More

    ಸೈನಿಕ ಮಗನನ್ನೇ ಗುಂಡಿಕ್ಕಿ ಹತ್ಯೆಗೈದ ನಿವೃತ್ತ ಸೈನಿಕನಿಗೆ ಜೀವಾವಧಿ ಶಿಕ್ಷೆ

    ಬೆಳಗಾವಿ: ವಾಹನ ಖರೀದಿ ವಿಚಾರವಾಗಿ ಮನೆಯಲ್ಲಿ ನಡೆದ ಜಗಳದ ಸಂದರ್ಭದಲ್ಲಿ ತನ್ನ ಸೈನಿಕ ಮಗನನ್ನೇ ಗುಂಡಿಕ್ಕಿ ಹತ್ಯೆಗೈದ ನಿವೃತ್ತ ಸೈನಿಕನಿಗೆ ಇಲ್ಲಿನ ವಿಚಾರಣಾ ನ್ಯಾಯಾಲಯವು 30 ಸಾವಿರ ರೂ. ದಂಡದೊಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಬುಧವಾರ ಆದೇಶಿಸಿದೆ. ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮದ ವಿಠ್ಠಲ ಇಂಡಿ ಶಿಕ್ಷೆಗೆ ಗುರಿಯಾದ ನಿವೃತ್ತ ಸೈನಿಕ.

    ಘಟನೆ ಹಿನ್ನೆಲೆ: ಹತ್ಯೆಗೀಡಾದ ಈರಣ್ಣ ಇಂಡಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಹಳೆಯ ವಾಹನ ಮಾರಾಟ ಮಾಡಿದ್ದ ವಿಠ್ಠಲ, ಹೊಸ ವಾಹನ ಖರೀದಿಸಲು ಹಣ ನೀಡುವಂತೆ ಎರಡನೇ ಪತ್ನಿ ಹಾಗೂ ರಜೆಗೆ ಬಂದಿದ್ದ ಮಗನೊಂದಿಗೆ 2016 ಡಿಸೆಂಬರ್ 12ರಂದು ರಾತ್ರಿ 9.30ರ ಸುಮಾರಿಗೆ ಜಗಳವಾಡಿದ್ದ. ಜಗಳ ವಿಕೋಪಕ್ಕೆ ತಿರುಗಿ ತಾಳ್ಮೆ ಕಳೆದುಕೊಂಡ ವಿಠ್ಠಲ, ತನ್ನ ಬಳಿ ಇದ್ದ ರಿವಾಲ್ವರ್‌ನಿಂದ ಪುತ್ರನ ಮೇಲೆ ಗುಂಡು ಹಾರಿಸಿದ್ದ. ಗಂಭೀರ ಗಾಯಗೊಂಡ ಈರಣ್ಣ ಮೃತಪಟ್ಟಿದ್ದ. ಗಲಾಟೆ ಬಿಡಿಸಲು ಬಂದ ಪುತ್ರಿ ಪೂಜಾ ಮೇಲೂ ಗುಂಡಿನ ದಾಳಿ ನಡೆದಿತ್ತು.

    ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಅಂದಿನ ಬೈಲಹೊಂಗಲ ವೃತ್ತ ನಿರೀಕ್ಷಕ ಸಂಗನಗೌಡ ಪಾಟೀಲ ಅವರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯ 17 ಸಾಕ್ಷಿಗಳ ವಿಚಾರಣೆ, 70 ದಾಖಲೆ ಪರಿಶೀಲನೆ ನಡೆಸಿದೆ. 25 ಮುದ್ದೆ ಮಾಲು ಗುರುತಿಸಿ ಆರೋಪ ಸಾಬೀತರಾಗಿದ್ದರಿಂದ ನ್ಯಾಯಾಧೀಶ ಬಸವರಾಜ ಅವರು ಜೀವಾವಧಿ ಶಿಕ್ಷೆ ಹಾಗೂ 30 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ವಿದ್ಯಾಸಾಗರ ದರಬಾರೆ ವಾದ ಮಂಡಿಸಿದ್ದರು.

    ಎರಡು ಮದುವೆ ಆಗಿದ್ದ ವಿಠ್ಠಲ

    ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿಂಗಾಣಿ ಗ್ರಾಮದ ವಿಠ್ಠಲ, ಇಬ್ಬರು ಪತ್ನಿಯರನ್ನು ಹೊಂದಿದ್ದ. ಮೊದಲನೇ ಪತ್ನಿ ಮಲಕವ್ವ, ಹಿಂಗಾಣಿ ಗ್ರಾಮದಲ್ಲಿ ಹಾಗೂ ಎರಡನೇ ಹೆಂಡತಿ ಅನುಸೂಯಾ ಅವರು ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮದಲ್ಲಿ ನೆಲೆಸಿದ್ದರು. ಸೇನೆಯಲ್ಲಿದ್ದ ವಿಠ್ಠಲ ನಿವೃತ್ತಿ ಬಳಿಕ ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಬೈಲಹೊಂಗಲದಲ್ಲಿ ಕೆಲಸ ಮಾಡುವಾಗ ಈತನಿಗೆ ಅನುಸೂಯಾ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿ ಇಬ್ಬರೂ ಮದುವೆಯಾಗಿದ್ದರು. ಈ ದಂಪತಿಯ ಮೂವರ ಮಕ್ಕಳ ಪೈಕಿ ಹಿರಿಯ ಮಗ ಈರಣ್ಣ ಸೇನೆಗೆ ಸೇರಿದ್ದನು. ಮೊದಲನೇ ಪತ್ನಿಗೂ ಓರ್ವ ಪುತ್ರನಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts