More

    ಲೈಂಗಿಕ ಕಿರುಕುಳ ಪ್ರಕರಣದ ವರದಿ ಸರ್ಕಾರಕ್ಕೆ ಸಲ್ಲಿಸುವೆ

    ಎಚ್.ಡಿ.ಕೋಟೆ:ಪ್ರವಾಸ ಸಂದರ್ಭದಲ್ಲಿ ಬೀಚನಹಳ್ಳಿ ಶಾಲಾ ಮಕ್ಕಳ ಜತೆ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಗುಮಾಸ್ತ ಅಸಭ್ಯವಾಗಿ ವರ್ತಿಸಿದ ದೂರಿನ ಹಿನ್ನೆಲೆಯಲ್ಲಿ ಶಾಲೆಗೆ ಗುರುವಾರ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಎಸ್.ಮಂಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಮೊದಲಿಗೆ ಮುಖ್ಯ ಶಿಕ್ಷರ ಕೊಠಡಿಯಲ್ಲಿ ಎಲ್ಲ ಶಿಕ್ಷಕರೊಂದಿಗೆ ಸಭೆ ನಡೆಸಿ ಘಟನೆ ಬಗ್ಗೆ ಸಮಗ್ರ ವರದಿ ಪಡೆದರು. ಈ ಸಂದರ್ಭದಲ್ಲಿ ಮಹಿಳಾ ಶಿಕ್ಷಕಿಯರು ಪ್ರವಾಸ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಹಾಗೂ ಗುಮಾಸ್ತ ಹೆಣ್ಣು ಮಕ್ಕಳ ಜತೆ ನಡೆದುಕೊಂಡ ರೀತಿ ಬಗ್ಗೆ ಮಾಹಿತಿ ನೀಡಿದರು. ನಂತರ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿ ಮಕ್ಕಳಿಂದ ಮಾಹಿತಿ ಪಡೆದು ಪ್ರತ್ಯೇಕವಾಗಿ ಲಿಖಿತ ಹೇಳಿಕೆ ಪಡೆದರು.

    ಮುರುಡೇಶ್ವರ ಬೀಚ್‌ನಲ್ಲಿ ಹಾಗೂ ಪ್ರವಾಸದ ಐದು ದಿನಗಳು ಗುಮಾಸ್ತ ಹಾಗೂ ಮುಖ್ಯ ಶಿಕ್ಷಕ ಮದ್ಯೆ ಸೇವಿಸಿ ಹೆಣ್ಣು ಮಕ್ಕಳ ಜತೆ ಅಸಭ್ಯವಾಗಿ ವರ್ತನೆ ಮಾಡಿದರು ಎಂದು ಸದಸ್ಯರಿಗೆ ತಿಳಿಸಿದರು.

    ಆಯೋಗದ ಸದಸ್ಯ ಎಸ್.ಮಂಜು ಮಾತನಾಡಿ, ಶಿಕ್ಷಕ ನಾಗಣ್ಣ ಮತ್ತು ರಮೇಶ್ ಹೆಣ್ಣು ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸಿರುವುದು ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದರೂ ದೂರು ದಾಖಲಿಸುವಲ್ಲಿ ವಿಳಂಬವಾಗಿದೆ. ಜಿಲ್ಲಾ, ತಾಲೂಕು, ರಾಜ್ಯ ಮಟ್ಟದ ಅಧಿಕಾರಿಗಳು ಸಮರ್ಪಕ ಮಾಹಿತಿಗಳನ್ನು ಆಯೋಗಕ್ಕೆ ನೀಡದಿರುವುದು ಬೇಸರದ ಸಂಗತಿ ಎಂದರು.

    ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ಪಡೆದಿದ್ದೇನೆ. ಸರ್ಕಾರ ಮತ್ತು ಆಯೋಗದ ಅಧ್ಯಕ್ಷರಿಗೆ ವರದಿ ಸಲ್ಲಿಸಲಾಗುವುದು. ಅನ್ಯಾಯಕ್ಕೆ ಒಳಗಾದವರು ನಮಗೆ ಪತ್ರ ಅಥವಾ ದೂರವಾಣಿ ಮುಖಾಂತರ ಧೈರ್ಯವಾಗಿ ಮಾಹಿತಿ ನೀಡಬಹುದು. ಈ ಪ್ರಕರಣ ಮುಚ್ಚು ಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

    ಆಯೋಗದ ಜಿಲ್ಲಾ ಸದಸ್ಯ ಚಂದ್ರಕಾಂತ್, ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ಅಂತರಸಂತೆ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ರವಿಶಂಕರ್, ಗ್ರಾಪಂ ಸದಸ್ಯರಾದ ಭಾಸ್ಕರ್, ಗೋವಿಂದರಾಜು, ಕಬಿನಿ ಹೇಮಂತ, ಶಿಕ್ಷಕರಾದ ಜ್ಞಾನೇಶ್ವರಿಬಾಯಿ, ಗೋಕಿಲ, ಸುಮಾ, ಚನ್ನನಾಯಕ, ವಾತ್ಸಲ್ಯ, ರಘು, ನಾಗೇಗೌಡ, ರಾಮಕೃಷ್ಣ, ಮೇರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts