More

    ಕಿಂಡಿ ಅಣೆಕಟ್ಟು ನಿರ್ಮಾತೃ ಜಾಲಪ್ಪ: ಆಂಧ್ರದ ವಿರೋಧ ಮೆಟ್ಟಿನಿಂತು ಕಾರ್ಯ ಸಾಧನೆ

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾಜಿ ಸಚಿವ, ಸಮಾಜ ಸೇವಕ, ಹಿರಿಯ ರಾಜಕಾರಣಿ ಆರ್​.ಲಕ್ಷ್ಮೀನಾರಾಯಣಪ್ಪ ಜಾಲಪ್ಪ (97) ಇನ್ನಿಲ್ಲ. ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಆರ್​.ಎಲ್​.ಜಾಲಪ್ಪ ಅವರು ಡಿ.17ರಂದು ಇಹಲೋಕ ತ್ಯಜಿಸಿದರು. ಆದರೆ ಅವರು ಬದುಕಿದ್ದಾಗ ಮಾಡಿದ ಸಮಾಜಮುಖಿ ಕಾರ್ಯಗಳು ಎಂದಿಗೂ ಅಜರಾಮರ.

    | ಸಿ.ಎ.ಮುರಳೀಧರ್​ ಗೌರಿಬಿದನೂರು
    ತವರೂರು ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಆದರೂ ಪಕ್ಕದ ಗೌರಿಬಿದನೂರು ತಾಲೂಕಿನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಆರ್​.ಎಲ್​.ಜಾಲಪ್ಪ ಅವರಿಗೆ ಗೌರಿಬಿದನೂರು ತಾಲೂಕಿನ ಬಗ್ಗೆ ಇದ್ದ ಕಾಳಜಿಗೆ ಕಿಂಡಿ ಅಣೆಕಟ್ಟೆಯೇ ಸಾಕ್ಷಿ.

    ಶಾಶ್ವತ ನದಿ-ನಾಲೆಗಳನ್ನು ಹೊಂದಿಲ್ಲದೆ ಕುಡಿಯುವ ನೀರಿಗೂ ಪರಿತಪಿಸುತ್ತಿದ್ದ ಗೌರಿಬಿದನೂರು ತಾಲೂಕಿಗೆ ನೀರಿನ ಆಸರೆ ನೀಡಲು ನಿರ್ಮಾಣವಾಗಿದ್ದೇ ಕಿಂಡಿ ಅಣೆಕಟ್ಟು. ಮಳೆಗಾಲದಲ್ಲಿ ಹರಿಯುವ ಉತ್ತರ ಪಿನಾಕಿನಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿ ಗೌರಿಬಿದನೂರು ನಗರ ಹಾಗೂ ಆ ಭಾಗದ 8 ಕೆರೆಗಳಿಗೆ ನೀರು ಹರಿಸುವ ಯೋಜನೆಯ ಕಾರ್ಯರೂಪಕ್ಕೆ ತಂದ ಕೀರ್ತಿ ಜಾಲಪ್ಪಗೆ ಸಲ್ಲುತ್ತದೆ.

    ಅಣೆಕಟ್ಟು ನಿರ್ಮಾಣಕ್ಕೆ ನೆರೆಯ ಆಂಧ್ರಪ್ರದೇಶದ ರಾಜಕಾರಣಿಗಳು ವಿರೋಧ ವ್ಯಕ್ತಪಡಿಸಿದರೂ ಇದ್ಯಾವುದಕ್ಕೂ ಸೊಪ್ಪುಹಾಕದ ಜಾಲಪ್ಪ, ಆಂಧ್ರದವರಿಗೆ ಸೆಡ್ಡು ಹೊಡೆದು ವಿವಿಧ ಇಲಾಖೆಗಳಿಂದ ಅನುಮತಿ ತಂದು ಅಣೆಕಟ್ಟು ನಿರ್ಮಿಸುವಲ್ಲಿ ಯಶಸ್ವಿಯಾದರು. ಅವರ ದೂರದೃಷ್ಟಿಯ ಫಲವಾಗಿ ನಿರ್ಮಾಣವಾದ ಕಿಂಡಿ ಅಣೆಕಟ್ಟು ಇಂದು ತಾಲೂಕಿನ ಆಸರೆಯಾಗಿದ್ದು ನಗರದ ನೀರಿನ ಹಾಹಾಕಾರ ನೀಗಿಸುವ ಜತೆಗೆ ಪೋಷಕ ಕಾಲುವೆಗಳ ಮೂಲಕ ಹಲವು ಕೆರೆಗಳಿಗೆ ನೀರು ಹರಿಯುತ್ತಿದೆ.

    ಜಕ್ಕಲಮಡು ಜಲಾಶಯದ ವಿಷಯದಲ್ಲಿ ಚಿಕ್ಕಬಳ್ಳಾಪುರ ಜನರ ವಿರೋಧ ಕಟ್ಟಿಕೊಂಡಿದ್ದ ಜಾಲಪ್ಪ ಆಂಧ್ರದವರನ್ನು ಎದುರು ಹಾಕಿಕೊಂಡು ಕಿಂಡಿ ಅಣೆಕಟ್ಟು ನಿರ್ಮಿಸುವ ಮೂಲಕ ಗೌರಿಬಿದನೂರು ತಾಲೂಕಿನ ಜನರ ಪ್ರೀತಿಗೆ ಪಾತ್ರರಾಗಿದ್ದರು.

    ಶಿಷ್ಯರಿಗೆ ರಾಜಕೀಯ ನೆಲೆ
    ತಮ್ಮ ಬೆಂಬಲಿಗರಿಗೆ ಭದ್ರ ಬುನಾದಿ ಹಾಕಿಕೊಟ್ಟು ಅವರನ್ನು ನಾಯಕರನ್ನಾಗಿ ಬೆಳೆಸಿ ರಾಜಕೀಯ ನೆಲೆ ಕಲ್ಪಿಸಿದ್ದು ಜಾಲಪ್ಪನವರು. ಜಿಪಂ ಮಾಜಿ ಅಧ್ಯಕ್ಷ ಎಚ್​.ವಿ.ಮಂಜುನಾಥ್​, ನಾಯಕ ಸಮುದಾಯದ ಮುಖಂಡ ಆರ್​. ಅಶೋಕ್​, ಕೋಚಿಮುಲ್​ ನಿರ್ದೇಶಕ ಜೆ.ಕಾಂತರಾಜು, ಕರುನಾಡ ಕನ್ನಡಿಗರ ವೇದಿಕೆ ಜಿ.ಬಾಲಾಜಿ ಸೇರಿ ಅನೇಕರು ಜಾಲಪ್ಪನವರ ಗರಡಿಯಲ್ಲಿ ಬೆಳೆದವರು.

    ಪಕ್ಷ ವಿರೋಧಿ ರಾಜಕಾರಣ ಮಾಡಿದವರಲ್ಲ
    ಶಾಸಕ ಎನ್​.ಎಚ್​.ಶಿವಶಂಕರರೆಡ್ಡಿ ಹಾಗೂ ಜಾಲಪ್ಪ ಅವರ ರಾಜಕೀಯ ಸಂಬಂಧ ಅಷ್ಟಕ್ಕಷ್ಟೇ ಎಂಬಂತೆ ಇತ್ತಾದರೂ ಎಂದಿಗೂ ಕೂಡ ಜಾಲಪ್ಪನವರು ಪಕ್ಷ ವಿರೋಧಿ ರಾಜಕಾರಣ ಮಾಡಿದವರಲ್ಲ. ಆದರೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬಂದ ಬಳಿಕ ಜಾಲಪ್ಪನವರು ರಾಜಕೀಯ ನಿವೃತ್ತಿ ಘೋಷಿಸಿದರು. ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಹೊಂದಿದ್ದ ಅವರು ಆ ಸಮುದಾಯಕ್ಕೆ ಸೇರಿದ ತಮ್ಮ ಶಿಷ್ಯ ಆರ್​.ಅಶೋಕ್​ ಅವರನ್ನು ವಿಧಾನಸಭೆ ಚುನಾವಣೆಗೆ ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವ ಪ್ರಯತ್ನ ನಡೆಸಿದಾದರೂ ಫಲ ನೀಡಲಿಲ್ಲ.

    ಮಾಜಿ ಸಚಿವ ಜಾಲಪ್ಪನವರು ನೇರ, ನಡೆ ನುಡಿಯ ಹಿರಿಯ ರಾಜಕೀಯ ಮುತ್ಸದ್ದಿ. ಹಿಂದುಳಿದ ವರ್ಗಗಳ ನೇತಾರ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ನಿಧನ ರಾಜಕೀಯ ವಲಯಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ.
    | ಎನ್​.ಎಚ್​.ಶಿವಶಂಕರರೆಡ್ಡಿ ಶಾಸಕ

    ಮುತ್ತಪ್ಪ ರೈ ಆಸ್ತಿ ಮಾರಾಟಕ್ಕೆ ಹೈಕೋರ್ಟ್ ತಡೆಯಾಜ್ಞೆ

    ಗರ್ಭಿಣಿಯಾಗಿದ್ದ ಅಪ್ರಾಪ್ತೆ ಶವವಾಗಿ ಪತ್ತೆ! ಮಂಡ್ಯದಲ್ಲಿ 14ರ ಬಾಲಕಿ ಬಾಳಿಗೆ ಕೊಳ್ಳಿ ಇಟ್ಟನಾ 50ರ ವ್ಯಕ್ತಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts