More

    ದಶಕಗಳಿಂದ ಅಭಿವೃದ್ಧಿ ಕಾಣದ ರಸ್ತೆ

    ಸುಂಟಿಕೊಪ್ಪ: ಕೆದಕಲ್, ಹೊರೂರು, ಮೊದೂರು ಗ್ರಾಮಕ್ಕಾಗಿ ಭೂತನಕಾಡು ಚೆಟ್ಟಳ್ಳಿ ಹಾಗೂ ಅಬ್ಬಿಯಾಲ ಮಾರ್ಗವಾಗಿ ಮಡಿಕೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ ದಶಕಗಳಿಂದ ಅಭಿವೃದ್ಧಿ ಕಾಣದೆ ಜನಸಾಮಾನ್ಯರು ಪರದಾಡುವಂತಾಗಿದೆ.

    ಈ ರಸ್ತೆಗಳಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಈ ಭಾಗದ ಬೆಳೆಗಾರರು ತೋಟಗಳಿಗೆ ಜನರನ್ನು ಇದೇ ರಸ್ತೆಯಲ್ಲಿ ಕರೆದುಕೊಂಡು ಹೋಗಬೇಕು. ಅಲ್ಲದೆ ಕಾಫಿ, ಕರಿಮೆಣಸು, ಬಾಳೆ, ಶುಂಠಿ ಇನ್ನಿತರ ಬೆಳೆಗಳನ್ನು ಬೆಳೆಯುವ ರೈತರು ದುರ್ಗಮ ರಸ್ತೆಯಲ್ಲಿ ತೆಗೆದುಕೊಂಡು ಹೋಗಬೇಕಿದೆ. ಕೆಲವೆಡೆ ರಸ್ತೆ ಕಿರಿದಾಗಿದ್ದು, ಹೊಂಡಗಳ ನಡುವೆ ತೆರಳಬೇಕಿದೆ. ಅನಿವಾರ್ಯವಾಗಿ ಬಾಡಿಗೆ ವಾಹನಗಳಿಗೆ ದುಪ್ಪಟ್ಟು ಹಣವನ್ನು ನೀಡಬೇಕಾದ ಸನ್ನಿವೇಶಗಳು ಕೂಡ ಏರ್ಪಡುತ್ತವೆ.

    ಮತ್ತೊಂದೆಡೆ ಗ್ರಾಮಗಳಲ್ಲಿ ಕಾಡಾನೆ ಸೇರಿದಂತೆ ಇತರ ವನ್ಯಜೀವಿಗಳ ಹಾವಳಿಯಿಂದ ಕೃಷಿಕರು ಹೈರಾಣಾಗಿದ್ದಾರೆ. ಮೊದೂರು ಹಾಗೂ ಹೊರೂರು ಗ್ರಾಮಗಳಲ್ಲಿ ಅಂದಾಜು 1,500 ಕ್ಕೂ ಹೆಚ್ಚಿನ ಜನಸಂಖ್ಯೆಯಿದ್ದು, ಶೇಕಡ 25ರಷ್ಟು ಬೆಳೆಗಾರರಿದ್ದು, 75 ರಷ್ಟು ಕೂಲಿ ಕಾರ್ಮಿಕರಿದ್ದಾರೆ.

    ಕುಶಾಲನಗರ ರಾಷ್ಟ್ರೀಯ ಹೆದ್ದಾರಿಯಿಂದ ಮಡಿಕೇರಿಗೆ ತೆರಳುವ ಮಾರ್ಗಮಧ್ಯೆ 6 ಕಿ.ಮೀ. ಅಂತರದಲ್ಲಿ ದೊರೆಯುವ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರೂರು, ಮೊದೂರು ಗ್ರಾಮದಲ್ಲಿ ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹೊರೂರಿನಿಂದ ಭೂತನಕಾಡು ಮಾರ್ಗವಾಗಿ ರಸ್ತೆ ನಿರ್ಮಾಣ ಮಾಡಲಾಯಿತು. ತದನಂತರದಲ್ಲಿ ರಸ್ತೆ ಅಭಿವೃದ್ಧಿಗೊಳಿಸದಿರುವುದು ವಿಪರ್ಯಾಸವಾಗಿದೆ.

    ಈ ರಸ್ತೆಯನ್ನು ಇಂದಿನ ಅವಶ್ಯಕತೆಗೆ ಅನುಗುಣವಾಗಿ ಮೇಲ್ದರ್ಜೆಗೇರಿಸಲು ಗ್ರಾಮಸ್ಥರು ಹಲವು ಬಾರಿ ಮನವಿ ಸಲ್ಲಿಸುತ್ತ ಬಂದರೂ ಪ್ರಯೋಜನವಾಗಿಲ್ಲ. 3ಮೀಟರ್ ಅಗಲದಲ್ಲಿ 4 ಕಿ.ಮೀ.ರಸ್ತೆ ಇದ್ದು, ಎರಡು ವಾಹನಗಳು ಮುಖಾಮುಖಿಯಾದರೆ ದಾರಿ ಬಿಡಲು ಸಾಧ್ಯವಾಗದ ಸ್ಥಿತಿ ಇದೆ. ತುರ್ತುವಾಹನಗಳು ತೆರಳಲು ಪರದಾಡುವಂತಾಗಿದೆ.

    ಬಸ್ ವ್ಯವಸ್ಥೆ ಇಲ್ಲದೆ ಈ ಭಾಗದ ವಿದಾರ್ಥಿಗಳು ಹಾಗೂ ಕೆಲಸಕ್ಕೆ ತೆರಳುವವರು ಸುಂಟಿಕೊಪ್ಪದವರೆಗೆ ಸಾಗಿ ವಿವಿಧ ಭಾಗಗಳಿಗೆ ಹೋಗಬೇಕಿದೆ. ಮಳೆ, ಬಿಸಿಲಿನಲ್ಲಿ ನಡೆದು ಹೋಗುವುದು ದುಸ್ತರದ ಕೆಲಸವಾಗಿದೆ. ಅಲ್ಲದೆ ಕಾಡುಪ್ರಾಣಿಗಳ ಭಯದಲ್ಲಿ ಸಂಚರಿಸಬೇಕಿದೆ. ಗ್ರಾಮದ ಜನರ ಬಹುದಿನದ ಕನಸು ಕನಸಾಗಿಯೇ ಉಳಿದಿದೆ.

    ಈ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಚಿಕ್ಲಿಹೊಳೆ ಜಲಾಶಯದ ವ್ಯಾಪ್ತಿಯ ಕಂಬಿಬಾಣೆ ಹಾಗೂ ಮೀನುಕೊಲ್ಲಿ ಭಾಗಗಳಿಂದ ಕಾಡಾನೆ, ಕಾಡುಕೋಣ, ಜಿಂಕೆ, ನವೀಲು, ಕಾಡುಹಂದಿ, ಮುಳ್ಳುಹಂದಿಗಳು ನಿತ್ಯವು ಈ ಭಾಗದ ಕಾಫಿ ತೋಟಗಳಿಗೆ ಆಹಾರ ಅರಸಿ ಬಂದು ಕೃಷಿ ಫಸಲುಗಳನ್ನು ಧ್ವಂಸಗೊಳಿಸುತ್ತಿದೆ. ಇದರಿಂದ ಕೃಷಿಕರು ತಮ್ಮ ಕೃಷಿಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts