More

    ಅಪಾಯಕ್ಕೆ ಆಹ್ವಾನಿಸುತ್ತಿರುವ ರಸ್ತೆ ಕಂದಕ

    ಹನೂರು: ತಾಲೂಕು ಕೇಂದ್ರದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಒಡೆಯರಪಾಳ್ಯ ಗ್ರಾಮದ ಬಳಿ ಮುಖ್ಯ ರಸ್ತೆ ಕುಸಿದು ಕಂದಕ ನಿರ್ಮಾಣವಾಗಿ 6 ತಿಂಗಳು ಕಳೆದರೂ ದುರಸ್ತಿಗೆ ಪಿಡಬ್ಯುಡಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಈ ಮಾರ್ಗವು ತಮಿಳುನಾಡಿನ ಬಣ್ಣಾರಿ, ಸತ್ತಿ, ಕೊಯಮತ್ತೂರು ಹಾಗೂ ಇನ್ನಿತರೆ ಕಡೆಗಳಿಗೆ ಸಂಪರ್ಕ ಕಲ್ಪಿಸುವ ಅಂತಾರಾಜ್ಯ ಹೆದ್ದಾರಿಯಾಗಿದ್ದು, ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಜತೆಗೆ ಈ ಭಾಗದ ಬೈಲೂರು, ಅರ್ಧನಾರಿಪುರ, ಗುಂಡಿಮಾಳ, ಹೊಸಪಾಳ್ಯ ಹಾಗೂ ಇನ್ನಿತರ ಗ್ರಾಮದ ಜನರು ಸಹ ಈ ರಸ್ತೆಯ ಮೂಲಕ ಸಂಚರಿಸುತ್ತಾರೆ. ಆದರೆ ಕಳೆದ 6 ತಿಂಗಳ ಹಿಂದೆ ಒಡೆಯರಪಾಳ್ಯ ಭಾಗದಲ್ಲಿ ಸುರಿದ ಜೋರು ಮಳೆಗೆ ಮುಖ್ಯ ರಸ್ತೆಯ ಒಂದು ಬದಿಯಲ್ಲಿ ಕಂದಕ ನಿರ್ಮಾಣವಾಗಿದೆ. ಆದರೆ ಪಿಡಬ್ಯುಡಿ ಇಲಾಖೆಯ ಅಧಿಕಾರಿಗಳು ರಿಪೇರಿ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದು, ಕುಸಿದಿರುವ ಕಡೆ ಬ್ಯಾರಿಕೆಟ್ ಇರಿಸಲಾಗಿದೆ. ಕಂದಕ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಇದರಿಂದ ಸಾರ್ವಜನಿಕರಲ್ಲಿ ಜೀವ ಭಯ ಕಾಡುತ್ತಿರುವುದು ಒಂದೆಡೆಯಾದರೆ, ರಾತ್ರಿ ವೇಳೆ ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಸಂಭವಿಸುವ ಸಾಧ್ಯತೆ ಇದೆ.

    ಮುಂದಿನ ದಿನಗಳಲ್ಲಿ ರಸ್ತೆಯು ಮತ್ತಷ್ಟು ಕುಸಿಯುವ ಸಾಧ್ಯತೆ ಹೆಚ್ಚಾಗಿರುವುದರಿಂದ ಸಂಚಾರಕ್ಕೆ ತುಂಬ ತೊಡುಕಾಗಿದೆ. ಆದರೆ 6 ತಿಂಗಳು ಕಳೆದರೂ ರಸ್ತೆ ದುರಸ್ತಿ ಮಾಡುವಲ್ಲಿ ಸಂಬಂಧಪಟ್ಟವರು ಗಮನಹರಿಸದಿರುವುದರ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ಅನಾಹುತ ಸಂಭವಿಸುವ ಮುನ್ನಾ ರಸ್ತೆ ಸರಿಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts