More

    ಪಾಲಿಕೆ ಗದ್ದುಗೆಗೆ ಗುದ್ದಾಟ!

    ಪರಶುರಾಮ ಭಾಸಗಿ
    ವಿಜಯಪುರ:
    ಮಹಾನಗರ ಪಾಲಿಕೆ ಚುನಾವಣೆ ನಡೆದು ತಿಂಗಳು ಕಳೆದರೂ ಮೇಯರ್-ಉಪಮೇಯರ್ ಆಯ್ಕೆ ಪ್ರಕ್ರಿಯೆ ನಡೆಯದಿರುವುದು ನೂತನ ಸದಸ್ಯರಲ್ಲಿ ತೀವ್ರ ನಿರಾಸೆ ಮೂಡಿಸಿದೆ.

    ಫಲಿತಾಂಶ ಹೊರಬೀಳುತ್ತಿದ್ದಂತೆ ವಾರ್ಡ್‌ಗಳಲ್ಲಿ ವಿಜಯೋತ್ಸವ ಆಚರಿಸಿ, ಸನ್ಮಾನ ಸ್ವೀಕರಿಸಿ, ಬಹುಪರಾಕ್ ಹೇಳಿಸಿಕೊಂಡಿದ್ದ ಸದಸ್ಯರು ಪಾಲಿಕೆಯಲ್ಲಿ ತಮ್ಮ ಛಾಪು ಮೂಡಿಸಬೇಕು, ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕೆಂಬ ಉಮೇದಿನಲ್ಲಿದ್ದರು. ಆದರೆ ಮೇಯರ್-ಉಪಮೇಯರ್ ಆಯ್ಕೆಗೆ ಮುಹೂರ್ತ ನಿಗದಿಯಾಗದೆ ಇರುವುದು ಇವರ ಉತ್ಸಾಹ ಕುಗ್ಗಿಸಿದೆ.

    ಅ.28ರಂದು ಮಹಾನಗರ ಪಾಲಿಕೆಗೆ ಚುನಾವಣೆ ನಡೆದಿದ್ದು, ಅ.31ರಂದು ಫಲಿತಾಂಶ ಹೊರಬಿದ್ದಿದೆ. ಇಷ್ಟೊತ್ತಿಗಾಗಲೇ ಮೇಯರ್ -ಉಪಮೇಯರ್ ಚುನಾವಣೆ ನಡೆದು ಪೂರ್ಣ ಪ್ರಮಾಣದ ಆಡಳಿತ ಮಂಡಳಿ ರಚನೆಯಾಗಬೇಕಿತ್ತು. ಆದರೆ, ಈವರೆಗೂ ಅಂಥ ಯಾವುದೇ ಬೆಳವಣಿಗೆ ಕಂಡು ಬರದಿರುವುದು ಸಾರ್ವಜನಿಕರಲ್ಲೂ ಆಕ್ರೋಶ ಹೆಚ್ಚಿಸಿದೆ.

    ವಿಳಂಬಕ್ಕೆ ಕಾರಣವೇನು?
    ಪಾಲಿಕೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೆ ಇರುವುದು ಮೇಯರ್-ಉಪಮೇಯರ್ ಚುನಾವಣೆ ಮುಂದೂಡಲು ಕಾರಣ ಎನ್ನಲಾಗಿದೆ. ಒಟ್ಟು 35 ಸ್ಥಾನಗಳ ಪೈಕಿ ಬಿಜೆಪಿ-17, ಕಾಂಗ್ರೆಸ್-10, ಎಐಎಂಐಎಂ-2, ಜೆಡಿಎಸ್-1, ಪಕ್ಷೇತರ 5 ಸದಸ್ಯರು ಆಯ್ಕೆಯಾಗಿದ್ದಾರೆ. ಇದಿಷ್ಟೇ ಸ್ಥಾನಗಳ ಲೆಕ್ಕಾಚಾರ ಗಮನಿಸಿದ ಬಿಜೆಪಿಗೆ ಸ್ಪಷ್ಟ ಬಹುಮತ ಸಾಬೀತುಪಡಿಸಲು ಇನ್ನೊಂದು ಸ್ಥಾನದ ಅವಶ್ಯಕತೆ ಇದೆ. ಇನ್ನು ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಮತಗಳನ್ನು ಗಣನೆಗೆ ತೆಗೆದುಕೊಂಡರೆ 21 ಸದಸ್ಯ ಬಲದ ಮ್ಯಾಜಿಕ್ ನಂಬರ್ ಬೇಕು. ಹಾಗಾದಲ್ಲಿ ಬಿಜೆಪಿಗೆ ಬಹುಮತ ಸಾಬೀತುಪಡಿಸಲು ಸಂಖ್ಯಾಬಲದ ಕೊರತೆ ಕಾಡಲಿದೆ ಎಂಬ ಲೆಕ್ಕಾಚಾರವಿದೆ. ಇದೇ ಕಾರಣಕ್ಕೆ ಮೇಯರ್-ಉಪಮೇಯರ್ ಚುನಾವಣೆ ಮುಂದೂಡಲಾಗುತ್ತಿದೆ ಎಂಬ ವಿಶ್ಲೇಷಣೆ ವ್ಯಕ್ತವಾಗಿದೆ.

    ಏನಿದು ಲೆಕ್ಕಾಚಾರ?
    ಮೇಯರ್-ಉಪಮೇಯರ್ ಚುನಾವಣೆಗೆ 35 ಪಾಲಿಕೆ ಸದಸ್ಯರು, 3 ಶಾಸಕರು, 1 ಸಂಸದರು, 2 ಪರಿಷತ್ ಸದಸ್ಯರು ಸೇರಿ 41 ಸ್ಥಾನಗಳ ಬಲವಿದ್ದು, ಮ್ಯಾಜಿಕ್ ಸಂಖ್ಯೆ 21 ಆಗಲಿದೆ. ಆ ಪ್ರಕಾರ ಬಿಜೆಪಿಗೆ ಸದ್ಯ 18 (17+1) ಕಾರ್ಪೋರೇಟರ್, ಸಂಸದ ರಮೇಶ ಜಿಗಜಿಣಗಿ, ಶಾಸಕ ಯತ್ನಾಳರ ಮತ ಬಲ ಸೇರಿ 20 ಸಂಖ್ಯಾ ಬಲವಿದೆ. ಹೀಗಾಗಿ ಬಿಜೆಪಿಯಿಂದ ಟಿಕೆಟ್ ವಂಚಿತರಾಗಿ ಪಕ್ಷೇತರವಾಗಿ ಆಯ್ಕೆಯಾದ ಅಶೋಕ ನ್ಯಾಮಗೊಂಡ ಹಾಗೂ ಅಲ್ತಾಫ್ ಇಟಗಿ ಇವರನ್ನು ಸೆಳೆಯುವ ಕಸರತ್ತು ನಡೆದಿದೆ. ಆದರೆ, ಇದೇ ಕಗ್ಗಂಟಾಗಿ ಪರಿಣಮಿಸಿದೆ.

    ಕಾಂಗ್ರೆಸ್‌ಗೆ 10 ಕಾರ್ಪೋರೇಟರ್‌ಗಳು, ಶಾಸಕ ಎಂ.ಬಿ.ಪಾಟೀಲ, ಪರಿಷತ್ ಸದಸ್ಯರಾದ ಸುನೀಲಗೌಡ ಪಾಟೀಲ ಹಾಗೂ ಪ್ರಕಾಶ ರಾಠೋಡ್ ಸೇರಿದಂತೆ 13 ಸಂಖ್ಯಾ ಬಲವಿದೆ. ಇದರ ಜತೆಗೆ ಜೆಡಿಎಸ್ ಶಾಸಕ ದೇವಾನಂದ ಚೌವ್ಹಾಣ, ಒಬ್ಬ ಜೆಡಿಎಸ್ ಕಾರ್ಪೋರೇಟರ್, ಇಬ್ಬರು ಎಐಎಂಐಎಂ, ಕಾಂಗ್ರೆಸ್‌ನಿಂದ ಟಿಕೆಟ್ ವಂಚಿತರಾಗಿ ಪಕ್ಷೇತರವಾಗಿ ಗೆದ್ದು ಬಂದ ಇಬ್ಬರ ಬೆಂಬಲವಿದ್ದು, ಪಕ್ಷೇತರರಾದ ಅಶೋಕ ನ್ಯಾಮಗೊಂಡ ಹಾಗೂ ಅಲ್ತಾಫ್ ಇಟಗಿ ಅವರನ್ನು ಸೆಳೆದಿದ್ದೇ ಆದರೆ ಪಾಲಿಕೆ ಆಡಳಿತ ‘ಕೈ’ವಶವಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

    ಬಿಜೆಪಿ ಬಣ ರಾಜಕಾರಣ
    ಮಹಾನಗರ ಪಾಲಿಕೆಯ ಈ ಹಿಂದಿನ ಆಡಳಿತ ಗಮನಿಸಿದರೆ ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿಯುವ ಯಾವುದೇ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಏಕೆಂದರೆ ಬಿಜೆಪಿ ದೊಡ್ಡ ಪಕ್ಷವಾಗಿದ್ದರೂ ಈ ಹಿಂದೆ ಕಾಂಗ್ರೆಸ್ ಗದ್ದುಗೆ ಅಲಂಕರಿಸಿದ ಉದಾಹರಣೆ ಕಣ್ಣ ಮುಂದಿದೆ. ಇನ್ನು ಬಿಜೆಪಿಯ 17 ಸದಸ್ಯರ ಪೈಕಿ 11 ಜನ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಬೆಂಬಲಿಗರು. 3 ಸದಸ್ಯರು ಪಕ್ಷದ ಆಧಾರದ ಮೇಲೆ ಆಯ್ಕೆಯಾದವರು. ಇನ್ನು 3 ಸದಸ್ಯರು ನಾಗಠಾಣ ಕ್ಷೇತ್ರ ವ್ಯಾಪ್ತಿಗೆ ಸೇರಿದ್ದು, ಆ ಕ್ಷೇತ್ರದ ಮುಖಂಡ ಡಾ.ಗೋಪಾಲ ಕಾರಜೋಳ ಬೆಂಬಲಿಗರು. ಐವರು ಪಕ್ಷೇತರ ಪೈಕಿ ಮೂವರು ಬಂಡಾಯ ಬಿಜೆಪಿಗರು. ಇವರಲ್ಲಿ ಒಬ್ಬರು ಈಗಾಗಲೇ ಬಿಜೆಪಿ ಸೇರಿದ್ದರೆ ಇನ್ನಿಬ್ಬರನ್ನೂ ಸೆಳೆದುಕೊಳ್ಳವ ಕಸರತ್ತೇನೊ ನಡೆದಿದೆ. ಆದರೆ, ಅದು ಬಿಜೆಪಿಯ ಬಣ ರಾಜಕಾರಣದಿಂದ ಇದು ಕಷ್ಟಸಾಧ್ಯ ಎನ್ನಲಾಗುತ್ತಿದೆ.

    ಈ ಎಲ್ಲ ಕಾರಣಗಳಿಂದ ಆಡಳಿತ ಪಕ್ಷವಾಗಿರುವ ಬಿಜೆಪಿ ಮೇಯರ್-ಉಪಮೇಯರ್ ಚುನಾವಣೆ ಮುಂದೂಡುವ ತಂತ್ರಕ್ಕೆ ಮೊರೆಹೋಗಿದೆ ಎಂಬ ವಿಶ್ಲೇಷಣೆ ವ್ಯಕ್ತವಾಗಿದೆ.

    ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಇದೀಗ ಸರ್ಕಾರದ ರಾಜ್ಯಪತ್ರ ಕೈ ಸೇರಿದೆ. ಇನ್ಮುಂದೆ ಮೇಯರ್-ಉಪಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಸರ್ಕಾರ ಮಾಹಿತಿ ಕೇಳಲಿದ್ದು, ಆ ಬಳಿಕ ಮುಂದಿನ ತೀರ್ಮಾನ ಸರ್ಕಾರವೇ ಕೈಗೊಳ್ಳುವುದು.
    ವಿಜಯಕುಮಾರ ಮೆಕ್ಕಳಕಿ, ಪಾಲಿಕೆ ಆಯುಕ್ತ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts