More

    ಅಗ್ನಿಹೋತ್ರದಿಂದ ಧನಾತ್ಮಕ ಕಂಪನ; ಇಂದು ಅಗ್ನಿಹೋತ್ರ ದಿನ

    ಅಗ್ನಿಹೋತ್ರದಿಂದ ಧನಾತ್ಮಕ ಕಂಪನ; ಇಂದು ಅಗ್ನಿಹೋತ್ರ ದಿನ| ಹರಿಹರಪುರ ಶ್ರೀಧರ

    ಅಗ್ನಿಹೋತ್ರವು ಋಷಿಮುನಿಗಳ ಕಾಲದಿಂದಲೂ ಸೂರ್ಯೋದಯ ಮತ್ತು ಸೂರ್ಯಾಸ್ತ ಕಾಲದಲ್ಲಿ ಮಾಡುವ ಪುಟ್ಟ ಹೋಮ. ವೇದ ಮಂತ್ರಗಳನ್ನು ಪಠಿಸುತ್ತಾ ಇಪ್ಪತ್ತು ನಿಮಿಷಗಳು ಮಾಡುವ ಈ ಹೋಮದಿಂದ ಪ್ರಾಣವಾಯು ಸಾಕಷ್ಟು ಬಿಡುಗಡೆಯಾಗಿ ಸುಮಾರು ನೂರು ಮೀಟರ್ ವಿಸ್ತಾರದಲ್ಲಿ ಪರಿಸರ ಶುದ್ಧವಾಗಿರುತ್ತದೆ. ಅಗ್ನಿಹೋತ್ರ ಮಾಡುವ ಮನೆಗಳಲ್ಲಿ ಮನೆ ಸದಸ್ಯರ ಆರೋಗ್ಯ ಚೆನ್ನಾಗಿರುತ್ತದೆ, ಗೋಶಾಲೆಯಲ್ಲಿ ಮಾಡಿದರೆ ಹಸು ಸಮೃದ್ಧವಾಗಿ ಹಾಲು ಕೊಡುತ್ತದೆ, ತೋಟಗಳಲ್ಲಿ ಮಾಡಿದರೆ ಮರ ಗಿಡಗಳು ಸಮೃದ್ಧವಾಗಿ ಬೆಳೆದು ಹುಲುಸಾಗಿ ಫಸಲು ಕೊಡುತ್ತವೆ. ಭೋಪಾಲ್​ನಲ್ಲಿ ಯೂನಿಯನ್ ಕಾರ್ಬೆಡ್ ಕಾರ್ಖಾನೆಯಲ್ಲಿ 1984 ರ ಡಿಸೆಂಬರ್ 2-3 ರ ರಾತ್ರಿ ಸಂಭವಿಸಿದ ವಿಷಾನಿಲ ಸೋರುವಿಕೆಯಿಂದಾಗಿ ಸಾವಿರಾರು ಜನ ಮತ್ತು ಜಾನುವಾರುಗಳ ಸಾವು ಸಂಭವಿಸಿತು. ನಂತರದಲ್ಲಿ 5.74 ಲಕ್ಷ ಸಂತ್ರಸ್ತರಿಗೆ 3040 ಕೋಟಿ ರೂಪಾಯಿ ಪರಿಹಾರ ನೀಡಲಾಯ್ತು. ಈ ಘಟನೆಯಲ್ಲಿ ಕಾರ್ಖಾನೆಯಿಂದ ಹತ್ತು ಕಿಲೋಮೀಟರ್ ದೂರದಲ್ಲಿದ್ದ ಜನರು ಸಹ ಸಾವಿಗೀಡಾಗಿದ್ದರು. ಆದರೆ ಕಾರ್ಖಾನೆಗೆ ಕೇವಲ 1.5 ಕಿಲೋಮೀಟರ್ ದೂರದಲ್ಲಿ ವಾಸವಿದ್ದ ಒಂದು ಕುಟುಂಬದ ಐದು ಜನರು ಪವಾಡ ಸದೃಶರಾಗಿ ಸಾವಿನಿಂದ ಪಾರಾದ ಸುದ್ಧಿಯನ್ನು ಪತ್ರಿಕೆಗಳು ಬಿತ್ತರಿಸಿದವು. ಅದು ಹೇಗೆ ಸಾಧ್ಯವಾಯ್ತು? ಇಲ್ಲಿಯೇ ಅಗ್ನಿಹೋತ್ರದ ಮಹತ್ವ ಇರುವುದು. ವಿಷಾನಿಲದಿಂದ ಉಸಿರು ಕಟ್ಟುತ್ತಿದೆ ಎಂಬ ಅರಿವಾಗುತ್ತಿದ್ದಂತೆ ಆ ಕುಟುಂಬದವರು ತಾವು ನಿತ್ಯವೂ ಮಾಡುತ್ತಿದ್ದ ಅಗ್ನಿಹೋತ್ರವನ್ನು ಕೂಡಲೇ ಶುರುಮಾಡಿಯೇ ಬಿಟ್ಟರು. ಮಂತ್ರ ಪಠಣ ಮಾಡುತ್ತಾ ಅಗ್ನಿಯು ಪ್ರಜ್ವಲಿಸುತ್ತಿದ್ದಂತೆ ಬಿಡುಗಡೆಯಾದ ಪ್ರಾಣವಾಯುವು ಈ ವಿಷನಿಲವನ್ನು ಭೇದಿಸಿಕೊಂಡು ಮನೆಯ ಐದೂ ಜನರ ಪ್ರಾಣವನ್ನು ಉಳಿಸಿತು.

    ಅಗ್ನಿಹೋತ್ರದಿಂದ ಧನಾತ್ಮಕ ಕಂಪನ; ಇಂದು ಅಗ್ನಿಹೋತ್ರ ದಿನಕಳೆದ ವರ್ಷವಿಡೀ ಕರೊನಾದಿಂದ ಜಗತ್ತು ತತ್ತರಿಸಿರುವುದು ಗೊತ್ತೇ ಇದೆ. ಲಾಕ್​ಡೌನ್ ದಿನಗಳಲ್ಲಿ ಜನರು ಭೀತಿಗೆ ಒಳಗಾದರು. ಯಾರೂ ಮನೆಬಿಟ್ಟು ಹೊರಬರುವಂತಿಲ್ಲ. ಈ ಸಂದರ್ಭದಲ್ಲಿ ವೇದಭಾರತಿಯು ಬೆಂಗಳೂರಿನ ವಾಸ್ಕ್ ಯೋಗಕೇಂದ್ರದ ಉಮಾಮಹೇಶ್ವರ ಗುರೂಜಿಯವರ ಸಹಕಾರದಲ್ಲಿ ಆನ್​ಲೈನ್​ನಲ್ಲಿ ಅಗ್ನಿಹೋತ್ರ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿತು. ಸೂರ್ಯೋದಯ ಮತ್ತು ಸೂರ್ಯಾಸ್ತ ಕಾಲದಲ್ಲಿ ಝುೂಮ್ ಮೀಟ್​ನಲ್ಲಿ ನೂರಾರು ಜನ ಈ ಕಾರ್ಯಕ್ರಮದ ಲಾಭ ಪಡೆದರು. ಫೇಸ್​ಬುಕ್ ಮತ್ತು ಯೂಟ್ಯೂಬ್​ಗಳಲ್ಲೂ ಅಗ್ನಿಹೋತ್ರ ಪ್ರಾತ್ಯಕ್ಷಿಕೆಯನ್ನು ನೇರ ಪ್ರಸಾರ ಮಾಡಲಾಯ್ತು. ಜಗತ್ತಿನಾದ್ಯಂತ ಲಕ್ಷಾಂತರ ಜನ ಇದರ ಲಾಭ ಪಡೆದರು. ಸಾಮಾನ್ಯವಾಗಿ ಜನರೆಲ್ಲರೂ ಕರೊನಾದಿಂದ ಭೀತರಾಗಿದ್ದರೆ ಆನ್​ಲೈನಲ್ಲಿ ಅಗ್ನಿಹೋತ್ರ ಕಲಿಯುತ್ತಿದ್ದವರು ತಮ್ಮಲ್ಲಿದ್ದ ಹಲವಾರು ರೋಗ ರುಜಿನಗಳಿಂದ ಮುಕ್ತರಾಗುತ್ತಾ ಬಂದರು. ಆ ದೃಷ್ಟಿಯಿಂದ ಅವರಿಗೆಲ್ಲಾ ಕರೊನಾ ಒಂದು ವರವೇ ಆಯ್ತು. ಅಂತಹವರಲ್ಲಿ ಕೆಲವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ‘ಅಗ್ನಿಹೋತ್ರ ದಿಂದ ಬಿಡುಗಡೆಯಾಗುವ ಪ್ರಾಣವಾಯುವಿನ ಜೊತೆಗೆ ಮಂತ್ರಗಳ ಪಠಣದಿಂದ ಮನೆಯಲ್ಲೆಲ್ಲಾ ಪಾಸಿಟಿವ್ ವೈಬ್ರೇಶನ್ ಉಂಟಾಗಿ ಕುಟುಂಬದ ಸದಸ್ಯರಲ್ಲಿ ಸಹಜವಾಗಿ ಶಾಂತಿ, ನೆಮ್ಮದಿ, ಸಂತೋಷವು ಹೆಚ್ಚುತ್ತಾ ಕ್ರಮೇಣ ಇಡೀ ಕುಟುಂಬವು ಆನಂದಮಯ ಕುಟುಂಬವಾಗಿ ಬದಲಾಯಿತು’ ಎಂದು ಅನೇಕರು ಸ್ವಾನುಭವವನ್ನು ವಿವರಿಸಿರುವುದು ಅಗ್ನಿಹೋತ್ರದ ಪರಿಣಾಮಕಾರಿತ್ವಕ್ಕೆ ಸಾಕ್ಷಿ.

    ಅಗ್ನಿಹೋತ್ರ ಮಾಡುವ ಕ್ರಮ: ಒಂದು ತಾಮ್ರದ ಪುಟ್ಟ ಹೋಮ ಕುಂಡ, ನಾಡಹಸುವಿನ ತುಪ್ಪ, ಅರಳೀ ಕಡ್ಡಿ ಅಥವಾ ನಾಡಹಸುವಿನ ಬೆರಣಿ ಎರಡನ್ನೂ ಉಪಯೋಗಿಸಬಹುದು. ಒಂದು ಪಂಚಪಾತ್ರೆಯಲ್ಲಿ ಶುದ್ಧ ನೀರು. ಅಗ್ನಿಹೋತ್ರ ಮಾಡಲು ಇಷ್ಟು ವ್ಯವಸ್ಥೆ ಸಾಕು. ಈಶ್ವರ ಸ್ತುತಿಯಿಂದ ಆರಂಭವಾಗುವ ಕ್ರಿಯೆಯಲ್ಲಿ ಆಚಮನ ಅಂಗಸ್ಪರ್ಶ ಮಂತ್ರಗಳನ್ನು ಪಠಿಸುತ್ತಾ ಕಣ್ಣು, ಕಿವಿ, ಮೂಗು, ಕೈಕಾಲುಗಳನ್ನು ರ್ಸ³ಸುತ್ತಾ ಒಳ್ಳೆಯ ಸಂಗತಿಗಳನ್ನೇ ನೋಡುವ, ಒಳ್ಳೆಯ ಸಂಗತಿಗಳನ್ನೇ ಕೇಳುವ, ನಮ್ಮ ಶರೀರದಿಂದ ಸತ್ಕಾರ್ಯವನ್ನೇ ಮಾಡುವ ಸಂಕಲ್ಪವನ್ನು ಮನಸ್ಸಿನಲ್ಲಿ ಮಾಡಲಾಗುವುದು. ನಂತರ ವೇದ ಮಂತ್ರಗಳಿಂದ ಅಗ್ನಿಯನ್ನು ಪ್ರಜ್ವಲಿಸಿ ‘ಓಂ ಸೂರ್ಯಾಯ ಸ್ವಾಹಾ| ಇದಂ ಸೂರ್ಯಾಯ ಇದಂ ನಮಮ||’… ಇತ್ಯಾದಿ ಮಂತ್ರಗಳನ್ನು ಪಠಿಸುತ್ತಾ ಹವಿಸ್ಸನ್ನು ಅಗ್ನಿಗೆ ಸಮರ್ಪಿಸಲಾಗುವುದು. ಸೂರ್ಯೋದಯ ಮತ್ತು ಸೂರ್ಯಾಸ್ತಗಳಲ್ಲಿ ನಡೆಯುವ ಈ ಕ್ರಿಯೆಗೆ ಕೇವಲ 20 ನಿಮಿಷಗಳು ಸಾಕು. ಜಾತಿ, ಮತ, ಲಿಂಗ, ವಯಸ್ಸಿನ ಭೇದವಿಲ್ಲದೆ ಎಲ್ಲರೂ ಅಗ್ನಿಹೋತ್ರವನ್ನು ಮಾಡಬಹುದು.

    (ಲೇಖಕರು ವೇದಭಾರತಿ ಸಂಚಾಲಕರು)

    2020 ನನ್ನ ಜೀವನದಲ್ಲಿ ಅತ್ಯಂತ ಮಹತ್ವದ ತಿರುವು ನೀಡಿದ ವರ್ಷ. ವೈರಲ್ ಆರ್ಥರೈಟಿಸ್​ನ ನೋವಿನ ದಿನಗಳಲ್ಲಿ ನಾವು ಅಗ್ನಿಹೋತ್ರ ಅಭ್ಯಾಸ ಆರಂಭಿಸಿದೆವು. ವೇದಮಂತ್ರಗಳ ಕ್ರಮಬದ್ಧ ಸ್ಪಷ್ಟ ಪಠಣ, ಉದಾತ್ತ, ಅನುದಾತ್ತ, ಸ್ವರಿತ, ಧೀರ್ಘ ಸ್ವರಿತ ಮಂತ್ರಪಠಣದಿಂದ, ಓಂಕಾರಗಳಿಂದ ಹೊರಬರುವ ಕಂಪನದೊಂದಿಗೆ ದೈವಿಕ, ಆಧ್ಯಾತ್ಮಿಕ ಭಾವಗಳಿಂದ ಮಂತ್ರ ಪಠಣ ಮಾಡುತ್ತಾ ಅಗ್ನಿಹೋತ್ರ ನಡೆಸುತ್ತ ಬಂದೆವು. ‘ವಿಶ್ವಾನಿದೇವ ಸವಿತರ್ ದುರಿತಾನಿ ಪರಾಸುವ | ಯದ್ಭದ್ರಂ ತನ್ನ ಆಸುವ||’ ಎಂಬಂತೆ ವ್ಯಕ್ತಿತ್ವ ಪರಿಶುದ್ಧತೆಯ ಮಂತ್ರ ಹೇಳುವಂತೆ ನಾವು ದೈಹಿಕವಾಗಿ, ಮಾನಸಿಕವಾಗಿ ರೋಗ ರುಜಿನಗಳಿಂದ, ಅವುಗಳು ಕೊಡುವ ಕಹಿ ಅನುಭೂತಿಯಿಂದ ಹೊರಬಂದ ಸಂತೋಷ ನಮ್ಮದಾಗಿದೆ.

    | ಡಾ.ಲಲಿತಾ ಭಾಸ್ಕರ್ ನಿವೃತ್ತ ಪೊ›ಫೆಸರ್ ಜೆ.ಎಸ್.ಎಸ್. ಆಯುರ್ವೆದ ಆಸ್ಪತ್ರೆ, ಮೈಸೂರು

    ಒಮ್ಮೆ ಬಹಳ ಏರುಸ್ವರದಲ್ಲಿ ಹಾಡಿದ್ದರಿಂದ ಗಂಟಲು ನೋವಾಯ್ತು. ವಾರವಾದರೂ ಗುಣವಾಗದಾಗ ವೈದ್ಯರ ಬಳಿ ಹೋದೆ. ಗಂಟಲ ಎರಡೂ ಬದಿಯಲ್ಲಿ ಗುಳ್ಳೆಗಳಿವೆ. ಕನಿಷ್ಠ ಒಂದೆರಡು ತಿಂಗಳು ಧ್ವನಿಗೆ ವಿಶ್ರಾಂತಿ ಕೊಡಬೇಕು ಅಂದರು. ಮನೆಗೆ ಸ್ಲೇಟ್ ಬಂತು. ಮಾತಿಲ್ಲದೇ ಒಂದು ವಾರ ಕಳೆಯುವುದರಲ್ಲಿ ಸಾಕಾಯ್ತು. ಅದೇ ಸಮಯದಲ್ಲಿ ಅಗ್ನಿಹೋತ್ರ ಪಾಠ ಆರಂಭವಾಯ್ತು. ಮಂತ್ರಗಳನ್ನು ಹೇಳ್ತಾ ಹೇಳ್ತಾ ಧ್ವನಿ ತಂತಾನೆ ಸರಿ ಹೋಯ್ತು. ಅಚ್ಚರಿಯೆಂಬಂತೆ ಹಾಡೋಕೆ ಕೂಡ ಸಾಧ್ಯವಾಯ್ತು. ನಾನು ಮಂತ್ರ ಕಲಿತು, ಅನುಷ್ಠಾನ ಮಾಡುತ್ತಾ ಹತ್ತಿಪ್ಪತ್ತು ಜನರಿಗೆ ಅಗ್ನಿಹೋತ್ರ ಮಂತ್ರವನ್ನು ಆನ್​ಲೈನಲ್ಲಿ ಕಲಿಸಿದ್ದು ನನ್ನ ಬದುಕಿನ ಅಮೂಲ್ಯ ಅನುಭವ. ಅಗ್ನಿಹೋತ್ರ ಅನೇಕ ವ್ಯಾಧಿಗಳಿಗೆ ಪರಿಹಾರ ಎಂಬುದರಲ್ಲಿ ಅನುಮಾನವಿಲ್ಲ.

    | ಅನೂಪ್ ಶ್ರೀವಾತ್ಸವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts