ಶಿಗ್ಗಾಂವಿ: ಎಕರೆಗೆ 25 ಸಾವಿರ ರೂಪಾಯಿ ಬರ ಪರಿಹಾರ ಸೇರಿದಂತೆ ರೈತರ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರೈತ ಸಂಘದ ತಾಲೂಕು ಘಟಕದ ಕಾರ್ಯಕರ್ತರು ತಹಸೀಲ್ದಾರ್ ಸಂತೋಷ ಹಿರೇಮಠ ಅವರ ಮೂಲಕ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಿದರು.
ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರೂಪಾಯಿ ಪರಿಹಾರ ತಕ್ಷಣವೇ ಕೊಡಬೇಕು. ಬೆಳೆ ವಿಮೆ ಕಂತು ಪಾವತಿಸಿದ ರೈತರಿಗೆ ತಕ್ಷಣ ವಿಮಾ ಹಣ ಮಂಜೂರು ಮಾಡಬೇಕು. ಕೃಷಿ ಇಲಾಖೆ ವಿತರಿಸುತ್ತಿರುವ ಸ್ಪ್ರೀಂಕ್ಲರ್ ಪೈಪ್‌ಸೆಟ್ ಕಳಪೆಯಾಗಿದ್ದು, ಗುಣಮಟ್ಟದ ಪೈಪ್‌ಗಳನ್ನು ಮೊದಲಿನ ದರಕ್ಕೆ ರೈತರಿಗೆ ವಿತರಿಸಬೇಕು. ಹೊಸದಾಗಿ ಕೊರೆಸಿರುವ ಕೊಳವೆಬಾವಿಗಳಿಗೆ ತಕ್ಷಣ ವಿದ್ಯುತ್ ಸಂಪರ್ಕ, ಜೋಳಕ್ಕೆ ಹೆಚ್ಚಿನ ಬೆಂಬಲ ಬೆಲೆ ನಿಗದಿ ಮಾಡಿ, ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮತ್ತು ಕೃಷಿ ಮಂತ್ರಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಸಂತೋಷ ಹಿರೇಮಠ ಅವರಿಗೆ ಸಲ್ಲಿಸಲಾಯಿತು.
ರೈತ ಮುಖಂಡರಾದ ಈರಣ್ಣ ಸಮಗೊಂಡ, ಆನಂದ ಕೆಳಗಿನಮನಿ, ಶಂಕರಗೌಡ ಪಾಟೀಲ, ಬಸಲಿಂಗಪ್ಪ ನರಗುಂದ, ಮುತ್ತು ಗುಡಗೇರಿ, ರಮೇಶ ಜೋಳದ, ಶಿವಣ್ಣ ಕಬ್ಬೂರ, ಪಂಚಯ್ಯ ಹಿರೇಮಠ, ಮಾಲತೇಶ ಬಾರಕೇರ, ರಮೇಶ ಜೋಳದ ಸೇರಿದಂತೆ ವಿವಿಧ ರೈತ ಮುಖಂಡರು ಇದ್ದರು.