More

    ಕೆಎಸ್‌ಆರ್‌ಟಿಸಿ ನಿಲ್ದಾಣದ ಪ್ರವೇಶ ದ್ವಾರಗಳಲ್ಲಿ ಗುಂಡಿ

    ಬೀರೂರು: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎರಡು ಕಡೆಯ ಪ್ರವೇಶ ದ್ವಾರದಲ್ಲಿ ಗುಂಡಿಗಳಾಗಿವೆ. ಬಸ್ ಚಾಲಕರು, ಬೈಕ್ ಸವಾರರಿಗೆ ತೀವ್ರ ತೊಂದರೆಯಾಗಿದೆ.

    ಕಡೂರು ತಾಲೂಕಿನ ದೊಡ್ಡ ಹೋಬಳಿ ಕೇಂದ್ರ ಬೀರೂರು. ಕಡೂರು ಮತ್ತು ಶಿವಮೊಗ್ಗ ಕಡೆಗೆ ಎರಡು ಪ್ರವೇಶ ದ್ವಾರಗಳನ್ನು ಒಳಗೊಂಡಿದೆ. ಎರಡು ಕಡೆ ಒಂದು ಅಡಿ ಆಳದಷ್ಟು ಗುಂಡಿಗಳಾಗಿವೆ.
    ಮೈಸೂರು, ಬೆಂಗಳೂರು, ಶಿವಮೊಗ್ಗ, ಹೊನ್ನಾವರ, ಮಂಗಳೂರು, ಚಿತ್ರದುರ್ಗ ಮತ್ತಿತರ ಜಿಲ್ಲೆಗಳನ್ನು ಸಂಪರ್ಕಿಸುವ ಕೇಂದ್ರ ಬಿಂದು. ಕೆಮ್ಮಣ್ಣುಗುಂಡಿ, ಕಲ್ಲತ್ತಿಗಿರಿ, ದತ್ತಪೀಠ, ಮುಳ್ಳಯ್ಯನಗಿರಿಯಂತಹ ಪ್ರೇಕ್ಷಣೀಯ ಸ್ಥಳಗಳ ಸಂಪರ್ಕ ಕಲ್ಪಿಸುವ ಮೂಲ ಕೇಂದ್ರ. ಈ ಸ್ಥಳಗಳಿಗೆ ತೆರಳಲು ದಿನನಿತ್ಯ ನೂರಾರು ಬಸ್‌ಗಳಲ್ಲಿ ಸಾವಿರಾರು ಪ್ರಯಾಣಿಕರು ಆಗಮಿಸುತ್ತಾರೆ ಮತ್ತು ಇಲ್ಲಿಂದ ತೆರಳುತ್ತಾರೆ. ಇಲ್ಲಿ ಗುಂಡಿಗಳಾಗಿರುವುದರಿಂದ ಬಸ್‌ಗಳ ಸುರಕ್ಷೆಗೆ ಧಕ್ಕೆಯಾಗುತ್ತಿದೆ. ಜತೆಗೆ ಬಸ್‌ನ ಹಿಂಬದಿ ಕುಳಿತುಕೊಳ್ಳುವ ಪ್ರಯಾಣಿಕರ ಸ್ಥಿತಿ ಹೇಳತೀರದು.
    ಹೆದ್ದಾರಿ ಬದಿಯ ದ್ವಾರಗಳ ಬಳಿ ರಸ್ತೆ ಗುಂಡಿಗಳಾಗಿರುವುದು ಗಮನದಲ್ಲಿದೆ. ಆದರೆ ನಿಲ್ದಾಣದ ಒಳಗಿನ ಸೌಲಭ್ಯಗಳಿಗೆ ನಾವು ಹೇಗಾದರೂ ಪರಿಹಾರ ಕಂಡುಕೊಳ್ಳಬಹುದು. ಈ ಸಮಸ್ಯೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತದೆ. ಏನಾದರೂ ಪ್ರಯತ್ನಿಸಿ ದುರಸ್ತಿ ಮಾಡಿಸೋಣ ಎಂದರೆ ಅನುದಾನದ ಕೊರತೆ ಇದೆ. ಹಾಗಾಗಿ ಸಂಬಂಧಿಸಿದವರು ರಸ್ತೆ ಗುಂಡಿ ಮುಚ್ಚುವವರೆಗೆ ಕಾಯದೇ ಪರ್ಯಾಯವಿಲ್ಲ ಎನ್ನುತ್ತಾರೆ ಕಡೂರು ಡಿಪೋ ವ್ಯವಸ್ಥಾಪಕ ಪುಟ್ಟಸ್ವಾಮಿ.
    ರಸ್ತೆಯಲ್ಲಿರುವ ಗುಂಡಿಗಳಿಂದಾಗಿ ಪಾದಚಾರಿಗಳು, ಬೈಕ್ ಮತ್ತು ಆಟೋ ಚಾಲಕರು ಸಾಕಷ್ಟು ಸಂಕಷ್ಟ ಅನುಭವಿಸುವಂತಾಗಿದೆ. ಬಹಳಷ್ಟು ಸಂದರ್ಭಗಳಲ್ಲಿ ಬೈಕ್ ಸವಾರರು ಬಿದ್ದು ಅಪಘಾತಗಳೂ ಸಂಭವಿಸಿವೆ. ರಸ್ತೆ ದುರಸ್ತಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುವಾಗುವಂತೆ ಸಂಬಂಧಿಸಿದವರು ಕ್ರಮವಹಿಸಬೇಕು ಎಂಬುದು ಆಟೋ ಚಾಲಕರು ಒತ್ತಾಯ.
    ವಾಸ್ತವವಾಗಿ ಈ ರಸ್ತೆ ರಿಪೇರಿ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತದೆ. ಆದರೆ ಅವರು ರಸ್ತೆ ಮಧ್ಯೆ ಇರುವ ಗುಂಡಿಗಳನ್ನು ಮಾತ್ರ ಮುಚ್ಚಲು ಆದ್ಯತೆ ನೀಡುತ್ತಾರೆ. ಮುಂದಿನ ರಸ್ತೆ ದುರಸ್ತಿ ಸಂದರ್ಭ ಈ ವಿಷಯವಾಗಿ ಅವರ ಗಮನ ಸೆಳೆಯಲಾಗುವುದು. ಸದ್ಯ ಮಳೆಗಾಲ ಮುಗಿಯುವವರೆಗೆ ಪುರಸಭೆಯಿಂದಲೇ ಮಣ್ಣು ಹೊಡೆಸಿ ಗುಂಡಿಗಳನ್ನು ಮುಚ್ಚಿಸಲು ಕ್ರಮ ವಹಿಸಲಾಗುವುದು ಎಂದು ಪುರಸಭೆ ಪರಿಸರ ಅಭಿಯಂತ ನೂರುದ್ದೀನ್ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts