More

    ಪ್ರಗತಿಪರ ರೈತನ ಮಾದರಿ ಕೃಷಿ

    ಅರಸೀಕೆರೆ: ಸಾವಯವ ಹಾಗೂ ಆಧುನಿಕ ಕೃಷಿಯೊಂದಿಗೆ ಪೂರ್ವಿಕರು ಅನುಸರಿಸಿಕೊಂಡು ಬಂದಿರುವ ಬೇಸಾಯ ಕ್ರಮವನ್ನು ಚಾಚೂತಪ್ಪದೆ ಅಳವಡಿಸಿಕೊಂಡು ನಿರೀಕ್ಷೆಗೆ ತಕ್ಕಂತೆ ಲಾಭ ಗಳಿಸುತ್ತಿರುವ ಪ್ರಗತಿಪರ ರೈತ ಅಣ್ಣಾಯಕನಹಳ್ಳಿ ಶಿವಮೂರ್ತಿ ಕೃಷಿಕರಿಗೆ ಮಾದರಿಯಾಗಿದ್ದಾರೆ.

    ತಮಗಿರುವ ಆರು ಎಕರೆ ಜಮೀನಿನ ಜತೆಗೆ ಮೂರು ಎಕರೆಯನ್ನು ಗುತ್ತಿಗೆ ಪಡೆದ್ದು ಒಟ್ಟು ಒಂಬತ್ತು ಎಕರೆಯಲ್ಲಿ ವೈವಿಧ್ಯಮಯ ಬೆಳೆ ಬೆಳೆಯುತ್ತಿರುವುದು ಕೃಷಿ ಕಾಯಕದ ಮೇಲಿರುವ ಕಾಳಜಿಯನ್ನು ಪ್ರದರ್ಶಿಸುವಂತಿದೆ. ಇದರೊಂದಿಗೆ ಹೈನುಗಾರಿಕೆಯಲ್ಲಿಯೂ ಛಾಪು ಮೂಡಿಸಿದ್ದು, ಹೈನು ಉದ್ಯಮದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಬಯಸಿರುವ ನೂರಾರು ಯುವಕ-ಯುವತಿಯರಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿರುವುದು ಸಾಮಾನ್ಯ ಸಂಗತಿಯಲ್ಲ.

    ಎರಡೂವರೆ ಎಕರೆಯಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಲಾಗಿದ್ದು ಬರೋಬ್ಬರಿ ಎಂಬತ್ತು ಕ್ವಿಂಟಾಲ್ ಇಳುವರಿ ಪಡೆದಿದ್ದಾರೆ. ಇನ್ನುಳಿದಂತೆ ಎರಡು ಎಕರೆಯಲ್ಲಿ ಜಾನುವಾರುಗಳಿಗೆ ಬಳಸುವ ನೇಪಿಯರ್(ಹಸಿಹುಲ್ಲು) ಬೆಳೆದಿದ್ದು ಮೇವಿನ ಕೊರತೆ ನೀಗಿಸಿದ್ದಾರೆೆ. ಮುಂಗಾರು ಹಂಗಾಮಿನಲ್ಲಿ ಹೆಸರು, ಉದ್ದು, ಹಲಸಂದೆ ಸೇರಿದಂತೆ ಗೃಹೋಪಯೋಗಿ ಧಾನ್ಯಗಳನ್ನು ಬಿತ್ತನೆ ಮಾಡಲು ಒಂದಷ್ಟು ಭೂಮಿ ಉಳಿಸಿಕೊಂಡಿದ್ದಾರೆ. ಜತೆಗೆ ಗುತ್ತಿಗೆ ಪಡೆದಿರುವ ಮೂರು ಎಕರೆ ಭೂಮಿಯಲ್ಲಿ ರಾಗಿ ಬೆಳೆ ಹುಲುಸಾಗಿ ಬಂದಿದ್ದು ಒಣ ಮೇವಿನೊಂದಿಗೆ ನಲವತ್ತು ಕ್ವಿಂಟಾಲ್ ಇಳುವರಿ ದೊರೆತಿದೆ.

    ಆರು ಎಕರೆ ಜಮೀನಿನ ಆಯಕಟ್ಟಿನ ಜಾಗದಲ್ಲಿರುವ ತೆಂಗಿನ ಮರಗಳು ಉತ್ತಮ ಫಸಲು ನೀಡುತ್ತಿದ್ದು ಪೂರಕ ಆದಾಯ ದೊರೆಯುತ್ತಿದೆ. ಜಮೀನಿನ ಅಂಚಿನಲ್ಲಿ ತೇಗ, ಸುರಗಿ ಸೇರಿದಂತೆ ಬಗೆಬಗೆಯ ಸಸಿಗಳನ್ನು ನಾಟಿ ಮಾಡಲಾಗಿದೆ. ಇದರೊಂದಿಗೆ ಆಯಕಟ್ಟಿನ ಜಾಗದಲ್ಲಿ ಕೃಷಿ ಹೊಂಡ ನಿರ್ಮಿಸಿ ನೀರಿನ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

    ಹೈನುಗಾರಿಕೆ-ಸಾವಯವ ಕೃಷಿ ಜತೆಗೆ ವಿವಿಧ ತಳಿಯ 24 ಹಸುಗಳನ್ನು ಸಾಕುತ್ತಿದ್ದಾರೆ. ಪ್ರಸಕ್ತ ಹದಿನಾರು ಹಸುಗಳಿಂದ ಬೆಳಗ್ಗೆ ಮತ್ತು ಸಂಜೆ 160 ಲೀ. ಹಾಲು ದೊರೆಯುತ್ತಿದೆ. ಗ್ರಾಮದ ಸಮೀಪವಿರುವ ಕೆಎಂಎಫ್ ಡೇರಿಗೆ ಹಾಕುವ ಮೂಲಕ ಆರ್ಥಿಕ ಶಕ್ತಿಯನ್ನು ವೃದ್ಧಿಸಿಕೊಂಡಿದ್ದಾರೆ. ಜಾನುವಾರುಗಳಿಂದ ದೊರೆಯುವ ಸಗಣಿ, ಗಂಜಲದ ಜೀವಾಮೃತ ತಯಾರಿಕೆ ಮಾಡಲಾಗುತ್ತಿದ್ದು ತೆಂಗು ಸೇರಿದಂತೆ ವಿವಿಧ ಬೆಳೆಗಳಿಗೆ ಪೋಷಕ ಗೊಬ್ಬರವಾಗಿ ನೀಡಲಾಗುತ್ತಿದೆ.

    ನೇಪಿಯರ್(ಹಸಿಹುಲ್ಲು)ಅನ್ನು ಅಗತ್ಯಕ್ಕೆ ತಕ್ಕಂತೆ ಬಳಸಿದರೆ, ಮುಸುಕಿನ ಜೋಳದ ಬೂಸಾವನ್ನು ಹಸುಗಳಿಗೆ ಪ್ರತಿದಿನ ಪೌಷ್ಟಿಕ ಆಹಾರದ ರೂಪದಲ್ಲಿ ನೀಡಲಾಗುತ್ತಿದೆ. ತಮ್ಮದೇ ಜಮೀನಿನಲ್ಲಿ ಬೆಳೆಯುವ ಮುಸುಕಿನ ಜೋಳದ ಧಾನ್ಯ ಮಾರಾಟ ಮಾಡುತ್ತಿಲ್ಲ. ಬದಲಾಗಿ ಎಲ್ಲ ಹಸುಗಳಿಗೆ ಬಳಸಲು ಮೀಸಲಿರಿದ್ದು ಖರ್ಚು ಕಡಿಮೆ ಮಾಡಿಕೊಂಡಿರುವುದು ಮತ್ತೊಂದು ವಿಶೇಷ. ತಂದೆಯ ಆಶಯ, ಪತ್ನಿ-ಪುತ್ರರ ಬೆಂಬಲದೊಂದಿಗೆ 1979ರಿಂದ ನಿರಂತರವಾಗಿ ಹೈನೋದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

    ಪ್ರಶಸ್ತಿ: ಕೃಷಿ ಭೂಮಿಯಲ್ಲಿ ನಿರೀಕ್ಷೆಗೂ ಮೀರಿದ ಮುಸುಕಿನ ಜೋಳದ ಫಸಲು ಪಡೆದಿದ್ದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ವತಿಯಿಂದ ಅತ್ಯುತ್ತಮ ಕೃಷಿಕ ಪ್ರಶಸ್ತಿ ದೊರೆತಿದೆ. ಕರೊನಾ ಸಮಯದಲ್ಲಿ ತೋರಿದ ಸಾಮಾಜಿಕ ಕಳಕಳಿ ಎಲ್ಲರೂ ಮೆಚ್ಚುವಂತಹದ್ದು. ಇದನ್ನು ಪರಿಗಣಿಸಿ ಬೆಂಗಳೂರಿನ ಜಿಕೆವಿಕೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಣ್ಣಾಯಕನಹಳ್ಳಿ ಶಿವಮೂರ್ತಿ ಅವರನ್ನು ಗೌರವಸಿದ್ದು ತಾಲೂಕಿನ ಕೀರ್ತಿ ಮತ್ತೊಂದು ಗರಿ ದೊರೆತಂತಾಗಿದೆ.

    ಇದರೊಂದಿಗೆ ಜಿಲ್ಲಾಮಟ್ಟದ ಅತ್ಯುತ್ತಮ ಕೃಷಿ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಕೃಷಿ ಚಟುವಟಿಕೆ ಜತೆಗೆ ಸಾಮಾಜಿಕ ಸೇವೆಯಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಪತ್ನಿ ಚಂದ್ರಮ್ಮ ಅವರನ್ನು ಗ್ರಾಮ ಪಂಚಾಯಿತಿ ಸದಸ್ಯೆಯನ್ನಾಗಿಸಿ ತನ್ನೂರಿನ ಜನರ ಸಂಕಷ್ಟಗಳಿಗೆ ನೆರವಾಗುತ್ತಿರುವುದು ಸಾಮಾಜಿಕ ಹೊಣೆಗಾರಿಕೆಗೆ ಸಾಕ್ಷಿಯಾಗಿದೆ.

    ಕೆ.ಎಸ್.ಪುಟ್ಟಣಯ್ಯ ನಾಯಕತ್ವ ಮೆಚ್ಚಿದ್ದ ಶಿವಮೂರ್ತಿ ಅವರು ರೈತಸಂಘದಲ್ಲಿ ಗುರುತಿಸಿಕೊಳ್ಳುವ ಮೂಲಕ ರೈತ ಹಾಗೂ ಜನಪರ ಹೋರಾಟಗಳಲ್ಲಿಯೂ ಭಾಗಿಯಾಗಿ ಸೈ ಎನಿಸಿಕೊಂಡಿದ್ದಾರೆ. ತೆಂಗು ಬೆಳೆ ನಷ್ಟ, ಎತ್ತಿನಹೊಳೆ ಯೋಜನೆಯಡಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ಕೊಡಿಸುವುದು ಸೇರಿದಂತೆ ಬೆಳೆ ನಷ್ಟ, ಕಾವೇರಿ ನೀರು ಬಿಡುಗಡೆ ಮಾಡದಂತೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೃಷಿಕರ ಮೇಲಿನ ನಿಷ್ಠೆ ಪ್ರದರ್ಶಿಸಿದ್ದಾರೆ. ಕೆ.ಎಸ್.ಪುಟ್ಟಣ್ಣಯ್ಯ ಬಣದ ತಾಲೂಕು ರೈತ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

    ಸಾವಯವ ಕೃಷಿ ಜತೆಗೆ ಹೈನುಗಾರಿಕೆಯಿಂದ ಉತ್ತಮ ಆದಾಯ ಕಂಡುಕೊಳ್ಳಬಹುದಾಗಿದೆ ಎನ್ನುವ ಸಂಗತಿಯನ್ನು ರೈತ ಸಮುದಾಯ ಅರ್ಥ ಮಾಡಿಕೊಳ್ಳಬೇಕಿದೆ. ನಮ್ಮ ತಂದೆಯವರ ಕಾಲದಿಂದ ನಡೆಸಿಕೊಂಡು ಬಂದಿರುವ ಹೈನುಗಾರಿಕೆ ಕೈ ಹಿಡಿದಿದೆ ಎಂದರೆ ಅತಿಶಯೋಕ್ತಿ ಎನಿಸಲಾರದು. ಪತ್ನಿ ಹಾಗೂ ಇಬ್ಬರು ಪುತ್ರರ ಸಹಕಾರವನ್ನು ಎಂದಿಗೂ ಮರೆಯುವಂತಿಲ್ಲ. ಪುಡಿಗಾಸಿನ ಆಸೆಗೆ ಖಾಸಗಿ ಕಂಪನಿಗಳ ಮುಂದೆ ಕೈಯೊಡ್ಡಿ ನಿಲ್ಲುವುದು ರೈತನ ಮಕ್ಕಳಿಗೆ ಶೋಭೆ ತರುವುದಿಲ್ಲ. ಇಚ್ಛಾಶಕ್ತಿಯೊಂದಿಗೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಲ್ಲಿ ಆರ್ಥಿಕ ಪ್ರಗತಿ ಸಾಧಿಸಲು ಯಾವುದೇ ಸಮಸ್ಯೆ ಎದುರಾಗದು.
    ಅಣ್ಣಾಯ್ಕನಹಳ್ಳಿ ಶಿವಮೂರ್ತಿ ಪ್ರಗತಿಪರ ಕೃಷಿಕ, ಅರಸೀಕೆರೆ

    ಕೃಷಿಕ ಸಮುದಾಯಕ್ಕೆ ಆಧುನಿಕ ಬೇಸಾಯ ಕ್ರಮಗಳನ್ನು ಪರಿಚಯಿಸುವ ಉದ್ದೇಶದಿಂದ ಕೃಷಿ ಇಲಾಖೆ ಸಹಯೋಗದಲ್ಲಿ ಹತ್ತು ಹಲವು ವಿನೂತನ ಕಾರ್ಯಕ್ರಮಗಳನ್ನು ನಿರಂತರವಾಗಿ ನಿರ್ವಹಿಸಿಕೊಂಡು ಬರಲಾಗುತ್ತಿದೆ. ನೀರಿನ ಮಿತ ಬಳಕೆಗೆ ಅಗತ್ಯವಿರುವ ಸ್ಪ್ರಿಂಕ್ಲರ್ ಸೆಟ್, ಹಾಲು ಕರೆಯುವ ಯಂತ್ರ, ಮೇವು ಕಟಾವು ಹಾಗೂ ರಾಗಿ ಶುದ್ಧೀಕರಣ ಯಂತ್ರ ಸೇರಿದಂತೆ ಅನೇಕ ಬಗೆಯ ಕೃಷಿ ಸಾಮಗ್ರಿಗಳನ್ನು ಸಬ್ಸಿಡಿ ಮೂಲಕ ಸರ್ಕಾರದ ವತಿಯಿಂದ ನೀಡಲಾಗುತ್ತಿದೆ.
    ಎ.ಪಿ.ಶಿವಕುಮಾರ್ ತಾಲೂಕು ಸಹಾಯಕ ಕೃಷಿ ನಿರ್ದೇಶಕ, ಅರಸೀಕೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts