More

    ಖಡಕ್​ ಮಾತು, ನೇರ-ನಿಷ್ಠುರವಾದಿ: ಚಿಕ್ಕಬಳ್ಳಾಪುರ ಕ್ಷೇತ್ರ ಕಂಡಂತೆ ಜಾಲಪ್ಪ

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾಜಿ ಸಚಿವ, ಸಮಾಜ ಸೇವಕ, ಹಿರಿಯ ರಾಜಕಾರಣಿ ಆರ್​.ಲಕ್ಷ್ಮೀನಾರಾಯಣಪ್ಪ ಜಾಲಪ್ಪ (97) ಇನ್ನಿಲ್ಲ. ಸುಧೀರ್ಘ ರಾಜಕಾರಣದಲ್ಲಿ ಜಾಲಪ್ಪಗೆ ರಾಜಕೀಯವಾಗಿ ಬಹುತೇಕ ಗಟ್ಟಿ ನೆಲೆ ನೀಡಿದ್ದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ. ನೇರ, ನಿಷ್ಠುರವಾದಿ, ಮುಂಗೋಪಿ ಎನಿಸಿಕೊಂಡಿದ್ದ ಜಾಲಪ್ಪ. ಖಡಕ್​ ಮಾತುಗಾರ. ಚಿಕ್ಕಬಳ್ಳಾಪುರ ಕ್ಷೇತ್ರ ಕಂಡಂತೆ ಜಾಲಪ್ಪ ಕುರಿತ ಬರಹ ಇಲ್ಲಿದೆ.

    | ವೆಂಕಟೇಶ್​ ಚಿಕ್ಕಬಳ್ಳಾಪುರ
    ಸುಧೀರ್ಘ ರಾಜಕಾರಣದಿಂದ ನೇರ, ನಿಷ್ಠುರವಾದಿ, ಜತೆಗೆ ಮುಂಗೋಪಿ ಎನಿಸಿಕೊಂಡವರು ಆರ್​.ಎಲ್​.ಜಾಲಪ್ಪ. ಖಡಕ್​ ಮಾತುಗಳಲ್ಲಿ ದಿಟ್ಟ ಉತ್ತರ, ಆಗಾಗ ಹಾಸ್ಯಮಿಶ್ರಿತ ಹೇಳಿಕೆಗಳಿಂದ ಎದುರಾಳಿಯನ್ನು ಕೆಣಕುವ ಮೂಲಕ ಗಮನ ಸೆಳೆಯುತ್ತಿದ್ದರು. ತಂತ್ರ-ಪ್ರತಿತಂತ್ರದಿಂದ ಪಾರಮ್ಯ ಮೆರೆದು ಸುಲಭವಾಗಿ ಗೆಲುವು ಸಾಧಿಸುತ್ತಿದ್ದ ಚಾಣಾಕ್ಷ್ಯ.

    ಮಾಜಿ ಸಚಿವ ಜಿ.ರಾಮೇಗೌಡ, ಹಿರಿಯ ನಾಯಕ ಮುಗವಾಳಪ್ಪ ಗರಡಿಯಲ್ಲಿ ಬೆಳೆದ ಜಾಲಪ್ಪಗೆ ರಾಜಕೀಯವಾಗಿ ಬಹುತೇಕ ಗಟ್ಟಿ ನೆಲೆ ನೀಡಿದ್ದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ. ಈ ವ್ಯಾಪ್ತಿಯಲ್ಲಿ 7 ಬಾರಿ ಸ್ಪರ್ಧಿಸಿದ್ದು ಮೂರು ಬಾರಿ ಸೋಲು ಕಂಡಿದ್ದಾರೆ. ಉಳಿದಂತೆ ನಾಲ್ಕು ಬಾರಿ (1996ರಲ್ಲಿ ಜನತಾ ದಳ, 1998, 1999, 2004ರಲ್ಲಿ ಕಾಂಗ್ರೆಸ್​) ಗೆಲುವು ಸಾಧಿಸಿದ್ದರು. ಇವರನ್ನು ಶತಾಯ ಗತಾಯ ಸೋಲಿಸಬೇಕೆಂದು ನಟಿ ಜಯಂತಿ (1998ರಲ್ಲಿ), ಶಶಿಕುಮಾರ್​ (2004ರಲ್ಲಿ) ಅವರನ್ನು ಚುನಾವಣಾ ಅಖಾಡಕ್ಕಿಳಿಸಲಾಗಿತ್ತು. ಪ್ರಾರಂಭದಲ್ಲಿ ಖ್ಯಾತನಾಮರ ಎದುರು ಜಾಲಪ್ಪ ಸೋಲು ಕಟ್ಟಿಟ್ಟಬುತ್ತಿ ಎನ್ನಲಾಗಿತ್ತು, ಆದರೆ ಇದೆಲ್ಲವನ್ನೂ ಹುಸಿಗೊಳಿಸಿ ಗೆಲುವಿನ ನಗೆ ಬೀರಿದ್ದರು.

    ಕ್ಷೇತ್ರ ಕಾಂಗ್ರೆಸ್​ನ ಭದ್ರಕೋಟೆಯಾಗಿ ಉಳಿಯುವಲ್ಲಿ ಇವರ ಚತುರ ರಾಜಕಾರಣವೇ ಕಾರಣ. ಮಾಜಿ ಮುಖ್ಯಮಂತ್ರಿಗಳಾದ ದೇವರಾಜು ಅರಸು, ಸಿದ್ದರಾಮಯ್ಯ ಅವಧಿಯಲ್ಲಿ ಅಹಿಂದ ಸಮಾವೇಶವನ್ನು ನಡೆಸುವ ಮೂಲಕ ಹಿಂದುಳಿದ ವರ್ಗಗಳನ್ನು ಸಂಘಟಿಸಿ ಪಕ್ಷ ಮತ್ತು ವ್ಯಕ್ತಿತ್ವ ಪ್ರಾಬಲ್ಯ ಮೆರೆದರು.

    ಬೆಂಗಳೂರು ಗ್ರಾಮಾಂತರ, ಅವಿಭಜಿತ ಕೋಲಾರ ಜಿಲ್ಲೆಯಲ್ಲಿನ ಘಟಾನುಟಿ ನಾಯಕರಿಗೆ ಗಾಡ್​ ಫಾದರ್​ ಆಗಿ ಹಿಡಿತ ಹೊಂದಿದ್ದರು. ದೇವರಾಜು ಅರಸು ವೈದ್ಯಕೀಯ ಕಾಲೇಜಿನ ಕಾರ್ಯದರ್ಶಿಯಾಗಿರುವ ಜಿ.ಎಚ್​.ನಾಗರಾಜ್​ (ಜಾಲಪ್ಪ ಅಳಿಯ), ಗೌರಿಬಿದನೂರು ಶಾಸಕ ಎನ್​.ಎಚ್​.ಶಿವಶಂಕರರೆಡ್ಡಿ ಸೇರಿ ಹಲವರು ಇವರ ಗರಡಿಯಲ್ಲೇ ಬೆಳೆದವರು. ವಿಧಾನಸಭಾ ಕ್ಷೇತ್ರ ಸೇರಿ ಯಾವುದೇ ಚುನಾವಣೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಜಾಲಪ್ಪ ಕೃಪಾಕಟಾಕ್ಷದೊಂದಿಗೆ ಟಿಕೆಟ್​, ಗೆಲುವು ನಿರ್ಧಾರವಾಗುತ್ತಿತ್ತು.

    ರಾಜೀನಾಮೆ ಬಿಸಾಡಿದ್ದರು…
    ಎಚ್​.ಡಿ.ದೇವೇಗೌಡ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕೇಂದ್ರ ಸಚಿವ ಖಾತೆಯನ್ನು ರಾಜ್ಯ ಖಾತೆಯನ್ನಾಗಿ ಬದಲಾಯಿಸಿದ್ದಕ್ಕೆ ಕೋಪಗೊಂಡು ರಾಜೀನಾಮೆ ಪತ್ರ ನೀಡಿದ್ದರು. ಮನವೊಲಿಕೆಯಲ್ಲೂ ಹಠ ಬಿಟ್ಟಿರಲಿಲ್ಲ. ರಾಜಕೀಯ ನಿವೃತ್ತಿ ಅಂಚಿನಲ್ಲಿದ್ದ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದಿಂದ ಅಳಿಯ ಜಿ.ಎಚ್​. ನಾಗರಾಜ್​ಗೆ ಕಾಂಗ್ರೆಸ್​ನ ಟಿಕೆಟ್​ ಬಯಸಿದ್ದರು. ಆದರೆ, ಇದಕ್ಕೆ ಹೈಕಮಾಂಡ್​ ನಿರಾಕರಿಸಿದ್ದರಿಂದ ಪಕ್ಷದ ಚಟುವಟಿಕೆಯಿಂದ ದೂರ ಉಳಿಯುವ ಮೂಲಕ ಟಾಂಗ್​ ನೀಡಿದ್ದರು. ಅಲ್ಲಿಂದ ಕ್ಷೇತ್ರದಲ್ಲಿ ಜಾಲಪ್ಪ ರಾಜಕೀಯ ಹಸ್ತಕ್ಷೇಪವನ್ನು ಬಿಟ್ಟರು.

    ಗುಂಡು ಹಾರಿಸಿ, ಸವಾಲೆಸೆದಿದ್ರು
    80 ದಶಕದಲ್ಲಿ ಗೌರಿಬಿದನೂರು ತಾಲೂಕಿನ ಡಿ.ಪಾಳ್ಯದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳುತ್ತಿದ್ದ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಕಾರ್ಯಕ್ರಮದ ವೇದಿಕೆಯ ಮೇಲೆ ಕಲ್ಲುಗಳನ್ನು ಎಸೆದು ಪರಾರಿಯಾಗಿದ್ದರು. ಇದಕ್ಕೆ ಜಗ್ಗದ ಜಾಲಪ್ಪ ಪ್ಯಾಂಟ್​ ಜೇಬಿನಲ್ಲಿದ್ದ ರಿವಾಲ್ವಾರ್​ ತೆಗೆದು ಆಕಾಶದತ್ತ 4 ಸುತ್ತು ಗುಂಡು ಹಾರಿಸಿದ್ದರು. ಅಲ್ಲದೇ ಧೈರ್ಯವಿದ್ದವರು ಎದುರಿಗೆ ಬಂದು ನಿಲ್ಲಲು ಸವಾಲು ಹಾಕಿದ್ದರು ಎನ್ನುವುದನ್ನು ರಾಜಕೀಯ ಹಿರಿಯ ವಿಶ್ಲೇಷಕ ಎಚ್​.ವಿ.ಸೋಮಶೇಖರ್​ ಸ್ಮರಿಸುತ್ತಾರೆ.

    ಆ ಕ್ಷಣದ ನಿರ್ಧಾರಕ್ಕೆ ಕೊನೇವರೆಗೂ ಬದ್ಧ
    ಅಳಿಯ ಜಿ.ಎಚ್​.ನಾಗರಾಜ್​ ಮನೆಯ ಸ್ಥಳಕ್ಕೆ ಸಂಬಂಧಿಸಿದಂತೆ ಉಂಟಾಗಿದ್ದ ವಿವಾದದ ಬಗ್ಗೆ ಚರ್ಚಿಸಲು ಹೋದಾಗ, ಅಂದಿನ ಜಿಲ್ಲಾಧಿಕಾರಿ ಸುಬೋಧ್​ ಯಾದವ್​ ಗಂಟೆಗಟ್ಟಲೇ ಜಿಲ್ಲಾಡಳಿತದ ಕಚೇರಿ ಬಾಗಿಲಿನಲ್ಲಿ ನಿಲ್ಲಿಸಿದ್ದಲ್ಲದೆ ಒಳಗೆ ಬಿಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಜತೆಗೆ ಆ ಅಧಿಕಾರಿ ಭಾಗವಹಿಸುವ ಸಭೆ, ಕಾರ್ಯಕ್ರಮಗಳಿಂದಲೂ ದೂರ ಉಳಿದಿದ್ದರು. ಯಾವುದೇ ವಿಚಾರದಲ್ಲಾದರೂ ಜಾಲಪ್ಪ ಮುನಿಸಿಕೊಂಡರೆ, ಆ ಕ್ಷಣದ ಅಂತಿಮ ತೀರ್ಮಾನಕ್ಕೆ ಬದ್ಧರಾಗಿಯೇ ಇರುತ್ತಿದ್ದರು. ಎಂತಹ ಮನವೊಲಿಕೆಗೂ ತಟಸ್ಥ ಧೋರಣೆಯೇ ಉತ್ತರವಾಗುತ್ತಿತ್ತು ಎಂಬುದು ಅವರನ್ನು ಹತ್ತಿರದಿಂದ ಕಂಡ ಬಹುತೇಕರ ಅಭಿಪ್ರಾಯ.

    ಕಿಂಡಿ ಅಣೆಕಟ್ಟು ನಿರ್ಮಾತೃ ಜಾಲಪ್ಪ: ಆಂಧ್ರದ ವಿರೋಧ ಮೆಟ್ಟಿನಿಂತು ಕಾರ್ಯ ಸಾಧನೆ

    ಮುತ್ತಪ್ಪ ರೈ ಆಸ್ತಿ ಮಾರಾಟಕ್ಕೆ ಹೈಕೋರ್ಟ್ ತಡೆಯಾಜ್ಞೆ

    ಗರ್ಭಿಣಿಯಾಗಿದ್ದ ಅಪ್ರಾಪ್ತೆ ಶವವಾಗಿ ಪತ್ತೆ! ಮಂಡ್ಯದಲ್ಲಿ 14ರ ಬಾಲಕಿ ಬಾಳಿಗೆ ಕೊಳ್ಳಿ ಇಟ್ಟನಾ 50ರ ವ್ಯಕ್ತಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts