More

    ಪೆನ್​ಡ್ರೈವ್​ ಪ್ರಕರಣವನ್ನು ಸಿಬಿಐಗೆ ನೀಡಿ

    ಕೋಲಾರ: ಹಾಸನದ ಪೆನ್​ಡ್ರೈವ್​ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್​-ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

    ನಗರದ ಬಸ್​ ನಿಲ್ದಾಣದ ವೃತ್ತದಲ್ಲಿ ಜಮಾಯಿಸಿದ ಎರಡೂ ಪಕ್ಷಗಳ ಕಾರ್ಯಕರ್ತರು ರಸ್ತೆ ಸಂಚಾರ ತಡೆದು, ಪೆನ್​ಡ್ರೈವ್​ ಪ್ರಕರಣದ ವಿಚಾರವಾಗಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಭಿಮಾನಕ್ಕೆ ಧಕ್ಕೆಯುಂಟು ಮಾಡುವ ಕೆಲಸವನ್ನು ಕಾಂಗ್ರೆಸ್​ ಮಾಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
    ವಿಧಾನ ಪರಿಷತ್​ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಎಚ್​.ಡಿ.ದೇವೇಗೌಡರ ಕುಟುಂಬಕ್ಕೆ ಮಸಿ ಬಳಿಯುವ ಉದ್ದೇಶದಿಂದ ಪೆನ್​ಡೆವ್​ ಪ್ರಕರಣದ ನೆಪದಲ್ಲಿ ರಾಜ್ಯದಲ್ಲಿ ಬೆಂಕಿಹಚ್ಚುವ ಕೆಲಸವನ್ನು ಸಿದ್ದರಾಮಯ್ಯ ಸರ್ಕಾರ ಮಾಡಿದೆ. ಘಟನೆಯ ನೈಜತೆ ಹೊರಬರಬೇಕಾದರೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
    ಕಾಂಗ್ರೆಸ್​ಗೆ 125 ವರ್ಷಗಳ ಇತಿಹಾಸವಿದೆ. ಸುಮಾರು 57 ವರ್ಷ ಕಾಲ ಅಧಿಕಾರ ಅನುಭವಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಮತ್ತು ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಇಂತಹ ನೀಚ ರಾಜಕಾರಣಕ್ಕೆ ಕಾಂಗ್ರೆಸ್​ ಇಳಿದಿದೆ ಎಂದರು.
    ಪೆನ್​ಡ್ರೈವ್​ ಬಿಡುಗಡೆ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​ ಕೈವಾಡ ಇದೆ ಎಂದು ಸ್ಪಷ್ಟವಾದ ಕೂಡಲೇ ಸ್ವಯಂ ರಕ್ಷಣೆ ಮಾಡಿಕೊಳ್ಳಲು ಎಸ್​ಐಟಿ ತನಿಖಾ ಸಂಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
    ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ವ್ಯಾಪಕ ಒತ್ತಾಯ ವ್ಯಕ್ತವಾಗಿದೆ. ಆದರೆ ಘಟನೆಯ ಹಿಂದಿರುವ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್​ ಸರ್ಕಾರದ ಪರವಾದ ರೀತಿಯಲ್ಲಿ ತನಿಖೆ ನಡೆಸುವಂತೆ ಮಾಡಿದ್ದು, ಯಾರನ್ನು ಬಂಧಿಸಬೇಕು, ಯಾರನ್ನು ಬಿಡಬೇಕು ಎಂಬ ಸರ್ಕಾರದ ಆಣತಿಯಂತೆ ಎಸ್​ಐಟಿ ಅಧಿಕಾರಿಗಳು ನಡೆಯುತ್ತಿದ್ದಾರೆ. ಹಾಗಾಗಿ ಸಿಬಿಐಗೆ ಪ್ರಕರಣ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದರು.

    • ಅನಾಹುತಕ್ಕೆ ಸಿಎಂ, ಡಿಸಿಎಂ ನೇರ ಹೊಣೆ
      ಡಿಸಿಸಿ ಬ್ಯಾಂಕ್​ ಮಾಜಿ ನಿರ್ದೇಶಕ ಕೆ.ವಿ.ದಯಾನಂದ ಮಾತನಾಡಿ, ರಾಜ್ಯದ ಅಮಾಯಕ ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ ಉಂಟು ಮಾಡುವ ರೀತಿ ಕಾಂಗ್ರೆಸ್​ ಸರ್ಕಾರ ನಡೆದುಕೊಳ್ಳುತ್ತಿದೆ. ಯಾರೋ ಮಾಡಿದ ತಪ್ಪಿಗೆ ಮಹಿಳೆಯರಿಗೆ ಅಪಮಾನ ಮಾಡುವುದು ಸರಿಯಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.
      ಮಹಿಳೆಯರ ಹಿತಕ್ಕಿಂತ ಸಿಎಂ, ಡಿಸಿಎಂಗೆ ಅಧಿಕಾರವೇ ಮುಖ್ಯವಾಗಿದೆ. ತಪ್ಪು ಮಾಡಿರುವವರನ್ನು ಶಿಕ್ಷೆಗೆ ಒಳಪಡಿಸಲು ಅಭ್ಯಂತರವಿಲ್ಲ. ಪೆನ್​ಡ್ರೈವ್​ ಬಿಡುಗಡೆಯಿಂದ ನಿಜವಾದ ಸಂತ್ರಸ್ತೆಯರ ಮೇಲೆ ಪರಿಣಾಮ ಬೀರಲಿದ್ದು, ಅನಾಹುತ ಸಂಭವಿಸಿದರೆ ಸಿಎಂ ಮತ್ತು ಡಿಸಿಎಂ ಹೊಣೆಯಾಗುತ್ತಾರೆ. ಆದ್ದರಿಂದ ಪೆನ್​ಡೆವ್​ ಬಿಡುಗಡೆ ಮಾಡಿರುವವರ ವಿರುದ್ಧವೂ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
    • ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ
      ಜೆಡಿಎಸ್​ ಮುಖಂಡ ಸಿಎಂಆರ್​ ಶ್ರೀನಾಥ್​ ಮಾತನಾಡಿ, ಕಾಂಗ್ರೆಸ್​ ಸರ್ಕಾರ ದೇವೇಗೌಡರ ಕುಟುಂಬಕ್ಕೆ ಕಪ್ಪು ಚುಕ್ಕಿ ತರುವ ಉದ್ದೇಶದಿಂದ ಕುತಂತ್ರ ನಡೆಸಿ, ರಾಜ್ಯದ ಮಾನ ಹರಾಜು ಹಾಕಿದೆ. ಬಿಜೆಪಿ ಮುಖಂಡ ದೇವರಾಜೇಗೌಡ ಆರೋಪಿಸಿರುವಂತೆ ಪೆನ್​ಡ್ರೈವ್​ ಬಿಡುಗಡೆಯಲ್ಲಿ ಡಿ.ಕೆ.ಶಿವಕುಮಾರ್​ ಪಾತ್ರವೇ ಪ್ರಮುಖವಾಗಿದೆ. ಹೀಗಾಗಿ ಅವರು ಕೂಡಲೇ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಮಾಜಿ ಸಂಸದ ಎಲ್​.ಆರ್​ ಶಿವರಾಮೇಗೌಡ ಹಾಗೂ ಡಿಕೆಶಿ ಆಡಿಯೋ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
    • ಟ್ರಾಫಿಕ್​ ಜಾಮ್​
      ಜೆಡಿಎಸ್​-ಬಿಜೆಪಿ ಕಾರ್ಯಕರ್ತರು ಬಸ್​ ನಿಲ್ದಾಣದ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕ್ಲಾಕ್​ ಟವರ್​, ಎಂಬಿ ರಸ್ತೆ, ಅಂತರಗಂಗೆ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಯಿತು. ಇದರಿಂದಾಗಿ ವಾಹನ ಸವಾರರು ಸುಮಾರು ಅರ್ಧ ತಾಸಿಗೂ ಅಧಿಕ ಕಾಲ ಟ್ರಾಫಿಕ್​ನಲ್ಲಿ ಸಿಲಿಕಿದ್ದರು. ಪ್ರತಿಭಟನೆಯಲ್ಲಿ ಜೆಡಿಎಸ್​ ತಾಲೂಕು ಅಧ್ಯಕ್ಷ ಬಾಬು ಮೌನಿ, ಕೋಚಿಮುಲ್​ ನಿರ್ದೇಶಕ ಡಿ.ವಿ.ಹರೀಶ್​, ತಾಪಂ ಮಾಜಿ ಸದಸ್ಯ ಮಂಜುನಾಥ್​, ಮುಖಂಡರಾದ ರಾಜೇಶ್​ ಸಿಂಗ್​, ರಾಮು, ಹರೀಶ್​, ಶಬರೀಶ್​, ರಾಕೇಶ್​, ಆನಂದ್​, ಅಶೋಕ್​, ನಂಜುಂಡಗೌಡ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts