More

    ಯಕ್ಷಕಲೆಯಲ್ಲಿ ಪುರಾಣದ ಕಥಾನಕಗಳು ವ್ಯವಸ್ಥಿತವಾಗಿ ಪ್ರತಿಫಲನ

    ಸಾಗರ: ಪುರಾಣದ ಕಥಾನಕಗಳನ್ನು ಯಕ್ಷಕಲೆ ವ್ಯವಸ್ಥಿತವಾಗಿ ಬಿಂಬಿಸುತ್ತ ಬಂದಿರುವುದರಲ್ಲದೇ, ತಲೆಮಾರಿನಿಂದ ತಲೆಮಾರಿಗೆ ತಲುಪಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಹೇಳಿದರು.

    ಜನನಿ ಸೇವಾ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ನಗರದ ನೃತ್ಯ ಭಾಸ್ಕರ ಸಭಾಂಗಣದಲ್ಲಿ ವಂಶವಾಹಿನಿ ಯಕ್ಷಮೇಳ ಗುಂಡೂಮನೆ ಅವರಿಂದ ಏರ್ಪಡಿಸಿದ್ದ ಕಿರೀಟ ಪೂಜೆ-ಯಕ್ಷಗಾನ ಪ್ರದರ್ಶನ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮದ್ದಲೆ ವಾದಕ ಶರತ್ ಜಾನಕೈ ಅವರನ್ನು ಸನ್ಮಾನಿಸಿ ನಂತರ ಅವರು ಮಾತನಾಡಿದರು.
    ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಜ್ಞಾನದ ವರ್ಧನೆ ಸದಾ ಅಗತ್ಯ ಇರುವುದರಿಂದ ಜ್ಞಾನ ಸಂಕೇತವಾದ ಕಲೆಗಳನ್ನು ಹೆಚ್ಚು ಪ್ರೋತ್ಸಾಹಿಸುವುದು ಅತ್ಯಗತ್ಯ. ವ್ಯಕ್ತಿಯ ಜೀವನದ ಉತ್ಕರ್ಷಕ್ಕೆ ಸೋಪಾನವಾಗುವ ಇಂತಹ ಕಲೆಗಳಲ್ಲಿ ತೊಡಗಿಕೊಂಡ ಹವ್ಯಾಸಿಗಳಿಗೂ ಉತ್ತೇಜನ ನೀಡಬೇಕಿದೆ ಎಂದರು.
    ತಾಪಂ ಮಾಜಿ ಸದಸ್ಯ ಬಿ.ಜಿ.ಚಂದ್ರಮೌಳಿ ಮಾತನಾಡಿ, ಈ ಹಿಂದೆ ಟಿವಿ ಕಾರ್ಯಕ್ರಮಗಳಲ್ಲಿ ಮುಳುಗಿ ಹೋಗಿದ್ದ ಜನರಿಗೆ ಪ್ರಸ್ತುತ ದಿನಮಾನದಲ್ಲಿ ನಮ್ಮ ಜನಪದೀಯ ಕಲೆಗಳ ಮಹತ್ವ ಅರ್ಥವಾಗುತ್ತಿದೆ. ಸ್ಥಳೀಯವಾಗಿ ಕಲಾ ಸಂಘಟನೆ ನಡೆಸುತ್ತಿರುವವರ ಸಾಧಕ ಶ್ರಮವೂ ಅರ್ಥವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯಕ್ಷಗಾನ ಮತ್ತು ಜನಪದೀಯ ಕಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.
    ವಂಶವಾಹಿನಿ ಗೌರವಾಧ್ಯಕ್ಷ ಸುಬ್ರಾಯ ಹೆಗಡೆ ಗುಂಡೂಮನೆ ಅಧ್ಯಕ್ಷತೆ ವಹಿಸಿದ್ದರು. ಜನನಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕೆ.ಆರ್.ಗಣೇಶ್‌ಪ್ರಸಾದ್, ಉದ್ಯಮಿ ರಾಜೇಶ್ ಕೀಳಂಬಿ, ಕಲಾವಿದ ಮಂಜುನಾಥ ಪೂಜಾರಿ, ಮಾರುತಿಪುರ ಗ್ರಾಪಂ ಉಪಾಧ್ಯಕ್ಷ ಶಂಕರ ಶೆಟ್ಟಿ ಮತ್ತಿತರರು ಇದ್ದರು.
    ರಮೇಶ್ ಹೆಗಡೆ ಗುಂಡೂಮನೆ ರಚಿಸಿ, ನಿರ್ದೇಶಿಸಿರುವ ಕರ್ಣ ಪ್ರವಿಲಾಪ ಯಕ್ಷಗಾನ ಪ್ರದರ್ಶನ ನಡೆಯಿತು. ಸೂರ್ಯನಾರಾಯಣ ಹೆಗಡೆ ಗುಂಡೂಮನೆ, ಸೃಜನ್ ಗಣೇಶ್ ಹೆಗಡೆ ಅವರ ಸುಶ್ರಾವ್ಯ ಹಾಡಿಗೆ ಶರತ್ ಜಾನಕೈ, ಮಂಜುನಾಥ್ ಗುಡ್ಡೆದಿಂಬ, ಶ್ರೀವತ್ಸ, ಮದ್ದಲೆ-ಚೆಂಡೆ ಸಾಥ್ ನೀಡಿದರು. ಬೆಸ್ತನಾಗಿ ಅಶೋಕಕುಮಾರ್ ಹೆಗಡೆ, ಪರಶುರಾಮನಾಗಿ ರವಿಶಂಕರ್ ಭಟ್, ಕರ್ಣನಾಗಿ ರಮೇಶ್ ಹೆಗಡೆ ಗುಂಡೂಮನೆ, ಗೌತಮನಾಗಿ ರಮೇಶ್ ಹಾರೆಗೊಪ್ಪ, ನಂದಿನಿ ಆಗಿ ವೀಣಾ ಪ್ರಸನ್ನಕುಮಾರ ಪಾತ್ರ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts