More

    ಹಳ್ಳಿಗಾಡಿನ ಪ್ರತಿಭೆಗಳಿಗೂ ವೇದಿಕೆ

    ನಂಜನಗೂಡು: ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯ ಪ್ರತೀಕವಾಗಿರುವ ಮೈಸೂರು ದಸರಾವನ್ನು ತಾಲೂಕು ಕೇಂದ್ರಗಳಿಗೂ ವಿಸ್ತರಿಸುವ ಮೂಲಕ ಗ್ರಾಮೀಣ ಪ್ರತಿಭೆಗಳಿಗೂ ವೇದಿಕೆ ಕಲ್ಪಿಸಿ ಮುಖ್ಯವಾಹಿನಿಗೆ ತರುವುದು ಸರ್ಕಾರದ ಉದ್ದೇಶವಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.

    ನಗರದ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಮುಂಭಾಗ ತಾಲೂಕು ಆಡಳಿತ ವತಿಯಿಂದ ಆಯೋಜಿಸಿರುವ ಗ್ರಾಮೀಣ ದಸರಾ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.

    ಈ ಹಿಂದೆ ದಸರಾ ಕಾರ್ಯಕ್ರಮಗಳನ್ನು ಮೈಸೂರು ನಗರಕ್ಕೆ ಮಾತ್ರ ಸೀಮಿತಗೊಳಿಸಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಜನರನ್ನೂ ತಲುಪಿ ಅದರಲ್ಲಿ ಭಾಗಿಯಾಗಬೇಕೆಂಬ ಉದ್ದೇಶದಿಂದ ಸರ್ಕಾರ ಪ್ರತಿ ತಾಲೂಕಿನಲ್ಲೂ ಗ್ರಾಮೀಣ ದಸರಾ ಕಾರ್ಯಕ್ರಮ ಏರ್ಪಡಿಸುತ್ತಿದೆ. ಅಲ್ಲದೆ ಗ್ರಾಮೀಣ ಭಾಗದ ಕ್ರೀಡೆ, ಜಾನಪದ, ಕಲೆ, ಸಂಸ್ಕೃತಿ ಉಳಿಸಿ ಬೆಳೆಸಲು ಹಾಗೂ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಅವಕಾಶ ಮಾಡಿಕೊಡುವುದು ನಮ್ಮ ಧ್ಯೇಯವಾಗಿದೆ ಎಂದರು.

    8 ದಿನಗಳ ಕಾಲ ಪ್ರತಿದಿನ ಸಂಜೆಯಿಂದ ರಾತ್ರಿವರೆಗೂ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಯೋಗ ದಸರಾ ಕಾರ್ಯಕ್ರಮವನ್ನೂ ನಡೆಸಲಾಗುತ್ತಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗ್ರಾಮೀಣ ದಸರಾವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಅಸ್ಸಾಂ ರಾಜ್ಯದ ಜನಪದ ನೃತ್ಯ ನೋಡುಗರ ಮನಸೂರೆಗೊಂಡಿತು. ಸ್ಥಳೀಯ ಕಲಾವಿದರು ನಡೆಸಿಕೊಟ್ಟ ವೀರಗಾಸೆ ನೃತ್ಯ ಕಣ್ಮನ ಸೆಳೆಯಿತು. ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಜಿ.ಮಹೇಶ್, ಸಿ.ಎಂ.ಶಂಕರ್, ನಗರಸಭಾ ಸದಸ್ಯರಾದ ಶ್ವೇತಾ ಲಕ್ಷ್ಮೀ, ಪ್ರದೀಪ್, ಎಸ್.ಪಿ.ಮಹೇಶ್, ಖಾಲಿದ್ ಅಹಮದ್, ಮುಖಂಡರಾದ ಶ್ರೀಧರ್, ಅನಸೂಯ ಗಣೇಶ್, ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್, ನಗರಸಭೆ ಆಯುಕ್ತ ನಂಜುಂಡಸ್ವಾಮಿ, ಬಿಇಒ ಎ.ಟಿ.ಶಿವಲಿಂಗಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts