More

    ಮಳೆ ಎಫೆಕ್ಟ್​: ಟೊಮ್ಯಾಟೊ ಬೆಲೆ ದಿಢೀರ್​ ಏರಿಕೆ

    ಬೂದಿಕೋಟೆ (ಬಂಗಾರಪೇಟೆ): ಟೊಮ್ಯಾಟೊ ಬೆಲೆ ದಿಢೀರ್​ ಏರಿಕೆ ಕಂಡಿದ್ದು, ಬೆಳೆಗಾರರ ಮೊಗದಲ್ಲಿ ಸಂತಸ ಮನೆ ಮಾಡಿದೆ. ನಾಲ್ಕೈದು ತಿಂಗಳಿಂದ ಬೆಲೆ ಹಾಗೂ ಬೇಡಿಕೆ ಇಲ್ಲದೆ ಟೊಮ್ಯಾಟೊ ಬೆಳೆಗಾರರು ಕಂಗಾಲಾಗಿದ್ದರು. ಕಟಾವು ಮಾಡಿದ ಕೂಲಿಯೂ ದಕ್ಕುವುದಿಲ್ಲ ಎಂದು ಬಹುತೇಕ ರೈತರು ಗಿಡದಲ್ಲಿ ಟೊಮ್ಯಾಟೊ ಕೀಳದೆ ಹಾಗೇಬಿಟ್ಟಿದ್ದರು. ಫಸಲು ಜಮೀನಿನಲ್ಲೇ ಕೊಳೆಯುತ್ತಿರುವುದನ್ನ ಕಂಡು ಅದೆಷ್ಟೋ ರೈತರು ಕಣ್ಣೀರು ಹಾಕಿದ್ದರು. ಇದೀಗ ಟೊಮ್ಯಾಟೊ ಬೆಲೆ ದಿನೇ ದಿನೆ ಏರಿಕೆಯಾಗುತ್ತಿದ್ದು, ಹೊರ ರಾಜ್ಯಗಳ ವ್ಯಾಪಾರಿಗಳು ಕೋಲಾರ ಮಾರುಕಟ್ಟೆಗೆ ಬರಲಾರಂಭಿಸಿದ್ದಾರೆ.

    ಕೋಲಾರ ಜಿಲ್ಲೆ ಟೊಮ್ಯಾಟೊ ಬೆಳೆಗೆ ಹೆಸರುವಾಸಿಯಾಗಿದ್ದು, ಹಲವು ರಾಜ್ಯಗಳಿಗೆ ರಪ್ತು ಆಗುವುದರಿಂದ ಉತ್ತಮ ಬೆಲೆ ಇರುತ್ತಿತ್ತು. ಅಕಾಲಿಕ ಮಳೆ ಹಾಗೂ ಇತರ ಕಾರಣಗಳಿಂದ ನಾಲ್ಕೈದು ತಿಂಗಳುಗಳಿಂದ ಕೇಳುವವರೇ ಇಲ್ಲದೆ ರೈತರು ತೋಟದಲ್ಲಿಯೇ ಬೆಳೆ ಬಿಟ್ಟಿದ್ದರೆ ಇನ್ನೂ ಕೆಲವರು ನಾಶ ಮಾಡಿದ್ದರು. ಈಗ ಏಕಾಏಕಿ ಡಿಮಾಂಡ್​ ಬಂದಿದ್ದು, ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆ.ಜಿ ಬಾಕ್ಸ್​ 400 ರಿಂದ 800 ರೂ.ವರೆಗೂ ಮಾರಾಟವಾಗುತ್ತಿದೆ.

    ಬೆಲೆ ಏರಿಕೆಗೆ ಕಾರಣ: ಕೋಲಾರ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದ ಹಾಗೂ ಊಜಿ ಕಾಟದಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿ ಟೊಮ್ಯಾಟೊ ಗುಣಮಟ್ಟ ಕಳೆದುಕೊಂಡಿತ್ತು. ಇದೇ ಸಮಯಕ್ಕೆ ಹೊರ ರಾಜ್ಯಗಳ ವ್ಯಾಪಾರಸ್ಥರು ಮಾರುಕಟ್ಟೆಗೆ ಬರಲಿಲ್ಲ. ಇದರಿಂದಾಗಿ ಮಾರುಕಟ್ಟೆಯಲ್ಲಿ ಬೆಲೆಯೂ ದಿಢೀರನೆ ಕುಸಿಯಿತು. ಕಂಗಾಲಾದ ಬೆಳೆಗಾರರು ಮುಂದೆ ಇದೇ ಸಮಸ್ಯೆ ಉಂಟಾಗಬಹುದು ಎಂದು ಬೆಳೆ ಬೆಳೆಯಲು ಮುಂದಾಗಲಿಲ್ಲ. ಈಗ ವ್ಯಾಪಾರಸ್ಥರು ಬರುತ್ತಿದ್ದು, ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಯಲ್ಲಿ ಆವಕ ಇಲ್ಲದ ಕಾರಣ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ.
    ಕೆಲ ತಿಂಗಳುಗಳಿಂದ ಬೆಲೆ ಮತ್ತು ಬೇಡಿಕೆ ಇಲ್ಲದ ಕಾರಣ ರೈತರು ಬೆಳೆ ರಕ್ಷಣೆ ಕಡೆ ಹೆಚ್ಚಾಗಿ ಗಮನಹರಿಸಿರಲಿಲ್ಲ. ಈಗ ಬಂಗಾರದ ಬೆಲೆ ಬರುತ್ತಿರುವುದರಿಂದ ಬೆಳೆ ರಕ್ಷಣೆಗೆ ಮುಂದಾಗಿದ್ದು, ರೋಗಕ್ಕೆ ಒಳಗಾದ ತೋಟಗಳಿಗೂ ಕೀಟನಾಶಕ ಸಿಂಪಡಣೆಗೆ ಮುಂದಾಗಿದ್ದಾರೆ. ಕಟಾವು ಹಂತಕ್ಕೆ ಬಂದಿದ್ದರೂ ಬೆಳೆಯನ್ನು ಬೇಕಾಬಿಟ್ಟಿ ಬಿಟ್ಟಿದ್ದ ರೈತರು ಈಗ ಅಂಬುಗಳನ್ನು ಕಟ್ಟಿ ರಕ್ಷಣೆ ಮಾಡುತ್ತಿದ್ದಾರೆ. ಇದೇ ಬೆಲೆ ಮುಂದಿನ ಎರಡು ಮೂರು ತಿಂಗಳು ಮುಂದುವರಿದರೆ ಉತ್ತಮ ಆದಾಯ ಸಿಗುತ್ತದೆ.

    ಉತ್ತಮ ಬೆಲೆ ನಿರೀಕ್ಷಿಸಿ ಮೂರ್ನಾಲ್ಕು ಬೆಳೆಯಿಂದ ನಷ್ಟವಾದ ಹಣ ಗಳಿಸಲು ಲಕ್ಷಾಂತರ ರೂ. ಬಂಡವಾಳ ಹಾಕಿ 3 ಎಕರೆಯಲ್ಲಿ ಟೊಮ್ಯಾಟೊ ಬೆಳೆದಿದ್ದೆ. ಇಳುವರಿಯೂ ಉತ್ತಮವಾಗಿ ಬಂದಿತ್ತು. ಆದರೆ ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯಿಂದ ಪೆಟ್ಟು ಬಿದ್ದು ಬೆಳೆ ನಾಶವಾಯಿತು. ಗುಣಮಟ್ಟ ಸರಿ ಇಲ್ಲದಿದ್ದರೂ ಮಾರುಕಟ್ಟೆಯಲ್ಲಿ 300 ರಿಂದ 400 ರೂ.ವರೆಗೂ ಮಾರಾಟವಾಗಿ ಹಾಕಿದ ಬಂಡವಾಳದ ಪೈಕಿ ಅರ್ಧದಷ್ಟು ಹಿಂಪಡೆಯಲು ಸಾಧ್ಯವಾಯಿತು.
    | ಚಂದ್ರಕುಮಾರ್​ ರೈತ, ಬೂದಿಕೋಟೆ

    ಮಳೆ ಹಾಗೂ ಇತರ ಕಾರಣಗಳಿಂದ ಸತತವಾಗಿ ಬೆಳೆಗಳು ನಾಶಗೊಂಡು ಮಾರುಕಟ್ಟೆಯಲ್ಲಿ ಬೆಲೆ ಹಾಗೂ ಬೇಡಿಕೆ ಇಲ್ಲದ ಕಾರಣ ಬಹಳಷ್ಟು ರೈತರು ಟೊಮ್ಯಾಟೊ ಬೆಳೆಯಲು ಮುಂದಾಗಲಿಲ್ಲ. ಈಗ ಹೊರ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚಿದ್ದು, ವ್ಯಾಪಾರಸ್ಥರು ಮಾರುಕಟ್ಟೆಗೆ ಬರುತ್ತಿದ್ದಾರೆ. ಆವಕ ಕಡಿಮೆಯಾಗಿ ಬೇಡಿಕೆ ಮತ್ತು ಬೆಲೆ ಏರಿಕೆಯಾಗಿದೆ.
    | ಶಿವಾರೆಡ್ಡಿ ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ ಬಂಗಾರಪೇಟೆ

    ಇಡೀ ರಾತ್ರಿ ಗಂಡನ ಶವದ ಪಕ್ಕ ಮಲಗಿ ಹೈಡ್ರಾಮ… ಒಳ ಉಡುಪಲ್ಲಿ ಪತ್ನಿ ಬಚ್ಚಿಟ್ಟುಕೊಂಡ ಮಾಂಗಲ್ಯದ ಹಿಂದಿತ್ತು ಸ್ಫೋಟಕ ರಹಸ್ಯ

    ಬಿಜೆಪಿಗೆ ಬರ್ಬೇಕು ಅಂದ್ರೆ ಈ 3 ಷರತ್ತಿಗೆ ಒಪ್ಪಬೇಕು… ಸುಮಲತಾರ ಡಿಮಾಂಡ್​ಗೆ ಬೆಚ್ಚಿಬಿದ್ದಿದೆಯಂತೆ ಬಿಜೆಪಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts