ಮೇರಿ ಕೋಮ್, ಸಿಮ್ರಾನ್ ಜಿತ್ ಕೌರ್ (60 ಕೆಜಿ), ಲವ್ಲಿನಾ ಬೋರ್ಗೊಹೈನ್ (69 ಕೆಜಿ) ಮತ್ತು ಪೂಜಾ ರಾಣಿ (75 ಕೆಜಿ) ಮಹಿಳಾ ವಿಭಾಗದಲ್ಲಿ ಪ್ರಮುಖ ಪದಕ ಆಕಾಂಕ್ಷಿಗಳಾಗಿದ್ದಾರೆ. ಈ ನಾಲ್ವರೂ ಟೋಕಿಯೊ ಒಲಿಂಪಿಕ್ಸ್ ಅರ್ಹತೆ ಗಳಿಸಿದ್ದಾರೆ. 4 ಬಾರಿಯ ಪದಕ ವಿಜೇತ ಶಿವ ಥಾಪಾ (64 ಕೆಜಿ) ಕೂಡ 5ನೇ ಪದಕದ ಮೇಲೆ ಕಣ್ಣಿಟ್ಟಿದ್ದಾರೆ.

    ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ ಈ ಬಾರಿ ಕೂಟದಲ್ಲಿ 2.91 ಕೋಟಿ ರೂ. (4 ಲಕ್ಷ ಡಾಲರ್) ಬಹುಮಾನ ಮೊತ್ತ ವಿತರಿಸಲು ನಿರ್ಧರಿಸಿದ್ದು, ಸ್ವರ್ಣ ವಿಜೇತರು ತಲಾ 7.29 ಲಕ್ಷ ರೂ. ಬಹುಮಾನ ಪಡೆಯಲಿದ್ದಾರೆ. ಬೆಳ್ಳಿ ಮತ್ತು ಕಂಚು ವಿಜೇತರು ಕ್ರಮವಾಗಿ ತಲಾ 3.64 ಲಕ್ಷ ರೂ. ಮತ್ತು 1.82 ಲಕ್ಷ ರೂ. ಪಡೆಯಲಿದ್ದಾರೆ. ಭಾರತದಲ್ಲಿ ನಡೆಯಬೇಕಾಗಿದ್ದ ಈ ಟೂರ್ನಿ ಕರೊನಾದಿಂದಾಗಿ ದುಬೈಗೆ ಸ್ಥಳಾಂತರಗೊಂಡಿತ್ತು. ಇಂಡೋನೇಷ್ಯಾ, ಇರಾನ್, ಕಜಾಕ್‌ಸ್ತಾನ, ದಕ್ಷಿಣ ಕೊರಿಯಾ, ಕಿರ್ಗಿಸ್ತಾನ, ಫಿಲಿಪ್ಪಿನ್ಸ್, ಉಜ್ಬೇಕಿಸ್ತಾನದ ಬಾಕ್ಸರ್‌ಗಳೂ ಕೂಟದಲ್ಲಿ ಸ್ಪರ್ಧಿಸಲಿದ್ದಾರೆ.

    ಲಾಕ್​ಡೌನ್​ ಸಂಕಷ್ಟದಿಂದಾಗಿ ದಿನಗೂಲಿಯಾದ ಅಂತಾರಾಷ್ಟ್ರೀಯ ಫುಟ್‌ಬಾಲ್ ಆಟಗಾರ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts