More

    ಸದೃಢಗೊಂಡ ಸಂಬಂಧ; ಭಾರತ-ಬಾಂಗ್ಲಾದೇಶ ಹಲವು ಒಪ್ಪಂದ…

    ಭಾರತ ತನ್ನ ನೆರೆರಾಷ್ಟ್ರಗಳ ಜತೆ ಸೌಹಾರ್ದಯುತ ಸಂಬಂಧ ಹೊಂದಲು, ರಾಜತಾಂತ್ರಿಕ ಬಂಧವನ್ನು ಗಟ್ಟಿಗೊಳಿಸಲು ಸದಾ ಯತ್ನಿಸುತ್ತ ಬಂದಿದೆ. ಶ್ರೀಲಂಕಾ, ಮ್ಯಾನ್ಮಾರ್, ನೇಪಾಳ, ಭೂತಾನ್ ಸೇರಿ ಹಲವು ರಾಷ್ಟ್ರಗಳಿಗೆ ನೆರವಿನಹಸ್ತ ಚಾಚುತ್ತಲೇ ಬಂದಿದೆ. ಬಾಂಗ್ಲಾದೇಶದೊಂದಿಗಿನ ಸ್ನೇಹವಂತೂ ವಿಶಿಷ್ಟ. ಬಾಂಗ್ಲಾದೇಶ ಉದಯವಾಗಲು ಪ್ರಮುಖಪಾತ್ರ ವಹಿಸಿದ ಭಾರತ, ಆ ಬಳಿಕವೂ ಅಭಿವೃದ್ಧಿ ವಿಷಯದಲ್ಲಿ ವಿಶೇಷ ಸಹಕಾರ ನೀಡುತ್ತ ಬಂದಿದೆ. ಹಾಗಾಗಿಯೇ, ಆ ದೇಶ ಭಾರತವಿರೋಧಿ ಚಟುವಟಿಕೆಗಳಿಗೆ ತನ್ನ ನೆಲದಿಂದ ಅವಕಾಶ ನೀಡುವುದಿಲ್ಲ ಎಂದು ಪುನರುಚ್ಚರಿಸಿದೆ.

    ಇಸ್ಲಾಮಿಕ್ ರಾಷ್ಟ್ರವಾಗಿರುವ ಬಾಂಗ್ಲಾದೇಶ ಆಂತರಿಕ ಸಂಘರ್ಷಗಳನ್ನು, ಮೂಲಭೂತವಾದದ ತೀವ್ರತೆಯನ್ನು ಅನುಭವಿಸಿದ್ದು, ಅಭಿವೃದ್ಧಿ ವಿಷಯದಲ್ಲಿ ತುಂಬ ದೂರ ಕ್ರಮಿಸಬೇಕಿದೆ. ಪ್ರಸಕ್ತ, ಬಾಂಗ್ಲಾದೇಶ ಸ್ವಾತಂತ್ರ್ಯೋತ್ಸವದ 50ನೇ ವರ್ಷದ ಸಂಭ್ರಮದಲ್ಲಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಅಲ್ಲದೆ, ‘ಬಾಂಗ್ಲಾ ದೇಶದ ಸ್ವಾತಂತ್ರ್ಯಕ್ಕಾಗಿ ನಾನು ಮತ್ತು ನನ್ನ ಸಹಪಾಠಿಗಳು ಸತ್ಯಾಗ್ರಹ ಮಾಡಿದ್ದೆವು’ ಎಂದು ಸ್ಮರಿಸಿಕೊಳ್ಳುವ ಮೂಲಕ, ಭಾವನಾತ್ಮಕವಾಗಿಯೂ ಉಭಯ ದೇಶಗಳ ಸಂಬಂಧ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ಉದಾಹರಿಸಿದರು.

    ಕೋವಿಡ್ ಸೋಂಕಿನ ಹಾವಳಿ ಯಿಂದ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸಗಳಿಗೆ ತಾತ್ಕಾಲಿಕ ತಡೆಯಾಗಿತ್ತು. ಆದರೆ, ಬಾಂಗ್ಲಾದೇಶದ 50ನೇ ಸ್ವಾತಂತ್ರ್ಯೋತ್ಸವ ಸಂದರ್ಭಕ್ಕೆ ಅಲ್ಲಿ ತೆರಳುವುದು ಸೂಕ್ತ ಎಂದು ನಿರ್ಧರಿಸಿದ ಮೋದಿ ಎರಡು ದಿನಗಳ ಭೇಟಿ ಮೂಲಕ ರಾಜತಾಂತ್ರಿಕ ಸಂಬಂಧಗಳಿಗೆ ಮತ್ತಷ್ಟು ಬಲ ತುಂಬಿದ್ದಾರೆ. ದಶಕಗಳಿಂದ ಬಾಕಿ ಉಳಿದಿದ್ದ ಬಾಂಗ್ಲಾದೊಂದಿಗಿನ ಗಡಿ ಬಿಕ್ಕಟ್ಟು ಕೆಲ ವರ್ಷಗಳ ಹಿಂದಷ್ಟೇ ಬಗೆಹರಿದದ್ದು ಸಾಮಾನ್ಯ ಸಂಗತಿಯೇನಲ್ಲ. ಭಾರತ-ಬಾಂಗ್ಲಾ ಮಧ್ಯೆ ಭೂಗಡಿ ಒಪ್ಪಂದ ಏರ್ಪಟ್ಟ ನಂತರ ಬಾಂಗ್ಲಾದ ಒಂದಿಷ್ಟು ಹಳ್ಳಿಗಳು ಭಾರತಕ್ಕೆ, ಭಾರತದ ಒಂದಿಷ್ಟು ಗ್ರಾಮಗಳು ಬಾಂಗ್ಲಾಕ್ಕೆ ಹಸ್ತಾಂತರಗೊಂಡವು. ಅದರಿಂದ ನುಸುಳುವಿಕೆ ಪ್ರಮಾಣ ಕೂಡ ತಗ್ಗಿದೆ. ಗಡಿಗ್ರಾಮಗಳ ಜನರು ನೆಮ್ಮದಿಯಿಂದ ಬಾಳುವಂಥ ವಾತಾವರಣ ನಿರ್ವಣವಾಗಿದೆ. ಭಾರತದ ಆಕ್ಟ್ ಈಸ್ಟ್ ನೀತಿಗೆ ಪೂರಕವಾಗಿ ಬಾಂಗ್ಲಾದೊಂದಿಗೆ ಸಾರಿಗೆ ಸಂಪರ್ಕ ಹೆಚ್ಚಿದೆ.

    ಈ ಬಾರಿ ಉಭಯ ದೇಶಗಳ ನಡುವೆ ಐದು ಮಹತ್ವದ ಒಪ್ಪಂದಗಳು ಏರ್ಪಟ್ಟಿವೆ. ಸಂಪರ್ಕ, ವಿದ್ಯುತ್, ವಾಣಿಜ್ಯ, ಆರೋಗ್ಯ ಮತ್ತು ಅಭಿವೃದ್ಧಿ ಪಾಲುದಾರಿಕೆ ಸಂಬಂಧದ ಒಪ್ಪಂದಕ್ಕೆ ಮೋದಿ ಮತ್ತು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಸಹಿ ಹಾಕಿದ್ದಾರೆ. ಭಾರತ 12 ಲಕ್ಷ ಡೋಸ್ ಕೋವಿಡ್ ಲಸಿಕೆಯನ್ನೂ ಪೂರೈಸಲಿದೆ. ‘ಬಾಂಗ್ಲಾದೇಶದ ಮಟ್ಟಿಗೆ ಭಾರತ ನೈಜ ಮಿತ್ರರಾಷ್ಟ್ರ’ ಎಂದು ಶೇಖ್ ಹಸೀನಾ ಬಣ್ಣಿಸಿದ್ದರೆ, ‘ಭಾರತದ ನೇಬರ್​ಹುಡ್ ಫಸ್ಟ್ ನೀತಿಯಲ್ಲಿ ಬಾಂಗ್ಲಾದೇಶ ಪ್ರಮುಖ ಆಧಾರಸ್ತಂಭ’ ಎಂದಿದ್ದಾರೆ ಮೋದಿ. ಭಯೋತ್ಪಾದನೆ, ಅಸ್ಥಿರತೆ ನಿಮೂಲನೆಗಾಗಿ ಶ್ರಮಿಸುತ್ತಿರುವ ಎರಡೂ ರಾಷ್ಟ್ರಗಳು ಹೀಗೆ ಸಹಕಾರದ ನೆಲೆಯಲ್ಲಿ ಹೊಸಹೆಜ್ಜೆಗಳನ್ನು ಇರಿಸುತ್ತಿರುವುದು ಉತ್ತಮ ಬೆಳವಣಿಗೆ.

    ತೀಸ್ತಾ ನದಿನೀರು ಹಂಚಿಕೆ ವಿವಾದವೂ ಸೌಹಾರ್ದ ನೆಲೆಯಲ್ಲಿ ಪರಿಹಾರಗೊಳ್ಳುವ ದಾರಿ ತೆರೆದುಕೊಳ್ಳಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts