More

    ಗುಮ್ಮನಕೊಲ್ಲಿಯಲ್ಲಿ ಯಶಸ್ವಿ ಸಾವಯವ ಕೃಷಿಕ

    ಕುಶಾಲನಗರ: ಸಮೀಪದ ಗುಮ್ಮನಕೊಲ್ಲಿ ಗ್ರಾಮದ ಬೃಂದಾವನ ಬಡಾವಣೆ ನಿವಾಸಿ ಎಂ.ಎನ್.ಕಾಳಪ್ಪ ಸಾವಯವ ಕೃಷಿಯಲ್ಲಿ ತೊಡಗಿದ್ದು, ತಮ್ಮ ಮನೆ ಸುತ್ತಲಿನ ಆವರಣದಲ್ಲಿ ತರಕಾರಿ ಬೆಳೆಯುವ ಮೂಲಕ ಪರಿಸರವನ್ನು ಹಸಿರುಮಯವನ್ನಾಗಿಸಿದ್ದಾರೆ.

    ಕಾಫಿ ಬೋರ್ಡ್‌ನಲ್ಲಿ ಉದ್ಯೋಗಿಯಾಗಿದ್ದ ಕಾಳಪ್ಪ ಸ್ವಯಂ ನಿವೃತ್ತಿ ಪಡೆದು ಈಗ ತೋಟ ನೋಡಿಕೊಳ್ಳುತ್ತಿದ್ದಾರೆ. ಇವರ ಪತ್ನಿ ವನಿತಾ ಪತಿಯ ಕೃಷಿ ಕಾಯಕಕ್ಕೆ ಸಾಥ್ ನೀಡುವ ಮೂಲಕ ಮಾದರಿಯಾಗಿದ್ದಾರೆ. ಮಗ ಇಂಜಿನಿಯರಿಂಗ್ ಪದವಿ ಮುಗಿಸಿ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

    ಮನೆ ಅಂಗಳದಲ್ಲಿ ಹತ್ತಾರು ತೆಂಗಿನ ಮರಗಳಿದ್ದು, ಕಾಯಿಗಳನ್ನು ಈವರೆಗೂ ಮಾರಾಟ ಮಾಡದೆ ಕುಟುಂಬಸ್ಥರು, ಸ್ನೇಹಿತರು, ಅಕ್ಕಪಕ್ಕದ ಮನೆಯವರಿಗೆ ಉಚಿತವಾಗಿ ನೀಡುವ ಅಭ್ಯಾಸ ಮಾಡಿಕೊಂಡಿದ್ದಾರೆ. ಇದರೊಂದಿಗೆ ನೀಲಂ ಮತ್ತು ಸೇಲಂ ಎನ್ನುವ ಮಾವಿನ ಮರವೂ ಇದ್ದು, ಕನಿಷ್ಠ ವರ್ಷಕ್ಕೆ 500 ಹಣ್ಣುಗಳು ದೊರೆಯಲಿದೆ. ಅವುಗಳನ್ನು ಮನೆಗೆ ಬರುವ ಅತಿಥಿಗಳಿಗೆ ಕೊಟ್ಟು ಕಳುಹಿಸುತ್ತಾರೆ. ಇದಲ್ಲದೆ ಅಡಕೆ ಬೆಳೆದು ಕನಿಷ್ಠ ಬೆಲೆಗೆ ಮಾರಾಟ ಮಾಡಿ, ಬಂದ ಹಣವನ್ನು ಬಡವರ ಒಳ್ಳೆಯ ಕಾರ್ಯಗಳಿಗೆ ಸದ್ವಿನಿಯೋಗ ಮಾಡುತ್ತಿದ್ದಾರೆ.

    ಬೆಣ್ಣೆ ಹಣ್ಣು, ಸಪೋಟ, ಹಿರಳಿಕಾಯಿ, ಪಪ್ಪಾಯಿ, ಏಲಕ್ಕಿ, ಉಂಡೆ ಮೆಣಸು, ಬಿರಿಯಾನಿ ಎಲೆ ಮತ್ತು ಬಾಳೆ ಬೆಳೆ ಬೆಳೆಯುವ ಇವರು ತಮ್ಮ ಕುಟುಂಬ ಜೀವನ ನಿರ್ವಹಣೆಗೆ ಬೇಕಾದಷ್ಟನ್ನು ಇಟ್ಟುಕೊಂಡು ಉಳಿದದ್ದನ್ನು ದಾನ ಮಾಡುತ್ತಾರೆ. ಕಾಳಪ್ಪ ಅವರ ಈ ಕಾರ್ಯಕ್ಕೆ ಮಡದಿ ಮಕ್ಕಳು ಬೆಂಬಲವಾಗಿ ನಿಂತಿರುವುದು ಮತ್ತೊಂದು ವಿಶೇಷ. ಬೃಂದಾವನ ಬಡಾವಣೆಯಲ್ಲಿ 15 ರಿಂದ 20 ಮನೆಗಳಿದ್ದು, ಸುಮಾರು 60 ರಿಂದ 70 ಜನರು ವಾಸವಾಗಿದ್ದಾರೆ. ಅಲ್ಲಿಯ ನಿವಾಸಿಗಳಿಗೆ ಗುಣಮಟ್ಟದ ತರಕಾರಿಗಳನ್ನು ನೀಡುತ್ತಿದ್ದಾರೆ.

    ಮನೆಯ ಮುಂದಿರುವ ಖಾಲಿ ನಿವೇಶನವನ್ನು ಹುತ್ತರಿ ಹಬ್ಬಕ್ಕಾಗಿಯೇ ಹುತ್ತರಿ ಗದ್ದೆಯನ್ನಾಗಿ ಪರಿವರ್ತಿಸುತ್ತಾರೆ. ಹಬ್ಬದಲ್ಲಿ ಸಾಂಪ್ರದಾಯಿಕವಾಗಿ ಎಲ್ಲ ಧರ್ಮದವರು ಭಾಗಿಯಾಗಿ ಪೂಜೆ ಸಲ್ಲಿಸುವುದು ವಿಶೇಷ. ಬಡಾವಣೆ ನಿವಾಸಿಗಳು ಜಾತ್ಯತೀತವಾಗಿ ಹಬ್ಬದಲ್ಲಿ ಪಾಲ್ಗೊಳ್ಳಲಿದ್ದು, ಅಂದು ಎಲ್ಲರ ಮನೆಯಲ್ಲಿ ವಿವಿಧ ಬಗೆಯ ಅಡುಗೆ ಮಾಡಿ ಒಟ್ಟಾಗಿ ಊಟ ಮಾಡುತ್ತಾರೆ.

    ನನ್ನ ಮನೆಯ ಸುತ್ತಲಿನ ಆವರಣದಲ್ಲಿ ವಿವಿಧ ರೀತಿಯ ತರಕಾರಿಗಳನ್ನು ಬೆಳೆಯುತ್ತೇವೆ. ಇದೇ ಮಾದರಿಯಲ್ಲಿ ನಮ್ಮ ಕಲ್ಲೂರು ಗ್ರಾಮದಲ್ಲಿರುವ ಕಾಫಿ ತೋಟದಲ್ಲೂ ಬೆಳೆಯುತ್ತೇವೆ. ಬೆಳೆದ ತರಕಾರಿಗಳನ್ನು ಅಕ್ಕಪಕ್ಕದವರಿಗೆ ನೀಡುವುದರ ಮೂಲಕ ಸಂತೋಷ ಕಾಣುತ್ತಿದ್ದೇವೆ. ಇದರಿಂದ ಹಣ ಸಂಪಾದನೆ ಮಾಡುವ ಉದ್ದೇಶವಿಲ್ಲ.
    ಎಂ.ಎನ್.ಕಾಳಪ್ಪ ರೈತ, ಕುಶಾಲನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts