More

    ತಾವೇ ಬೆಳೆಸಿದ ಮರದಲ್ಲಿ ದುರಂತ ಅಂತ್ಯ ಕಂಡ ಸಾಲುಮರದ ವೀರಚಾರಿ… ಹಳ್ಳಿಗಳಲ್ಲಿ ಹಸಿರು ಹೊದಿಸಿದ ಸಾಧಕ ಇನ್ನಿಲ್ಲ

    ದಾವಣಗೆರೆ: ಸಾಲುಮರ ಎಂದಾಕ್ಷಣ ನಮಗೆ ತಿಮ್ಮಕ್ಕ ನೆನಪಾಗುತ್ತಾರೆ. ಆದರೆ ಅವರಂತೆಯೇ ಸಾಲುಮರಗಳನ್ನು ನೆಟ್ಟವರು ವೀರಾಚಾರಿ. ಯಾವುದಾದರೂ ಮದುವೆಗೆ ಹೋದರೆ ವಧುವರರಿಗೆ ಉಡುಗೊರೆಯಾಗಿ ಇವರು ಗಿಡಗಳನ್ನೇ ಕೊಡುತ್ತಿದ್ದರು. ಇವರು ಹೋದಲ್ಲೆಲ್ಲ ಗಿಡ ನೆಡುತ್ತಿದ್ದರು. ಹಳ್ಳಿಯ ಬಸ್​ ನಿಲ್ದಾಣಗಳು ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ನೆರಳಾಗುವಂತೆ ಗಿಡ ನೆಟ್ಟು ಬೆಳೆಸಿದ್ದಾರೆ. ಅಂತಹ ವೀರಚಾರಿ ದುರಂತ ಅಂತ್ಯ ಕಂಡಿದ್ದಾರೆ. ಅದೂ ನ್ಯಾಯಬೆಲೆ ಅಂಗಡಿಯಲ್ಲಿನ ಅಕ್ರಮ ವಿರುದ್ಧ ಹೋರಾಟ ನಡೆಸಿ…

    ನ್ಯಾಯಬೆಲೆ ಅಂಗಡಿಯಲ್ಲಿನ ಅಕ್ರಮ ವಿರೋಧಿಸಿ ಹೋರಾಟ ನಡೆಸುತ್ತಿದ್ದ ಪರಿಸರಪ್ರೇಮಿ ಸಾಲುಮರದ ವೀರಾಚಾರಿ(70) ಅವರು ನ್ಯಾಯ ಸಿಗಲಿಲ್ಲವೆಂದು ಮನನೊಂದು ತಾನೇ ಬೆಳೆಸಿದ ಮರದಲ್ಲಿ ಸೋಮವಾರ ರಾತ್ರಿ ನೇಣಿಗೆ ಶರಣಾಗಿದ್ದಾರೆ. ಇವರ ಸಾವಿನ ಸುದ್ದಿ ಕೇಳುತ್ತಿದ್ದಂತೆ ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ಹೊರಹಾಕಿದ ಹರಿಹರ ತಾಲೂಕು ಮಿಟ್ಲಕಟ್ಟೆ ಗ್ರಾಮಸ್ಥರು ತಡೆ ನಡೆಸಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವ ವರೆಗೂ ಮೃತ ದೇಹವನ್ನು ಕುಣಿಕೆಯಿಂದ ಕೆಳಗಿಳಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಸ್ಥಳಕ್ಕೆ ಉಪ ವಿಭಾಗಾಧಿಕಾರಿ ದುರ್ಗಶ್ರೀ, ತಹಸೀಲ್ದಾರ್​ ಡಾ. ಎಂ.ಬಿ. ಅಶ್ವತ್ಥ್​ ಮತ್ತು ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಮನವೊಲಿಸಲು ಮಾಡಿದ ಪ್ರಯತ್ನ ಫಲಿಸಲಿಲ್ಲ. ನಂತರ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಆಗಮಿಸಿದರು.

    ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ವಿರುದ್ಧ ಧ್ವನಿ ಎತ್ತಿದ್ದ ವೀರಾಚಾರಿ ಒಂದು ವರ್ಷದಿಂದ ಹೋರಾಟ ಮಾಡಿಕೊಂಡು ಬಂದಿದ್ದರು. ಈ ಹಿಂದೆ ದೂರು ಬಂದ ಹಿನ್ನೆಲೆಯಲ್ಲಿ ಗ್ರಾಮದ ನ್ಯಾಯಬೆಲೆ ಅಂಗಡಿಯ ಮಂಜೂರಾತಿಯನ್ನು ರದ್ದುಪಡಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿದ್ದ ನ್ಯಾಯಬೆಲೆ ಅಂಗಡಿಯ ಮಾಲೀಕ, ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದರು ಎಂದು ತಿಳಿದುಬಂದಿದೆ. ಈ ವಿಚಾರ ವೀರಾಚಾರಿ ಅವರನ್ನು ಬಹಳಷ್ಟು ಕಾಡಿತ್ತು. ಅದನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದರು.

    ವರ್ಷದ ಹಿಂದೆ ಸುದ್ದಿಗೋಷ್ಠಿ ನಡೆಸಿದ್ದ ವೀರಚಾರಿ, ‘ನ್ಯಾಯ ಸಿಗದಿದ್ದರೆ ನೇಣಿಗೆ ಶರಣಾಗುವುದಾಗಿ ಪ್ರತಿಜ್ಞೆ ಮಾಡಿದ್ದೇನೆ. ಪಡಿತರ ಅಂಗಡಿ ಕುರಿತಂತೆ ಗ್ರಾಮದಲ್ಲಿ 15-20 ಸಲ ಪಂಚಾಯಿತಿ ಆದರೂ ತಿಳಿದುಕೊಂಡಿಲ್ಲ. ಯಾರಾದರೂ ಒಬ್ಬ ನಿಷ್ಠಾವಂತರಿಗೆ ಅಂಗಡಿ ಕೊಡಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ’ ಎಂದು ಹೇಳಿದ್ದರು. ತಾವೇ ಬೆಳೆಸಿದ್ದ ಮರಕ್ಕೆ ಸೋಮವಾರ ಮಧ್ಯರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವಿಗೆ ನ್ಯಾಯ ಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದ ಗ್ರಾಮಸ್ಥರ ಮನವೊಸಲಿಸಿದ ಜಿಲ್ಲಾಧಿಕಾರಿಗಳು, ನ್ಯಾಯಾಲಯದ ತಡೆಯಾಜ್ಞೆ ತೆರವಿಗೆ ಪ್ರಯತ್ನ ನಡೆಸುವುದಾಗಿಯೂ, ನಂತರ ಈ ವಿಚಾರವನ್ನು ಸಂಬಂಧಿಸಿದ ಸಮಿತಿಯ ಮುಂದಿಟ್ಟು ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪರಿಸ್ಥಿತಿ ತಿಳಿಯಾಯಿತು. ಹರಿಹರ ಶಾಸಕ ಎಸ್​. ರಾಮಪ್ಪ ಗ್ರಾಮಕ್ಕೆ ಭೇಟಿ ನೀಡಿದ್ದರು. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಗೆ ಕಳಿಸಿಕೊಡಲಾಯಿತು. ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೀರಾಚಾರಿ ಅವರಿಗೆ ಪತ್ನಿ, ಒಬ್ಬ ಪುತ್ರ, ಇಬ್ಬರು ಪುತ್ರಿಯರಿದ್ದಾರೆ.

    ಹಳ್ಳಿಗಳಲ್ಲಿ ಹಸಿರು ಹೊದಿಸಿದ ಸಾಧಕ ವೀರಾಚಾರಿ: ಸಾಲುಮರ ಎಂದಾಕ್ಷಣ ನಮಗೆ ತಿಮ್ಮಕ್ಕ ನೆನಪಾಗುತ್ತಾರೆ. ಆದರೆ ಅವರಂತೆಯೇ ಸಾಲುಮರಗಳನ್ನು ನೆಟ್ಟವರು ವೀರಾಚಾರಿ. ದಾವಣಗೆರೆಯಿಂದ ಶಾಮನೂರು ಮಾರ್ಗವಾಗಿ ಮಲೇಬೆನ್ನೂರು ಕಡೆಗೆ ಹೋಗುವ ಮಾರ್ಗದಲ್ಲಿ ನೇರಳೆ, ಹುಣಸೆ, ಆಲ, ಅರಳಿ, ಹೊಳೆಮತ್ತಿ, ಬೇವು ಹೀಗೆ ವಿವಿಧ ಜಾತಿಯ ಮರಗಳನ್ನು ವೀರಾಚಾರಿ ನೆಟ್ಟು ಬೆಳೆಸಿದ್ದಾರೆ. 1983ರ ಸುಮಾರಿನಲ್ಲಿ ಮಂಡಲ ಪ್ರಧಾನರೊಬ್ಬರ ಬಳಿ ವೀರಾಚಾರಿ ಎರಡು ಗಿಡಗಳನ್ನು ಕೇಳಿದ್ದರಂತೆ. ಅವರು ಕೊಡದಿದ್ದಾಗ ಇಂತಹ ಸಾವಿರಾರು ಮರಗಳನ್ನು ಬೆಳೆಸುವ ಸಂಕಲ್ಪ ತೊಟ್ಟರಂತೆ. ಅಲ್ಲಿಂದ ಅವರ ಪರಿಸರ ಕಾಯಕ ಶುರುವಾಯಿತು. ಶಾಮನೂರು, ಜರೆಕಟ್ಟೆ, ಹಾಲಿವಾಣ, ಜಿಗಳಿ, ದೊಡ್ಡಬಾತಿ ಸೇರಿ ಅನೇಕ ಗ್ರಾಮಗಳಲ್ಲಿ ಹಸಿರು ನಳನಳಿಸುವಂತೆ ಮಾಡಿದರು. ಪರಿಣಾಮ 2500ಕ್ಕೂ ಹೆಚ್ಚು ಮರಗಳು ಜನರಿಗೆ ನೆರಳಾಗಿವೆ.

    ವೀರಾಚಾರಿ ಊರೂರು ತಿರುಗಿ ಧ್ವನಿವರ್ಧಕದ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿದ್ದರು. ತಾವು ನೆಟ್ಟ ಮರಗಳಿಗೆ ಬಿಳಿ, ಕೆಂಪು ಬಣ್ಣದಲ್ಲಿ ಪಟ್ಟಿ ಬಳಿದು ಮರಗಳನ್ನು ಜತನದಿಂದ ಕಾಪಾಡಿದ್ದಾರೆ. ಅವುಗಳ ಮೇಲೆ ಪರಿಸರ ಜಾಗೃತಿಯ ಫಲಕ ಹಾಕಿದ್ದಾರೆ.

    ಚಿತ್ರದುರ್ಗ ಜಿಲ್ಲೆಯ ನಂದೀಹಳ್ಳಿಯಲ್ಲಿ ಜನಿಸಿದ ಸಾಲುಮರದ ವೀರಾಚಾರ, 1983ರಲ್ಲಿ ಮಿಟ್ಲಕಟ್ಟೆಗೆ ಬಂದು ನೆಲೆಸಿದರು. ಹೊಟ್ಟೆಪಾಡಿಗಾಗಿ ಕುಲುಮೆ ಕೆಲಸ ಮಾಡುತ್ತಿದ್ದರು. ಒಮ್ಮೆ, ಗಿಡಗಳಿಗೆ ನೀರು ಹಾಯಿಸಿದ ಕಾರ್ಮಿಕರಿಗೆ ಕೂಲಿ ಕೊಡಲು ಹಣವಿಲ್ಲ ಎಂದು ತನ್ನ ಪತ್ನಿಯ ಕಿವಿಯೋಲೆ ಮಾರಾಟ ಮಾಡಿ ಕೂಲಿ ಹಣ ನೀಡಿದರಂತೆ. ಮತ್ತೊಂದು ಬಾರಿ ಕೂಲಿ ಹಣ ನೀಡದೇ ಇದ್ದಾಗ ಕೆಲಸಗಾರರು ವೀರಾಚಾರಿ ಅವರ ಸೈಕಲ್​ ಹೊತ್ತೊಯ್ದಿದ್ದರಂತೆ.

    ಗಿಡಗಳೇ ಗಿಫ್ಟ್​: ಯಾವುದಾದರೂ ಮದುವೆಗೆ ಹೋದರೆ ವಧುವರರಿಗೆ ವೀರಾಚಾರಿ ಅವರು ಉಡುಗೊರೆಯಾಗಿ ಗಿಡಗಳನ್ನೇ ಕೊಡುತ್ತಿದ್ದರು. ಹೋದ ಕಡೆಯಲ್ಲೆಲ್ಲ ಗಿಡ ನೆಡುತ್ತಿದ್ದರು. ಇನ್ನು ಅವರ ಪರಿಸರ ಕಾಳಜಿಗೆ ಹಲವು ಪ್ರಶಸ್ತಿಗಳು ಒಲಿದಿದ್ದವು. 2019ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯೂ ಸಂದಿತ್ತು. 1997ರಲ್ಲಿ ಭಾರತ ಸೇವಾದಳ ಆಯೋಜಿಸಿದ್ದ ಹರಿಹರ ತಾಲೂಕು ಮಟ್ಟದ ಭಾವೈಕ್ಯ ಮೇಳದಲ್ಲಿ ಪರಿಸರ ಪ್ರಿಯ ಪ್ರಶಸ್ತಿ, 1998ರಲ್ಲಿ ಹರಿಹರದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ವೃಕ್ಷಪ್ರೇಮಿ, 1994 ಹಾಗೂ 1998ರಲ್ಲಿ ಡಾ. ಶಿವರಾಮ ಕಾರಂತ ಪರಿಸರ ಫೆಲೋಶಿಪ್​ ನೀಡಲಾಗಿದೆ. ಪ್ರಶಸ್ತಿಗಳ ಮೊತ್ತವನ್ನು ಪರಿಸರಕ್ಕಾಗಿಯೇ ವೀರಾಚಾರಿ ಬಳಸುತ್ತಿದ್ದರು.

    ಹುಳಿಯಾರಿನ ಪೇದೆ ಸುಧಾ ಕೊಲೆ ಹಿಂದಿದೆ ತ್ರಿಕೋನ ಪ್ರೇಮ! ಓರ್ವ ಪೊಲೀಸಪ್ಪನನ್ನು ಪ್ರೀತಿಸುತ್ತಿದ್ದ ಇಬ್ಬರು ಮಹಿಳಾ ಪೇದೆಗಳು

    ಒಂದು ವಾರದ ಅಂತರದಲ್ಲಿ ಎರಡು ಕರುಗಳಿಗೆ ಜನ್ಮ ನೀಡಿದ ಎಮ್ಮೆ! ಸಾಗರದಲ್ಲಿ ಅಪರೂಪದ ಪ್ರಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts