More

    ಕೃಷಿ ಕೈಗಾರಿಕಾ ಕ್ಷೇತ್ರಗಳ ಅಭಿವೃದ್ಧಿಗೆ ಪಣ

    ಕೋಲಾರ ಜಿಲ್ಲೆಯಾದ್ಯಂತ 77ನೇ ಸ್ವಾತಂತ್ರ್ಯ ದಿನವನ್ನು ಮಂಗಳವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ವಿವಿಧ ಶಾಲೆ&ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ$್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು ಸ್ಮರಿಸಲಾಯಿತು. ಮಕ್ಕಳು, ಸಾರ್ವಜನಿಕರು ಶ್ವೇತ ವಸ್ತ್ರ ಧರಿಸಿ, ತ್ರಿವರ್ಣ ಧ್ವಜವನ್ನು ಕೈಯಲ್ಲಿಡಿದು ಸಂಭ್ರಮಿಸುತ್ತಿರುವುದು ಕಂಡುಬಂತು. ಕೋಲಾರದಲ್ಲಿ ಉಸ್ತುವಾರಿ ಸಚಿವ ಬೈರತಿ ಸುರೇಶ್​ ಧ್ವಜಾರೋಹಣ ನೆರವೇರಿಸಿ ಜಿಲ್ಲೆಯ ಅಭಿವೃದ್ಧಿಗೆ ಬದ್ಧ ಎಂದು ಸಾರಿದರು.

    ಕೋಲಾರ: ಕೃಷಿ ಪ್ರಧಾನ ಕೋಲಾರ ಜಿಲ್ಲೆಯು ಕೈಗಾರಿಕೆ ಕ್ಷೇತ್ರದಲ್ಲೂ ಪ್ರಗತಿ ಸಾಧಿಸುತ್ತಿದ್ದು ಮತ್ತಷ್ಟು ಯೋಜನೆಗಳನ್ನು ತಂದು ಅಭಿವೃದ್ಧಿಪಡಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್​.ಸುರೇಶ್​ ಭರವಸೆ ನೀಡಿದರು.
    ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಆಟದ ಮೈದಾನದಲ್ಲಿ ಮಂಗಳವಾರ 77 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿ, ಕೃಷಿ, ತೋಟಗಾರಿಕೆ, ಹೈನುಗಾರಿಕೆ, ರೇಷ್ಮೆ ಬೆಳೆಗೆ ಪ್ರಸಿದ್ಧಿ ಹೊಂದಿರುವ ಜಿಲ್ಲೆಯಲ್ಲಿ ಮಾಲೂರು, ವೇಮಗಲ್​, ನರಸಾಪುರ ಕೈಗಾರಿಕೆ ಪ್ರದೇಶಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಬೃಹತ್​ ಕಾರ್ಖಾನೆಗಳು ತಲೆ ಎತ್ತಿದ್ದು, ಮತ್ತಷ್ಟು ಉದ್ಯಮಗಳು ಬರಬೇಕೆಂಬ ದೃಷ್ಠಿಯಿಂದ ಕಾರ್ಯಿನಿರ್ವಹಿಸುತ್ತಿದ್ದೇವೆ ಎಂದರು.
    ಇಎಸ್​ಐ ಆಸ್ಪತ್ರೆ ಸ್ಥಾಪನೆಗೆ ಕ್ರಮ: ಕೆಜಿಎಫ್​ನ 967 ಎಕರೆಯಲ್ಲಿ ಇಂಟಿಗ್ರೇಟೆಡ್​ ಕೈಗಾರಿಕಾ ಟೌನ್​ಶಿಪ್​ ನಿಮಾರ್ಣ ಮಾಡಲು ಯೋಜಿಸಿದ್ದು, ಇದರಲ್ಲಿ 10 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ, 50 ಸಾವಿರ ಮಂದಿಗೆ ಉದ್ಯೋಗಾವಕಾಶ ದೊರೆಯುವ ನಿರೀಕ್ಷೆಯಿದೆ. ವೇಮಗಲ್​ ಕೈಗಾರಿಕೆ ಪ್ರದೇಶಕ್ಕೆ ಹೊಂದಿಕೊಂಡಂತೆ ಇನ್ನೂ 520 ಎಕರೆಯಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಲು ಭೂಸ್ವಾಧಿನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮಾಲೂರು ತಾಲೂಕಿನ ಬಾವನಹಳ್ಳಿ ಸುತ್ತಲಿನ 600 ಎಕರೆಯನ್ನು ಕೆಐಡಿಬಿ ಸ್ವಾಧಿನಪಡಿಸಿಕೊಂಡು ಅಭಿವೃದ್ಧಿಪಡಿಸಲಾಗಿದೆ. ಜಿಲ್ಲೆಯಲ್ಲಿ 8 ಕೈಗಾರಿಕಾ ಪ್ರದೇಶಗಳಿದ್ದು, ನರಸಾಪುರ ಕೈಗಾರಿಕಾ ಪ್ರದೇಶವು ಕೇಂದ್ರ ಸ್ಥಾನದಲ್ಲಿರುವುದರಿಂದ 5 ಎಕರೆ ಜಾಗದಲ್ಲಿ ಇಎಸ್​ಐ ಆಸ್ಪತ್ರೆ ಸ್ಥಾಪಿಸಲು ಕ್ರಮವಹಿಸಲಾಗಿರುತ್ತದೆ ಎಂದರು.
    ನರಸಾಪುರದ ಕೈಗಾರಿಕೆ ಪ್ರದೇಶ ಹಾಗೂ ಮುಳಬಾಗಿಲು ತಾಲೂಕು ಬೂಸಲಕುಂಟೆಯಲ್ಲಿ ನಮ್ಮ ಕ್ಲಿನಿಕ್​ ಪ್ರಾರಂಭಿಸಲು ಸರ್ಕಾರ ಅನುಮೋದನೆ ನೀಡಿದೆ. ಜಿಲ್ಲೆಯಲ್ಲಿ 142 ವಿವೇಕ ಶಾಲಾ ಕೊಠಡಿಗಳು, 137 ಶಾಲಾ ಕೊಠಡಿಗಳ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದೆ. ಮುಖ್ಯಮಂತ್ರಿಯವರ ಅಮೃತ ನಗರೋತ್ಥಾನ 4ನೇ ಹಂತದ ಯೋಜನೆಯಡಿಯಲ್ಲಿ 145 ಕೋಟಿ ರೂ. ಹಂಚಿಕೆ ಮಾಡಿದ್ದು, ಇದರಲ್ಲಿ 123.25 ಕೋಟಿ ರೂ. ಕ್ರಿಯಾ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ ಎಂದರು.

    ಸೆಪ್ಟೆಂಬರ್​ನಲ್ಲಿ ಯರಗೋಳ್​ ನೀರು: ಕೋಲಾರ, ಮಾಲೂರು, ಬಂಗಾರಪೇಟೆ ಮತ್ತು ಮಾರ್ಗದ 45 ಹಳ್ಳಿಗಳಿಗೆ ಯರಗೋಳ್​ ಜಲಾಶಯದಿಂದ ನೀರು ಪೂರೈಕೆ ಸಂಬಂಧ ಪರೀಕ್ಷಾರ್ಥ ಚಾಲನೆ ನೀಡಲಾಗಿದೆ. ಸೆಪ್ಟೆಂಬರ್​ ಅಂತ್ಯದೊಳಗೆ ಕುಡಿಯುವ ನೀರು ಒದಗಿಸಲಾಗುವುದು. ಅಂತರ್ಜಲಮಟ್ಟ ಅಭಿವೃದ್ಧಿಪಡಿಸಲು 25ಕೋಟಿ ರೂ.ವೆಚ್ಚದಲ್ಲಿ ಅಟಲ್​ ಭೂಜಲ ಯೋಜನೆಯಡಿ 52 ಚೆಕ್​ ಡ್ಯಾಂಗಳಿಗೆ ಅನುದಾನ ಒದಗಿಸಲಾಗಿದೆ. ಕೆ.ಸಿ.ವ್ಯಾಲಿಯಲ್ಲಿ 126 ಕೆರೆಗಳಿಗೆ ನೀರು ತುಂಬಿಸಿದ್ದು, 2ನೇ ಹಂತದಲ್ಲಿ 272 ಕೆರೆಗಳಿಗೆ ನೀರು ಹರಿಸಲು ಮುಂದಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಸರ್ಕಾರದ ಬಹುನಿರೀಕ್ಷಿತ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ, ನಾರೀಶಕ್ತಿ, ಯುವನಿಧಿ ಯೋಜನೆಗಳಿಂದ ಬಡವರ ಆದಾಯ ಹೆಚ್ಚಿದೆ ಎಂದು ಸಚಿವ ಬಿ.ಎಸ್​.ಸುರೇಶ್​ ವಿವರಿಸಿದರು.

    ಹೆಲಿಕಾಪ್ಟರ್​ ಧೂಳ್​ಗೆ ತತ್ತರ: ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭಕ್ಕೆ ಜಿಲ್ಲಾಡಳಿತ ಹೆಲಿಕಾಪ್ಟರ್​ ತರಿಸಿದ್ದು, ಧ್ವಜಾರೋಹಣ ವೇಳೆ ಪುಷ್ಪವೃಷ್ಠಿ ಮಾಡಲಾಯಿತು. ಆದರೆ ಹೆಲಿಕಾಪ್ಟರ್​ ಭೂಮಿಗೆ ತೀರಾ ಹತ್ತಿರದಲ್ಲಿ ಹಾರಾಟ ನಡೆಸಿದ್ದರಿಂದ ಕ್ರೀಡಾಂಗಣದಲ್ಲಿ ಧೂಳು ಮೇಲೆದ್ದಿತು. ಜನರ ಪ್ರವೇಶ, ವಾಹನಗಳ ನಿಲುಗಡೆ ಸೇರಿ ನಾನಾ ಕಟ್ಟುಪಾಡುಗಳನ್ನು ವಿಧಿಸಿದ್ದ ಜಿಲ್ಲಾಡಳಿತ ಬೆಳಗ್ಗೆ ನಿರೀಕ್ಷೆಯಂತೆ ಜನಬಾರದ ಪ್ರಯುಕ್ತ ನಿಯಮಗಳಲ್ಲಿ ಸಡಲಿಕೆ ಮಾಡಿತ್ತು.
    ಕೆ.ಎಸ್​.ಆರ್​.ಟಿ.ಸಿ ಚಾಲಕರಿಗೆ ಸನ್ಮಾನ: ರಾಜ್ಯ ರಸ್ತೆ ಸಾರಿಗೆ ನಿಗಮದ ಧರಣಿ, ಕೀರ್ತನಾ ಪಾಂಡ್ಯನ್​, ಖುಡ್ಸಿಯ ನಸೀರ್​, ನಾಗೇಶ್​, ಎಂ.ಎಸ್​.ಕೌಶಿಕ್​, ಎಂ.ಎನ್​.ರವಿಶಂಕರ್​ ಸೇರಿ 10 ಸಿಬ್ಬಂದಿಗೆ ಬೆಳ್ಳಿ ಪದಕ ಮತ್ತು ಪ್ರಶಸ್ತಿ ಪತ್ರ, ಕೃಷಿ, ಕ್ರೀಡೆ, ಅಂಗಾಂಗ ದಾನ ಕೊಯ್ಲು ಮಾಡಲು ಶ್ರಮಿಸಿದ ವೈದ್ಯರ ತಂಡ, ದಾನಿಯ ತಾಯಿಗೆ ಸನ್ಮಾನ ಮಾಡಲಾಯಿತು. ಸಂಸದ ಮುನಿಸ್ವಾಮಿ, ಶಾಸಕ ಕೊತ್ತೂರು ಮಂಜುನಾಥ್​, ಎಂಎಲ್ಸಿಗಳಾದ ಎಂ.ಎಲ್​.ಅನಿಲ್​ಕುಮಾರ್​, ಇಂಚರ ಗೋವಿಂದರಾಜು, ಡಿಸಿ ಅಕ್ರಂಪಾಷಾ, ಎಸ್​ಪಿ ನಾರಾಯಣ, ಜಿಪಂ ಸಿಇಒ ಪದ್ಮಾ ಬಸಂತಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts